ಕ್ರೂರ ಪ್ರಪಂಚಕ್ಕೆ ಅಮಾಯಕನ ಎಂಟ್ರಿ… “ಎಕ್ಕ” ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಎಕ್ಕ
ನಿರ್ದೇಶಕ : ರೋಹಿತ್ ಪದಕಿ
ನಿರ್ಮಾಣ : PRK, JF, KRG
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಸತ್ಯ ಹೆಗಡೆ
ತಾರಾಗಣ : ಯುವ ರಾಜಕುಮಾರ್, ಸಂಜನಾ ಆನಂದ್, ಸಂಪದ , ಅತುಲ್ ಕುಲಕರ್ಣಿ, ಶೃತಿ, ಆದಿತ್ಯ, ರಾಹುಲ್ ದೇವ್ ಶೆಟ್ಟಿ , ಸಾಧು ಕೋಕಿಲ , ಪೂರ್ಣಚಂದ್ರ ಮೈಸೂರು ಹಾಗೂ ಮುಂತಾದವರು…
ಜೀವನದಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸುವುದು ಬಹಳನೇ ಮುಖ್ಯ. ಅಪ್ಪಿ ತಪ್ಪಿ ಸಂಬಂಧಿಕರು , ಗೆಳೆಯರ ಹಣದ ಸಮಸ್ಯೆಗೆ ಜಾಮೀನು ಹಾಕುವುದು , ಮನೆ ಮಾರಾಟಕ್ಕೆ ಬರೋದು, ಸಮಸ್ಯೆಯಿಂದ ಹೊರಬರಲು ಹೋಗಿ ಇಕ್ಕಟ್ಟಿಗೆ ಸಿಲುಕಿ ರೌಡಿಗಳ ಗ್ಯಾಂಗ್ ಸೇರುವ ಅಮಾಯಕ ಹುಡುಗನ ಬದುಕಿನಲ್ಲಿ ಎದುರಾಗುವ ಸಮಸ್ಯೆ , ನೋವು , ಪ್ರೀತಿ , ಹೊಡೆದಾಟ , ಮಚ್ಚು , ಲಾಂಗ್ ಹೊಡೆದಾಟದ ನಡುವೆ ಪೋಲಿಸ್ ಗನ್ ಸದ್ದು ಮಾಡುತ್ತಾ ಸರಿ ತಪ್ಪುಗಳ ನಡುವೆ ಅಬ್ಬರಿಸಿ ಸಾಗುವ ಕಥನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಎಕ್ಕ”.
ಊರಲ್ಲಿ ತನ್ನ ತಾಯಿ ರತ್ನ (ಶ್ರುತಿ) ಜೊತೆ ಮನೆಯಲ್ಲಿ ಓಡಾಡಿಕೊಂಡು ತನ್ನಿಷ್ಟದಂತೆ ಗೆಳೆಯರೊಟ್ಟಿಗೆ ಜೀವನ ನಡೆಸುವ ಮುತ್ತು (ಯುವ ರಾಜಕುಮಾರ್). ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಮಾಡಲು ಮುಂದಾಗುವ ಗೆಳೆಯ ರಮೇಶನಿಗೆ ಬುದ್ಧಿ ಹೇಳಿ ಊರಿನಲ್ಲಿ ಕೋಳಿ ಫಾರಂ ನಡೆಸಲು ಹಣಕ್ಕಾಗಿ ಮಂಜಣ್ಣ ಬಳಿ ಸಾಲಕ್ಕೆ ಜಾಮೀನು ಹಾಕುತ್ತಾನೆ. ನಂತರ ಗೆಳೆಯ ಊರು ಬಿಡುತ್ತಾನೆ. 20 ಲಕ್ಷ ಹಣಕ್ಕಾಗಿ ಮನೆ ಮಾರಾಟಕ್ಕೆ ಬಂದಾಗ ತಾಯಿ ಕಂಗಾಲಾಗುತ್ತಾಳೆ. ಮನೆ ಬಿಡಿಸಿಕೊಳ್ಳಲು ಮುತ್ತು ಸಿಟಿಯಲ್ಲಿರುವ ಶ್ರೀಧರ್ ಎಂಬುವ ಸ್ನೇಹಿತರ ಮನೆ ಸೇರುತ್ತಾನೆ. ಕೆಲಸಕ್ಕಾಗಿ ಪಿಂಟು (ಸಾಧು ಕೋಕಿಲ) ಕ್ಯಾಬ್ ನಲ್ಲಿ ಕಾರು ಓಡಿಸಲು ಮುಂದಾಗುತ್ತಾನೆ.
ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾ ಶ್ರೀಧರ್ ಪುತ್ರಿ ಪಮ್ಮಿ ಗೆ ಪ್ರೀತಿಯ ಸೂಪರ್ ಮ್ಯಾನ್ ಆಗಿ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುತ್ತಾನೆ. ಇದರ ನಡುವೆ ಎದುರು ಮನೆಯಲ್ಲಿರುವ ಪುಡಿ ರೌಡಿ ಒಂಟೆ ಕುಟುಂಬ ಹಾಗೂ ಆತನ ತಂಗಿ ನಂದಿನಿ (ಸಂಜನಾ ಆನಂದ್) ಯನ್ನ ಇಷ್ಟಪಡುವ ಮುತ್ತು. ನಂದಿನಿಯ ಮುನಿಸು , ಕೋಪದ ನಡುವೆಯೂ ಮುತ್ತು ನನ್ನ ಇಷ್ಟಪಡುತ್ತಾಳೆ. ಇದರ ನಡುವೆ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ನಾಲ್ವರ ಅಬ್ಬರದ ದರ್ಬಾರ್. ಒಮ್ಮೆ ಅಚನಕ್ಕಾಗಿ ಮುತ್ತು ಕಾರಿನಲ್ಲಿ ಮಸ್ತಾನ್ ಬಾಯ್(ಅತುಲ್ ಕುಲಕರ್ಣಿ) ಮೇಲೆ ಗುಂಡಿನ ಸುರಿಮಳೆ. ಆಸ್ಪತ್ರೆಗೆ ಸೇರಿಸಿ ರಕ್ಷಿಸುವ ಮುತ್ತುಗೆ ಬಾಯ್ ಗ್ಯಾಂಗ್ ನ ಡ್ಯಾಡಿ (ಪೂರ್ಣಚಂದ್ರ) ತಂಡ ಸಾಥ್.
ಇನ್ನು ಬೆಂಗಳೂರಿನಲ್ಲಿ ಕನ್ಸ್ಟ್ರಕ್ಷನ್ ವ್ಯವಹಾರ ಕೋಕ , ಆಯಿಲ್ ವಿಚಾರ ಲಕ್ಷ್ಮಣ್ , ಗ್ರಾಬೇಜ್ ವಿಚಾರ ಪಳನಿ ಕೈಯಲ್ಲಿ ಇರುತ್ತದೆ. ಈ ದಂಧೆಗೆ ರಾಜಕೀಯ ನಾಯಕನ ಬೆಂಬಲ ಇರುತ್ತದೆ. ಮಸ್ತಾನ್ ಬಾಯ್ ಮೇಲೆ ಅಟ್ಯಾಕ್ ಮಾಡಿದ ಹಿಂದಿರುವ ವ್ಯಕ್ತಿ ಯಾರು ಎಂದು ಹುಡುಕುವಷ್ಟರಲ್ಲಿ ಒಂಟೆ ಗ್ಯಾಂಗ್ ಮುತ್ತು ಹಾಗೂ ಪುಟಾಣಿ ಪಮ್ಮಿ ಮೇಲೆ ಹಲ್ಲೆ ಮಾಡಿ ಮಗು ಸಾಯುತ್ತದೆ. ಮಠದ ಜಾಗದ ವಿಚಾರವಾಗಿ ಈ ಹಲ್ಲೆ ನಡೆದಿದ್ದು , ಮಸ್ತಾನ್ ಬಾಯ್ ಹಾಗೂ ಗ್ಯಾಂಗ್ ಅಮಾಯಕ ಯುವ ನನ್ನ ರಕ್ಷಿಸುತ್ತಾರೆ. ಹಳ್ಳಿಗೆ ಹೋಗುವಂತೆ ಹೇಳಿದರು , ಮಗುವನ್ನು ಕೊಂದ ಒಂಟೆ ಯನ್ನು ಹಿಡಿದು ಅಟ್ಯಾಕ್ ಮಾಡಿದವರ ಬಗ್ಗೆ ತಿಳಿಯುತ್ತಾನೆ.
ಬಾಯಿ ತಂಡದಲ್ಲೇ ಉಳಿಯುತ್ತಾನೆ. ಈ ರೌಡಿಗಳ ಹಾವಳಿಯನ್ನು ತಪ್ಪಿಸಲು ದಕ್ಷ ಅಧಿಕಾರಿ ಎಸಿಪಿ ದುರ್ಗಾ ಪ್ರಸಾದ್ (ಆದಿತ್ಯ) ಫೀಲ್ಡ್ ಗೆ ಎಂಟ್ರಿ ಕೊಡ್ತಾರೆ. ಯುವ ಹಾಗೂ ಎಸಿಪಿ ನಡುವೆ ಸಮರ ಶುರುವಾಗುತ್ತದೆ. ಇನ್ನು ಬಾರ್ ಗರ್ಲ್ ಆಗಿ ಕುಣಿಯುವ ಬೆಡಗಿ ಮಲ್ಲಿಕಾ (ಸಂಪದ) ಯುವನ ಆಸರೆ ಪಡೆಯುತ್ತಾಳೆ. ಊರಿಗೂ ಹೋಗಲಾಗದೆ ಈ ರೌಡಿಸಂನಲ್ಲೇ ನರಳುವ ಯುವನ ಹಿಂದೆ , ಮುಂದೆ ಇದ್ದವರು ಸಾಯುತ್ತಾರೆ. ಮುಂದೇನು ಅನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ಪ್ಲಾನ್ ನೀಡುತ್ತಾನೆ. ಅದು ಇಡೀ ಸಿಟಿ ಕ್ಲೀನ್ ಮಾಡಲು ದಾರಿ ಮಾಡುತ್ತದೆ.
