Cini NewsMovie ReviewSandalwood

ಜನ್ಮಂತರದ ಪ್ರೇಮಾಯಣ… “ಗತ ವೈಭವ” ಚಿತ್ರವಿಮರ್ಶೆ (ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಗತ ವೈಭವ
ನಿರ್ದೇಶಕ : ಸಿಂಪಲ್ ಸುನಿ
ನಿರ್ಮಾಪಕರು: ದೀಪಕ್ ತಿಮ್ಮಪ್ಪ , ಸುನಿ
ಸಂಗೀತ : ಜುಡೋ ಸ್ಯಾಂಡಿ
ಛಾಯಾಗ್ರಹಣ : ವಿಲಿಯನ್ಸ್
ತಾರಾಗಣ : ದುಷ್ಯಂತ್, ಆಶಿಕಾ ರಂಗನಾಥ್, ಕಿಶನ್ , ಚಿರು, ಸುಧಾ ಬೆಳವಾಡಿ , ಕೃಷ್ಣ ಹೆಬ್ಬಾಳೆ , ಕಾರ್ತಿಕ್ ರಾವ್ ಹಾಗೂ ಮುಂತಾದವರು…

ಯುಗ ಯುಗಗಳಿಂದಲೂ ಪ್ರೀತಿಯ ನೋಟ ,ಆಕರ್ಷಣೆ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆಯಂತೆ. ಹಾಗೆಯೇ ಪ್ರೀತಿಯು ಎಂದೆಂದಿಗೂ ಅಜರಾಮರ. ಅಂತದ್ದೇ ಪ್ರೇಮಿಗಳ ಜನ್ಮಜನ್ಮಾಂತರದ ಬದುಕಿನಲ್ಲಿ ಶಾಪಗ್ರಸ್ತ ಸಂದರ್ಭ ಎದುರಾಗಿ ಎಲ್ಲಾ ಜನ್ಮದಲ್ಲೂ ಹೇಗೆ ಕಾಡುತ್ತದೆ , ಅದರಿಂದ ಹೊರಬರಲು ಏನೆಲ್ಲಾ ಸಾಹಸ ನಡೆಯುತ್ತದೆ ಎಂಬ ಅಂಶವನ್ನ ವಿನೂತನ ಶೈಲಿಯಲ್ಲಿ ಹಲವು ಕಾಲಘಟ್ಟಗಳ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ತಂದಿರುವಂತಹ ಚಿತ್ರ “ಗತವೈಭವ”.

ಆಧುನಿಕ (ಆಶಿಕಾ ರಂಗನಾಥ್) ಮಡಿಕೇರಿಯಲ್ಲಿ ತೋಟಗಾರಿಕೆ (ಆರ್ಟಿಕಲ್ಚರ್ ಡಿಪಾರ್ಟ್ಮೆಂಟ್) ಕೆಲಸದ ನಡುವೆ ಚಿತ್ರ ಬಿಡಿಸುವು ಹವ್ಯಾಸದ ಸಂದರ್ಭದಲ್ಲಿ ನೆನಪಾಗುವ ಪುನರ್ಜನ್ಮದ ವ್ಯಕ್ತಿಯ ಚಿತ್ರ ತನ್ನ ಫೇಸ್ ಬುಕ್ ಮೂಲಕ ಪಸರಿಸುತ್ತದೆ. ಇನ್ನು ವೈದ್ಯರ ಕುಟುಂಬದ ಹುಡುಗ ಪುರಾತನ್( ಎಸ್ ಎಸ್ ದುಷ್ಯಂತ್) ವಿ ಎಫ್ ಎಸ್ ಸ್ಟುಡಿಯೋಸ್ ಮೂಲಕ ತನ್ನ ಗೆಳೆಯರೊಟ್ಟಿಗೆ ಕೆಲಸ ಮಾಡುತ್ತಲೇ ಈ ವೈರಲ್ ಫೋಟೋ ನೋಡಿ ಆಧುನಿಕ ಳನ್ನು ಭೇಟಿ ಮಾಡುವ ಸಂದರ್ಭ ಎದುರಾಗುತ್ತದೆ.

