“ಬ್ರ್ಯಾಟ್” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ” ಬ್ರ್ಯಾಟ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ “ಬ್ರ್ಯಾಟ್” ಚಿತ್ರದ ಟ್ರೇಲರ್ ಅನ್ನು ಅನಾವರಣ ಮಾಡಿದರು. ನಂತರ ಸುದೀಪ್ ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ಶಶಾಂಕ್ ಒಬ್ಬರು ಒಳ್ಳೆಯ ಕಥೆಗಾರ. ಅವರ ನಿರ್ದೇಶನದ ಚಿತ್ರ ಎಂದ ಮೇಲೆ ಚೆನ್ನಾಗಿರುತ್ತದೆ. ಹಾಗೆ ಡಾರ್ಲಿಂಗ್ ಕೃಷ್ಣ ಕೂಡ ಉತ್ತಮ ನಟ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ “ಕೌಸಲ್ಯ ಸುಪ್ರಜ ರಾಮ” ಚಿತ್ರ ಕೂಡ ಬಿಗ್ ಹಿಟ್ ಆಗಿತ್ತು. ಈ ಚಿತ್ರ ಕೂಡ ಸೂಪರ್ ಹಿಟ್ ಆಗಲಿ ಎಂದು ಸುದೀಪ್ ಹಾರೈಸಿದರು.
ಸುದೀಪ್ ಅವರು, ನನಗೆ ಹಾಗೂ ಕೃಷ್ಣ ಇಬ್ಬರಿಗೂ ಬಹಳ ಲಕ್ಕಿ. ಏಕೆಂದರೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಹಿಂದಿನ ಚಿತ್ರ “ಕೌಸಲ್ಯ ಸುಪ್ರಜ ರಾಮ” ಚಿತ್ರದ ಟ್ರೇಲರ್ ಅನ್ನು ಸುದೀಪ್ ಅವರೆ ಅನಾವರಣ ಮಾಡಿದ್ದು. ಅದು ಎಷ್ಟು ಹಿಟ್ ಆಯಿತು ಅಂತ ಎಲ್ಲರಿಗೂ ಗೊತ್ತೆ ಇದೆ. ಇಂದು “ಬ್ರ್ಯಾಟ್” ಚಿತ್ರದ ಟ್ರೇಲರ್ ಕೂಡ ಸುದೀಪ್ ಅವರಿಂದಲೇ ಅನಾವರಣವಾಗಿದೆ. ಇದು ಕೂಡ ದೊಡ್ಡ ಹಿಟ್ ಅಗುವ ನಂಬಿಕೆ ಇದೆ. ಸುದೀಪ್ ಅವರಿಗೆ ಧನ್ಯವಾದ.
ಇನ್ನೂ ನಾವು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರ ಅಂತಲೇ ನಿರ್ಮಾಣ ಮಾಡಿದ್ದು. ಅದೇ ತರಹ ಈವರೆಗೂ ಟೀಸರ್ ಹಾಗೂ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿಕೊಂಡು ಬಂದಿದ್ದೇವೆ. ಆದರೆ ಟ್ರೇಲರ್ ಇಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಟ್ರೇಲರ್ ಅನಾವರಣವಾಗಲಿದೆ. ಚಿತ್ರತಂಡದ ಸಹಕಾರದಿಂದ “ಬ್ರ್ಯಾಟ್” ಒಂದೊಳ್ಳೆ ಚಿತ್ರವಾಗಿ ನಿರ್ಮಾಣವಾಗಿದೆ. ಇದೇ ಅಕ್ಟೋಬರ್ 31 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಶಶಾಂಕ್.
ಸುದೀಪ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ “ಬ್ರ್ಯಾಟ್” ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ, “ಕೌಸಲ್ಯ ಸುಪ್ರಜ ರಾಮ” ಚಿತ್ರದ ನಂತರ ಶಶಾಂಕ್ ಅವರು ನನಗೆ ನಾಲ್ಕೈದು ಕಥೆಗಳನ್ನು ಹೇಳಿದರು. ಈ ಕಥೆ ನನಗೆ ಬಹಳ ಇಷ್ಟವಾಯಿತು. ಈಗಾಗಲೇ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಚಿತ್ರದ ಟೀಸರ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಟ್ರೇಲರ್ ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಚಿತ್ರದ ನನ್ನ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ಅಕ್ಟೋಬರ್ 31 ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.
ಕ್ರಿಕೆಟ್ ಕುರಿತಾದ ನಮ್ಮ “ಬ್ರ್ಯಾಟ್” ಚಿತ್ರದ ಟ್ರೇಲರ್ ಉತ್ತಮ ನಾಯಕನಟರು ಹಾಗೂ ಉತ್ತಮ ಕ್ರಿಕೆಟ್ ಆಟಗಾರರು ಆದ ಸುದೀಪ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ನಮ್ಮ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರು ಸಹ ಒಳ್ಳೆಯ ಕ್ರಿಕೆಟ್ ಆಟಗಾರರು. ಇನ್ನೂ, ಈ ಚಿತ್ರವನ್ನು ಶಶಾಂಕ್ ಅವರು ಬಹಳ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅದಕ್ಕೆ ಸಂಪೂರ್ಣ ಚಿತ್ರತಂಡ ಸಾಥ್ ನೀಡಿದ್ದಾರೆ. ಅಕ್ಟೋಬರ್ 31 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.
ನಾಯಕಿ ಮನಿಶಾ ಕಂದಕೂರ್ ಸಹ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೋ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.