Cini NewsSandalwood

ನವೀನ್ ಸಜ್ಜು ನಟನೆಯ “ಲೋ ನವೀನ” ಚಿತ್ರದ ಜನಪದ ಸೊಗಡಿನ “ಕೋಣಾಣೆ” ಹಾಡು ಬಿಡುಗಡೆ .

Spread the love

ಗಾಯಕನಾಗಿ ಕನ್ನಡಿಗರ ಮನ ಗೆದ್ದಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಲೋ ನವೀನ”. ಇತ್ತೀಚೆಗೆ ಈ ಚಿತ್ರದ “ಕೋಣಾಣೆ” ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮಾಜಿ ಶಾಸಕರಾದ ಎ.ಮಂಜು, ಪುಟ್ಟರಾಜು, ಅಮರನಾಥ ಗೌಡ, ವಿಶ್ವಾಮಿತ್ರ, ಜಿ.ಟಿ‌.ಮಾಲ್ ನ ಆನಂದ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಹಾಡು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ಅಪ್ಪಟ ಜನಪದ ಶೈಲಿಯ ಈ ಹಾಡನ್ನು ಮೈಸೂರಿನ ಎಚ್ ಡಿ ಕೋಟೆಯ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿದ್ದಾರೆ. ನವೀನ್ ಸಜ್ಜು ಸಹ ಗಾಯನಕ್ಕೆ ಜೊತೆಯಾಗಿದ್ದಾರೆ. ಅನಿವಾಸಿ ಭಾರತೀಯರಾದ ಬೆನ್ ಚಿಕ್ಕಸ್ವಾಮಿ ಅರ್ಪಿಸುವ , ಕೀರ್ತಿಸ್ವಾಮಿ ನಿರ್ಮಿಸಿರುವ ಹಾಗೂ ಧನುರ್ಧಾರಿ ಪವನ್ ನಿರ್ದೇಶನದ “ಲೋ ನವೀನ” ಚಿತ್ರದ ಮೊದಲ ಹಾಡು ಇದ್ದಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ. ಹಾಡು ಬಿಡುಗಡೆ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೂಲತಃ ಮಳವಳ್ಳಿಯವನಾದ ನಾನು, ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ನನ್ನ ಪ್ರತಿಭೆ ಗುರುತಿಸಿದ್ದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ನಿರ್ದೇಶಕ ಪವನ್ ಕುಮಾರ್ “ಲೂಸಿಯಾ” ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ನನ್ನ ಜರ್ನಿ ಆರಂಭವಾಯಿತು. ಆನಂತರ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದೇನೆ. ನಾನು, ಸುನೀಲ್ ಮೈಸೂರು ಹಾಗೂ ಅನೇಕ ಸ್ನೇಹಿತರು ಸೇರಿ ಮನೋರಂಜನೆಯೇ ಪ್ರಧಾನವಾಗಿರುವ ಈ ಚಿತ್ರದ ಕಥೆ ಬರೆದಿದ್ದೇವೆ. ಅಮೇರಿಕಾಗೆ ಒಮ್ಮೆ ಹೋಗಿದ್ದಾಗ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಅವರನ್ನು ಭೇಟಿ ಮಾಡಿದೆ. ಅವರ ಬಳಿ ಈ ಚಿತ್ರದ ಬಗ್ಗೆ ಹೇಳಿದಾಗ ಅವರು ನಾವೇ ಚಿತ್ರಕ್ಕೆ ಬಂಡವಾಳ ಹೂಡುತ್ತೇವೆ ಎಂದರು. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ.

ನಾನೇ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಈ ಚಿತ್ರದಲ್ಲಿದ್ದು, ಮೊದಲ ಹಾಡಾಗಿ “ಕೋಣಾಣೆ” ಬಿಡುಗಡೆಯಾಗಿದೆ. ಚಿತ್ರದ ಲೊಕೇಶನ್ ಹುಡುಕಾಟದ ಸಲುವಾಗಿ ಎಚ್ ಡಿ ಕೋಟೆಯ ಹಿರೇನಂದಿ ಗ್ರಾಮಕ್ಕೆ ಹೋಗಿದ್ದಾಗ ಅಲ್ಲಿ ಚಮ್ಮಮ್ಮ ಹಾಗೂ ಲಕ್ಷಮ್ಮ ಅವರು ಹೊಲದಲ್ಲಿ ಕೆಲಸ ಮಾಡುತ್ತಾ ಹಾಡುತ್ತಿದ್ದುದ್ದನ್ನು ನೋಡಿದೆ. ಇವರಿಂದ ನಮ್ಮ ಚಿತ್ರದ ಹಾಡೊಂದನ್ನು ಹಾಡಿಸಬೇಕು ಎಂದು ನಿರ್ಧರಿಸಿದೆ. ಅಂದುಕೊಂಡಂತೆ ಅವರಿಂದಲೇ ಈ ಹಾಡು ಹಾಡಿಸಿದ್ದೇನೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ಧನ್ಯವಾದ ಎಂದರು ಚಿತ್ರದ ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು.

ನಾನು ಬೆಂಗಳೂರಿನವಳು. ನನ್ನ ಪತಿ ಮಳವಳ್ಳಿಯವರು. ಮೂವತ್ತೈದು ವರ್ಷಗಳಿಂದ ಅಮೇರಿಕಾದಲ್ಲಿದ್ದೇವೆ. ಅಲ್ಲೂ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ‌‌. ನಮಗೆ ಕನ್ನಡ ಎಂದರೆ ಬಹಳ ಪ್ರೀತಿ. ಹೀಗೆ ಕಾರ್ಯಕ್ರಮವೊಂದರಲ್ಲಿ ನವೀನ್ ಸಜ್ಜು ಅವರನ್ನು ಭೇಟಿಯಾದಾಗ ಈ ಚಿತ್ರದ ಕುರಿತು ಹೇಳಿದರು. ಹಳ್ಳಿಯ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು ಎಂದು ನಿರ್ಮಾಪಕಿ ಕೀರ್ತಿ ಸ್ವಾಮಿ ತಿಳಿಸಿದರು.

ನಾನು ಮಳವಳ್ಳಿಯವನು. ಚಿಕ್ಕವಯಸ್ಸಿನಲ್ಲೇ ಇದೇ ತರಹದ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು. ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ನಮ್ಮ ಮನೆಗೆ‌ ಬಂದವರಿಗೂ ನಾನೇ ಮಾಡಿ ಕೊಡುತ್ತೇನೆ. ಹಾಗಾಗಿ ನವೀನ್ ಸಜ್ಜು ಹಳ್ಳಿಯ ಸೊಗಡಿನ ಕಥೆ ಹೇಳಿದಾಗ ಬಹಳ ಖುಷಿಯಾಯಿತು ಎಂದು ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಹೇಳಿದರು. ಮೊದಲ ನಿರ್ದೇಶನದ ಚಿತ್ರ‌. ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ಧನುರ್ಧಾರಿ ಪವನ್ ತಿಳಿಸಿದರು. ಛಾಯಾಗ್ರಾಹಕ ರಿಷಿಕೇಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನವೀನ್ ಸಜ್ಜು ಅನೇಕ ಜನಪ್ರಿಯ ಗೀತೆಗಳನ್ನು ಹಾಡಿ ನೆರೆದಿದವರನ್ನು ರಂಜಿಸಿದರು.

Visited 1 times, 1 visit(s) today
error: Content is protected !!