“ಕಮಲ್ ಶ್ರೀದೇವಿ” ಟೀಸರ್ ಬಿಡುಗಡೆ ಮಾಡಿದ ಹಿರಿಯ ನಟ ಎಂ. ಎಸ್. ಉಮೇಶ್.
ಸ್ಯಾಂಡಲ್ ವುಟಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂತಹ ಚಿತ್ರ “ಕಮಲ್ ಶ್ರೀದೇವಿ” ಈ ಚಿತ್ರದ ಅಧಿಕೃತ ಟೀಸರ್ ಹಿರಿಯ ನಟ ಎಂ . ಎಸ್ . ಉಮೇಶ್ ರವರು ಬಿಡುಗಡೆ ಮಾಡಿದರು. ಒಂದು ಸಿನಿಮಾ ಯಶಸ್ವಿಯಾಗಬೇಕಾದರ ಅದರ ಟೈಟಲ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ, ಅಂಥದ್ದೆ ಈ ಚಿತ್ರ “ಕಮಲ್ ಶ್ರೀದೇವಿ”. ಕೃಷಿಸಚಿವ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಚೆಲುವರಾಯಸ್ವಾಮಿ ಅಭಿನಯದ ಕಮಲ್ ಶ್ರೀದೇವಿ ಆರಂಭದಿಂದಲೂ ತನ್ನ ಶೀರ್ಷಿಕೆಯಿಂದಲೇ ದೊಡ್ಡಮಟ್ಟದ ಪ್ರಚಾರ ಪಡೆದುಕೊಳ್ಳುತ್ತಿದೆ, ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಸೆ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ, ಈಗ ಟೀಸರ್ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಮರ್ಡರ್ ಮಿಸ್ಟರಿ ಕಥಾಹಂದರ ಒಳಗೊಂಡ ಚಿತ್ರ ಇದಾಗಿದ್ದು, ಕಮಲ್ ಪಾತ್ರದಲ್ಲಿ ಸಚಿನ್, ಶ್ರೀದೇವಿಯಾಗಿ ನಟಿ ಸಂಗೀತಾ ಭಟ್ ಕಾಣಿಸಿಕೊಂಡಿದ್ದಾರೆ.
ಎನ್.ಚಲುವರಾಯಸ್ವಾಮಿ ಅರ್ಪಿಸಿರುವ ಈ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಯಕ ಸಚಿನ್ ತಾಯಿ ಬಿ.ಕೆ.ಧನಲಕ್ಷ್ಮೀ ಅವರು ನಿರ್ಮಾಣ ಮಾಡುತ್ತಿದ್ದಾರೆ, ಬಾರ್ನ್ ಸ್ವಾಲ್ವೋ ಕಂಪನಿ ಮೂಲಕ ರಾಜವರ್ಧನ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ವಿ.ಎ. ಸುನೀಲ್ ಕುಮಾರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ, ಸಚಿನ್, ಸಂಗೀತಾ ಭಟ್ ಹಾಗೂ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಾಯಕ ಸಚಿನ್ ಚೆಲುವರಾಯಸ್ವಾಮಿ ಮಾತನಾಡುತ್ತಾ ಒಂದು ಸಿಂಪಲ್ ಟಾಕ್‌ನಿಂದ ಶುರುವಾದ ಜಿರ್ನಿಯಿದು, ಒಂದು ಇನ್‌ಸಿಡೆಂಟ್ ಕೂಡ ಇದಕ್ಕೆ ಕಾರಣ, ನಾವೇನೇ ಎಫರ್ಟ್ ಹಾಕಿದರೂ ಅದನ್ನು ಜನ ತೆರೆ ಮೇಲೆ ಸ್ವೀಕರಿಸಿದಾಗಲಷ್ಟೇ ಖುಷಿ. ಸ್ಕ್ರಿಪ್ಟ್ ವರ್ಕ್ಗೆ ನಾವು ತುಂಬಾ ಟೈಮ್ ತಗೊಂಡೆವು. ಅದೇ ಕಾರಣಕ್ಕೆ ಇವತ್ತು ಟೀಸರ್ ಈ ಮಟ್ಟಕ್ಕೆ ಬಂದಿದೆ, 2-3 ದಿನಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಚಿತ್ರದಲ್ಲಿ ನಾನೊಬ್ಬ ಫಿಲಂ ಡೈರೆಕ್ಟರ್ ಆಗಿ ಕಾಣಿಸಿಕೊಂಡಿದ್ದೇನೆ, ಕಥೆಯ ಒಂದು ಲೈನ್ ಹೇಳಿದರೂ ಚಿತ್ರದ ಸ್ವಾರಸ್ಯ ಹೊರಟುಹೋಗುತ್ತದೆ, ಚಿತ್ರದ ಪ್ರತಿ ಪಾತ್ರವೂ ವಿಶೇಷವಾಗಿದೆ. ನಮ್ಮ ತಾಯಿಯವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗೆಳೆಯ ರಾಜವರ್ಧನ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನನ್ನ ಸಿನಿ ಕೆರಿಯರ್‌ಗೆ ಈ ಚಿತ್ರ ಬಹಳ ವಿಶೇಷವಾಗಿದೆ ಎಂದರು.
