ಸಮಾನತೆಗಾಗಿ ಧಣಿಕರ ವಿರುದ್ಧ ಬಡವರ ಹೋರಾಟ.. “ಲ್ಯಾಂಡ್ ಲಾರ್ಡ್” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಲ್ಯಾಂಡ್ ಲಾರ್ಡ್
ನಿರ್ದೇಶಕ : ಜಡೇಶ್ ಕೆ ಹಂಪಿ
ನಿರ್ಮಾಪಕರು :ಸತ್ಯಪ್ರಕಾಶ್, ಹೇಮಂತ್ ಗೌಡ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಸ್ವಾಮಿ ಜೆ ಗೌಡ
ತಾರಾಗಣ : ದುನಿಯಾ ವಿಜಯ್, ರಚಿತರಾಮ್ , ರಾಜ್ ಬಿ ಶೆಟ್ಟಿ , ರೀತನ್ಯಾ ವಿಜಯ್ , ಶಶಿರ್ ಬೈಕಾಡಿ , ಉಮಾಶ್ರೀ , ಬಿ ಸುರೇಶ , ಭಾವನಾ ರಾವ್ ರಾಕೇಶ್ ಅಡಿಗ , ಅಚ್ಚುತ್ ಕುಮಾರ್ ಹಾಗೂ ಮುಂತಾದವರು…
ಈ ಭೂಮಿಯ ಮೇಲೆ ಧಣಿಕರು , ಶ್ರೀಮಂತರು ನಿರಂತರವಾಗಿ ಕಾಲಾನುಕಾಲಕ್ಕೂ ಬಡವರ ಮೇಲೆ ದೌರ್ಜನ್ಯ ಮಾಡುತ್ತಾ ದಬ್ಬಾಳಿಕೆ ನಡೆಸುತ್ತಾ ಬಂದಿರುವ ವಿಚಾರ ತಿಳಿದೇ ಇದೆ. ಮೇಲು ಕೀಳು, ಭೂಮಿ, ಆಚಾರ , ವಿಚಾರ , ಪದ್ದತಿಯ ನಡುವಳಿಕೆಯ ನಡುವೆ ಬೇಲಿಯನ್ನ ಕಟ್ಟಿಕೊಂಡು ತಮ್ಮದೇ ಸಾಮ್ರಾಜ್ಯದ ಒಳಗೆ ಯಾವುದೇ ಕಾನೂನು , ಪೊಲೀಸ್ ಕಠಡಿಗೆ ತಲೆಕೆಡಿಸಿಕೊಳ್ಳದೆ ಅಮಾಯಕರನ್ನ ಚೀತದಳಾಗಿ ಬಳಸಿಕೊಳ್ಳುತ್ತಾ ದರ್ಪದಿಂದ ಮೆರೆಯುವ ದುಷ್ಟರ ಅಟ್ಟಹಾಸಕ್ಕೆ ಸೆಡ್ಡು ಹೊಡೆದು ಸಂವಿಧಾನದ ಸಮಾನತೆಯ ಹಕ್ಕಿನ ಹೋರಾಟದ ಕ್ರಾಂತಿಯಾಗಿ ನಿಲ್ಲುವಂತಹ ಅಡಿವಿರಾಯ ಕೊಡಲಿ ರಾಚಯ್ಯನ ರೂಪದಲ್ಲಿ 80ರ ಕಾಲಘಟ್ಟದ ಕಥೆಯಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲ್ಯಾಂಡ್ ಲಾರ್ಡ್”.
