ದುರಾದೃಷ್ಟನ ಬದುಕಲ್ಲಿ ಅದೃಷ್ಟದ ದೆವ್ವಗಳು : GST ಚಿತ್ರವಿಮರ್ಶೆ (ರೇಟಿಂಗ್ : 4 /5)
ರೇಟಿಂಗ್ : 4 /5
ಚಿತ್ರ : GST
ನಿರ್ದೇಶಕ : ಸೃಜನ್ ಲೋಕೇಶ್
ನಿರ್ಮಾಪಕ : ಸಂದೇಶ್. ಎನ್
ಸಂಗೀತ : ಚಂದನ್ ಶೆಟ್ಟಿ
ಛಾಯಾಗ್ರಹಣ : ಸುರೇಶ್
ತಾರಾಗಣ : ಸೃಜನ್ ಲೋಕೇಶ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಅಶೋಕ್ , ವಿನಯ ಪ್ರಸಾದ್ , ಮಾಸ್ಟರ್ ಸುಕೃತ್ , ಗಿರೀಶ್ ಶಿವಣ್ಣ , ನಿವೇದಿತ ಗೌಡ , ತಬಲ ನಾಣಿ , ಶರತ್ ಲೋಹಿತಾಶ್ವ , ರವಿಶಂಕರ್ ಗೌಡ ಹಾಗೂ ಮುಂತಾದವರು…

ಜೀವನದಲ್ಲಿ ನೆಮ್ಮದಿ , ಸುಖ , ಸಂತೋಷದಿಂದ ಬದುಕಬೇಕಾದರೆ ದುಡ್ಡು ಬಹಳ ಮುಖ್ಯ. ಹಾಗೆಯೇ ಅದೃಷ್ಟವೂ ಇರಬೇಕು, ಒಂದು ವೇಳೆ ಅದೇನಾದರೂ ತಪ್ಪಿ ದುರಾದೃಷ್ಟವು ಎದುರಾದರೆ ಜೀವನವೇ ಸಾಕು ಸಾಯುವುದೇ ಸರಿ ಎನ್ನುವ ವ್ಯಕ್ತಿಗೆ ನಿರೀಕ್ಷೆಗೂ ಮೀರಿದ ದೆವ್ವಗಳ ಸಹಕಾರ ಸಿಕ್ಕರೆ ಏನಾಗುತ್ತದೆ ಎಂಬುದನ್ನ ಬಹಳ ಮನೋರಂಜನಾತ್ಮಕವಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “GST”.
ಲೋಕನಾಥ್ (ಅಶೋಕ್) ಹಾಗೂ ಜಯಂತಿ (ವಿನಯ ಪ್ರಸಾದ್) ರ ಮುದ್ದಾದ ಮಗು ಲಕ್ಕಿ ಜನಿಸಿದ ಕೂಡಲೇ ಸಮಸ್ಯೆಗಳು ಎದುರಾಗಿ , ದುರಾದೃಷ್ಟ ಕಾಡುತ್ತದೆ. ತಾಯಿಯನ್ನು ಕಳೆದುಕೊಂಡು ತಂದೆಯ ಕೋಪಕ್ಕೆ ಗುರಿಯಾಗಿ ಸಾಯುವುದಕ್ಕೆ ಹೋಗುವ ಲಕ್ಕಿ (ಸೃಜನ್ ಲೋಕೇಶ್) ಗೆ ದೆವ್ವಗಳಾದ ಪ್ರಭಾಕರ್(ತಬಲ ನಾಣಿ), ಯೋಗೇಶ್(ಮಾಸ್ಟರ್ ಸುಕೃತ್) , ಹನುಮಂತು (ವಿನೋದ್ ಗೊಬ್ಬರಗಾಲ) , ತಾನ್ಯ( ನಿವೇದಿತಾ ಗೌಡ) , ಶಾಂತಮ್ಮ( ಗಿರಿಜಾ ಲೋಕೇಶ್) ಬೆಂಬಲವಾಗಿ ನಿಂತು ಸಾವನ್ನ ತಡೆಯುತ್ತಾರೆ. ನಂತರ ತಮ್ಮ ಬದುಕಿನ ಸಮಸ್ಯೆಗಳ ಜೊತೆ ಸಾವುಗಳಿಗೆ ಏನು ಕಾರಣ ಎಂಬುದನ್ನು ಒಬ್ಬರಾಗಿ ಹೇಳುತ್ತಾ ಹೋಗುತ್ತಾರೆ. ಇನ್ನು ಸದಾ ಎಣ್ಣೆಯ ನಿಶೆಯಲ್ಲೇ ಇರುವ ಗೆಳೆಯ (ಗಿರೀಶ್ ಶಿವಣ್ಣ) ನಿಗೆ ದೇವಗಳ ಪರಿಚಯ ಮಾಡಿಸುವ ಲಕ್ಕಿ. ಇದರ ಜೊತೆ ತನ್ನ ಪ್ರೇಯಸಿ ನಿಧಿ (ರಜನಿ ಭಾರದ್ವಾಜ್) ಬಗ್ಗೆ ಹೇಳುವ ಲಕ್ಕಿಗೆ ದೆವ್ವಗಳು ಜೋಡಿಯನ್ನ ಸೇರಿಸಲು ಶ್ರಮವಹಿಸುತ್ತಾರೆ. ಇನ್ನು ಪ್ರೇತಾತ್ಮವಾಗಿ ಅಲೆಯುತ್ತಿರುವ ಈ ದೆವ್ವಗಳಿಗೆ ಮುಕ್ತಿ ಸಿಗಲು ಅವರ ಆಸೆ ನೆರವೇರುವುದು ಬಹಳ ಅಗತ್ಯ ಆಗಿರುತ್ತದೆ. ಇದೆಲ್ಲದಕ್ಕೂ ಹಣವೇ ಬೇಕು.
