Cini NewsMovie ReviewSandalwood

ಬಾಂಧವ್ಯದ ಬೆಸಿಗೆಯ ನಡುವೆ ಆಧುನಿಕತೆಯ ಬೆಳಕು “ಜೂನಿಯರ್‌ ” ಚಿತ್ರವಿಮರ್ಶೆ (ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಜೂನಿಯರ್‌
ನಿರ್ದೇಶಕ : ರಾಧಾಕೃಷ್ಣ ರೆಡ್ಡಿ
ನಿರ್ಮಾಪಕ : ಸಾಯಿ ಕೊರಪಟ್ಟಿ
ಸಂಗೀತ : ದೇವಿ ಶ್ರೀ ಪ್ರಸಾದ್
ಛಾಯಾಗ್ರಹಣ: ಕೆ.ಕೆ.ಸೆಂಥಿಲ್
ತಾರಾಗಣ : ಕಿರೀಟಿ ರೆಡ್ಡಿ , ಶ್ರೀಲೀಲಾ, ರವಿಚಂದ್ರನ್‌, ಜೆನಿಲಿಯಾ , ಸುಧಾರಾಣಿ , ರಾವ್ ರಮೇಶ್ , ಅಚ್ಚುತ್ ಕುಮಾರ್ , ಹರ್ಷ , ಸತ್ಯ ಹಾಗೂ ಮುಂತಾದವರು…

ಪ್ರತಿಯೊಬ್ಬರಿಗೂ ತಮ್ಮ ಊರು , ಪರಿಸರ , ಆತ್ಮೀಯತೆ ಬದುಕು , ಸಂಬಂಧ , ಪ್ರೀತಿ , ನೋವು , ನಲಿವು ಎಲ್ಲವೂ ನೆನಪು ಇದ್ದೇ ಇರುತ್ತದೆ. ಅಂತದ್ದೇ ಒಂದು ಗ್ರಾಮದ ಮುಖಂಡನ ಕುಟುಂಬದ ಬದುಕಿನ ಸುತ್ತ ಎದುರಾಗುವ ಕಷ್ಟ ಕಾರ್ಪಣ್ಯಗಳ ಸುಳಿಯ ಹಾದಿಯಲ್ಲಿ ಮಕ್ಕಳ ಭವಿಷ್ಯ , ಅಪ್ಪನ ಜವಾಬ್ದಾರಿಯ ನಡುವೆ ಆಧುನಿಕ ಜಗತ್ತಿನ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಮಾದರಿ ಗ್ರಾಮದ ವಿಚಾರದೊಂದಿಗೆ ಕಾಲೇಜ್ ವಿದ್ಯಾರ್ಥಿಗಳ ಕನಸು , ಆಸೆ, ಗುರಿ , ಭವಿಷ್ಯದ ಸುತ್ತ ಮನ ಸೆಳೆಯುವ ಕಥಹಾಂದರದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜೂನಿಯರ್”.

ಜೀವನದಲ್ಲಿ ಸದಾ ಜೋಶ್, ವಿಶ್ವಾಸ , ಕುತೂಹಲ , ನೆನಪಿನ ಬುತ್ತಿಯೊಂದಿಗೆ ಗೆಲುವಿನ ಗುರಿಯತ್ತ ಸಾಗಲು ನಿಲ್ಲುವ ವಿದ್ಯಾರ್ಥಿ ಅಭಿ (ಕಿರೀಟಿ). ಇನ್ನು ವಯಸ್ಸಾದ ನಂತರ ಹುಟ್ಟಿದ ಮಗನನ್ನ ಗುಬ್ಬಚ್ಚಿಯಂತೆ ನೋಡಿಕೊಳ್ಳುವ ತಂದೆ ಕೋದಂಡಪಾಣಿ (ರವಿಚಂದ್ರನ್). ತಾಯಿ ಇಲ್ಲದ ಕೊರತೆಯನ್ನು ನೀಗಿಸುತ್ತ ಮಗನನ್ನ ಬೆಳೆಸುವ ಅಪ್ಪ. ಅತಿಯಾದ ಅಪ್ಪನ ಪ್ರೀತಿ ಅಭಿಗೆ ಮುಜುಗರವಾದರೂ ಕಾಲೇಜಿನಲ್ಲಿ ಗೆಳೆಯರ ಗ್ಯಾಂಗ್ ನೊಂದಿಗೆ ತರ್ಲೆ , ತುಂಟಾಟ ನಿರಂತರ. ಅಚಾನಕ್ಕಾಗಿ ಬಸ್ಸಿನಲ್ಲಿ ಸಿಗುವ ಸುಂದರ ಯುವತಿ ಸ್ಪೂರ್ತಿ (ಶ್ರೀಲೀಲಾ) ಯ ನೋಟಕ್ಕೆ ಮನಸೋತು ಅವಳನ್ನ ಹಿಂಬಾಲಿಸಿ ಇಷ್ಟಪಡುತ್ತಾನೆ.