ಇನ್ನು ಒಂದಷ್ಟು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತಿದ್ದಂತೆ ಸಮುದ್ರ ಮಂಥನದ ಸುಳಿಯಲ್ಲಿ ದೇವರುಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಹಾಲಿನ ಸಾಗರವನ್ನು ವಾಸಕಿ (ಸರ್ಪ) ಮೂಲಕ ಅನಾಮದೇವನ ಜೊತೆಗೂಡಿ ರಾಕ್ಷಸರ ಎದುರು ಕಡೆಯುವಾಗ ಹಲವು ಶಕ್ತಿಗಳು ಹೊರ ಬರುತ್ತಾ ಹೋಗುತ್ತದೆ. ಇದರ ನಡುವೆ ಅರಮನೆಯಲ್ಲಿ ದೇವಕುಮಾರಿ ಹಾಗೂ ರಾಕ್ಷಸನ ನಡುವಿನ ಪ್ರೇಮ ಪ್ರಕರಣಕ್ಕೆ ಅನಾಮದೇವನ ಶಾಪ ಪ್ರಮುಖ ಅಸ್ತ್ರವಾಗಿ ದುರಂತ ಎದುರಾಗುತ್ತದೆ. ಮತ್ತೊಂದು ಜನ್ಮಂತರದಲ್ಲಿ ಪೋರ್ಚುಗೀಸ್ ನಲ್ಲಿ ಜನ್ಮ ತಾಳುವ ಜೋಡಿ ಅಲ್ಲಿಂದ ಭಾರತಕ್ಕೆ ವಾಸ್ಕೋಡಿಗಾಮನ ಮೂಲಕ ಬರುವ ಹಾದಿಯಲ್ಲಿ ಬೇರೆ ಬೇರೆ ಸಮಸ್ಯೆಗಳಿಗೆ ತುತ್ತಾಗಿ ಹೋಗುತ್ತಾರೆ.

ನಂತರ ಕರಾವಳಿ ಭಾಗದ ಜನರ ನಡುವೆ ಜನ್ಮ ಪಡೆದು ಕಂಬಳದಲ್ಲಿ ಕೋಣಗಳನ್ನು ನಿಭಾಯಿಸುವ ವಿದ್ಯಾವಂತ ಶ್ರೀನಿವಾಸ ವ್ಯಕ್ತಿಯಾಗಿ ಬೆಳೆದು ತನ್ನಿಷ್ಟದಂತೆ ಓದಿರುವ ಹುಡುಗಿಯನ್ನು ಮದುವೆಯಾಗುವ ಆಸೆ ಪಡುತ್ತಾನೆ. ನಾಟಿ ವೈದ್ಯ ಕುಟುಂಬದಲ್ಲಿ ಬೆಳೆದ ಮಂಗಳ ಕೂಡ ವಿದ್ಯಾವಂತೆ. ಇಲ್ಲೂ ಕೂಡ ಈ ಜೋಡಿ ಒಂದಾಗುವ ಹಾದಿಯಲ್ಲಿ ಸಮಸ್ಯೆಗಳ ಸುರಿಮಳೆ. ಇದು ವಿಧಿಯ ಆಟವೋ… ಅಥವಾ ಕಲ್ಪನೆಯ ಲೋಕವೂ… ಎಂಬ ಪ್ರಶ್ನೆಯ ನಡುವೆ ಪುರಾತನ್ ತಂದೆ ಡಾಕ್ಟರ್ ಆಧುನಿಕಳಾ ಆರೋಗ್ಯದ ಬಗ್ಗೆ ಒಂದು ಸತ್ಯ ಹೇಳುತ್ತಾರೆ. ಇದು ಇನ್ನೊಂದು ಪ್ರಶ್ನೆಗೆ ದಾರಿ ಮಾಡುತ್ತದೆ… ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಇದೆಲ್ಲವೂ ಏನು ಎಂಬುದಕ್ಕೆ ಒಮ್ಮೆ ನೀವು ಈ ಗತವೈಭವ ಚಿತ್ರವನ್ನು ನೋಡಬೇಕು.