ಅದಕ್ಕಾಗಿ ಬ್ಯಾಂಕ್ ರಾಬರಿ ಮಾಡಲು ಮುಂದಾಗುವ ಲಕ್ಕಿಗೆ ಮತ್ತೊಂದು ದೆವ್ವ (ಅರವಿಂದ್ ರಾವ್) ಸಾಥ್ ನೀಡುತ್ತದೆ. ಮುಂದೆ ಎದುರಾಗುವ ರೋಚಕ ತಿರುವುಗಳು ಕೊನೆಯ ಹಂತವನ್ನು ತಲುಪುತ್ತದೆ.
ಬ್ಯಾಂಕ್ ಹಣ ಲೂಟಿ ಆಗತ್ತಾ..
ದೆವ್ವಗಳಿಗೆ ಮುಕ್ತಿ ಸಿಗುತ್ತಾ…
ನಿಧಿಯ ಪ್ರೀತಿ ಪಡಿತಾನ…
ಲಕ್ಕಿಗೆ ಅದೃಷ್ಟ ಒಲಿಯುತ್ತಾ…
ಎಲ್ಲದಕ್ಕೂ ಉತ್ತರ GST ಚಿತ್ರ ನೋಡಬೇಕು.
ಪ್ರಥಮ ಬಾರಿಗೆ ನಿರ್ದೇಶನ ಮಾಡಿರುವ ಸೃಜನ್ ಲೋಕೇಶ್ ಮನರಂಜನೆಯ ಕಥಾನಕವನ್ನು ತೆರೆಯ ಮೇಲೆ ತಂದಿದ್ದು , ದುರದೃಷ್ಟ ಎಂಬುವನ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆದಾಗ ಏನಾಗುತ್ತದೆ ಎಂಬುದನ್ನು ಹಾಸ್ಯದ ಜೊತೆ ಮನ ಮಿಡಿಯುವ ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.
ಹಾಗೆಯೇ ಯಾವುದೇ ಲಾಜಿಕ್ ನೋಡದೆ ಮ್ಯಾಜಿಕ್ ಹಿಂದೆ ಸಾಗುವುದರ ಜೊತೆ ಬದುಕಿಗೆ ಹಣ ಎಷ್ಟು ಮುಖ್ಯ ಎಂಬ ಸತ್ಯ ಹೇಳಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಚಿತ್ರಕ್ಕೆ ಏನು ಬೇಕು ಅದನ್ನು ನಿರ್ಮಾಪಕ ಅಚ್ಚುಕಟ್ಟಾಗಿ ಒದಗಿಸಿದಂತಿದೆ. ಇನ್ನು ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು , ಛಾಯಾಗ್ರಹಕರ ಕೈಚಳಕವು ಸೇರಿದಂತೆ ತಾಂತ್ರಿಕವಾಗಿ ತಂಡ ಶ್ರಮ ಗಮನ ಸೆಳೆಯುತ್ತದೆ. ನಟ ಸೃಜನ್ ಲೋಕೇಶ್ ಇಡೀ ಚಿತ್ರವನ್ನ ಆವರಿಸಿಕೊಂಡು ಸೊಗಸಾಗಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನೊಂದ ವ್ಯಕ್ತಿಯ ಆತ್ಮಗಳ ನೆಂಟು , ಪ್ರೀತಿಯ ಸೆಳೆತದ ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಮಿಂಚಿದ್ದಾರೆ. ಇನ್ನು ಮುದ್ದಾಗಿ ಕಾಣುವ ನಟಿ ರಜನಿ ಭಾರದ್ವಾಜ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಗೆಯೇ ಒಳ್ಳೆಯ ದೆವ್ವಗಳಾಗಿ ಕಾಣಿಸಿಕೊಂಡಿರುವ ಹಿರಿಯ ನಟಿ ಗಿರಿಜಾ ಲೋಕೇಶ್ , ತಬಲಾ ನಾಣಿ , ಮಾಸ್ಟರ್ ಸುಕೃತ್ , ವಿನೋದ್ ಗೊಬ್ಬರಗಾಲ ಹಾಗೂ ಅರವಿಂದ್ ರಾವ್ ತಮ್ಮ ತಮ್ಮ ವೇಷ ಭೂಷಣಗಳ ಮೂಲಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇವರಿಗೆ ಮೇಕಪ್ ಮಾಡಿರುವ ವ್ಯಕ್ತಿಗಳ ಕೆಲಸ ಹಾಗೂ ತೋರಿಸಿರುವ ಶೇಡ್ಗಳು ಅದ್ಭುತವಾಗಿದೆ. ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಶರತ್ ಲೋಹಿತಾಶ್ವ , ಕಳ್ಳರ ಗ್ಯಾಂಗ್ ಲೀಡರ್ ಪಾತ್ರದಲ್ಲಿ ಶೋಭ ರಾಜ್ , ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ರವಿಶಂಕರ್ ಗೌಡ ನಟನೆ ಅದ್ಭುತವಾಗಿದೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದು, ಮನೋರಂಜನೆಯ ರಸದೌತಣ ನೀಡಿರುವ ಈ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಎಲ್ಲರೂ ಹೋಗಿ ಚಿತ್ರಮಂದಿರದಲ್ಲಿ ನೋಡಬಹುದು.