ಓದಿ ಫಾರಿನ್ ಸೇರುವ ಕನಸು ಕಾಣುವ ಸ್ಪೂರ್ತಿ. ಅದೇ ರೀತಿ ಅಭಿ ಕೂಡ ರಾಂಕ್ ಸ್ಟೂಡೆಂಟ್. ಇನ್ನು ಪ್ರಾಜೆಕ್ಟ್ ಗಳ ಮೂಲಕ ಗಮನ ಸೆಳೆಯುವ ವಿದ್ಯಾರ್ಥಿಗಳು ಇಂಟರ್ನ್ಶಿಪ್ ನಲ್ಲಿ ರೈಸ್ ಸಲ್ಯೂಷನ್ ಕಂಪನಿಯ ಸಿಇಒ ಗೋಪಾಲ್ (ರಾವ್ ರಮೇಶ್) ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಈ ಸಂಸ್ಥೆಯ ಮುಖ್ಯಸ್ಥೆ ವಿಜಯ ಸೌಜನ್ಯ (ಜನಿಲಿಯಾ) ಕೆಲಸದಲ್ಲಿ ಬಹಳ ಸ್ಟ್ರೀಟ್ ಹಾಗೂ ಖಡಕ್ ಮಹಿಳೆ. ಇದರ ನಡುವೆ ವಿಜಯ ಹಾಗೂ ಅಭಿಯ ನಡುವೆ ಸಣ್ಣ ಗೊಂದಲ. ಒಮ್ಮೆ (CSR) ಕಾರ್ಪೆಟ್ ಸೋಶಿಯಲ್ ರಿಸೋರ್ಸ್ ಕೆಲಸದಲ್ಲಿರುವ ಏರುಪೇರುಗಳಿಂದ ವಿಜಯ ಸಿಇಓ ಆಗುವ ಅವಕಾಶ ದೂರ ಉಳಿಯುತ್ತದೆ. ಇದಕ್ಕೆ ಕಾರಣ ಯಾರು ಎಂದು ತಿಳಿಯುವ ಸಿಇಓ ಗೋಪಾಲ್ ಗೆ ಒಂದು ದೊಡ್ಡ ಸತ್ಯ ಅಭಿಗೆ ತಿಳಿಸುತ್ತಾನೆ. ವಿಜಯನಗರ ಎಂಬ ಗ್ರಾಮವನ್ನು ಆಧುನಿಕತೆಯ ಹೊಸ ರೂಪಕ್ಕೆ ಮುಂದಾಗಲು ವಿಜಯ ಗೆ ಸೂಚನೆ ನೀಡುವ ಸಿಇಓ ಅಭಿ ಹಾಗೂ ತಂಡಕ್ಕೂ ಸಾಥ್ ನೀಡುವಂತೆ ತಿಳಿಸುತ್ತಾನೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಫ್ಲ್ಯಾಶ್ ಬ್ಯಾಕ್ ತೆಗೆದುಕೊಳ್ಳುತ್ತ ಸಾಗುತ್ತದೆ.
ವಿಜಯನಗರ ಹಿನ್ನೆಲೆ ಏನು…

ಅಪ್ಪನ ಆಸೆ ಈಡೇರುತ್ತ…
ವಿಜಯ ಹಾಗೂ ಅಭಿ ಯಾರು…
ಸಿಇಓ ಹೇಳುವ ಸತ್ಯ ಏನು…
ಕ್ಲೈಮಾಕ್ಸ್ ಉತ್ತರ ಏನು… ಇದಕ್ಕಾಗಿ ಒಮ್ಮೆ ಜೂನಿಯರ್ ಚಿತ್ರ ನೋಡಬೇಕು.

