ಹೋಂಸ್ಟೇ ಸುತ್ತ ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ… “ನ್ಯೂಟನ್ ಥರ್ಡ್ ಲಾ ” ಚಿತ್ರವಿಮರ್ಶೆ (ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ನ್ಯೂಟನ್ ಥರ್ಡ್ ಲಾ
ನಿರ್ದೇಶಕ : ಸುಧಾಕರ ರೆಡ್ಡಿ
ನಿರ್ಮಾಪಕರು : ವಿಶ್ವನಾಥ್ ಮುನಿನಗರ್ , ಸಿದ್ದಲಿಂಗಯ್ಯ
ಸಂಗೀತ : ಗಂಧರ್ವ
ಛಾಯಾಗ್ರಹಣ : ಪ್ರವೀಣ್ ಕುಮಾರ್
ತಾರಾಗಣ : ವಿಶೂ, ವಿದ್ಯಾಶ್ರೀ ಗೌಡ, ವಿಜಯ್‌ಚೆಂಡೂರ್, ಅಂಬರೀಷ ಸಾರಗಿ, ಶ್ರೀಧರ್‌ಭಟ್, ಅಥರ್ವ, ರೋಹಿತ್, ಸಾವಂತ್ ಕಲ್ಬುರ್ಗಿ, ಮೀನಾಕ್ಷಿ ಅತ್ರಿ, ಶ್ವೇತಾ, ಗಂಧರ್ವ, ಮಹೇಶ್‌ಬಾಬು ಹಾಗೂ ಮುಂತಾದವರು…
ಸಾಮಾನ್ಯವಾಗಿ ನ್ಯೂಟನ್‌ನ ಮೂರನೇ ನಿಯಮ ಎಂದರೆ “ಪ್ರತಿಕ್ರಿಯೆಗೆ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಎಂದು ತಿಳಿದಿರುವ ವಿಚಾರ. ಆದರೆ ಇಲ್ಲೊಂದು ತಂಡ ಕುತೂಹಲಕಾರಿ ವಿಚಾರದೊಂದಿಗೆ ಗೆಳೆಯರೆಲ್ಲರೂ ಹೋಂ ಸ್ಟೇಗೆ ಹೋದಾಗ ಅಲ್ಲಿ ನಡೆಯುವ ಕಾಣದ ಮುಖಗಳ ಕೈವಾಡದ ಸುಳಿಯಲ್ಲಿ ಸಿಲುಕಿಕೊಳ್ಳುವವರ ಪರದಾಟದ ಸುತ್ತ ಬೆಸೆದುಕೊಂಡಿರುವ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ , ಮಿಸ್ಟ್ರಿಯ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನ್ಯೂಟನ್ ಥರ್ಡ್ ಲಾ”.
ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಆದಿ (ವಿಶೂ) , ಆರಾಧ್ಯ (ವಿದ್ಯಾಶ್ರೀ ಗೌಡ) ಹಾಗೂ ಗೆಳೆಯರಾದ ತೇಜು , ಲಾಸ್ಯ , ವರುಣ್ ತಮ್ಮ ಬಿಡುವಿನ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ದೃಶ್ಯಗಳನ್ನು ತಾವೇ ಚಿತ್ರೀಕರಿಸಿ ಪೋಸ್ಟ್ ಮಾಡುವುದು ಕೆಲಸ. ಇವರ ಮತ್ತೊಬ್ಬ ಗೆಳೆಯ ಮೆಕ್ಯಾನಿಕ್ ಪಿಂಗಾಣಿ (ವಿಜಯ್ ಚಂಡೂರ್) ಕೂಡ ತಂಡದಕ್ಕೆ ಸಾಥ್. ಒಮ್ಮೆ ಆದಿ ತನ್ನ ಗೆಳತಿ ಆರಾಧ್ಯ ಳ ಹುಟ್ಟು ಹಬ್ಬದ ಸಂಭ್ರಮ ಆಚರಿಸುವುದರ ಜೊತೆಗೆ ತನ್ನ ಪ್ರೀತಿಯ ವಿಚಾರ ಹೇಳಲು ನಿರ್ಧರಿಸುತ್ತಾನೆ. ಇದಕ್ಕಾಗಿ ಮಡಿಕೇರಿಗೆ ಒಂದು ಟ್ರಿಪ್ ಪ್ಲಾನ್ ಮಾಡಿ ಗೆಳೆಯರೊಟ್ಟಿಗೆ ಹೊರಡಲು ನಿರ್ಧರಿಸುತ್ತಾರೆ.
