ಮಾನಸಿಕ ಅಸ್ವಸ್ಥತೆಯ ತಲ್ಲಣ… “ಗ್ರೀನ್” ಚಿತ್ರವಿಮರ್ಶೆ (ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಗ್ರೀನ್
ನಿರ್ದೇಶಕ :; ರಾಜ್ ವಿಜಯ್
ನಿರ್ಮಾಪಕರು : ಬಿ .ಎನ್. ಸ್ವಾಮಿ, ರಾಜ್ ವಿಜಯ್
ಸಂಗೀತ : ಶಕ್ತಿ ಸ್ಯಾಕ್
ಛಾಯಾಗ್ರಹಣ : ಕೆ. ಮಧು ಸೂದನ್
ತಾರಾಗಣ : ಗೋಪಾಲ್‌ಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಆರ್.ಜೆ.ವಿಕ್ಕಿ, ಗಿರೀಶ್ ಎಂ.ಎನ್, ವಿಶ್ವನಾಥ್ ಮಾಂಡಲೀಕ, ಶಿವ ಮಂಜು, ಡಿಂಪಿ ಪಾದ್ಯ ಹಾಗೂ ಮುಂತಾದವರು…
ಸಾಮಾನ್ಯವಾಗಿ ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆ ಬದುಕಿನ ಮೇಲೆ ಪ್ರಭಾವ ಬೀರುವುದು ಸರ್ವೇ ಸಾಮಾನ್ಯ. ಅಂತದ್ದೆ ಒಬ್ಬ ವ್ಯಕ್ತಿಯು ಕೆಲವು ವಿಚಾರಗಳು ಸೂಕ್ಷ್ಮತೆಯ ತೊಳಲಾಟದಲ್ಲಿ ಸಿಲುಕಿ , ಮನಸ್ಸಿನ ಮೇಲೆ ಬಾರಿ ಪರಿಣಾಮ ಬೀರಿ ಖಿನ್ನತೆ, ಆತಂಕದೊಂದಿಗೆ ಮಾನಸಿಕ ಅಸ್ವಸ್ಥತೆ , ಆರೋಗ್ಯ ಸಮಸ್ಯೆ , ದುರ್ಬಲ ಮನಸೇ ಅಸ್ತ್ರವಾಗಿ ಪರದಾಡುವ ಮನುಷ್ಯ ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗಿ ಕಾಡುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಗ್ರೀನ್”. ದಟ್ಟ ಹಾಗೂ ದುರ್ಗಮ ಕಾಡಿನ ನಡುವೆ ಕಾಣೆಯಾದ ಸಾವಿತ್ರಮ್ಮನ ಹುಡುಕುತ್ತಾ ಬರುವ ಇನ್ಸ್ಪೆಕ್ಟರ್ ದಾರಿ ತಪ್ಪಿ ಮತ್ತೊಂದು ದಿಕ್ಕಿನತ್ತ ಸಾಗುತ್ತಾನೆ. ವಿಚಿತ್ರ ಘಟನೆಗಳನ್ನು ಎದುರಿಸುತ್ತಾ ಸಾಗುತ್ತಾನೆ. ಮತ್ತೊಂದೆಡೆ ವಿಜ್ಞಾನಿಗಳು ರಾಸಾಯನಿಕ ವಸ್ತುವಿಗಾಗಿ ಹುಡುಕುತ್ತಾ ಸುವಾಸನೆ ಬೀರುವ ಹೂವಿನ ಮಧುವನ ಸೇವಿಸಿದರೆ ಸಾವನ್ನ ಗೆಲ್ಲುವಂತ ಶಕ್ತಿ ಹುಡುಕಾಟದಲ್ಲಿ ಇರುವಾಗ ,
ಇನ್ನೊಂದೆಡೆ ಹಸಿರನ್ನ ರಕ್ಷಿಸುವ ನರ್ಸರಿಯ ಒಳಗೆ ತನ್ನನ್ನೇ ನಿಯಂತ್ರಿಸುತ್ತಿರುವ ವ್ಯಕ್ತಿಗಳ ನಡುವೆ ಹಾಗೂ ತನ್ನೊಳಗಿನ ರಾಕ್ಷಸನಿಂದ ಆಚೆ ಬರಲು ಮಾಯಣ್ಣ ( ಗೋಪಾಲಕೃಷ್ಣ ದೇಶಪಾಂಡೆ) ಸದಾ ಹೋರಾಟ ನಡೆಸುತ್ತಲೇ ಇರುತ್ತಾನೆ. ಚಿಕ್ಕ ವಯಸಿನಲ್ಲೇ ತನ್ನ ತಾಯಿ ಸಾವಿತ್ರಿ ಹೇಳಿದ ಕಥೆಗಳನ್ನು ಕೇಳುತ್ತಾ , ಮನೆಯಿಂದ ಹೊರಗೆ ಹೋದರೆ ಅಲ್ಲೊಬ್ಬ ಬ್ರಹ್ಮ ರಾಕ್ಷಸ ಇದ್ದಾನೆ ಅಂತ ಭಾವಿಸಿರುತ್ತಾನೆ.
