ಗೊಂದಲದ ಪ್ರೇಮಿಗಳ ನೆಮ್ಮದಿ ಹುಡುಕಾಟ “ದೂರ ತೀರ ಯಾನ” (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ದೂರ ತೀರ ಯಾನ
ನಿರ್ದೇಶಕ : ಮಂಸೋರೆ
ನಿರ್ಮಾಪಕ : ಆರ್. ದೇವರಾಜ್
ಸಂಗೀತ : ಬಕ್ಕೇಶ್ , ಕಾರ್ತಿಕ್
ಛಾಯಾಗ್ರಹಣ : ಶೇಖರ್ ಚಂದ್ರ
ಸಂಕಲನ : ನಾಗೇಂದ್ರ. ಕೆ
ತಾರಾಗಣ : ವಿಜಯ್ ಕೃಷ್ಣ , ಪ್ರಿಯಾಂಕ ಕುಮಾರ್ , ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ , ಅರುಣ್ ಸಾಗರ್ , ಸುಧಾ ಬೆಳವಾಡಿ , ಪಿ.ಡಿ .ಸತೀಶ್ ಹಾಗೂ ಮುಂತಾದವರು…
ಜೀವನದಲ್ಲಿ ಹಣ , ಆಸ್ತಿಯೇ ಮುಖ್ಯವಲ್ಲ… ನೆಮ್ಮದಿಯ ಬದುಕು ಅಷ್ಟೇ ಮುಖ್ಯ. ಅದರಲ್ಲೂ ಯಾವುದೇ ಒತ್ತಡ , ಮಾನಸಿಕ ಹಿಂಸೆ , ಬದುಕಿನಲ್ಲಿ ಸ್ಪಷ್ಟತೆ ಜೊತೆ ಸ್ವತಂತ್ರವಾಗಿ ಬದುಕುವ ಆಸೆ ಇದ್ದೇ ಇರುತ್ತದೆ. ಆದರೆ ತಂದೆ ತಾಯಿಯ ಸಂಬಂಧ , ಗೆಳೆಯರ ನಂಟು, ಪ್ರೀತಿಯ ಸೆಳೆತ , ಜೀವನಕ್ಕಾಗಿ ಕೆಲಸ , ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವುದೇ ಸಾಮಾನ್ಯವಾಗಿ ಎಲ್ಲರ ಜೀವನವಾಗಿದೆ. ಇದರ ನಡುವೆ ಕೆಲವರಿಗೆ ಇಗೋ ಹರ್ಟ್ ಆಗಿ ಉಸಿರಾಟಕ್ಕೂ ಜಾಗವಿಲ್ಲ ಎನ್ನುವಂತೆ ಪರದಾಡುವವರು ಇರುತ್ತಾರೆ.
ಇಂತದ್ದೇ ಒಂದು ಕಥಾನಕ ಮೂಲಕ ಇಬ್ಬರು ಪ್ರೇಮಿಗಳ ಸುತ್ತ ಬದುಕು ಹೇಗೆ ಸಾಗಬೇಕು , ಸರಿ ತಪ್ಪುಗಳ ನಡುವೆ ಯಾವುದಕ್ಕೆ ಪ್ರಾಮುಖ್ಯತೆ ಅವಶ್ಯಕ , ಸಂಸಾರದ ಗೊಂದಲಕ್ಕಿಂತ ಒಂಟಿತನವೇ ಉಸಿರಾಟಕ್ಕೆ ದಾರಿಯೇ ಎನ್ನುವ ವಿಚಾರಗಳೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದೂರ ತೀರ ಯಾನ”. ತಮ್ಮದೇ ಒಂದು ಮ್ಯೂಸಿಕ್ ಬ್ಯಾಂಡ್ ಟೀಮ್ ಅನ್ನ ಕಟ್ಟಿಕೊಂಡು ಸಾಗುವ ಗೆಳೆಯರ ನಡುವೆ ವೈಲೆನ್ ನುಡಿಸುತ್ತಾ , ಹಾಡುವ ಗಾಯಕ ಆಕಾಶ್ ( ವಿಜಯ್ ಕೃಷ್ಣ) , ಇದೇ ತಂಡದಲ್ಲಿ ಫ್ಲೈಟ್ ನುಡಿಸುವ ಮುದ್ದಾದ ಬೆಡಗಿ ಭೂಮಿ (ಪ್ರಿಯಾಂಕ ಕುಮಾರ್).
ಇವರಿಬ್ಬರ ಸ್ನೇಹ , ಪ್ರೀತಿ ಐದು ವರ್ಷಗಳು ಸಾಗಿದರೂ, ಕೆಲವೊಮ್ಮೆ ದುರಂಕಾರದ ವರ್ತನೆ ಇಬ್ಬರ ಮದುವೆಗೂ ಅಡ್ಡಿಯಾಗುತ್ತದೆ. ಇದನ್ನ ಸರಿಪಡಿಸಿಕೊಳ್ಳಲು ಒಂದು ಲಾಂಗ್ ಡ್ರೈವ್ ಹೊರಡಲು ನಿರ್ಧರಿಸುತ್ತಾರೆ. ಪಯಣದ ಹಾದಿಯಲ್ಲಿ ಇವರಿಬ್ಬರದು ಬೇರೆಯದೆ ನಿಲುವು, ಆಕಾಶ್ ಇಷ್ಟ ಪಡುವ ಸ್ಥಳ , ನಡೆಕೊಳ್ಳುವ ರೀತಿ ಕೆಲವೊಮ್ಮೆ ಭೂಮಿಗೂ ಇಷ್ಟವಾಗುವುದಿಲ್ಲ , ಅದೇ ರೀತಿ ಭೂಮಿಯ ವರ್ತನೆಯು ಆಕಾಶ್ ಮನಸ್ಸಿಗೆ ನೋವುಂಟು ಮಾಡುತ್ತಿರುತ್ತದೆ.