ರಸ್ತೆ ಮಧ್ಯೆ ಗೆಳೆಯರ ತುಂಟಾಟ , ತರಲೆ , ಜಾಗೃತಿ ಮೂಡಿಸುವ ದೃಶ್ಯಗಳ ಚಿತ್ರೀಕರಣ ಇದ್ದದ್ದೆ. ದಟ್ಟ ಅರಣ್ಯದ ನಡುವೆ ಕಿಡ್ನ್ಯಾಪರ್ ಗಳ ಕೈಗೆ ಸಿಕ್ಕಿಹಾಕಿಕೊಳ್ಳುವ ಗೆಳೆಯರಿಗೆ ಪಿಎಸ್ಐ ಎಕ್ಸಾಮ್ ವಂಚಿತರ ನೋವಿನ ಸತ್ಯ ತಿಳಿಯುತ್ತದೆ. ಇವರಿಗೆ ಬೆಂಬಲವಾಗಿ ನಿಲುವೆವು ಎನ್ನುವ ಗೆಳೆಯರು ವಾಸುದೇವ್ ಎಂಬುವವರ ಹೋಂ ಸ್ಟೇಗೆ ಪ್ರವೇಶ ಮಾಡುತ್ತಾರೆ. ಮಾಲೀಕರ ನಡೆ-ನುಡಿ ಗಮನಿಸುವ ಗೆಳೆಯರು ಯಾವುದೇ ತೊಂದರೆ ಮಾಡಿಕೊಳ್ಳದೆ ಅಚ್ಚುಕಟ್ಟಾಗಿ ಪಾರ್ಟಿ ಮಾಡಿ ನೆಮ್ಮದಿಯಿಂದ ಹೊರಡಲು ತೀರ್ಮಾನಿಸುತ್ತಾರೆ. ರಾತ್ರಿ ಆರಾಧ್ಯ ಬರ್ತಡೇ ಸೆಲೆಬ್ರೇಶನ್ ನಲ್ಲಿ ಎದುರಾಗುವ ಎಡವಟ್ಟು ಆದಿಯ ಮನಸ್ಸಿಗೆ ನೋವಾಗುತ್ತದೆ. ಇದರ ನಡುವೆ ಬೇಸರದಿಂದಲೇ ಕುಡಿದ ನಿಶೆಯಲ್ಲಿ ತೇಲುವ ಪಿಂಗಾಣಿ ಹಾಗೂ ಅರುಣ್ ಎಂಜಾಯ್ ಮಾಡಲು ಹುಡುಗಿಯ ಬಗ್ಗೆ ಕೆಲಸಗಾರನ ಬಳಿ ಕೇಳುತ್ತಾರೆ , ಇದರಿಂದ ಕೋಪಗೊಳ್ಳುವ ಗೆಳತಿಯರು ತಮ್ಮ ತಮ್ಮ ರೂಮ್ ಸೇರುತ್ತಾರೆ.