ಒಂದು ಪ್ರೀತಿಯ ಸೆಳೆತದ ಜನ್ಮಜನ್ಮಾಂತರದ ಕಥೆಯನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುವುದರಲ್ಲಿ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾರೆ . ವಿಶೇಷವಾಗಿ ಈ ಚಿತ್ರದಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ಪ್ರತಿಯೊಂದು ಕಥೆಯೂ ಬೆಸೆದುಕೊಂಡು ಪುರಾಣ ಕಾಲದಿಂದ ಶುರುವಾಗಿ ಈಗಿನ ಕಾಲಕ್ಕೆ ಬಂದು ನಿಲ್ಲುತ್ತದೆ.

ಪುನರ್ಜನ್ಮದ ಎಳೆ ಇರುವ ಈ ಸಿನಿಮಾ ಕಾನ್ಸೆಪ್ಟ್ ಸ್ವಲ್ಪ ವಿಭಿನ್ನ. ಇಡೀ ಚಿತ್ರದಲ್ಲಿ ಸಿಂಪಲ್ ಸುನಿ ಅವರ ಶೈಲಿ ಎದ್ದು ಕಾಣುತ್ತದೆ. ನವಿರಾದ ಹಾಸ್ಯ , ಎಮೋಷನ್ , ಆ್ಯಕ್ಷನ್, ಸಸ್ಪೆನ್ಸ್ ಜೊತೆಗೆ ದೃಶ್ಯ ವೈಭವವು ಕೂಡ ಇದೆ. ಚಿತ್ರಕಥೆಯ ಹಾದಿಯಲ್ಲಿ ಇಷ್ಟು ಜಟಿಲ ಬೇಕಿತ್ತಾ ಅನಿಸಿದರು ಮನೋರಂಜನೆ ಅಂಶಗಳು ಇಷ್ಟವಾಗುತ್ತದೆ. ಕಲಾವಿದರು ಹಾಗೂ ತಾಂತ್ರಿಕ ವರ್ಗದವರ ಶ್ರಮ ತೆರೆಯ ಮೇಲೆ ಕಾಣುತ್ತದೆ. ಇಂತಹ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು.

ನಟ ದುಷ್ಯಂತ್ ಮೊದಲ ಪ್ರಯತ್ನದಲ್ಲೇ ಬಹಳ ಜವಾಬ್ದಾರಿಯಿಂದ ಪಾತ್ರಕ್ಕೆ ಜೀವ ನೀಡುವುದಕ್ಕೆ ಶ್ರಮ ಪಟ್ಟಿದ್ದಾರೆ.ರಾಕ್ಷಸ, ಪೋರ್ಚುಗೀಸ್ ಪ್ರಜೆ, ಕಂಬಳದ ಪಟು ಹಾಗೂ ತುಂಟತನದ ಪಡ್ಡೆ ಹುಡುಗನಾಗಿ ನಾಲ್ಕು ಶೇಡ್ ಗಳ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾ ರಂಗಕ್ಕೆ ಒಬ್ಬ ಉತ್ತಮ ನಟ ಸಿಕ್ಕಂತಾಗಿದೆ. ನಟಿ ಆಶಿಕಾ ರಂಗನಾಥ್ ಕೂಡ ತಮ್ಮ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ಓಟಕ್ಕೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಗಮನ ಸೆಳೆಯುತ್ತಾರೆ. ಈ ಚಿತ್ರದ ಬಗ್ಗೆ ಯಾವುದೇ ಲಾಜಿಕ್ ಹಾಗೂ ಮ್ಯಾಜಿಕ್ ಹುಡುಕದೆ ಮನೋರಂಜನೆಯ ದೃಷ್ಟಿಯಿಂದ ಹೋಗಿ ಎಂಜಾಯ್ ಮಾಡಿ ನೋಡುವಂತ ಚಿತ್ರ ಇದಾಗಿದೆ.

error: Content is protected !!