Cini NewsMovie ReviewSandalwood

ಮೇಲು – ಕೀಳಿನ ಒದ್ದಾಟ ಗುದ್ದಾಟ ‘ಕುಲದಲ್ಲಿ ಕೀಳ್ಯಾವುದೋ’ (ಚಿತ್ರವಿಮರ್ಶೆ -ರೇಟಿಂಗ್ : 3/5)

ಚಿತ್ರ : ಕುಲದಲ್ಲಿ ಕೀಳ್ಯಾವುದೋ
ನಿರ್ದೇಶಕ : ಕೆ‌.ರಾಮನಾರಾಯಣ್
ನಿರ್ಮಾಪಕರು : ಸಂತೋಷ್ ಕುಮಾರ್ ಎ. ಕೆ , ವಿದ್ಯಾ
ಸಂಗೀತ : ಮನೋಮೂರ್ತಿ
ಛಾಯಾಗ್ರಹಣ : ಮನು
ತಾರಾಗಣ : ಮಡೆನೂರ್ ಮನು , ಮೌನ ಗುಡ್ಡೆಮನೆ ,
ಯೋಗರಾಜ್ ಭಟ್, ಇಸ್ಲಾಮುದ್ದೀನ್, ಶರತ್ ಲೋಹಿತಾಶ್ವ , ಸೋನಾಲ್ ಮೊಂತೆರೊ, ತಬಲ ನಾಣಿ, ಕರಿಸುಬ್ಬು , ಹರೀಶ್ ರಾಜ್ ,ಡ್ರ್ಯಾಗನ್ ಮಂಜು ಹಾಗೂ ಮುಂತಾದವರು…

 

ಅನಾದಿಕಾಲದಿಂದಲೂ ಜಾತಿ ತಾರತಮ್ಯ , ಸಂಘರ್ಷ , ನಿಂದನೆ , ಅಪವಾದ , ಮೇಲು ಕೀಳು ನಿರಂತರವಾಗಿ ಇದದೆ. ಅದರಲ್ಲೂ ಗ್ರಾಮೀಣ ಭಾಗ , ಗುಡ್ಡಗಾಡು ಪ್ರದೇಶಗಳಲ್ಲಿ ನಡೆದುಕೊಂಡು ಬರುತ್ತಲೇ ಇದೆ. ಅಂತದ್ದೇ ಒಂದು ಕಾಡುವಾಸಿ ಜನರ ಬದುಕು ಬಾವಣಿಯ ಸುತ್ತ ಮೇಲ್ವರ್ಗದವರ ದಬ್ಬಾಳಿಕೆಯ ಬೆಂಕಿಯ ಸುಳಿಯಲ್ಲಿ ಸಿಲುಕಿ ನಲುಗಿದವರ ಕಥೆಯ ರೂಪಕವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕುಲದಲ್ಲಿ ಕೀಳ್ಯಾವುದೋ”.

ಊರಿನ ಮೇಲ್ವರ್ಗ ಜಾತಿಯ ಜನರ ನಡುವೆ ಬದುಕಲು ಆಗದೆ , ಸತ್ತವರನ್ನ ಸುಡುವುದಕ್ಕೂ ಜಾಗವಿಲ್ಲದೆ ಪರದಾಡುವ ಹಿರಿಯ ಜೀವ (ಯೋಗರಾಜ್ ಭಟ್) ಕಾಡಿನೊಳಗೆ ತನ್ನ ಮಡದಿಯ ದೇಹವನ್ನು ಪ್ರಾಣಿ ಪಕ್ಷಿಗಳು ತಿನ್ನಲಿ , ನಮ್ಮನ್ನು ಮುಟ್ಟಿಕೊಳ್ಳುವವರಿಗೆ ಮೈಲಿಗೆ ಆಗುತ್ತದೆ ಎನ್ನುವರಿಗೆ ಉತ್ತರ ನೀಡುತ್ತಲೇ ಸಾಗುವವನ ಬದುಕಿನಲ್ಲಿ ಎದುರಾಗುವ ಬಿದರುಬುಂಡೆ ಆಂಜನೇಯ ಸ್ವಾಮಿಯ ಆಶೀರ್ವಾದ ದೊರಕುತ್ತದೆ. ಮುಂದೆ ಅವನ ವಂಶಸ್ಥರು, ಜನಾಂಗದವರು ಆ ಸ್ಥಳದಲ್ಲಿ ವಾಸ ಮಾಡುತ್ತಾರೆ.

