ವಜ್ರದ ಹಿಂದೆ ವೀರಮಲ್ಲುವಿನ ಪಯಣ : ಹರಿಹರ ವೀರಮಲ್ಲು ಚಿತ್ರವಿಮರ್ಶೆ
ಚಿತ್ರ : ಹರಿಹರ ವೀರಮಲ್ಲು
ನಿರ್ದೇಶಕರು : ಕ್ರಿಶ್ , ಜ್ಯೋತಿಕೃಷ್ಣ
ನಿರ್ಮಾಪಕ : ದಯಾಕರ್ ರಾವ್
ಸಂಗೀತ :ಎಂ.ಎಂ. ಕೀರವಾಣಿ
ಛಾಯಾಗ್ರಹಣ : ಜ್ಞಾನ ಶೇಖರ್, ಮನೋಜ್ ಪರಮಹಂಸ
ತಾರಾಗಣ : ಪವನ್ ಕಲ್ಯಾಣ್ , ನಿಧಿ ಅಗರ್ವಾಲ್ , ಬಾಬಿ ಡಿಯೋಲ್ , ಸತ್ಯರಾಜ್ , ಸುನಿಲ್ , ನೂರ್ ಫತೇಹಿ , ನಾಸರ್, ಕಬೀರ್ ದೋಹಾನ್ ಸಿಂಗ್ , ಅಯ್ಯಪ್ಪ ಪಿ ಶರ್ಮಾ ಹಾಗೂ ಮುಂತಾದವರು…
ಸಾಮಾನ್ಯವಾಗಿ ಐತಿಹಾಸಿಕ , ಪೌರಾಣಿಕ , ಭಕ್ತಿ ಪ್ರಧಾನ ಚಿತ್ರಗಳು ಪ್ರೇಕ್ಷಕರ ಗಮನವನ್ನು ಬಹಳ ಬೇಗ ಸೆಳೆಯುತ್ತದೆ. ಆ ನಿಟ್ಟಿನಲ್ಲಿ 17ನೇ ಶತಮಾನದ ಮೊಘಲ್ ದರ್ಬಾರಿನ ಔರಂಗಜೇಬನ ಆಳ್ವಿಕೆಯಲ್ಲಿ ಭಾರತೀಯರು ಎದುರಿಸುವ ಸಂಕಷ್ಟದ ಸುತ್ತ ಕಾಲ್ಪನಿಕ ಕಥೆಯನ್ನ ಬೆಸೆದುಕೊಂಡು , ಒಬ್ಬ ಐನಾತಿ ಕಳ್ಳನ ಮೂಲಕ ವಜ್ರವನ್ನು ಪಡೆಯುವ ತಂತ್ರಗಾರಿಕೆಯ ಸುಳಿಯಲ್ಲಿ ಬಡವರ ಬಗ್ಗೆ ಕಾಳಜಿ , ಪ್ರೀತಿಯ ಸೆಳೆತ , ಪಿತೂರಿಗಳ ಒಳಸಂಚು, ದ್ವೇಷದ ಹಿನ್ನೆಲೆಯ ರೋಮಾಂಚಕ ಸನ್ನಿವೇಶಗಳ ಮಹಾಪೂರವನ್ನೇ ಹೊತ್ತುಕೊಂಡು ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಹರಿಹರ ವೀರಮಲ್ಲು”. ಶತಮಾನಗಳಿಂದಲೂ ರಾಜರುಗಳ ಯುದ್ಧ ಪ್ರಸಂಗ , ಪ್ರಜೆಗಳ ಪಾಡು, ಕಷ್ಟ ಕಾರ್ಪಣ್ಯಗಳು ನಿರಂತರ ಇದ್ದದ್ದೇ.
