ದೈವಭಕ್ತೆ ಮಹಾಶರಣೆಯ ಬದುಕಿನ ಪಯಣ…”ಜಗನ್ಮಾತೆ ಅಕ್ಕಮಹಾದೇವಿ” (ಚಿತ್ರವಿಮರ್ಶೆ)
ಚಿತ್ರ : ಜಗನ್ಮಾತೆ ಅಕ್ಕಮಹಾದೇವಿ
ನಿರ್ದೇಶಕ , ನಿರ್ಮಾಪಕ : ವಿಷ್ಣುಕಾಂತ ಬಿ.ಜೆ.
ಸಂಗೀತ : ಆರ್. ಪಳನಿ
ಛಾಯಾಗ್ರಹಣ : ರವಿ ಸುವರ್ಣ
ತಾರಾಗಣ : ಸುಲಕ್ಷ ಕೈರಾ , ಬಿ.ಜೆ. ವಿಷ್ಣುಕಾಂತ , ತಬಲಾ ನಾಣಿ, ಸುಚೇಂದ್ರ ಪ್ರಸಾದ್ , ವೈಜಿನಾಥ ಬಿರಾದಾರ್ ಹಾಗೂ ಸ್ಥಳೀಯ ಪ್ರತಿಭೆಗಳು…
ಶರಣರ ನಾಡು ಕಲ್ಯಾಣ ಭೂಮಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಹನ್ನೆರಡನೆಯ ಶತಮಾನದ ಶರಣರ ಸಾಲಲ್ಲಿ ಪ್ರಮುಖವಾಗಿ ಕಾಣುವವರಲ್ಲಿ ಒಬ್ಬರಾದ ಶಿವಶರಣೆ ಅಕ್ಕಮಹಾದೇವಿ. ತನ್ನ ವ್ಯಕ್ತಿತ್ವ ಹಾಗೂ ಅನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿ , ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಸಿಕೊಂಡು , ಅಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಪಡೆದು , ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಮಹಾಶರಣೆ ಅಕ್ಕಮಹಾದೇವಿಯ ಜೀವನ , ಸಾಧನೆ ಕುರಿತಾದ ವಿಚಾರವು ಚಿತ್ರರೂಪಕವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಗನ್ಮಾತೆ ಅಕ್ಕಮಹಾದೇವಿ”.
ಶ್ರೀಶೈಲಂನ ಚೆನ್ನಮಲ್ಲಿಕಾರ್ಜುನ ಕೃಪೆಯಿಂದ ಸುಮತಿ ಹಾಗೂ ನಿರ್ಮಲ ಶೆಟ್ಟರಿಗೆ ಹುಟ್ಟಿದಂತ ಮುದ್ದಾದ ಮಗಳು ಮಹಾದೇವಿ (ಸುಲಕ್ಷ ಕೈರಾ). ಬಾಲ್ಯದಿಂದಲೂ ದೇವರ ಬಗ್ಗೆ ಅಪಾರ ನಂಬಿಕೆ , ಪ್ರೀತಿ , ಗೌರವ. ವಿದ್ಯೆಯ ಬಗ್ಗೆ ಹೆಚ್ಚು ಒಲವು , ಆದರೆ ಮಠಕ್ಕೆ ಗಂಡು ಮಕ್ಕಳು ಹೋಗುತ್ತಿದ್ದನ್ನು ಕಂಡು ತಾನು ಕಲಿಯಬೇಕೆಂಬ ಉತ್ಸಾಹವನ್ನು ತೋರುವ ಮಹಾದೇವಿ.
