ಗತಕಾಲ ಹಾಗೂ ವಾಸ್ತವತೆಗೆ ಪುನರ್ಜನ್ಮದ ನಂಟು “ಹಚ್ಚೆ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಹಚ್ಚೆ
ನಿರ್ದೇಶಕ,ನಿರ್ಮಾಪಕ : ಯಶೋಧರ
ಸಂಗೀತ : ವಿವೇಕ್ ಚಕ್ರವರ್ತಿ
ಛಾಯಾಗ್ರಹಣ : ಯಾಸಿನ್
ತಾರಾಗಣ : ಅಭಿಮನ್ಯು , ಅದ್ಯಾ ಪ್ರಿಯಾ , ಅನುಪ್ರೇಮ, ಗುರುರಾಜ್ ಹೊಸಕೋಟೆ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಹಾಗೂ ಮುಂತಾದವರು…
ಯುಗ ಯುಗಗಳೇ ಕಳೆದರೂ ಆತ್ಮ , ಆಸೆ , ಪುನರ್ಜನ್ಮದ ನಂಟು ಕಾಲಾನುಕಾಲಕ್ಕೂ ಹಿಂಬಾಲಿಸುತ್ತೆ ಎಂಬ ಮಾತಿದೆ. ನಮ್ಮ ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯ ಆಳ್ವಿಕೆಯ ಗತ ವೈಭವ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬುದು ತಿಳಿದಿದೆ. ಅಮೂಲ್ಯವಾದ ಗ್ರಂಥಗಳ ಭಂಡಾರ , ಸಿರಿ ಸಂಪತ್ತು , ವಜ್ರ ವೈಡೂರ್ಯಗಳ ರಾಶಿ ತುಂಬಿದ್ದು , ಪ್ರಜೆಗಳ ಕೂಡ ಸುಖ , ಶಾಂತಿ ನೆಮ್ಮದಿಯಿಂದ ಬದುಕು ನಡೆಸಿದಂತ ದಿನಗಳು ಕೇಳಿದ್ದೇವೆ. ಕಪಟ ಮೋಸದಿಂದ ಶತ್ರು ದಾಳಿಯ ಸಂದರ್ಭದಲ್ಲಿ ಅಮೂಲ್ಯ ಗ್ರಂಥ , ನಿಧಿ , ಸಂಪತ್ತುಗಳನ್ನು ನಿಗೂಢ ಸ್ಥಳದಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎನ್ನುವ ಕಥಾನಕ ಮೂಲಕ ಅದನ್ನು ವಶಪಡಿಸಿಕೊಳ್ಳುವ ಹಾಗೂ ರಕ್ಷಿಸುವವನ ನಡುವಿನ ಗುದ್ದಾಟವು ಪುನರ್ಜನ್ಮದ ನಂಟಿಗೆ ಬೆಸೆಯುತ್ತ ವಾಸ್ತವತೆಯ ಹಾದಿಯಲ್ಲಿ ನಡೆಯುವ ಸ್ನೇಹ , ಪ್ರೀತಿ , ಮೋಸ , ವಂಚನೆ , ಭೂಗತ ಜಗತ್ತಿನ ನಡುವೆ ಪೊಲೀಸರ ಗುದ್ದಾಟದ ಸುಳಿಯಲ್ಲಿ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆಯುವ ನಿಟ್ಟಿನಲ್ಲಿ
ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “ಹಚ್ಚೆ”.