ಹುಲಿದುರ್ಗದ ಸಾಹುಕಾರರ ಇತಿಹಾಸ ಬಹಳ ದೊಡ್ಡದು , ಸುತ್ತಳ್ಳಿಯಲ್ಲಿ ದೊಡ್ಡ ಧಣಿಗಳದೇ ಆರ್ಭಟ ಇದ್ದರೂ ದೇವಪುರದ ಗೌಡನ ಮೇಲೆ ದ್ವೇಷ. ಮೇಲ್ಮನೆ ಮುಖ್ಯಸ್ಥ ಧಣಿ ತನ್ನ ಆಸುಪಾಸಿನ ಜನರನ್ನ ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಕೆಳಮನೆಯ ಬಡ ಜನರನ್ನು ಜೀತದಾಳಾಗಿ ಬಳಸಿಕೊಳ್ಳುತ್ತಿರುತ್ತಾನೆ. ಇನ್ನು ಊರ ಬಸವಿಯ ಹೆಸರಿನಲ್ಲಿ ದೇವದಾಸಿಗಳನ್ನಾಗಿಸಿ ತನ್ನ ಆಸೆಗಳನ್ನು ತೀರಿಸಿಕೊಳ್ಳುವ ಜೊತೆಗೆ ಎರಡು ಎಕರೆ ಜಾಗವನ್ನು ನೀಡುವುದು ವಾಡಿಕೆ ಮಾಡಿಕೊಂಡಿರುತ್ತಾನೆ.
ಮುಂದೆ ಇದೇ ಪದ್ಧತಿಯನ್ನು ಅವನ ಪುತ್ರ ಸಣ್ಣ ಧಣಿ(ರಾಜ್ ಬಿ ಶೆಟ್ಟಿ) ಹುಲಿದುರ್ಗದ ಹುಲಿಯಂತೆ ಆರ್ಭಟಿಸುತ್ತಾನೆ. ಅವನಿಗೆ ತಮ್ಮಂದಿರು , ಬಂಟರ ಸಾತ್. ಕೆಳಮನೆಯ ಕೇರಿಯಲ್ಲಿ ವಾಸ ಮಾಡುವ ಅಮಾಯಕ ಬಡಜನರು ಕೂಲಿಗೆ ದುಡಿದರು ಹಣವಿಲ್ಲದೆ ದವಸ, ಧಾನ್ಯಕ್ಕೆ ಬದುಕು ನಡೆಸುತ್ತಾರೆ.
ಅದೇ ಊರಿನಲ್ಲಿ ಕಟ್ಟಿಗೆ ಮಾರುತ ಬದುಕು ನಡೆಸುವ ರಾಚಯ್ಯ (ದುನಿಯಾ ವಿಜಯ್) ಮಡದಿ ನಿಂಗಿ (ರಚಿತರಾಮ್) ಹಾಗೂ ಮಗಳು ಭಾಗ್ಯ ( ರೀತನ್ಯಾ ವಿಜಯ್) ಜೊತೆ ವಾಸ. ತನ್ನ ತಾಯಿ (ಉಮಾಶ್ರೀ) ಯ ಆಸೆಯಂತೆ ಎರಡು ಎಕರೆ ಜಾಗಕ್ಕಾಗಿ ಧಣಿಗಳ ಮುಂದೆ ಪರದಾಡುವ ರಾಚಯ್ಯ ಒಂದೆಡೆಯಾದರೆ , ಓದಿ ಪೋಲಿಸ್ ಪೇದೆಯಾಗಿ ಹಿರಿಯ ಅಧಿಕಾರಿಗಳ ಸಹಕಾರವಿಲ್ಲದೆ , ದುಷ್ಟರ ದಬ್ಬಾಳಿಕೆ ತಕ್ಕ ಉತ್ತರ ನೀಡುವ ತವಕದಲ್ಲಿ ಇರುತ್ತಾಳೆ.