ನಾಯಕಿ ಸಂಗೀತಾ ಭಟ್ ಮಾತನಾಡಿ ಸುನಿಲ್ ನನಗೆ ಪ್ರೀತಿ ಗೀತಿ ಇತ್ಯಾದಿ ಚಿತ್ರದಿಂದ ಪರಿಚಯ, ನನ್ನ ಮೇಲಿನ ನಂಬಿಕೆಯಿಂದ ಶ್ರೀದೇವಿ ಎಂಬ ಪ್ರಮುಖ ಪಾತ್ರವನ್ನು ಕೊಟ್ಟಿದ್ದಾರೆ, ಅವರ ನಿರೀಕ್ಷೆಯನ್ನು ಫುಲ್‌ಫಿಲ್ ಮಾಡಿದ್ದೇನೆಂಬ ನಂಬಿಕೆಯಿದೆ, ರಾಜವರ್ಧನ್ ಅವರು ತುಂಬಾ ಜವಾಬ್ದಾರಿಯಿಂದ ಕೆಲಸ ನಿಭಾಯಿಸಿದ್ದಾರೆ ಎಂದು ಹೇಳಿದರು.
ಹಾಗೆಯೇ ರಾಜವರ್ಧನ್ ಮಾತನಾಡುತ್ತ ಇದೊಂದು ದೊಡ್ಡ ಜರ್ನಿ, ನಾನು ಆಟೋ ಮೇಲೆ ನೋಡಿದ ಒಂದು ಲೈನ್ ಈ ಸಿನಿಮಾ ಆಗಲು ಪ್ರೇರಣೆಯಾಯಿತು, ನಾವಂದುಕೊಂಡಂತೆಯೇ ಚಿತ್ರ ತೆರೆಮೇಲೆ ಬಂದಿದೆ. ಚಿತ್ರದಲ್ಲಿ ಏಳು ಪಾತ್ರಗಳು, ಏಳು ಪ್ರಾಣಿಗಳ ರೂಪದಲ್ಲಿ ಕಥೆ ಸಾಗುತ್ತದೆ. ಚಿತ್ರಕ್ಕಾಗಿಯೇ ಮೂರು ವಿಭಿನ್ನ ಸೆಟ್ ಹಾಕಿ ಶೂಟ್ ಮಾಡಿದ್ದೇವೆ. ಈಗ ಚಿತ್ರರಂಗಕ್ಕೆ ಒಳ್ಳೆಯ ಟೈಮ್ ಬಂದಿದೆ, ಒಳ್ಳೇ ಚಿತ್ರ ಕೊಟ್ಟರೆ ಜನ ನೋಡುತ್ತಾರೆ ಎನ್ನುವುದು ನಿಜವಾಗಿದೆ, ಚಿತ್ರದ ಕ್ರಿಯೇಟಿವ ಹೆಡ್ ಆಗಿ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ, ಸಚಿನ್ ಆರಂಭದಲ್ಲಿ ಹ್ಯಾಪಿ ಬರ್ತ ಡೇ ಆಚರಿಸಿಕೊಳ್ಳುತ್ತಾ ಚಿತ್ರರಂಗಕ್ಕೆ ಬಂದರು, ಈಗವರು ವೆಡ್ಡಿಂಗ್ ಆನಿವರ್ಸರಿ ಮಾಡಿಕೊಳ್ಳುತ್ತಿದ್ದಾರೆ, ನಿರ್ಮಾಪಕನ ಜವಾಬ್ದಾರಿ ದೊಡ್ಡದು, ಈ ಸಿನಿಮಾದ ೨೫ ದಿನಗಳ ಸೆಲಬ್ರೇಶನ್ ನಂತರ ನಮ್ಮ ಮುಂದಿನ ಪ್ರಾಜೆಕ್ಟ್ ಆರಂಭಿಸುತ್ತೇವೆ ಎಂದರು.
ನಿರ್ದೇಶಕ ವಿ.ಎ. ಸುನಿಲ್ ಕುಮಾರ್ ಮಾತನಾಡುತ್ತಾ ಇದು ನನ್ನ ಎರಡನೇ ಚಿತ್ರ, ಮರ್ಡರ್ ಮಿಸ್ಟ್ರಿ ಸಬ್ಜೆಕ್ಟ್. ಬೆಂಗಳುರು, ಮೈಸೂರು, ಮೇಲುಕೋಟೆ, ಸುತ್ತಮುತ್ತ ೬೩ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ರಾಜವರ್ಧನ್ ಅವರಿಂದ ನನಗೀ ಚಿತ್ರ ಸಿಕ್ಕಿದೆ. ಒಬ್ಬ ಪ್ರೊಡ್ಯೂಸರ್‌ಗೆ ಶೂಟಿಂಗ್ ಸಮಯದಲ್ಲಿ ತುಂಬ ಒತ್ತಡ ಇರುತ್ತದೆ, ಅದನ್ನೆಲ್ಲ ಅವರು ಅವರು ನಿಭಾಯಿಸಿದ್ದಾರೆ. ಚಿತ್ರದ ಟೈಟಲ್ ಕೆಳಗೆ ಬರೆದಿರೋ ಕೇಸ್ ನಂಬರ್ ಚಿತ್ರಕಥೆಯ ಒಳಮರ್ಮವನ್ನು ಹೇಳುತ್ತದೆ ಎಂದು ಹೇಳಿದರು,
ಹಿರಿಯ ನಟ ಎಂ.ಎಸ್.ಉಮೇಶ್, ಮಿತ್ರ, ರಾಘು ಶಿವಮೊಗ್ಗ, ರಮೇಶ್ ಇಂದಿರಾ, ಅಕ್ಷಿತಾ ಬೋಪಯ್ಯ ಸೇರಿದಂತೆ ಬಹುತೇಕ ಕಲಾವಿದರು ಚಿತ್ರದಲ್ಕಿ ಅಭಿನಯಿಸಿದ್ದಾರೆ, ಛಾಯಾಗ್ರಾಹಕರಾಗಿ ನಾಗೇಶ್ ಆಚಾರ್ಯ , ಸಂಗೀತ ನಿರ್ದೇಶಕರಾಗಿ ಕೀರ್ತನ್ ಕೆಲಸ ಮಾಡಿದ್ದಾರೆ.