ಬೆಳಗ್ಗೆ ಎದ್ದು ನೋಡಿದಾಗ ಗೆಳೆಯರ ರೂಮಲ್ಲಿ ಹುಡುಗಿ ಒಬ್ಬಳು ಕಾಣುತ್ತಾಳೆ , ಯಾರು ಎಂಬ ಪ್ರಶ್ನೆ ಮೂಡುವಾಗಲೇ ಆಕೆ ಸತ್ತಿರುತ್ತಾಳೆ. ಇದರಿಂದ ಗಾಬರಿಗೊಳ್ಳುವ ಓನರ್ ರೇಪ್ ಅಂಡ್ ಮರ್ಡರ್ ಮಾಡಿದಿರಾ ಎನ್ನುತ್ತಾ ಪೋಲಿಸ್ ಕಂಪ್ಲೇಂಟ್ ಕೊಡಲು ನಿರ್ಧರಿಸುತ್ತಾನೆ , ಈ ಗೆಳೆಯರ ಪರದಾಟ ನೋಡಿ ಲಾಯರ್ ಮೂಲಕ 25 ಲಕ್ಷ ಲಂಚ ಕೊಟ್ಟು ಕೇಸ್ ಮುಚ್ಚಿಸುವ ಪ್ಲಾನ್ ಮಾಡುತ್ತಾನೆ ಹೋಂ ಸ್ಟೇ ಓನರ್. ಪ್ರತಿಯೊಬ್ಬ ಸ್ನೇಹಿತರು ಐದೈದು ಲಕ್ಷ ಹೊಂಚಲು ಮುಂದಾದಾಗ ಒಂದು ನಿಗೂಢ ಸತ್ಯ ಹೊರಬರುತ್ತದೆ. ಇದು ಏನು.. ಹೇಗೆ.. ಎಂದು ಹುಡುಕುವ ಹಾದಿಯಲ್ಲಿ ಕರಾಳ ದಂಧೆ ಹಿನ್ನೆಲೆ , ಸಾವಿನ ರಹಸ್ಯ ಜೊತೆ ಕುತೂಹಲಕಾರಿ ಅಂಶ ಬೇರೆ ದಿಕ್ಕನ್ನ ತೋರುತ್ತದೆ. ಅದು ಏನು ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಪಾರ್ಟಿ , ಮೋಜು , ಮಸ್ತಿ ಎಂದು ಹೋಂ ಸ್ಟೇಗೆ ಹೋಗುವವರೂ ಎಷ್ಟು ಜಾಗೃತಿಯಿಂದ ಇರಬೇಕು , ಏನೆಲ್ಲಾ ನಡೆಯಬಹುದು ಎಂಬ ಒಂದು ಸೂಕ್ಷ್ಮ ವಿಚಾರವನ್ನು ನೈಜಕ್ಕೆ ಹತ್ತಿರವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಗೆಳೆತನ , ಪ್ರೀತಿ , ನೋವು , ಕಷ್ಟದ ಬದುಕಿನ ನಡುವೆ ಸಂತೋಷ ಪಡುವ ಗೆಳೆಯರ ಜೀವನದಲ್ಲಿ ಎದುರಾಗುವ ಸಂಕಷ್ಟ , ಹೇಗೆಲ್ಲಾ ಆಟ ಆಡಿಸುತ್ತದೆ ಎಂಬುದರ ಜೊತೆಗೆ ರೋಚಕ ತಿರುವನ್ನ ನೀಡಿದ್ದಾರೆ. ಚಿತ್ರಕಥೆಯಲ್ಲಿ ಬಹಳಷ್ಟು ಕುತೂಹಲಕಾರಿಯಾಗಿ ಮಾಡಬಹುದಿತ್ತು , ತಾಂತ್ರಿಕವಾಗಿ ಛಾಯಾಗ್ರಹಣ , ಸಂಗೀತ , ಸಂಕಲನ ಕೆಲಸ ಗಮನ ಸೆಳೆಯುತ್ತದೆ.
ಇಂತಹ ವಿಭಿನ್ನ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಅಭಿನಯಿಸಿರುವ ಬಹಳಷ್ಟು ಯುವ ಪ್ರತಿಭೆಗಳು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಶ್ರಮಪಟ್ಟಿದ್ದಾರೆ. ಇನ್ನು ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಹಾಸ್ಯ ನಟ ವಿಜಯ್ ಚಂಡೂರ್ ನಿಭಾಯಿಸಿಕೊಂಡು ಮಾತಿನ ವರಸೆ ಮೂಲಕ ನಗೆಯ ಝಲಕ್ ನೀಡುತ್ತಾ ಸಾಗಿದ್ದಾರೆ. ಇನ್ನು ಲಾಯರ್ , ಇನ್ಸ್ಪೆಕ್ಟರ್ ಸೇರಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದಾರೆ. ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ ಇಷ್ಟಪಡುವ ಸಿನಿಪ್ರಿಯರಿಗೆ ಬಹಳ ಬೇಗ ಸೆಳೆಯುವ ಈ ಚಿತ್ರ ಎಲ್ಲರೂ ಒಮ್ಮೆ ನೋಡಬಹುದು.