Cini NewsSandalwood

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

Spread the love

ನಿರ್ದೇಶಕರು ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಅಂತೆಯೇ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಏಳುಮಲೆ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ.

ಏಳುಮಲೆ ಚಿತ್ರದ ಯಾವಾಗ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿಯೂ ಗೀತೆಯನ್ನು ಅನಾವರಣ ಮಾಡಲಾಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ಹಾಡಿಗೆ ಸಿದ್ ಶ್ರೀರಾಮ್ ಧ್ವನಿಯಾಗಿದ್ದಾರೆ. ಡಿ ಇಮ್ಮನ್ ಸಂಗೀತ ಒದಗಿಸಿದ್ದಾರೆ.

ಕರ್ನಾಟಕ – ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ ಏಳುಮಲೆ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡ್ಗ ಹರೀಶನಾಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್‌ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ.

ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚಾಮರಾಜನಗರ, ಸೇಲಂ, ಈರೋಡ್‌ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಹ ನಿರ್ದೇಶಕರಾಗಿ, ಗೀತ ಸಾಹಿತಿಯಾಗಿ ‘ಕಾಟೇರ’, ‘ಗುರುಶಿಷ್ಯರು’ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿರುವ ಪುನೀತ್‌ ರಂಗಸ್ವಾಮಿ ಈಗ ‘ಏಳುಮಲೆ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದ್ವಿತ್‌ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್‌ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮನ್‌ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡದಲ್ಲಿ ರಿಲೀಸ್‌‌ ಆಗುತ್ತಿದೆ.

Visited 2 times, 1 visit(s) today
error: Content is protected !!