ಐಡಿಯಾ ಕೊಟ್ಟಿದ್ದು ಯಾರು..
ಯುವ ಆಡೋ ಆಟ ಏನು…
ಪ್ರೀತಿ ಏನಾಗುತ್ತೆ…
ಸುಪಾರಿ ಯಾರದ್ದು…
ಇದೆಲ್ಲದಕ್ಕೂ ಉತ್ತರ ಎಕ್ಕ ಚಿತ್ರ ನೋಡಬೇಕು.
ಇಡೀ ಚಿತ್ರದ ಕೇಂದ್ರ ಬಿಂದುವಾಗಿ ನಟ ಯುವರಾಜ್ ಕುಮಾರ್ ಆವರಿಸಿಕೊಂಡಿದ್ದಾರೆ. ಹಳ್ಳಿಯ ಮುಗ್ಧ ಹುಡುಗನ ಬದುಕಲ್ಲಿ ಎದುರಾಗುವ ಸಂಕಷ್ಟ , ಡಾನ್ಗಳ ಸಹವಾಸ, ನೆಮ್ಮದಿಗಾಗಿ ಪರದಾಟ ಹೀಗೆ ಹಲವು ಸಂದರ್ಭಗಳಲ್ಲಿ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಸಾಹಸ ಸನ್ನಿವೇಶಗಳನ್ನು ಅದ್ಭುತವಾಗಿ ನಿಭಾಯಿಸುತ್ತಾ , ಡ್ಯಾನ್ಸ್ ಕೂಡ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಟಿ ಸಂಜನಾ ಆನಂದ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಮತ್ತೋರ್ವ ನಟಿ ಸಂಪದ ಮುದ್ದಾಗಿ ತೆರೆಯ ಮೇಲೆ ಕಾಣುತ್ತಾ ಬಾರ್ ಗರ್ಲ್ ಪಾತ್ರಕ್ಕೆ ನ್ಯಾಯ ಒದಗಿಸಿ ಜೀವ ತುಂಬಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಆದಿತ್ಯ ಉತ್ತಮವಾಗಿ ಅಭಿನಯಿಸಿದ್ದಾರೆ.
ಇನ್ನೂ ತಾಯಿಯ ಪಾತ್ರದಲ್ಲಿ ಶೃತಿ , ಖಳನಾಯಕರಾಗಿ ಅತುಲ್ ಕುಲಕರ್ಣಿ , ರಾಹುಲ್ ದೇವಶೆಟ್ಟಿ , ಪೂರ್ಣಚಂದ್ರ ಮೈಸೂರು ಅದ್ಭುತವಾಗಿ ನಟಿಸಿದ್ದಾರೆ. ಹಾಸ್ಯ ನಟ ಸಾಧುಕೋಕಿಲ ಕೂಡ ಮಿಂಚಿದ್ದಾರೆ. ಇನ್ನು ನಿರ್ಮಾಣ ಸಂಸ್ಥೆಯಲ್ಲಿರುವ ಕೆಲವು ಕಲಾವಿದರು ಕೂಡ ತಮ್ಮ ಅಭಿನಯ ಕೌಶಲ್ಯವನ್ನು ತೋರಿದ್ದಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಹೊಸತನ ಅಲ್ಲದಿದ್ದರೂ ಚಿತ್ರಕಥೆ ಕುತೂಹಲಕಾರಿಯಾಗಿ ಸಾಗುತ್ತದೆ. ಮುಗ್ಧರ ಬದುಕಿನಲ್ಲಿ ಆಗುವ ಅನಾಹುತ, ಭೂಗತ ಜಗತ್ತಿನಲ್ಲಿರುವ ಒಳಜಗಳ , ರಾಜಕೀಯ ನಂಟು , ಪೊಲೀಸರಿಗೆ ಕಗ್ಗಂಟು, ಪ್ರೀತಿಯ ಇಕ್ಕಟ್ಟಿನ ನಡುವೆ ನಂಬಿಕೆ ದ್ರೋಹದ ಸುಳಿಯ ಸುತ್ತ ಗಮನ ಸೆಳೆಯುವ ಅಂಶವಿದೆ. ಚಿತ್ರದ ಮೊದಲ ಭಾಗ ಗಮನ ಸೆಳೆದಿದೆ. ಇನ್ನು ತೆರೆಯ ಮೇಲೆ ನಿರ್ಮಾಪಕರು ಮಾಡಿರುವ ಖರ್ಚು ಕಾಣುತ್ತದೆ. ಇಡೀ ಚಿತ್ರದ ಹೈಲೈಟ್ ಗಳಲ್ಲಿ ಚರಣ್ ರಾಜ್ ಸಂಗೀತ , ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ , ದೀಪು. ಎಸ್ .ಕುಮಾರ್ ಸಂಕಲನ , ಆಕ್ಷನ್ , ನೃತ್ಯ ನಿರ್ದೇಶನ ಕೆಲಸ ಸೊಗಸಾಗಿ ಮೂಡಿ ಬಂದಿದೆ. ಒಟ್ಟಾರೆ ಮಾಸ್ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.