ಈ ಕಷ್ಟದ ಜೀವನ ಹೊರತಾಗಿ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂದು ಕನಸು ಕಾಣುವಾಗ ಎನ್. ಜಿ. ಓ ಸಂಸ್ಥೆ ಮುಂದೆ ಬಂದು ಒಂಟೆ ಗೊದ್ದ ಎಂಬ ಮಗುವನ್ನ ಸಿಟಿಗೆ ಕರೆದೊಯ್ಯುತ್ತಾರೆ. ಇನ್ನ ಉಳಿದ ಹುಡುಗರು ಅದೇ ಊರಲ್ಲಿ ಬೆಳೆದು, ಸತ್ತವರ ಹೆಣದ ಮುಂದೆ ತಮಟೆ ಬಾರಿಸುವುದೇ ಕಾಯಕ. ಈ ಕೆಲಸದ ಮುಖ್ಯಸ್ಥ ಮುತ್ತಅರಸ (ಮಡೆನೂರು ಮನು). ಅವರೊಟ್ಟಿಗೆ ಮಾಮಿ (ತಬಲ ನಾಣಿ) ಹಾಗೂ ತಂಡ. ಈ ಕಾಡು ವಾಸಿಗಳ ಹಿರಿಯಜ್ಜ ಕರಿಯಣ್ಣ (ಕರಿಸುಬ್ಬು).

ಕಾಡಿನೊಳಗೆ ಬಿಡಾರ ಹಾಕುತ್ತಾ ಸೂಕ್ತ ನೆಲೆ ಇಲ್ಲದೆ ಪರದಾಡುತ್ತಾರೆ. ಈ ತಾಂಡದೊಳಗೆ ಮುದ್ದಾದ ಬೆಡಗಿ ಲಚ್ಚಿ (ಮೌನ ಗುಡ್ಡೆಮನೆ) ಕೊಂಚ ಬುದ್ಧಿವಂತೆ. ಹಾಗೆ ಮುತ್ತಅರಸನ್ನ ಪ್ರೇಯಸಿ. ಇನ್ನು ಕಾಡಿನ ಅಪಾರ ಆಸ್ತಿ , ಶ್ರೀಗಂಧ ಮರಗಳ ಕಳ್ಳ ಸಾಗಾಣಿಕೆಯ ರೂವಾರಿ ರಾಯಪ್ಪ ( ಶರತ್ ಲೋಹಿತಾಶ್ವ) ಅವನ ಶಿಷ್ಯ ಇಸ್ಲ ಬೈ ಹಾಗೂ ಪಟಾಲo ಜಾಗಕ್ಕಾಗಿ ಪ್ರಾಣ ತೆಗೆಯೋಕು ಹಿಂಜರಿಯದ ಕ್ರೂರಿಗಳು. ರಾಯಪ್ಪನ ಕೆಲಸಕ್ಕೆ ಪತ್ನಿ ಹಾಗೂ ಭಾಮೈದನ ಸಾತ್.

ಬುಡಕಟ್ಟು ಜನಾಂಗದ ಆಸ್ತಿಯನ್ನು ಕಬಳಿಸುವ ಹುನ್ನಾರದ ಸಮಯಕ್ಕೆ ಬಡವರಿಗೆ ಆಸೆರೆಯಂತೆ ಬರುವ ತಾಸೀಲ್ದರ್ (ಸೋನಾಲ್ ಮಂಟೆರೋ) ನೆಲೆ ಇಲ್ಲದ ಈ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ಕೆ ಮುಂದಾಗುತ್ತಾರೆ. ಈ ವಿಚಾರ ತಿಳಿದ ರಾಯಪ್ಪನ ಕೋಪ ಮಿತಿಮೀರಿ ಹೋಗುತ್ತದೆ. ಇದರ ನಡುವೆ ಮುತ್ತಅರಸ ಕೂಡ ಬಹಳಷ್ಟು ಶ್ರಮಪಟ್ಟು ಜನರ ಒಗ್ಗೂಡಿಸಿ ಭದ್ರ ನೆಲೆಗಾಗಿ ಪರದಾಡುತ್ತಾನೆ. ದೇಶ , ಕೋಪ ಬಡ ಜೀವವನ್ನು ಸುಡುವ ಹಂತಕ್ಕೆ ಹೋಗುತ್ತದೆ. ಇನ್ನು ಬಾಲ್ಯದಲ್ಲಿ ಏನ್ .ಜಿ.ಒ ಸಂಸ್ಥೆಯ ಜೊತೆ ಹೋದ ಮಗು ಅಧಿಕಾರಿಯಾಗಿ ಬಂದು ನಮ್ಮ ಕಾಡು ಜನರನ್ನು ರಕ್ಷಿಸುತ್ತಾನೆ ಎನ್ನುವರ ಆಸೆಗೆ ಒಂದು ಕಠೋರ ಸತ್ಯ ತಿಳಿಯುತ್ತದೆ. ಏನದು ಸತ್ಯ… ಬುಡಕಟ್ಟು ಜನರ ಬದುಕು ಏನಾಗುತ್ತೆ… ಮೇಲ್ವರ್ಗದವರ ತುಳಿತಕ್ಕೆ ಸಿಲುಕುತ್ತಾರಾ… ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಇದಕ್ಕಾಗಿ ಒಮ್ಮೆ ಚಿತ್ರವನ್ನು ನೋಡಬೇಕು.

