Cini NewsSandalwood

ದುನಿಯಾ ವಿಜಯ್ – ಶ್ರೇಯಸ್ ಮಂಜು ಅಭಿನಯಿಸಿರುವ “ಮಾರುತ” ಚಿತ್ರದ ಮೊದಲ ಹಾಡು ಬಿಡುಗಡೆ.

ಹೆಸರಾಂತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಚಿತ್ರ “ಮಾರುತ” ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಎಸ್ ನಾರಾಯಣ್ ಅವರೆ ಬರೆದು, ರಾಗ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ “ಮಾರುತ” ಚಿತ್ರದ ಮೊದಲ ಹಾಡು ಜನಮನಸೂರೆಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ‌

ಇಂದು ನಮ್ಮ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. “ಮಾರುತ” ಶೀರ್ಷಿಕೆ ಹೇಗೆ ಬಂತು ಅಂತ ನಿರ್ಮಾಪಕ ಕೆ.ಮಂಜು ಕೇಳಿದ್ದರು. ದುನಿಯಾ ವಿಜಯ್ ಚಿತ್ರತಂಡಕ್ಕೆ ಬರುವವರೆಗೂ ಈ ಶೀರ್ಷಿಕೆ ಬಂದಿರಲಿಲ್ಲ. ಅವರು ಬಂದ ನಂತರ “ಮಾರುತ” ಶೀರ್ಷಿಕೆ ಇಡಲಾಯಿತು. ಏಕೆಂದರೆ ಹಿಂದೆ ನಾವಿಬ್ಬರು “ಚಂಡ” ಚಿತ್ರ ಮಾಡಿದ್ದೆವು. ಈಗ “ಮಾರುತ” ಚಿತ್ರ ಮಾಡಿದ್ದೇವೆ.

ಎರಡು ಸೇರಿ ಯಶಸ್ಸಿನ ಚಂಡ”ಮಾರುತ” ಆಗುವ ಭರವಸೆ ಇದೆ. “ಪೋಷಕರೆ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ಇರಲಿ. ಅವರ ಚಲನವಲನದ ಬಗ್ಗೆ ನಿಮಗೆ ತಿಳಿದಿರಲಿ. ಅವರ ಕೈಯಲ್ಲಿರುವ ಮೊಬೈಲ್ ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿದಿರಲಿ. ನೀವು ಎಷ್ಟೇ ಬ್ಯುಸಿಯಿದರೂ ವಾರಕ್ಕೊಮ್ಮೆಯಾದರೂ ಸಮಯ ಬಿಡುವು ಮಾಡಿಕೊಂಡು ಅವರ ಜೊತೆ ಸಮಯ ಕಳೆಯಿರಿ. ಅವರ ಮನಸ್ಸಿನ ಆಸೆಗಳು, ಬಯಕೆಗಳನ್ನು ಹಂಚಿಕೊಳ್ಳಿ. ಏಕೆಂದರೆ, ಅವರು ನಿಮ್ಮ ಸ್ವತ್ತು.

ಅದೇ ಮಕ್ಕಳು ಈ ದೇಶಕ್ಕೆ ಸಂಪತ್ತು.” ಈ ನಾಲ್ಕು ಸಾಲುಗಳ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ದುನಿಯಾ ವಿಜಯ್ ಹಾಗೂ ನಿರ್ಮಾಪಕ ಕೆ.ಮಂಜು ಅವರ ಜೊತೆಗೆ ಇದು ನನ್ನ ಮೂರನೇ ಚಿತ್ರ. ರಮೇಶ್ ಯಾದವ್ ಅವರೊಟ್ಟಿಗೆ ಮೊದಲ ಚಿತ್ರ. ಶ್ರೇಯಸ್ ಮಂಜು ಹಾಗೂ ಬೃಂದಾ ಕೂಡ ಉತ್ತಮವಾಗಿ ನಟಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಹೇಳುತ್ತೇನೆ ಎಂದರು ನಿರ್ದೇಶಕ ಎಸ್.ನಾರಾಯಣ್.