ದಿಕ್ಕು ದೆಸೆ ಇಲ್ಲದೆ ಗೆಳೆಯರೊಟ್ಟಿಗೆ ಚಾಚಾ( ಗುರುರಾಜ್ ಹೊಸಕೋಟೆ) ನ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಹುಡುಗ ಸೂರ್ಯ(ಅಭಿಮನ್ಯು). ತನ್ನ ಗೆಳೆಯರು , ತನ್ನ ಕೆಲಸ ಎನ್ನುವ ಸೂರ್ಯನಿಗೆ ಯಾರೇ ವೈರಿಗಳು ಎದುರಾದರು ಸದೆ ಬಡಿಯುವುದೇ ಅವನ ಕಾಯಕ. ವರದಿಗಾರ್ತಿ ಆಗಿ ಕೆಲಸ ಮಾಡುವ ಸಂಸ್ಕೃತಿ ( ಆದ್ಯಪ್ರಿಯ) ಸಮಾಜದಲ್ಲಿ ನಡೆಯುವ ದುಷ್ಟ ಕೃತ್ಯಗಳ ಬಗ್ಗೆ ಬೆಳಕು ಚೆಲ್ಲುವುದೇ ಕೆಲಸ. ಇನ್ನು ಭೂಗತ ಜಗತ್ತಿನ ಲೋಕದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುವ ವ್ಯಕ್ತಿ ಉಗ್ರಸೇನಾ.
ತನ್ನ ಕ್ರೂರ ಶಿಷ್ಯಂದಿರು ಡ್ರಗ್ಸ್ , ಗಾಂಜಾ , ಹೆಣ್ಣು ಮಕ್ಕಳ ಅಪಹರಣ , ಅಫ್ತಾ ವಸೂಲಿ , ರಿಯಲ್ ಎಸ್ಟೇಟ್ ಮಾಫಿಯಾ ಸೇರಿದಂತೆ ಹಲವು ಕೃತ್ಯಗಳ ಮೂಲಕ ನಿರಂತರ ತೊಂದರೆ ನೀಡುತ್ತಾರೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗುತ್ತದೆ. ವಿಶೇಷ ಸಿಸಿಬಿ ಅಧಿಕಾರಿ ರಣವೀರ್ ನೇಮಕಗೊಂಡು ದುಷ್ಟರನ್ನು ಸದೆಬಡಿಯಲು ಮುಂದಾಗುತ್ತಾರೆ. ಸೂರ್ಯ ಹಾಗೂ ಸಂಸ್ಕೃತಿಯ ಸ್ನೇಹ , ಪ್ರೀತಿ ನಡುವೆ ಉಗ್ರಸೇನಾನ ತಂಗಿ ಸೋನಿಯಾ (ಅನು ಪ್ರೇಮ) ಸೂರ್ಯನನ್ನು ಪ್ರೀತಿಸಲು ಮುಂದಾಗುತ್ತಾಳೆ. ಇದರ ನಡುವೆ ದುಷ್ಟರ ಅಟ್ಟಹಾಸಕ್ಕೆ ಸೂರ್ಯ ಸಿಸಿಬಿ ಅಧಿಕಾರಿಗೆ ಸಾತ್ ನೀಡುತ್ತಾನೆ. ಹಾಗೆಯೇ ಸೋನಿಯಾಳ ಪ್ರೀತಿಯನ್ನು ನಿರಾಕರಿಸುತ್ತಾನೆ. ಇನ್ನು ರಾಜ ಮಹಾರಾಜರ ಬಗ್ಗೆ ವಿಶೇಷ ವರದಿ ಮಾಡಲು ಹೊರಟ ಸಂಸ್ಕೃತಿಗೆ ಚಂದ್ರದ್ರೋಣ ರಹಸ್ಯದ ಪುಸ್ತಕ ಸಿಗುತ್ತದೆ.
