ಆರ್ಯ ಮಹೇಶ್ ನಿರ್ದೇಶನದಲ್ಲಿ “ಗಾರ್ಡನ್” ಗೆ ಟಕ್ಕರ್ ಹೀರೋ ಮನೋಜ್ ಎಂಟ್ರಿ.
ಈ ಹಿಂದೆ ಕೋಲಾರ, ಇಂಗ್ಲಿಷ್ ಮಂಜ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದವರು ಆರ್ಯ ಮಹೇಶ್. ರಾ ಸಬ್ಜೆಕ್ಟ್‌ಗಳನ್ನು ಕೈಗೆತ್ತಿಕೊಂಡು, ಅದನ್ನು ಅಷ್ಟೇ ನೈಜವಾಗಿ ಕಟ್ಟಿಕೊಡುವುದರಲ್ಲಿ ಆರ್ಯ ಮಹೇಶ್ ಹೆಸರಾಗುತ್ತಿದ್ದಾರೆ. ಈ ಸಲ ಯಾರೂ ಮುಟ್ಟದ ಕಥಾವಸ್ತುವನ್ನು ಮಹೇಶ್ ಟಚ್ ಮಾಡಿದ್ದಾರೆ. ಯಾವುದೇ ಇಮೇಜ್ ಇಲ್ಲದ, ಕಮರ್ಷಿಯಲ್ ಅಂಶಗಳಿಗೂ ಒಗ್ಗುವ ನಾಯಕನಟನನ್ನು ಬಯಸಿದ್ದ ನಿರ್ದೇಶಕರಿಗೆ ಈಗ ಹೇಳಿಮಾಡಿಸಿದಂತಾ ಹೀರೋ ಸಿಕ್ಕಿದ್ದಾರೆ. ಅದು ಟಕ್ಕರ್ ಮನೋಜ್. ಅಂಬರೀಶ ಮತ್ತು ಚಕ್ರವರ್ತಿ ಮೊದಲಾದ ಚಿತ್ರಗಳಲ್ಲಿ ನಟಿಸಿ ನಂತರ ಟಕ್ಕರ್ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟವರು ಮನೋಜ್. ಸದ್ಯ ಮನೋಜ್ ನಟನೆಯ ಬಿಗ್ ಬಜೆಟ್ಟಿನ ʻಧರಣಿʼಅಂತಿಮ ಹಂತದ ಚಿತ್ರೀಕರಣದಲ್ಲಿದೆ. ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶ್ಯಾನುಭೋಗ್ ನಿರ್ದೇಶನದ ʻಧರಣಿʼ ಕೂಡಾ ಕನ್ನಡಕ್ಕೆ ಹೊಸ ಕಥಾವಸ್ತುವನ್ನು ಹೊತ್ತು ತರುತ್ತಿದೆ. ಧರಣಿ ಪೂರ್ತಿ ಮುಗಿಯುವ ಮುಂಚೆಯೇ ಮನೋಜ್ ʻಗಾರ್ಡನ್ʼಗೆ ಕಾಲಿಟ್ಟಿದ್ದಾರೆ.
ʻʻಕಣ್ಮುಂದೆ ಕಾಣುವ ವಿಚಾರಗಳು, ಕ್ಯಾರೆಕ್ಟರುಗಳನ್ನೇ ಯಥಾವತ್ತಾಗಿ ಕಥೆಯ ರೂಪದಲ್ಲಿ ಕಟ್ಟುವುದು ನನ್ನ ಶೈಲಿ. ಸಿನಿಮಾದ ಮೂಲಕ ಯಾರೂ ಹೇಳದ ನೈಜವಾದ ವಿಚಾರಗಳನ್ನು ತೋರಿಸಬೇಕು ಎನ್ನುವುದು ನನ್ನ ಬಯಕೆ. ಈ ಸಲ ನಾನು ಮಾಡಿಕೊಂಡಿರುವ ಕಥೆಗೆ ಪೂರಕವಾಗಿ ಮನೋಜ್ ಅವರು ಜೊತೆಯಾಗಿದ್ದಾರೆ. ಈ ಚಿತ್ರದ ನಿರ್ಮಾಪಕರಾಗಿರುವ ಜಿ. ಮುನಿರಾಜು ಅವರು ಕೂಡಾ ಅಪಾರ ಒಲವಿಟ್ಟು ನಮಗೆ ಜವಾಬ್ದಾರಿ ವಹಿಸಿದ್ದಾರೆ. ಒಂದೊಳ್ಳೆ ಸಿನಿಮಾವನ್ನು ನೀಡುತ್ತೇವೆ ಎನ್ನುವ ನಂಬಿಕೆ ನನ್ನಲ್ಲಿದೆ.ʼʼ ಎನ್ನುವುದು ನಿರ್ದೇಶಕ ಆರ್ಯ ಮಹೇಶ್ ಅವರ ನುಡಿ.
ʻʻನಾನು ಈ ಹಿಂದೆ ನಟಿಸಿದ್ದ ಟಕ್ಕರ್ ಸೈಬರ್ ಕ್ರೈಮ್ ಕಥಾವಸ್ತುವನ್ನು ಹೊಂದಿತ್ತು. ಸದ್ಯ ಚಿತ್ರೀಕರಣದಲ್ಲಿರುವ ಧರಣಿಯ ಜಗತ್ತೇ ಬೇರೆ. ಕೋಳಿ ಕಾಳಗ ಸೇರಿದಂತೆ ಪಕ್ಕಾ ಈ ನೆಲದ ಕಥಾವಸ್ತುವನ್ನು ಅದು ಹೊಂದಿದೆ. ಈ ಹೊತ್ತಿನಲ್ಲಿ ಈ ಎರಡೂ ಚಿತ್ರಕ್ಕಿಂತಾ ಭಿನ್ನ ಅಂಶಗಳಿರುವ, ಪಕ್ಕಾ ಬೆಂಗಳೂರು ಲೋಕಲ್ ಕಥೆ ಮತ್ತು ಭಾಷೆಯನ್ನು ಹೊಂದಿರುವ ʻಗಾರ್ಡನ್ʼ ಒಪ್ಪಿದ್ದೇನೆ. ನಿರ್ದೇಶಕ ಆರ್ಯ ಮಹೇಶ್ ಅವರ ಮೇಲೆ ಅಪಾರ ಭರವಸೆ ಹೊಂದಿದ್ದೇನೆ. ಅವರು ಮಾಡಿಕೊಂಡಿರುವ ಸ್ಕ್ರಿಪ್ಟ್ ಕೇಳಿದಾಗಲೇ ಈ ಚಿತ್ರದಲ್ಲಿ ನಾನು ನಟಿಸಲೇಬೇಕು ಅಂತಾ ತೀರ್ಮಾನಿಸಿದೆ. ಈ ಸಿನಿಮಾದ ಕಥಾವಸ್ತು ಮತ್ತು ಪಾತ್ರ ಹೇಗಿದೆ ಅನ್ನೋದು ಅತಿ ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ.ʼʼ – ಇದು ನಟ ಮನೋಜ್ ಅವರ ಮಾತು.
ಎಂ.ಆರ್. ಸಿನಿಮಾಸ್ ಬ್ಯಾನರ್ ಮೂಲಕ ಜಿ. ಮುನಿರಾಜು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ಸಾಯಿಬಾಬಾ ದೇವಸ್ಥಾನದಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ ʻಗಾರ್ಡನ್ʼ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಿಂದ ಬೆಂಗಳೂರಿನ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.