ತಾಯಿಗೆ ಇಷ್ಟವಿಲ್ಲದಿದ್ದರು , ತಂದೆಯೇ ಮಗಳಿಗಾಗಿ ಗುರುವಿನ ಬಳಿ ಕರೆದುಕೊಂಡು ಹೋದಾಗ ಮಠದ ಬುದ್ಧಿ ಪುಟ್ಟ ಬಾಲಕಿಯನ್ನು ನೋಡಿ, ಮಹಾದೇವಿ ಹುಟ್ಟಿರುವುದೇ ಲೋಕ ಉದ್ಧಾರಕ್ಕಾಗಿ , ಹೆಣ್ಣು ಮಕ್ಕಳ ಶಕ್ತಿಯಾಗಿ , ಜಗತ್ತಿಗೆ ಒಂದು ದೊಡ್ಡ ಸಂದೇಶ ಸಾರುವ ಮಹಾತಾಯಿಯಾಗಿ ನಿಲ್ಲುತ್ತಾಳೆ ಎಂದು ತಿಳಿಸಿ , ಕಲಿಕೆಗೆ ದಾರಿ ಮಾಡಿಕೊಡುತ್ತಾರೆ.
ಲಿಂಗಧಾರಣ ನಂತರ ಹಂತ ಹಂತವಾಗಿ ಬೆಳೆಯುವ ಮಹಾದೇವಿ ತನ್ನ ಮನದಲ್ಲೇ ಶ್ರೀ ಚನ್ನಮಲ್ಲಿಕಾರ್ಜುನನ ಪತಿಯಾಗಿ ಸ್ವೀಕರಿಸಿ ತನ್ನ ಬದುಕನ್ನೇ ಸ್ವಾಮಿಗೆ ಮುಡುಪಾಗಿಟ್ಟು ವಚನಗಳನ್ನ ಬರೆಯುತ್ತಾ , ಭವ ಬಂಧನಗಳನ್ನು ತೊರೆದು ತನ್ನ ಗುರಿ ನಿಲುವಿನತ್ತ ಸಾಗುವ ಹಾದಿಯಲ್ಲಿ ಜೈನ ಧರ್ಮದ ಕೌಶಿಕ ಮಹಾರಾಜ (ವಿಷ್ಣುಕಾಂತ್ ಬಿ.ಜೆ) ನ ಕಣ್ಣಿಗೆ ಕಾಣುವ ಮಹಾದೇವಿಯ ಸೌಂದರ್ಯ ಕಂಡು ಆಕೆಯನ್ನ ಮದುವೆಯಾಗಲು ನಿರ್ಧರಿಸುತ್ತಾನೆ. ಈ ಸುದ್ದಿ ತಿಳಿಯುವ ಮಹಾದೇವಿಯ ತಂದೆ ತಾಯಿ ಒಪ್ಪದಿದ್ದರೂ ಹೊಡೆದು , ಬಲವಂತವಾಗಿ ತನ್ನ ಆಪ್ತ ಬಂಟ ವಸಂತಕ (ತಬಲಾ ನಾಣಿ) ಮೂಲಕ ಆಕೆಯನ್ನ ತನ್ನ ಬಳಿ ಬರುವಂತೆ ಮಾಡಿಕೊಳ್ಳುತ್ತಾನೆ.
ಮೂರು ಷರತ್ತುಗಳ ಮೂಲಕ ಮದುವೆಯಾಗಲು ಒಪ್ಪುವ ಮಹಾದೇವಿಯ ನಿರ್ಧಾರದಿಂದ ವಿಚಲಿತನಾಗುವ ಕೌಶಿಕ ಮಹಾರಾಜನಿಗೆ ಮಹಾದೇವಿಯ ಸತ್ಯದ ನಿಲುವು , ಶಕ್ತಿಯನ್ನ ಕಂಡು ಬೆರಗಾಗಿ ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ. ಮುಂದೆ ಪಯಣ ಬೆಳೆಸುವ ಮಹಾದೇವಿ ಅನುಭವ ಮಂಟಪಕ್ಕೆ ಬಂದು ಅಲ್ಲಮಪ್ರಭು , ಬಸವಣ್ಣ ಹಾಗೂ ಶರಣರ ಸನ್ನಿಧಿಯಲ್ಲಿ ತನ್ನ ನಿಲುವನ್ನ ಸಮಗ್ರವಾಗಿ ತಿಳಿಸುತ್ತಾ , ಮುಂದೆ ತ್ರಿಕೂಟ ಪರ್ವತಕ್ಕೆ ತೆರಳಿ ತನ್ನ ಪಯಣ ಶ್ರೀಶೈಲಂನ ಶ್ರೀ ಚನ್ನಮಲ್ಲಿಕಾರ್ಜುನನ ದಿವ್ಯ ಸಾನ್ವಿಧ್ಯಕ್ಕೆ ಎಂಬ ಸತ್ಯದ ಬೆಳಕನ್ನು ತೋರುವ ಹಾದಿಯ ಸಮಗ್ರ ಚಿತ್ರಣವನ್ನು ತೆರೆದಿಟ್ಟಿರುವ ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರದಲ್ಲಿ ಒಮ್ಮೆ ವೀಕ್ಷಿಸಲೇಬೇಕು.