ತಾಯಿಯ ಮಡಿಲಲ್ಲಿ ಮಲಗಿದಾಗ ಆಕೆ ಹೇಳುವ ವಿಚಾರಗಳ ಸುಳಿಯಲ್ಲಿ ಸಿಲುಕಿಕೊಂಡು ಆತನಿಗೆ ಬದುಕು, ಭಯ ಆವರಿಸಿದಾಗ ಅವರನ್ನು ರಕ್ಷಿಸುವೆ ಎನ್ನುವ ವ್ಯಕ್ತಿ , ಮತ್ತೊಬ್ಬ ಅವನ ಸೂಕ್ತ ಸುಳಿವ್ವನ ನಡುವೆ ಆತ ಹೋಗುವುದು ಸೀದಾ ಬುಡ್ಡಯ್ಯನ ನೀರಾ ಅಂಗಡಿಗೆ ಅಲ್ಲಿ ಕಾಣುವ ರಾಕ್ಷಸನನ್ನ ನೋಡುವ ಮಾಯಣ್ಣ ನೀರಾ ಕುಡಿದು, ಬುಡ್ಡಯ್ಯನ ಮಾತುಗಳನ್ನು ಕೇಳಿ ಧೈರ್ಯ ಪಡೆಯುತ್ತಾನೆ. ಕಾಡಿನೊಳಗೆ ಸಿಲುಕಿದ ಸೈನಿಕರು ಕೂಡ ಆ ಕಾಡಿನಿಂದ ಹೊರಬರಲು ಮಾಯಣ್ಣನ ಸಹಕಾರ ಕೇಳುತ್ತಾರೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸಾಗುವ ಕಥೆಯಲ್ಲಿ ಕುತೂಹಲಕಾರಿ ತಿರುವುಗಳು ಬೇರೆಯದೇ ಉತ್ತರವನ್ನು ಕ್ಲೈಮಾಕ್ಸ್ ನಲ್ಲಿ ನೀಡುತ್ತದೆ. ಇದೆಲ್ಲವೂ ಭ್ರಮೆಯೇ… ಮಾನಸಿಕ ಅಸ್ವಸ್ಥತೆಯೇ… ಆರೋಗ್ಯದ ವ್ಯತರಿಕ್ತವೆ… ಹೀಗೆ ಹಲವು ಸೂಕ್ಷ್ಮತೆಯ ಒಳ ಸುಳಿವಿನಲ್ಲಿ ಇರುವ ಈ ಚಿತ್ರವನ್ನು ತೆರೆಯ ಮೇಲೆ ನೋಡಿದರೆ ಅರ್ಥವಾಗುತ್ತದೆ.