ಆದರೆ ಒಂದರ ಹಿಂದೆ ಒಂದಂತೆ ದರ್ಪ , ದಬ್ಬಾಳಿಕೆ, ದೌರ್ಜನ್ಯಕ್ಕೆ ಸಿಕ್ಕಿಹಾಕಿಕೊಳ್ಳುವ ಬಡವರ ಸ್ಥಿತಿಗತಿಗೆ ಬೆನ್ನೆಲುಬಾಗಿ ನಿಲ್ಲುವ ರಾಚಯ್ಯನನ್ನು ಮಟ್ಟ ಹಾಕಲು ಮುಂದಾಗುತ್ತಿದ್ದಂತೆ , ನಿಂಗವನ ತನ್ನ ಗಂಡ ಹತ್ತ ಏಟಿನ ಕೊಡಲಿ ರಾಚಯ್ಯನ ಹಿನ್ನೆಲೆಯನ್ನ ಹೇಳುತ್ತಾಳೆ. ಮುಂದೆ ನಡೆಯುವ ಒಂದೊಂದು ಘಟನೆಯೂ ರಣರೋಚಕವಾಗಿ , ನ್ಯಾಯದ ಜೊತೆ ಧರ್ಮದ ಹಾದಿಯಲ್ಲಿ ಸಂವಿಧಾನದ ಹಕ್ಕನ್ನ ಪಡೆಯುವ ಹೋರಾಟದ ಫಲವಾಗಿ ರೂಪಗೊಳ್ಳುತ್ತಾ ಹೋಗುತ್ತದೆ. ಮುಂದೆ ಎದುರಾಗುವ ಘಟನೆಗಳು ಏನು… ದುಷ್ಟರ ದಬ್ಬಾಳಿಕೆ ಮಟ್ಟ ಆಗುತ್ತಾ… ಬಡವರಿಗೆ ಬದುಕು ಸಿಗುತ್ತಾ… ಮೇಲು ಕೀಳು ಏನಾಗುತ್ತೆ… ಕ್ಲೈಮಾಕ್ಸ್ ಹೇಳುವ ಉತ್ತರ ಏನು? ಇದೆಲ್ಲದಕ್ಕೂ ಒಮ್ಮೆ ನೀವು ಈ ಚಿತ್ರವನ್ನು ನೋಡಲೇಬೇಕು.
ಇಡೀ ಚಿತ್ರವನ್ನು ನಟ ದುನಿಯಾ ವಿಜಯ್ ಕುಮಾರ್ ಆವರಿಸಿಕೊಂಡಿದ್ದಾರೆ. ಸಂವಿಧಾನದಲ್ಲಿ ಹೇಳಿರುವಂತಹ ಸಮಾನತೆಯ ಹಕ್ಕಿಗಾಗಿ ಹೋರಾಡುವ ರಾಚಯ್ಯನಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಜಾತಿ , ಧರ್ಮ , ಹಕ್ಕಿನ ಕ್ರಾಂತಿಯ ಕಹಳೆಯನ್ನ ಮೊಳಗಿಸುವ ಜೊತೆಗೆ ಧಣಿಕರ ದಬ್ಬಾಳಿಕೆಗೆ ಪ್ರತ್ಯುತ್ತರ ನೀಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವೇಷ ಭೂಷಣ , ನಡೆ-ನುಡಿಯಲ್ಲಿ ಮಣ್ಣಿನ ಕಥೆಗೆ ಪೂರಕವಾಗಿ ಅಭಿನಯಿಸಿದ್ದು, ಪ್ರಶಂಸೆ ಹಾಗೂ ನಟನೆಗೆ ರಾಜ್ಯ ಪ್ರಶಸ್ತಿ ಸಿಗುವ ಎಲ್ಲಾ ಅರ್ಹತೆಯನ್ನು ಪಡೆದಿದ್ದಾರೆ ಎನ್ನಬಹುದು. ಅದೇ ರೀತಿ ಅವರ ಪುತ್ರಿ ರೀತನ್ಯಾ ವಿಜಯ್ ಕೂಡ ಮೊದಲ ಬಾರಿಗೆ ಪೊಲೀಸ್ ಪೇದೆಯ ಪಾತ್ರಕ್ಕೆ ಜೀವ ತುಂಬಿ , ತಂದೆಯೊಟ್ಟಿಗೆ ಮಗಳಾಗಿ ತೆರೆಯ ಮೇಲೆ ಅಭಿನಯಿಸಿದ್ದು , ಎಲ್ಲರ ಗಮನ ಸೆಳೆಯುತ್ತದೆ.
