Cini NewsSandalwoodTV Serial

ಉತ್ತರ ಕರ್ನಾಟಕದ  ಪ್ರತಿಭೆಗಳ “ಹುಲಿ ಬೀರ”ನ ಟೀಸರ್ ಸದ್ದು.

ಹಳ್ಳಿಯ ಜೀವನ , ಪರಿಸರ , ಒಡನಾಟ , ಸಂಬಂಧಗಳ ಬೇಸಿಗೆಯ ಸುತ್ತ ಮಾಡಿಕೊಂಡಿರುವ ಅಪ್ಪಟ ಉತ್ತರ ಕರ್ನಾಟಕ ಸೊಗಡಿನ ಕಥನಕ “ಹುಲಿಬೀರ”. ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹುಲಿಬೀರ. ಈ ಹಿಂದೆ ರಂಗ್ ಬಿರಂಗಿ ಚಿತ್ರ ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಯರ್ರಾಬಿರ್ರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ರೂರಲ್ ಸ್ಟಾರ್ ಅಂಜನ್ ಚಿತ್ರದ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.
ಉತ್ತರ ಕರ್ನಾಟಕದ ನೇಟಿವಿಟಿ, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಹೀಗೆ ಎಲ್ಲರೂ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು. ಸೋಮವಾರ ಈ ಚಿತ್ರದಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ವೀರಸಮರ್ಥ ಅವರ ಸಂಗೀತ ಸಂಯೋಜನೆ, ಸನಾತನ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಇದು ನನ್ನ ನಿರ್ದೇಶನದ ಐದನೇ ಚಿತ್ರ. 4 ವರ್ಷಗಳ ಹಿಂದೆಯೇ ಈ ಚಿತ್ರ ಪ್ರಾರಂಭವಾಗಿತ್ತು. ಹುಲಿಬೀರ ನಾಯಕನ ಹೆಸರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲದಕ್ಕೂ ಧೈರ್ಯದಿಂದ ಮುನ್ನುಗ್ಗುವ ಹುಡುಗರನ್ನು ಅವ ನೋಡು ಹುಲಿಥರ ಇದಾನೆ ಅನ್ನುತ್ತಾರೆ, ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ‌ ಮುಂದೆನಿಂತು ಕೆಲಸ ಮಾಡುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಹಾಗೇ ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ, ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಕಾಮಿಡಿ, ಸೆಂಟಿಮೆಂಟ್ , ಮನರಂಜನೆಯ ಜತೆಗೆ ಒಂದೊಳ್ಳೆ ಮೆಸೇಜನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಬಾದಾಮಿ, ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ಹಂತಗಳಲ್ಲಿ 51 ದಿನಗಳವರೆಗೆ ಹಾಡು ಹಾಗೂ ಮಾತಿನ ಭಾಗದ ಶೂಟಿಂಗ್ ನಡೆಸಿದ್ದೇವೆ. ರಂಗಾಯಣ ರಘು ಅವರು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ. ಚಿತ್ರವೀಗ ಡಬ್ಬಿಂಗ್ ಹಂತದಲ್ಲಿದ್ದು ನವೆಂಬರ್ ವೇಳೆಗೆ ರಿಲೀಸ್ ಮಾಡೋ ಪ್ಲಾನಿದೆ ಎಂದರು.


ನಾಯಕ ಅಂಜನ್ ಮಾತನಾಡಿ ನಾನು ಉತ್ತರ ಕರ್ನಾಟಕದ ಕುಂದಗೋಳ ಎಂಬ ಪುಟ್ಟ ಗ್ರಾಮದವನು. ರೀಲ್ಸ್ , ಶಾರ್ಟ್ ಫಿಲಂ ಮಾಡುತ್ತ,
ಸೋಷಿಯಲ್ ಮೀಡಿಯಾ ಮೂಲಕ ಜನರಿಂದ ಗುರ್ತಿಸಿಕೊಂಡೆ. ಯರ್ರಾಬಿರ್ರಿ ಚಿತ್ರದ ಮೂಲಕ ನಾಯಕನಾದೆ. ಹಳ್ಳಿಯ ಯುವಕರೆಲ್ಲ ಓದಿಕೊಂಡು ಕೆಲಸಕ್ಕಾಗಿ ಸಿಟಿಗೆ ಹೋಗ್ತಾರೆ. ಬರೀ ವೃದ್ದರು, ಬಡವರು‌ ಮಾತ್ರ ಉಳಿದುಕೊಳ್ತಾರೆ. ಹೀಗಾದರೆ ನಮ್ಮ ಹಳ್ಳಿಗಳನ್ನು ಉದ್ಧಾರ ಮಾಡೋ ಯಾರು, ನಾವು ಮೊದಲು ನಮ್ಮ ಊರು, ಹಳ್ಳಿಗಳನ್ನು ಕಾಪಾಡಬೇಕು ಎಂಬ ಸಂದೇಶ ಇಟ್ಟುಕೊಂಡು ಮಾಡಿದ ಚಿತ್ರವಿದು ಎಂದರು.


ನಾಯಕಿ ಚೈತ್ರ ತೋಟದ ಮಾತನಾಡಿ ಈ ಹಿಂದೆ ಬ್ರಹ್ಮರಾಕ್ಷಸ, ವಿದುರ, ಚೌಕಿದಾರ್ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ನಾಯಕನ ಅಕ್ಕನ ಮಗಳ ಪಾತ್ರ ಮಾಡಿದ್ದೇನೆ. ಡೈರೆಕ್ಟರ್ ಬರೆದಿರುವ ಒಂದು ಹಾಡು ನನಗೆ ತುಂಬಾ ಇಷ್ಟವಾಯ್ತು ಎಂದು ಹೇಳಿದರು. ವನು ಪಾಟೀಲ್ ಹಾಗೂ ಅಂಜಲಿ ಚಿತ್ರದ ಉಳಿದ ನಾಯಕಿಯರಾಗಿ ನಟಿಸಿದ್ದಾರೆ.

ಸಂಗೀತ ನಿರ್ದೇಶಕ ವೀರ್ ಸಮರ್ಥ ಮಾತನಾಡಿ ಚಿತ್ರದಲ್ಲಿ ಜನಪದ, ಮಣ್ಣಿನ ಸೊಗಡಿನ ನಾಲ್ಕು ಹಾಡು ಹಾಗೂ 2 ಬಿಟ್ ಗಳಿವೆ, ನಿರ್ದೇಶಕರು 2 ಸಾಂಗ್, ಶಿವು ಬೆರ್ಗಿ, ನಾಗೇಂದ್ರ ಪ್ರಸಾದ್ ಒಂದೊಂದು ಹಾಡು ಬರೆದಿದ್ದಾರೆ, ಸರಿಗಮಪ ಖ್ಯಾತಿಯ ಶಿವಾನಿ ಹಾಡೊಂದಕ್ಕೆ ದನಿಯಾಗಿದ್ದಾರೆ ಎಂದರು. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

error: Content is protected !!