ಇಲ್ಲಿಂದ ಮತ್ತೊಂದು ತಿರುವು ಪಡೆದುಕೊಳ್ಳುತ್ತಾ ಹೋಗುತ್ತದೆ. ಸಂಸ್ಕೃತಿಗೆ ಅಗೋಚರ ಶಕ್ತಿ ಸಂಚಲನ ಗಾಬರಿ ಮೂಡಿಸುತ್ತದೆ. ಉಗ್ರ ಸೇನಾನಿಗೂ ಕನಸಿನಲ್ಲಿ ಗೋಚರಿಸುವ ಶಕ್ತಿಗೆ ಗುರುವಿನಿಂದ ಸಲಹೆ ಪಡೆದು ಗಂಡಭೇರುಂಡ ಇರುವ ವ್ಯಕ್ತಿಯ ಶಕ್ತಿಯ ಬಗ್ಗೆ ತಿಳಿಯುತ್ತಾನೆ. ಮುಂದೆ ಎದುರಾಗುವ ಒಂದಷ್ಟು ರೋಚಕ ಘಟನೆಗಳು ಆತ್ಮ , ಪುನರ್ಜನ್ಮ , ಚಂದ್ರದ್ರೋಣ ರಹಸ್ಯದ ಸುಳಿವು ನಡುವೆ ಕ್ಲೈಮಾಕ್ಸ್ ಅಂತ ತಲುಪುತ್ತದೆ. ಮುಂದೆ ಏನಾಗುತ್ತೆ ಎಂಬ ಪ್ರಶ್ನೆಗೆ ಒಮ್ಮೆ ನೀವು ಚಿತ್ರವನ್ನು ನೋಡಲೇಬೇಕು.
ಈ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಯಶೋಧರ ರವರ ಆಲೋಚನೆ ವಿಭಿನ್ನವಾಗಿದೆ. ಸಾಮ್ರಾಜ್ಯಗಳ ನಿಧಿ , ಗ್ರಂಥಗಳ ಕಥಾನಕದಲ್ಲಿ ಪುನರ್ಜನ್ಮದ ಎಳೆಯೊಂದಿಗೆ ವಾಸ್ತವತೆಯ ಬದುಕಿನ ಪ್ರೀತಿ , ವಂಚನೆ , ದುಷ್ಟರ ಚಿತ್ರಣ ಗಮನ ಸೆಳೆಯುತ್ತದೆ. ಚಿತ್ರಕಥೆಯಲ್ಲಿ ಬಹಳಷ್ಟು ವಿಚಾರ ತುರುಕಿದ್ದು , ಗೊಂದಲದ ನಡುವೆಯೇ ಕ್ಲೈಮ್ಯಾಕ್ಸ್ ಮುಂದುವರಿದ ಭಾಗಕ್ಕೆ ಸಾಗಿಸಿದಂತಿದೆ. ಇದರ ಹೊರತಾಗಿ ಪ್ರಯತ್ನ ಉತ್ತಮವಾಗಿದೆ. ಛಾಯಾಗ್ರಹಣ , ಸಂಕಲನ ಗಮನ ಸೆಳೆದಿದ್ದು , ಸಂಗೀತದ ಸೆಳೆತ ಇನ್ನಷ್ಟು ಉತ್ತಮ ಮಾಡಬಹುದಿತ್ತು.
ಇನ್ನು ನಾಯಕನಾಗಿ ಅಭಿನಯಿಸಿರುವ ಅಭಿಮನ್ಯು ಪಾತ್ರಕ್ಕೆ ಜೀವ ತುಂಬುವುದಕ್ಕೆ ಬಹಳ ಶ್ರಮ ಪಟ್ಟಿಯುವುದು ಕಾಣುತ್ತದೆ. ಸಾಹಸ ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿ ಆಧ್ಯಾ ಪ್ರಿಯ ಸಮರ್ಥವಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದು , ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಉಗ್ರಸೇನಾ ಪಾತ್ರಧಾರಿ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ನೀಡಿದ್ದಾರೆ. ಸಿಸಿಬಿ ಅಧಿಕಾರಿಯ ಪಾತ್ರಧಾರಿ ಕೂಡ ಗಮನ ಸೆಳೆದಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಇತಿಹಾಸದ ಕಾಲ್ಪನಿಕ ವಿಚಾರದೊಂದಿಗೆ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ “ಹೆಚ್ಚೆ” ಯ ಶಕ್ತಿ ಪ್ರಭಾವ ಏನು ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಚಿತ್ರವನ್ನು ತೆರೆಯ ಮೇಲೆ ನೋಡಬೇಕು.