ಒಂದೇ ದಿನ ಎರಡು ಚಿತ್ರಗಳು ಬಿಡುಗಡೆಯಾಗಿರುವ ನಟಿ ರಚಿತಾ ರಾಮ್ ಕೂಡ ಯಾವ ಪಾತ್ರಕ್ಕಾದರೂ ಕೈ ಎನ್ನುವಂತೆ ಅಭಿನಯಿಸಿದ್ದು , ಈ ಚಿತ್ರದಲ್ಲಿ ನಿಂಗವ್ವನಾಗಿ ಬಹಳ ಖಡಕ್ ಹೆಣ್ಣುಮಗಳಾಗಿ ಮಿಂಚಿದ್ದು , ಪ್ರೀತಿಯ ಮಾಮನ ಮಡದಿಯಾಗಿ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಇನ್ನು ಊರ ಸಣ್ಣ ಧಣಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಪಾತ್ರಕ್ಕೆ ನ್ಯಾಯ ನೀಡಿದ್ದು, ಅವರ ವಿಗ್ ಹೆಚ್ಚು ಬಗ್ಗೆ ಗಮನ ಸೆಳೆಯುತ್ತದೆ. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಚ್ಚುತ್ ಕುಮಾರ್ , ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ , ಭಾವನಾ ರಾವ್ , ರಾಕೇಶ್ ಅಡಿಗ , ಶಿಶೀರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ.
ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದ್ದು , ನಮ್ಮ ನೆಲದ ಕಥೆಯಲ್ಲಿ ಧಣಿಕರ ದಬ್ಬಾಳಿಕೆಗೆ ಸಿಲುಕಿ ನಲುಗಿದ ಬಡವರ ಕೋಪ ದವಡೆಗೆ ಮೂಲ ಎನ್ನುವಂತೆ ಪರದಾಡುವವರಿಗೆ ಅಡವಿರಾಯನಂತಹ ವ್ಯಕ್ತಿ ಶಕ್ತಿಯಾಗಿ ನಿಂತರೆ ಏನೆಲ್ಲಾ ಆಗುತ್ತದೆ , ಎಂಬುದನ್ನ ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಬದುಕು , ಪ್ರೀತಿ , ಸಂಬಂಧ , ಮೇಲು-ಕೀಳು, ದ್ವೇಷದ ನಡುವೆ ಸಾಗುವ ಕಥೆಯಲ್ಲಿ ಸಂಭಾಷಣೆ ಬಹಳ ಸೊಗಸಾಗಿ ಮೂಡಿಬಂದಿದೆ. ಆದರೆ ಚಿತ್ರಕಥೆ ಇನ್ನಷ್ಟು ಕಡಿತಗೊಳಿಸುವುದರ ಜೊತೆಗೆ ಹೊಡೆದಾಟ ರಕ್ತಪಾತ ಕಡಿಮೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತದೆ.
ಒಂದು ಸೂಕ್ಷ್ಮ ವಿಚಾರದ ಕಥೆಗೆ ನಿರ್ಮಾಪಕರು ನೀಡಿರುವ ಸಾತ್ ಮೆಚ್ಚಲೇಬೇಕು. ಇನ್ನು ಛಾಯಾಗ್ರಹಕರ ಕೈಚಳಕ ಅದ್ಭುತವಾಗಿದ್ದು , ಸಂಗೀತದ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಸಾಹಸ , ಸಂಕಲನದ ಕೆಲಸವೂ ಕೂಡ ಗಮನ ಸೆಳೆಯುತ್ತಿದ್ದು , ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರ ಇದಾಗಿದೆ.