ಈ ರೀತಿಯ ಕಥಾನಕವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ನಿರ್ದೇಶಕರು ಕ್ಲೈಮ್ಯಾಕ್ಸ್ ನಲ್ಲಿ ಒಂದು ಉತ್ತರ ನೀಡಿದ್ದಾರೆ. ದುರ್ಬಲ ಮನಸ್ಸಿನವರ ಮನಸ್ಥಿತಿ , ಪರದಾಟದ ಸುತ್ತ ನಿಗೂಢ ಪ್ರಪಂಚದಿಂದ ಹೊರಬರಲು ನಡೆಸುವ ಹೋರಾಟ, ತನ್ನೊಳಗೆ ತಾನು ಕಳೆದುಹೋದಂಥ ಅನುಭವ, ಆತನೇ ಸೃಷ್ಠಿಸಿಕೊಂಡ ಪಾತ್ರಗಳ ಭ್ರಮೆಯಲ್ಲಿ ರಾಕ್ಷಸನಿಂದ ದೂರವಿರಬೇಕಾದವನು ಕೊನೆಗೆ ತಾನೇ ರಾಕ್ಷಸನಂತಾದ ತಿಥಿ-ಗತಿಯ ಬದುಕನ್ನು ಹೇಳುವ ಗ್ರೀನ್ ಚಿತ್ರದ ಕಥೆಯೇ ವಿಭಿನ್ನ. ಚಿತ್ರಕಥೆ ಒಂದಷ್ಟು ಗೊಂದಲದ ನಡುವೆ ಬೆಸೆದುಕೊಂಡಂತಿದೆ. ಆದರೆ ತಾಳ್ಮೆಯಿಂದ ಚಿತ್ರ ನೋಡುವ ಮನಸ್ಥಿತಿ ಇರಬೇಕು , ಅರ್ಥಮಾಡಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟ ಎನ್ನುವಂತಿದೆ. ಇಂತಹ ವಿಭಿನ್ನ ಚಿತ್ರವನ್ನ ಬಿ.ಎನ್.ಸ್ವಾಮಿ ಹಾಗೂ ರಾಜ್‌ವಿಜಯ್ ನಿರ್ಮಿಸಿರುವ ಧೈರ್ಯ ಮೆಚ್ಚಲೇಬೇಕು.
ನಿರ್ದೇಶಕ ರಾಜ್ ವಿಜಯ ಒಂದು ಸೂಕ್ಷ್ಮ ವಿಚಾರವನ್ನು ವಿಭಿನ್ನವಾಗಿ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿದ್ದು ಛಾಯಾಗ್ರಹಣ , ಹಿನ್ನೆಲೆ ಸಂಗೀತ , ಸಂಕಲನ ಗಮನ ಸೆಳೆಯುತ್ತದೆ. ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ಗೋಪಾಲಕೃಷ್ಣ ದೇಶಪಾಂಡೆ ದುರ್ಬಲ ಮನಸ್ಥಿತಿಯ ಮಾಯಣ್ಣನ ಪಾತ್ರದಲ್ಲಿ ಅದ್ಭುತವಾಗಿ ಜೀವ ತುಂಬಿದ್ದು , ಕ್ಲೈಮಾಕ್ಸ್ ಸನ್ನಿವೇಶ ಎಲ್ಲಾ ಪ್ರಶ್ನೆಗೆ ಉತ್ತರ ತೋರಿದಂತಿದೆ. ತಾಯಿಯ ಪಾತ್ರಧಾರಿ ಡಿಂಪಿ ಪಾದ್ಯ , ವಿಚಿತ್ರ ಹಾವಭಾವದ ವ್ಯಕ್ತಿಯಾಗಿ ಆರ್.ಜೆ. ವಿಕ್ಕಿ , ವಿಶ್ವನಾಥ್ ಮಂಡಳಿಕ , ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಶಿವ ಮಂಜು , ಸೇನಾ ಮುಖ್ಯಸ್ಥನಾಗಿ ಬಾಲಾಜಿ ಮನೋಹರ್ ಸೇರಿದಂತೆ ಬಹುತೇಕ ಪಾತ್ರಗಳು ಒಳ ಮರ್ಮಗಳ ಪ್ರಮುಖ ಘಟ್ಟಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಕುತೂಹಲಕಾರಿಯಾಗಿ ಭ್ರಮೆಯ ಲೋಕದಲ್ಲಿ ಸೃಷ್ಟಿಸಿರುವ ಈ ಥ್ರಿಲ್ಲರ್ , ಸೈಕಲಾಜಿಕಲ್ ಚಿತ್ರದ ಕಥಾನಕ ಒಮ್ಮೆ ನೋಡಬಹುದು.
