Cini NewsSandalwood

ಬೃಹತ್ ವೇದಿಕೆಯಲ್ಲಿ ಮಲ್ಟಿಸ್ಟಾರರ್ ನಟನೆಯ “45” ಚಿತ್ರದ ಟ್ರೈಲರ್ ಬಿಡುಗಡೆ.

Spread the love

 

ಬಹು ನಿರೀಕ್ಷಿತ “45” ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ. ಇದೇ ಮೊದಲ ಬಾರಿಗೆ ಬೆಂಗಳೂರು ಸೇರಿ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಟ್ರೇಲರ್ ಅನಾವರಣ. ಡಿಸೆಂಬರ್ 25 ರಂದು ಚಿತ್ರ ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ.

ಅದಕ್ಕೂ ಮುನ್ನ “45” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.‌ ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಡೊಂಕಣ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಚಿತ್ರದ ಟ್ರೇಲರ್ ಅನಾವರಣವಾಗಿದ್ದು ವಿಶೇಷ.

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರು ಸಮಾರಂಭದ ಉಪಸ್ಥಿತರಿದ್ದರು. ಟ್ರೇಲರ್ ಬಿಡುಗಡೆ ನಂತರ ಚಿತ್ರದ ಕುರಿತು ಮಾತನಾಡಿದರು.

ನಾನು ಮೂರು ಜನ ನಾಯಕರ ಅಭಿಮಾನಿಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಾಗಾಗಿ ನನಗೆ ಈ ಸಿನಿಮಾ ನಿರ್ದೇಶಿಸುವುದು ಅಷ್ಟು ಕಷ್ಟ ಆಗಲಿಲ್ಲ. ನಾನು ಸಿನಿಮಾ ನಿರ್ದೇಶಕನಾಗಲು ಶಿವರಾಜಕುಮಾರ್ ಅವರೆ ಕಾರಣ. ಇನ್ನೂ, ಈ ಚಿತ್ರದ ನಾಲ್ಕನೇ ಹೀರೋ ನಿರ್ಮಾಪಕ ರಮೇಶ್ ರೆಡ್ಡಿ. ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ಮಾಡಿದ್ದಾರೆ.

ನಾನು ಚಿತ್ರ ನಿರ್ದೇಶನಕ್ಕೂ ಮುನ್ನ ಅನಿಮೇಶನ್ ನಲ್ಲಿ ಈ ಸಿನಿಮಾ ಕಥೆ ಮಾಡಿ ಶಿವಣ್ಣ ಹಾಗೂ ರಮೇಶ್ ರೆಡ್ಡಿ ಅವರಿಗೆ ತೋರಿಸಿದ್ದೆ. ಅವರು ಅದನ್ನು ನೋಡಿ ಮೆಚ್ಚಿಕೊಂಡಿದ್ದರು. ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಅನೇಕ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಆ ವಿಷಯದ ಒಂದೆಳ್ಳೆ ಇಟ್ಟುಕೊಂಡು ಈ ಸಿನಿಮಾ ಕಥೆ ಮಾಡಿದ್ದೇನೆ.‌ ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.

ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ ಎಂದು ಮಾತನಾಡಿದ ನಟ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ನಟಿಸಿದ್ದಾರೆ. ರಮೇಶ್ ರೆಡ್ಡಿ ಅವರ ನಿರ್ಮಾಣದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಅಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾನು ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಈ ಚಿತ್ರ ಬಿಡುಗಡೆ ಆದ ಮೇಲೆ ಅರ್ಜುನ್ ಜನ್ಯ ಎಲ್ಲಿಗೊ ಹೋಗುತ್ತಾರೆ‌ ಎಂದರು.

ಈ ಸಿನಿಮಾದಲ್ಲಿ ತೆರೆಯ ಮೇಲೆ ಮೂರು ಸ್ಟಾರ್ ಗಳು ಕಾಣಿಸಿದ್ದೇವೆ. ಅದರೆ ತೆರೆಯ ಹಿಂದೆ ಮೂರು ಸ್ಟಾರ್ ಗಳು‌ ಇದ್ದಾರೆ. ಮೊದಲ ಸ್ಟಾರ್ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡಿದಿದ್ದನ್ನೆಲ್ಲಾ ಈ ಚಿತ್ರಕ್ಕೆ ಸುರಿದಿದ್ದಾರೆ. ಎರಡನೇ ಸ್ಟಾರ್ ನಿರ್ದೇಶಕ ಅರ್ಜುನ್ ಜನ್ಯ ಎರಡು ವರ್ಷದಿಂದ ಶ್ರಮ ಹಾಕಿದ್ದಾರೆ. ಮೂರನೇ ಸ್ಟಾರ್ ಛಾಯಾಗ್ರಾಹಕ ಸತ್ಯ ಹೆಗಡೆ. ಇನ್ನೂ, ಇಪ್ಪತ್ತರ ಯುವಕನನ್ನು ನಾಚಿಸುವ ಉತ್ಸಾಹವಿರುವ ಶಿವಣ್ಣ ಹಾಗು “ಸು ಫ್ರಮ್ ಸೋ” ಚಿತ್ರದ ಮೂಲಕ ಬಹುಬೇಡಿಕೆಯ ನಟರಾಗಿರುವ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದರು ನಟ ಉಪೇಂದ್ರ.

ನಾನು ಈ ಚಿತ್ರದ ಕುರಿತು ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಬಳಿ ವಿಚಾರಿಸುತ್ತಿದ್ದೆ. ಇನ್ನೂ, ನಾನು ಶಿವರಾಜಕುಮಾರ್ ಹಾಗು ಉಪೇಂದ್ರ ಅವರ ಅಭಿಮಾನಿ. ಈ ಚಿತ್ರ ಮುಗಿದ ಮೇಲೆ ಎಷ್ಟೋ ಜನ ನನ್ನನ್ನು ಕೇಳಿದರು. ಅಂತಹ ದೊಡ್ಡ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀರಿ. ಏನು ಅನಿಸಿತು? ಎಂದು. ನಾನು ಹೇಳಿದೆ. ನಾನು ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀನಿ ಅಂತ ಅನಿಸಲೇ ಇಲ್ಲ ಎಂದು. ಅವರಿಬ್ಬರೂ ಅಷ್ಟು ಸರಳವಾಗಿದ್ದರು. ಇನ್ನೂ, ನಾವು ಪರಭಾಷಾ ಹಾವಳಿ ಅನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು. ಆ ರೀತಿಯ ಚಿತ್ರ “45” ಆಗಲಿದೆ ಎನ್ನುವ ಭರವಸೆ ನನ್ನಗಿದೆ ಎಂದು ನಟ ರಾಜ್ ಬಿ ಶೆಟ್ಟಿ ತಿಳಿಸಿದರು.

ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ನಿರ್ಮಾಪಕ ರಮೇಶ್ ರೆಡ್ಡಿ, ಡಿಸೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ ಎಂದರು. ಚಿತ್ರದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ ಹಾಗೂ ಸುಧಾರಾಣಿ ಅವರು “45” ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

 

Visited 1 times, 1 visit(s) today
error: Content is protected !!