ಯುವ ಪ್ರತಿಭೆಗಳ “ಖೈದಿ ಪ್ರೇಮಿ” ಚಿತ್ರಕ್ಕೆ ಮುಹೂರ್ತ
ಉತ್ತರ ಕರ್ನಾಟಕ ಭಾಗದ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇದೀಗ ರಾಯಚೂರು ಮೂಲದ ಯುವಕರ ತಂಡವೊಂದು ವಿಭಿನ್ನ ಕಾನ್ಸೆಪ್ಡ್ ಇಟ್ಟುಕೊಂಡು ಖೈದಿಪ್ರೇಮಿ ಎಂಬ ಚಿತ್ರ ಮಾಡಲು ಹೊರಟಿದೆ. ಮರುಜನ್ಮ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ವಂಶಿ ಎಡೆದೊರೆ (ಗಧಾರ) ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ಇಬ್ಬರೂ ರಾಯಚೂರಿನವರು ಎನ್ನುವುದು ವಿಶೇಷ. ಪ್ರೀತಿ, ಪ್ರೇಮದ ಜತೆ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕಥಾಹಂದರ ಹೆಣೆದಿರುವ ಖೈದಿಪ್ರೇಮಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಪ್ರಥಮ ದೃಶ್ಯಕ್ಕೆ ಥ್ರಿಲ್ಲರ್ ಮಂಜು ಕ್ಲಾಪ್ ಮಾಡಿದರೆ, ನಿರ್ದೇಶಕ ವಸಂತ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಎಂ.ತಿಲಕ್ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಕೂಡ.
ಮೂಹೂರ್ತದ ನಂತರ ಮಾತನಾಡಿದ ನಿರ್ದೇಶಕ ವಂಶಿ ಎಡೆದೊರೆ ಖೈದಿ ಪ್ರೇಮ ಇದೊಂದು ಲವ್ ಸ್ಟೋರಿಯಾದರೂ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕಥೆ ಮಾಡಿದ್ದೇನೆ. ಕಳೆದ 4 ವರ್ಷಗಳಿಂದ ಈ ಕಥೆ ರೆಡಿ ಮಾಡಿಟ್ಟುಕೊಂಡಿದ್ದು, ತುಂಬಾ ಹೋಮ್ ವರ್ಕ್ ಮಾಡಿದ್ದೇನೆ. ರಮೇಶ್ ಭಟ್, ಥ್ರಿಲ್ಲರ್ ಮಂಜು, ಅಭಿಜಿತ್ ರಂಥ ಹಿರಿಯರ ಸಹಕಾರ ತಗೊಂಡು ಮುಂದುವರಿಯುತ್ತಿದ್ದೇನೆ. ಕಥೆಯಲ್ಲಿ ನಾವೀನ್ಯತೆ ಇದೆ, ಫೆಬ್ರವರಿಯಿಂದ ಆರಂಭಿಸಿ ಮಂಡ್ಯ ಸುತ್ತಮುತ್ತ ಟಾಕಿ ಪೋರ್ಷನ್ ಹಾಗೂ ಮಲೆನಾಡಲ್ಲಿ ಹಾಡುಗಳು ಸೇರಿ 45 ದಿನಗಳ ಕಾಕ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದು ಹೇಳಿದರು.ರಮೇಶ್ ಭಟ್ ಮಾತನಾಡಿ ಈ ಹುಡುಗರು ನನ್ನಬಳಿ ಬಂದಾಗ ಸ್ವಲ್ಪ ಅನುಮಾನ ಇತ್ತು, ಇವರು ಕಥೆ ಹೇಳಿದ ರೀತಿ ನೋಡಿ ನಂಬಿಕೆ ಬಂತು. ಈ ತಂಡ ತುಂಬಾ ಆಸೆ ಇಟ್ಟುಕೊಂಡು ಬಂದಿದ್ದಾರೆ ಎಂದರು.

ಆಬಿಜಿತ್ ಮಾತನಾಡಿ ಒಂದು ಚಿತ್ರ ನಿರ್ಮಾಣ ಕನಸು, ನಂತರ ಅದನ್ನು ರಿಲೀಸ್ ಮಾಡುವುದು ಜವಾಬ್ದಾರಿಯ ಕೆಲಸ. ಈ ಚಿತ್ರಕ್ಕೆ ನನ್ನ ಏಕೆ ಸೆಲೆಕ್ಟ್ ಮಾಡಿದಿರಿ ಎಂದು ಕೇಳಿದಾಗ ಅವರು ಕೊಟ್ಟ ಉತ್ತರದಿಂದ ಸರಿಯಾಗಿದೆ ಅನಿಸಿತು. ಈ ತಂಡಕ್ಕೆ ನನ್ನ ಸಹಕಾರವಿದೆ ಎಂದರು. ಸಂಗೀತ ಸಂಯೋಜಕ ವಿ.ಮನೋಹರ್ ಕೂಡ ಹಾಜರಿದ್ದು ಶುಭ ಹಾರೈಸಿದರು. ನಾಯಕ ಕಮ್ ನಿರ್ದೇಶಕ ಎಂ.ತಿಲಕ್ ಮಾತನಾಡಿ ನಾವು ಈ ಚಿತ್ರವನ್ನು ಕೇವಲ ಮನರಂಜನೆ, ಶೋಕಿಗಾಗಿ ಮಾಡುತ್ತಿಲ್ಲ.
6 ತಿಂಗಳ ಕಾಲ ನಾನು ಈ ಚಿತ್ರತಂಡದ ಜತೆ ಕೆಲಸ ಮಾಡುತ್ತಿದ್ದೇನೆ. ಕಲಾವಿದರಲ್ಲಿ ತಮ್ಮನ್ನು ಪ್ರೂವ್ ಮಾಡಿಕೊಳ್ಳಬೇಕೆಂಬ ಹಂಬಲವಿದೆ. ನಮ್ಮ ಚಿತ್ರಕ್ಕೆ ನಿಮ್ಮ ಸಹಕಾರ, ಬೆಂಬಲ ಬೇಕು ಎಂದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 4 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ೪ ಹಾಡುಗಳಿದ್ದು, ಕುಶಾಲರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃಷ್ಣಂ ಬಲ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.