Cini NewsSandalwood

ವಿಭಿನ್ನ ಕಥಾಹಂದರದ “ಇಮೇಲ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ

Spread the love

ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಎಸಿಪಿ ಶಂಕರ್, ಪ್ರಕೃತಿ ಪ್ರಸನ್ನ, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದರು. ಖ್ಯಾತ ನಟ, ಇಂಡಿಯನ್‌ ಮೈಕಲ್ ಜಾಕ್ಸನ್ ಎಂದೇ ಪ್ರಸಿದ್ದರಾಗಿರುವ ಪ್ರಭುದೇವ ಅವರು ಈ ಚಿತ್ರದ ಟ್ರೇಲರ್ ವೀಕ್ಷಿಸಿ, ವಿಡಿಯೋ ಮೂಲಕ ಶುಭ ಹಾರೈಕೆ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಚಿತ್ರತಂಡದ ಸದಸ್ಯರು “ಇಮೇಲ್” ಕುರಿತು ಮಾತನಾಡಿದರು.

“ಇಮೇಲ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಆನ್ ಲೈನ್ ಗೇಮ್ ನಿಂದಾಗುವ ಪರಿಣಾಮಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಎಸ್ ಆರ್ ರಾಜನ್ ಅವರೆ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ.‌ ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ನಿರ್ಮಣವಾಗಿದ್ದು, ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಾಯಕಿ ರಾಗಿಣಿ ದ್ವಿವೇದಿ.

ನಾನು ತಮಿಳಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ನನ್ನ ಸಂಬಂಧಿಕರು ಕರ್ನಾಟಕದಲ್ಲಿದ್ದಾರೆ. ಹಾಗಾಗಿ ನನಗೂ ಸ್ವಲ್ಪ ಕನ್ನಡ ಮಾತಾಡಲು ಬರುತ್ತದೆ ಎಂದು ತಿಳಿಸಿದ ನಾಯಕ ಮುರುಗ ಅಶೋಕ್, ಕನ್ನಡದಲ್ಲೇ ತಮ್ಮ ಪಾತ್ರದ ವಿವರಣೆ ನೀಡಿದರು.

ನಾನು ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆದರೆ ನಿರ್ದೇಶನ ಮಾಡಿರುವ ಮೊದಲ ಚಿತ್ರ “ಇಮೇಲ್”. ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ಇದೇ ಫೆಬ್ರವರಿ 9. ರಂದು ಚಿತ್ರ ಬಿಡುಗಡೆಯಾಗುತ್ತಿದೆ. ರಾಗಿಣಿ, ಅಶೋಕ್ ಸೇರಿದಂತೆ ಇಡೀ ತಂಡಕ್ಕೆ, ಟೀಸರ್ ಬಿಡುಗಡೆ ಮಾಡಿಕೊಟ್ಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಟ್ರೇಲರ್ ನೋಡಿ ಮೆಚ್ಚುಗೆ ಮಾತುಗಳಾಡಿದ ಪ್ರಭುದೇವ ಅವರಿಗೆ ನಿರ್ಮಾಪಕ ಹಾಗೂ ನಿರ್ದೇಶಕ ಎಸ್ ಆರ್ ರಾಜನ್ ಧನ್ಯವಾದ ತಿಳಿಸಿದರು.

ಛಾಯಾಗ್ರಾಹಕ ಸೆಲ್ವಂ ಅವರು ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು “ಇಮೇಲ್” ಚಿತ್ರಕ್ಕೆ ಶುಭ ಕೋರಿದರು.

“ಇಮೇಲ್” ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, “ಲೊಳ್ಳುಸಭಾ” ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು “ಇಮೇಲ್” ಚಿತ್ರದ ತಾರಾಬಳಗದಲ್ಲಿದ್ದಾರೆ. ಬಹುತೇಕ ಕನ್ನಡ ಕಲಾವಿದರೆ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು ಜುಬಿನ್ ಹಾಗೂ “ಐ ಲವ್ ಯು” ಚಿತ್ರದ ಖ್ಯಾತಿಯ ಕಿರಣ್ ತೊಟಂಬೈಲ್(ಕನ್ನಡ) ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ , ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!