ಅಂತದೇ ಒಂದು ಸಾಮ್ರಾಜ್ಯದ ಕಾಲದಲ್ಲಿ ನಡೆಯುವ ಕಥೆಯಾಗಿದ್ದು , ಮೊಘಲ್ ದೊರೆ ಔರಂಗಜೇಬನ (ಬಾಬಿ ಡಿಯೋಲ್) ಆಳ್ವಿಕೆಯಲ್ಲಿ ಭಾರತೀಯರು ಸಂಕಷ್ಟ ಎದುರಿಸುತ್ತಿದ್ದ ಸಮಸ್ಯೆ ಹಾಗೆಯೇ ಆತ ಜನರನ್ನು ಬಲವಂತವಾಗಿ ಮತಾಂತರ ಗೊಳಿಸುವ ಪ್ರಯತ್ನ , ಇದಕ್ಕೆ ಒಪ್ಪದಿದ್ದವರ ಮೇಲೆ ಜಿಜಿಯಾ ತೆರಿಗೆ ಹಾಕುತ್ತಿರುತ್ತಾನೆ. ಇತ್ತ ಕೊಲ್ಲೂರು ಪ್ರಾಂತ್ಯದಲ್ಲಿ ಸಿಗುವ ಬಹಳ ಅಮೂಲ್ಯವಾದ ಕೊಹಿನೂರ್ ವಜ್ರವನ್ನು ಔರಂಗಜೇಬ್ ವಶಪಡಿಸಿಕೊಳ್ಳುತ್ತಾನೆ.
ಇದರ ನಡುವೆ ಒಬ್ಬ ಐನಾತಿ ಕಳ್ಳ ವೀರಮಲ್ಲು (ಪವನ್ ಕಲ್ಯಾಣ) ಶ್ರೀಮಂತರರಿಂದ ಹಣ , ಒಡವೆಯನ್ನ ಕದ್ದು ಬಡವರಿಗೆ ಹಂಚುವುದೇ ಇವನ ಕೆಲಸ. ಇನ್ನು ವೀರಮಲ್ಲುವಿನ ಶಕ್ತಿ , ಸಾಮರ್ಥ್ಯ ವನ್ನ ತಿಳಿದುಕೊಳ್ಳುವ ಗೋಲ್ಕೊಂಡದ ದೊರೆ ನಬಾಬ ಕುತುಬ್ ಷಾ ( ದಲಿಪ್ ತಾಹಿಲ್) ಆತನನ್ನು ತನ್ನ ಆಸ್ಥಾನಕ್ಕೆ ಕರೆಸಿ ಔರಂಗಜೇಬನ ಬಳಿಯಿರುವ ಕೊಹಿನೂರ್ ವಜ್ರವನ್ನು ತಂದುಕೊಡುವ ಕೆಲಸ ವಹಿಸುತ್ತಾನೆ. ಇದರ ನಡುವೆ ಪಂಚಮಿ (ನಿಧಿ ಅಗರ್ವಾಲ್) ನವಬನ ವಶದಲ್ಲಿ ಇರುತ್ತಾಳೆ.
ಈ ವಿಚಾರದ ಹಿನ್ನೆಲೆಯೂ ಒಂದು ನಿಗೂಢ ಅಡಿಗಿರುತ್ತದೆ.
ಇನ್ನು ವೀರಮಲ್ಲು ಔರಂಗಜೇಬ್ ನ ವಶದಲ್ಲಿರುವ ಕೊಹಿನೂರು ವಜ್ರವನ್ನ ತರಲು ತನ್ನ ಸಂಗಡಿಗರೊಂದಿಗೆ ದೆಹಲಿಯತ್ತ ಪ್ರಯಾಣಿಸುತ್ತಾನೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ
ಬೆಸೆದುಕೊಂಡು ಸಾಗುತ್ತದೆ.
ವೀರಮಲ್ಲು ಈ ಕೆಲಸಕ್ಕೆ ಏಕೆ ಒಪ್ಪಿಕೊಳ್ಳುತ್ತಾನೆ…
ಇಬ್ಬರ ನಡುವೆ ಇರುವ ಷರತ್ತು ಏನು?
ವೀರ ಮಲ್ಲು ಗೆ ಕೊಹಿನೂರ್ ವಜ್ರ ಸಿಗುತ್ತಾ.. ಇಲ್ವಾ..
ಪಂಚಮಿ ವಶದಲ್ಲಿರುವ ಕಾರಣ ಏನು…
ಕ್ಲೈಮಾಕ್ಸ್ ಹೇಳುವ ಉತ್ತರ ಏನು ಇದಕ್ಕಾಗಿ ಒಮ್ಮೆ ಈ ಚಿತ್ರ ನೋಡಬೇಕು.
