“ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ.
“ಬಿಗ್ ಬಾಸ್” ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ, ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ “ತುಂಟ ಮನದ ಮಾಯೆ ನೀನು” ಎಂಬ ರೊಮ್ಯಾಂಟಿಕ್ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ಸಿನಿಮಾ ಪತ್ರಿಕಾ ಪ್ರಚಾರಕರ್ತ ಡಿ.ವಿ.ಸುಧೀಂದ್ರ ವೆಂಕಟೇಶ್ ಹಾಗೂ ಸುನೀಲ್ ಸುಧೀಂದ್ರ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.
ಮನೋರಂಜನೆಯೇ ಪ್ರಧಾನವಾಗಿರುವ ಜೊತೆಗೆ ಹಾರಾರ್ ಕಥಾಹಂದರವನ್ನೂ ಹೊಂದಿರುವ ನಮ್ಮ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ರೊಮ್ಯಾಂಟಿಕ್ ಹಾಡು ಇಂದು ಬಿಡುಗಡೆಯಾಗಿದೆ. ಅದ್ವಿಕ್ ವರ್ಮ ಅವರ ಸಂಗೀತ ನಿರ್ದೇಶನದಲ್ಲಿ ರಿಚ್ಚಿ ತುಂಬಾ ಸೊಗಸಾಗಿ ಈ ಹಾಡನ್ನು ಹಾಡಿದ್ದಾರೆ. ಇನ್ನೂ ನಮ್ಮ ಚಿತ್ರ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ನಿಖಿತಾಸ್ವಾಮಿ, ಸುಶ್ಮಿತಾ, ಹರೀಶ್ ರಾಜ್, ಶ್ರೀನಿವಾಸಮೂರ್ತಿ, ರಮೇಶ್ ಭಟ್, ತುಕಾಲಿ ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾನೇ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ನಾಯಕ ಪ್ರಥಮ್.
ಪ್ರಥಮ್ ಅವರು ಹೇಳಿದ ಹಾಗೆ ನಮ್ಮ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಎಲ್ಲರ ಸಹಕಾರದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ನಾನು ಛಾಯಾಗ್ರಾಹಕನಾಗಿ ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಈ ಚಿತ್ರಕ್ಕೂ ನಾನೇ ಛಾಯಾಗ್ರಹಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. “ಫಸ್ಟ್ ನೈಟ್ ವಿತ್ ದೆವ್ವ” ನನ್ನ ನಿರ್ದೇಶನದ ಐದನೇ ಚಿತ್ರ ಹಾಗೂ ಛಾಯಾಗ್ರಹಣದ ಐವತ್ತೆರಡನೇ ಚಿತ್ರ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ದೇಶಕ ಪಿ.ವಿ.ಆರ್ ಸ್ವಾಮಿ ತಿಳಿಸಿದರು.
ನನ್ನ ಪಾತ್ರ ಕೂಡ ಚೆನ್ನಾಗಿದೆ. ನಾಯಕನ ಜೊತೆಗ ಸಾಗುವ ಪಾತ್ರ ಎಂದು ತುಕಾಲಿ ಸಂತೋಷ್ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ನಿಖಿತಾ ಸ್ವಾಮಿ, ಸುಶ್ಮಿತಾ, ಸಂಗೀತ ನಿರ್ದೇಶಕ ಅದ್ವಿಕ್ ವರ್ಮ, ಗಾಯಕ ರಿಚ್ಚಿ, ನೃತ್ಯ ನಿರ್ದೇಶಕ ಸೈ ರಮೇಶ್, ವಿ.ಎಫ್.ಎಕ್ಸ್ ದಯಾನಂದ್ ಹಾಗೂ ಸಂಕಲನ ಕಾರ್ಯ ಮಾಡುವುದರೊಂದಿಗೆ ಸಂಭಾಷಣೆಯನ್ನು ಬರೆದಿರುವ ನಾಗೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.