ಎಸ್ ನಾರಾಯಣ್ ಅವರ ಜೊತೆಗೆ ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ನಿರ್ದೇಶನ ಮಾಡಬೇಕಾದರೆ ಅವರ ಶಿಸ್ತನ್ನು ರೂಡಿಸಿಕೊಂಡಿದ್ದೇನೆ. ಸಾಕಷ್ಟು ಸೂಪರ್ ಹಿಟ್ ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತಿ ಎಸ್ ನಾರಾಯಣ್ ಅವರಿಗಿದೆ‌‌. ಅವರ ನಿರ್ದೇಶನದಲ್ಲಿ ಫ್ಯಾಮಿಲಿ ಓರಿಯಂಟೆಡ್ ಸಿನಿಮಾದಲ್ಲಿ ನಟಿಸುವ ಆಸೆ ನನಗೆ ಇದೆ. ಇನ್ನೂ ಕೆ.ಮಂಜು ಅವರ ನಿರ್ಮಾಣದಲ್ಲಿ ನಾನು ನಟಿಸಿರುವ ಮೂರನೇ ಚಿತ್ರವಿದು. ರಮೇಶ ಯಾದವ್ ಅವರ ಜೊತೆ ಮೊದಲ ಚಿತ್ರ. ಉತ್ಸಾಹಿ ಯುವಕ ಶ್ರೇಯಸ್ ಮಂಜು ಅವರು ಈ ಚಿತ್ರದಲ್ಲಿ ನಟಿಸಿದ್ದು ಅವರು ಸಾಕಷ್ಟು ಎತ್ತರಕ್ಕೆ ಬೆಳಯಲಿ ಎಂದು ದುನಿಯಾ ವಿಜಯ್ ಹಾರೈಸಿದರು.

ನಿರ್ದೇಶಕ ಎಸ್ ನಾರಾಯಣ್, ದುನಿಯಾ ವಿಜಯ್ ಅವರು ಸೇರಿದಂತೆ ಅನೇಕ ಹಿರಿಯರ ಜೊತೆಗೆ ಈ ಸಿನಿಮಾದಲ್ಲಿ ಕೆಲಸ ಮಾಡಿ ಸಾಕಷ್ಟು ಕಲಿತಿದ್ದೇನೆ. ಎಸ್ ನಾರಾಯಣ್ ಅವರ ಶಿಸ್ತು ನನಗೆ ಆದರ್ಶ. ಚಿತ್ರೀಕರಣ ಸಮಯದಲ್ಲಿ ದುನಿಯಾ ವಿಜಯ್ ಅವರು ಸಾಕಷ್ಟು ಸಲಹೆ ನೀಡಿದ್ದಾರೆ‌. ನನ್ನ ಮೊದಲ ಚಿತ್ರದಿಂದಲೂ ನೀವು ನೀಡುತ್ತಾ ಬಂದಿರುವ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲಿ ಎಂದರು ಶ್ರೇಯಸ್ ಮಂಜು.

ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಜೊತೆಗೆ ಇದು ನನ್ನ ಮೂರನೇ ಚಿತ್ರ. ನನ್ನ ಸ್ನೇಹಿತರಾದ ರಮೇಶ್ ಯಾದವ್ ಅವರ ಜೊತೆಗೂಡಿ ಈಶಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಕಥೆಯನ್ನು ನಿರ್ದೇಶಕರು ಮಾಡಿಕೊಂಡಿದ್ದಾರೆ‌. ನನ್ನ ಮಗ ಶ್ರೇಯಸ್, ಬೃಂದಾ, ತಾರಾ, ಸಾಧುಕೋಕಿಲ, ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಭಿನಯಿಸಿದ್ದಾರೆ. ಪಿ.ಕೆ.ಹೆಚ್ ದಾಸ್ ಅವರಂತಹ ಅನುಭವಿ ತಂತ್ರಜ್ಞರು “ಮಾರುತ” ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಸ್.ನಾರಾಯಣ್, ದುನಿಯಾ ವಿಜಯ್ ಅವರು ಸೇರಿದಂತೆ ಇಡೀ ಚಿತ್ರತಂಡದ ಸಹಕಾರದಿಂದ ಉತ್ತಮ ಚಿತ್ರ ಮೂಡಿಬಂದಿದೆ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದರು.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ತಿಳಿಸಿದ ನಾಯಕಿ ಬೃಂದಾ, ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.ಈಶಾ ಪ್ರೊಡಕ್ಷನ್ಸ್ ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ರಮೇಶ್ ಯಾದವ್. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!