ಯುವ ನಟ ಕಿರೀಟಿ ಜೂನಿಯರ್ ಮೂಲಕ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳನ್ನು ರೋಮಾಂಚನಕಾರಿಯಾಗಿ ನಿರ್ವಹಿಸಿದ್ದು , ಅಷ್ಟೇ ಸೊಗಸಾಗಿ ಡ್ಯಾನ್ಸಿಂಗ್ ನಲ್ಲಿ ಗಮನ ಸೆಳೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ನಟನೆಯಲ್ಲಿ ಜೀವತುಂಬಿ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣವನ್ನ ತೋರಿಸಿದ್ದಾರೆ. ಡೈಲಾಗ್ ಡೆಲಿವರಿ , ಎಮೋಷನ್ಸ್ , ಕಾಮಿಡಿ ಟೈಮಿಂಗ್ , ರಿಯಾಕ್ಷನ್ಸ್ ಉತ್ತಮವಾಗಿದೆ. ಅಷ್ಟೇ ಸೊಗಸಾಗಿ ನಟಿ ಶ್ರೀಲೀಲಾ ಕೂಡ ತೆರೆಯ ಮೇಲೆ ಅಭಿನಯಿಸಿದ್ದು , ಆಕ್ಟಿಂಗ್ ಜೈ , ಡ್ಯಾನ್ಸಿಂಗು ಸೈ ಎನ್ನುವಂತೆ ಮಿಂಚಿದ್ದಾರೆ. ಆದರೆ ಎರಡನೇ ಭಾಗದಲ್ಲಿ ಕ್ರಮೇಣ ಮಾಯವಾಗಿದ್ದಾರೆ.

ಇನ್ನು ಇಡೀ ಚಿತ್ರದ ಹೈಲೈಟ್ ಕ್ರೇಜಿಸ್ಟಾರ್ ವಿ. ರವಿಚಂದ್ರನ್ , ಒಬ್ಬ ತಂದೆಯ ಪಾತ್ರದಲ್ಲಿ ಮನ ಮಿಡಿಯುವಂತೆ ಅಭಿನಯಿಸಿದ್ದಾರೆ. ಪ್ರೀತಿ , ಮಮಕಾರ , ಸಂಕಷ್ಟದ ಸುಳಿಯ ನಡುವೆ ಮುಗ್ಧ ಪಾತ್ರಕ್ಕೆ ಜೀವ ತುಂಬಿದ್ದಾರೆ.  ಅದೇ ರೀತಿ ನಟಿ ಜನಿಲಿಯಾ ಕೂಡ ಮಗಳ ಪಾತ್ರಕ್ಕೆ ನ್ಯಾಚುರಲ್ ಆಗಿ ಅಭಿನಯಿಸಿ ಗಮನ ಸೆಳೆಯುತ್ತಾರೆ. ಉಳಿದಂತೆ ರಾವ್ ರಮೇಶ್ , ಹರ್ಷ ಚೆಮುಡು , ಸತ್ಯ , ಸುಧಾರಾಣಿ , ಅಚ್ಚುತ್ ಕುಮಾರ್, ಗೋವಿಂದೇಗೌಡ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದೆ. ಸಂಬಂಧಗಳ ಮೌಲ್ಯ , ವಾತ್ಸಲ್ಯದ ಪ್ರೀತಿ, ಮಮಕಾರ, ಗೆಳೆತನ , ವಿಶ್ವಾಸ , ಬದುಕಿನ ಗುರಿಯ ಜೊತೆ ಪ್ರತಿ ಒಂದು ಹಳ್ಳಿಯೂ ನಗರದ ಜೀವನಕ್ಕೆ ಹತ್ತಿರವಾಗಬೇಕು, ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ವಿಚಾರದ ಸೂಕ್ಷ್ಮತೆಯ ಬದುಕಿನ ಚಿತ್ರಣ ಗಮನ ಸೆಳೆಯುತ್ತದೆ. ಆದರೆ ಪಾತ್ರಧಾರಿಗಳ ಲಿಪ್ ಸಿಂಕ್ ಮಿಸ್ ಆದಂತಿದೆ. ಇನ್ನು ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಾಣುತ್ತದೆ. ತಾಂತ್ರಿಕವಾಗಿ ತಂಡದ ಕೆಲಸ ಉತ್ತಮವಾಗಿದ್ದು , ಸಂಗೀತ , ಛಾಯಾಗ್ರಹಣ , ಸಂಕಲನ ಅದ್ಭುತವಾಗಿ ಮೂಡಿ ಬಂದಿದೆ. ಒಂದು ಸಂಪೂರ್ಣ ಮನೋರಂಜನ ಚಿತ್ರವಾಗಿದ್ದು , ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರ ಇದಾಗಿದೆ.

error: Content is protected !!