ಮೇಲು , ಕೀಳು , ಜಾತಿ ಸಂಘರ್ಷಗಳ ಬದುಕು , ಬಾವನೆಯ ಸುತ್ತ , ಒಬ್ಬ ವ್ಯಕ್ತಿ ಮೇಲ್ವರ್ಗದ ಬದುಕುಗಾಗಿ ಹೇಗೆಲ್ಲಾ ಪೀತೂರಿ ಮಾಡುತ್ತಾನೆ , ಸತ್ಯ , ಅಸತ್ಯತೆ ಏನು ಎಂಬುದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇಂತಹ ಕಥಾನಕಗಳು ಬಹಳಷ್ಟು ಬಂದು ಹೋಗಿವೆ. ಆದರೆ ಚಿತ್ರಕಥೆಯ ರೂಪಕ ಗಮನ ಸೆಳೆಯುವಂತಿದೆ. ನಿರ್ಮಾಪಕರು ಒಂದು ಉತ್ತಮ ಚಿತ್ರ ನೀಡುವ ಪ್ರಯತ್ನ ಮಾಡಿದ್ದಾರೆ. ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಾಹಸ , ಎಲ್ಲವೂ ಓಟಕ್ಕೆ ಪೂರಕವಾಗಿದೆ.

ಇನ್ನು ನಾಯಕನಾಗಿ ಮಡೆನೂರು ಮನು ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಪಾತ್ರಕ್ಕೆ ಜೀವ ತುಂಬಿ ನಟನಿಗೂ ಜೈ , ಸಾಹಸಕ್ಕೂ ಸೈ ಎಂದಿದ್ದಾರೆ. ಇನ್ನು ನಾಯಕಿಯಾಗಿ ಮೌನ ಗುಡ್ಡೆಮನೆ ಮುದ್ದು ಮುದ್ದಾಗಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಚಿತ್ರೋದ್ಯಮಕ್ಕೆ ಭರವಸೆಯ ನಟಿ ಸಿಕ್ಕಂತಾಗಿದೆ. ಯೋಗರಾಜ್ ಭಟ್ಟರ ನಟನೆ ಹಾಗೂ ಟೈಟಲ್ ಟ್ರ್ಯಾಕ್ ಹಾಡು ಮನಸೆಳೆಯುತ್ತದೆ. ಹಿರಿಯ ನಟ ಕರಿಸುಬ್ಬು ತಮ್ಮ ಕರಿಯಣ್ಣನ ಪಾತ್ರದಲ್ಲಿ ಮನಕಲಕುವಂತೆ ಜೀವಿಸಿದ್ದು , ಎಲ್ಲರ ಗಮನ ಸೆಳೆಯುತ್ತಾರೆ.

ತಬಲಾ ನಾಣಿ ಯ ಮಾತಿನ ವರ್ಸೆ ಹಾಗೂ ತಾಸಿಲ್ದಾರ್ ಕಚೇರಿಯ ಅಟೆಂಡರ್ ಪಾತ್ರಧಾರಿಯ ಡೊಲೊ 650 , ಮುದ್ದೆ ಡೈಲಾಗ್ ಬೊಂಬಾಟ್, ಇನ್ನು ತಾಸಿಲ್ದಾರ್ ಪಾತ್ರದಲ್ಲಿ ಸೋನಾಲ್ ಮೊಂಟೆರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಎಂದಿನಂತೆ ಶರತ್ ಲೋಹಿತಾಶ್ವ ರಾಯಪ್ಪ ಪಾತ್ರದಲ್ಲಿ ಅಬ್ಬರಿಸಿದ್ದು, ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ. ಉಳಿದ ಖಳನಾಯಕರ ಪಾತ್ರಗಳು ಉತ್ತಮ ಸಾತ್ ನೀಡಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಹರೀಶ್ ರಾಜ್ ಕೂಡ ಮಿಂಚಿದ್ದಾರೆ. ಇದೊಂದು ಜಾತಿ ತಾರತಮ್ಯದ ಕಥೆಯಾಗಿದ್ದು , ಈಗಿನ ಕಾಲಘಟ್ಟಕ್ಕೆ ಎಷ್ಟು ಸೂಕ್ತವಾಗುತ್ತೋ ಏನೋ.. ಒಟ್ಟಾರೆ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.

error: Content is protected !!