ಇದೊಂದು ಕಾಲ್ಪನಿಕ ಕಥೆಯಾಗಿದ್ದು , ಮೊಘಲರ ಆಳ್ವಿಕೆ ಸಮಯದ ಶುದ್ಧ ಮಾಡಿಕೊಂಡಿರುವ ಚಿತ್ರ. ಈ ಹರಿಹರ ವೀರಮಲ್ಲು ಚಿತ್ರವು ಇತಿಹಾಸದ ಪಾತ್ರಗಳ ಜೊತೆಗೂಡಿಸಿ ತೆರೆಮೇಲೆ ಕಟ್ಟಿಕೊಡಲಾಗಿದೆ. ಕಮರ್ಷಿಯಲ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದ ಪವನ್ ಮೊದಲ ಬಾರಿಗೆ ಐತಿಹಾಸಿಕ ಹೋರಾಟಗಾರನಾಗಿ ತನ್ನ ಪಾತ್ರಕ್ಕೆ ಜೀವ ತುಂಬಿ ಮಿಂಚಿದ್ದಾರೆ. ಸಂಭಾಷಣೆ , ಸಾಹಸ ಸನ್ನಿವೇಶಗಳು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ರಾಜಕೀಯ ಸೇರಿದ ನಂತರ ಪವನ್ ಕಲ್ಯಾಣ್ ನಟಿಸಿದಂತಹ ವಿಭಿನ್ನ ಐತಿಹಾಸಿಕ ಚಿತ್ರ ಇದಾಗಿದ್ದು , ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪವನ್ ಕಲ್ಯಾಣ್ ತೆರೆಮೇಲೆ ಬಂದಾಗಲೆಲ್ಲ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಇನ್ನು ಪಂಚಮಿ ಪಾತ್ರದ ನಿಧಿ ಅಗರವಾಲ್ ಗೆ ಹೆಚ್ಚು ಅವಕಾಶ ಇಲ್ಲದಿದ್ದರೂ , ಪ್ರಮುಖ ತಿರುವು ಇರುವಂತಹ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಔರಂಗಜೇಬ್ ಆಗಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಚಿನ್ ಖಡೇಕರ್, ಕಬೀರ್ ದುಹಾನ್ ಸಿಂಗ್ , ಸುಬ್ಬರಾಜು, ರಘುಬಾಬು, ಸತ್ಯರಾಜ್, ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಗೆಯೇ ಎಂ.ಎಂ. ಕೀರವಾಣಿ ಅವರ ಸಂಗೀತ ಚಿತ್ರದ ಹೈಲೈಟ್. ಇನ್ನು ಸಾಯಿ ಮಾಧವ ಅವರ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಜ್ಞಾನಶೇಖರ್ ಹಾಗೂ ಮನೋಜ್ ಪರಮಹಂಸ ಅವರ ಕ್ಯಾಮೆರಾ ವರ್ಕ್ ಒಳ್ಳೆಯ ಅನುಭವ ನೀಡುತ್ತದೆ. ಸದ್ಯ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಚಿತ್ರ “ಹರಿಹರ ವೀರಮಲ್ಲು” ಎಲ್ಲರ ಗಮನವನ್ನು ಸೆಳೆದಿದೆ.
ಈ ಕಾಲ್ಪನಿಕ ಐತಿಹಾಸಿಕ ಕಥಾನಕ ಇರೋ ಚಿತ್ರವನ್ನು ಕ್ರಿಶ್ ಹಾಗೂ ಜ್ಯೋತಿಕೃಷ್ಣ ಬಹಳ ಅಚ್ಚುಕಟ್ಟಾಗಿ ನಿರ್ದೇಶನವನ್ನು ಮಾಡಿದ್ದು , ಚಿತ್ರದ ಮೊದಲ ಭಾಗ ವೇಗವಾಗಿ ಸಾಗಿ ಕುತೂಹಲವನ್ನು ಮೂಡಿಸುತ್ತದೆ. ಆದರೆ ದ್ವಿತೀಯ ಭಾಗ ನಿಧಾನ ಗತಿಯಲ್ಲಿ ಸಾಗುವುದು, ಇದಕ್ಕೆ ನಿರ್ದೇಶಕರ ಇಬ್ಬರ ಬದಲಾವಣೆಯು ಕಾರಣವಾಗಿರಬಹುದು, ಕಾಲ್ಪನಿಕ ಕಥೆಯನ್ನ ಒಂದು ರೋಚಕವಾಗಿ ಕಟ್ಟಿಕೊಟ್ಟಿರುವ ಈ ಚಿತ್ರವು ಪ್ರೇಕ್ಷಕರನ್ನ ರಂಜಿಸುತ್ತದೆ. ನಟ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಬಹುಬೇಗ ಇಷ್ಟವಾಗುವ ಈ ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.