ಇಂತಹ ಭಕ್ತಿ ಪ್ರಧಾನ ಚಿತ್ರವನ್ನು ನಿರ್ಮಿಸಿ , ನಿರ್ದೇಶನ ಮಾಡಿರುವ ವಿಷ್ಣುಕಾಂತ ಬಿ. ಜೆ. ರವರ ಧೈರ್ಯವನ್ನ ಮೆಚ್ಚಲೇಬೇಕು. ಪ್ರಸ್ತುತ ಕಾಲಘಟ್ಟಕ್ಕೆ ಇಂತಹ ಚಿತ್ರಗಳನ್ನು ನೋಡುವ ಆಸ್ತಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದ ಜೊತೆಗೆ ಭಕ್ತ ಸಮೂಹವನ್ನು ಒಗ್ಗೂಡಿಸುವ ಹಾದಿಯಲ್ಲಿ ಸಾಗಿದಂತಿದೆ. ಇನ್ನು ಚಿತ್ರದ ವಿಚಾರವಾಗಿ ಇನ್ನೂ ಬಹಳಷ್ಟು ಪರಿಪಕ್ವತೆ ಮಾಡಬಹುದಿತ್ತು, ಕೆಲವು ದೃಶ್ಯಗಳಲ್ಲಿ ಆಧುನಿಕತೆಯ ಮನೆ , ವಸ್ತುಗಳು ಬಳಸಿರುವುದು ಸರಿ ಇಲ್ಲ ಅನಿಸುತ್ತದೆ. ಇನ್ನು ವಚನಗಳ ಬಳಕೆ , ಪಾತ್ರವರ್ಗಗಳ ಆಯ್ಕೆ , ಒಂದಷ್ಟು ಕಾಡಿನ ಚಿತ್ರೀಕರಣ ಗಮನ ಸೆಳೆಯುತ್ತದೆ. ಇನ್ನು ರವಿ ಸುವರ್ಣ ಛಾಯಾಗ್ರಹಣ ಅಷ್ಟಕಷ್ಟೇ , ಆರ್. ಪಳನಿ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಅಕ್ಕಮಹಾದೇವಿ ಯಾಗಿ ಕಾಣಿಸಿಕೊಂಡಿರುವ ನಟಿ ಸುಲಕ್ಷಾ ಕೈರಾ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದು , ಎಲ್ಲರ ಗಮನವನ್ನು ಸೆಳೆಯುತ್ತಾರೆ. ಹಾಗೆಯೇ ನಿರ್ಮಾಣ ಮತ್ತು ನಿರ್ದೇಶನದ ಜೊತೆಗೆ ಕಲಾವಿದರಾಗಿ ಕೌಶಿಕ ಮಹಾರಾಜ ಹಾಗೂ ಬಸವಣ್ಣನ ಎರಡು ಪಾತ್ರದಲ್ಲಿ ವಿಷ್ಣುಕಾಂತ್ ಬಿ ಜೆ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ , ವೈಜಿನಾಥ ಬಿರಾದಾರ್ ಸೇವಿದಂತೆ ಬಹುತೇಕ ಕಲಾವಿದರು ಚಿತ್ರಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟರೆ ಈ
ಹೊಸ ವರ್ಷದ ಆರಂಭದ ಸಂಭ್ರಮದಲ್ಲಿ “ಜಗನ್ಮಾತೆ ಅಕ್ಕಮಹಾದೇವಿ” ಚಿತ್ರ ಬಿಡುಗಡೆಯಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.