ಇದರ ನಡುವೆ ಒಂದಷ್ಟು ಸ್ಥಳ , ವ್ಯಕ್ತಿಗಳ ಪರಿಚಯ ಕೂಡ ಇವರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಮನಸ್ಸು ಒಲಿಸಿಕೊಳ್ಳುವುದರ ಜೊತೆಗೆ ಮನವರಿಕೆಗೂ ದಾರಿ ಮಾಡಿಕೊಟ್ಟು ಸಾಗುವ ಹಾದಿಯಲ್ಲಿ ಈ ಇಬ್ಬರು ಪ್ರೇಮಿಗಳು ಕಂಡುಕೊಳ್ಳುವ ಸತ್ಯ ಏನು… ಸಾಗುವ ದಾರಿ ಯಾವುದು… ಸ್ಪಷ್ಟತೆಯ ಬದುಕು ಯಾವುದು… ಕ್ಲೈಮಾಕ್ಸ್ ನೀಡುವ ಉತ್ತರ ಏನು… ಎಂಬುದನ್ನು ತಿಳಿಯೋದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಮಂಸೋರೆ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ವಾಗಿದೆ. ಗೆಳೆತನ , ಪ್ರೀತಿ , ವಿಚ್ಛೇದನ , ಲಿವಿಂಗ್ ರಿಲೇಶನ್ಶಿಪ್ ಹೀಗೆ ಒಂದಷ್ಟು ಸಂಬಂಧಗಳಿಗೆ ಬೇಲಿ ಹಾಕಿಕೊಂಡು ಬದುಕು ನಡೆಸುವವರ ಜೀವನದಲ್ಲಿ ಎದುರಾಗುವ ಏರುಪೇರುಗಳ ನಡುವೆ ನಮ್ಮನ್ನ ನಾವು ಕಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನ ತೆರೆದಿಟ್ಟಂತಿದೆ.
ಪ್ರೀತಿ ಅತಿಯಾದ ನಮ್ಮವರನ್ನ ರಕ್ಷಿಸಿಕೊಳ್ಳಲು ಹೋಗಿ ಉಸಿರಾಟಕ್ಕೂ ಜಾಗವಿಲ್ಲವದಂತೆ ಸಿಲುಕುವ ಅವಶ್ಯಕತೆ ಇಲ್ಲ , ಅವರವರ ಸ್ವತಂತ್ರಕ್ಕೆ ಸಮಯ , ದಾರಿ ಅವಶ್ಯಕತೆ ಬೇಕು ಎಂಬುದರ ಜೊತೆಗೆ ಕುಟುಂಬದ ಬಗ್ಗೆ ಅರಿವು ಮೂಡಿಸಿದಂತಿದೆ. ಆದರೆ ಸುದೀರ್ಘ ಪಯಣ ನೋಡುವುದಕ್ಕೆ ಆಯಾಸ ಮಾಡುತ್ತದೆ. ಚಿತ್ರಕಥೆ ಮತ್ತಷ್ಟು ಹಿಡಿತ ಮಾಡಬಹುದಿತ್ತು. ಗಮನಸೆಳೆಯುವ ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಆರ್. ದೇವರಾಜ್ ಸಾಹಸ ಮೆಚ್ಚಲೇಬೇಕು. ಇನ್ನು ಇಡೀ ಚಿತ್ರದ ಹೈಲೈಟ್ ಎಂದರೆ ಸಂಗೀತದ ಸುಧೆ ಮಧುರವಾಗಿದೆ.
ಅದರಲ್ಲೂ ಟಿ. ಪಿ . ಕೈಲಾಸಂ ಅವರ ಖ್ಯಾತ ಕೋಳಿಕೆ ರಂಗ ಹಾಡನ್ನು ಹೊಸ ಮಾದರಿಯಲ್ಲಿ ಸಂಯೋಜನೆ ಮಾಡಿರುವುದು ಇಷ್ಟವಾಗುತ್ತದೆ. ಸುಂದರ ತಾಣಗಳನ್ನು ಸೆರೆಹಿಡಿದಿರುವ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ಸಂಕಲನವು ಕೂಡ ಪೂರಕವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ವಿಜಯ್ ಕೃಷ್ಣ ಪಾತ್ರಕ್ಕೆ ಪೂರಕವಾಗಿ ನೈಜವಾಗಿ ತನ್ನ ಗತ್ತು , ಗಾಂಭೀರ್ಯದಲ್ಲೇ ಗಮನ ಸೆಳೆಯುತ್ತಾರೆ.
ಅದೇ ರೀತಿ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಕೂಡ ಬಹಳ ನ್ಯಾಚುರಲ್ ಆಗಿ ಜೀವ ತುಂಬಿ ಅಭಿನಯಿಸಿದ್ದಾರೆ. ಮುಂದೆ ಮತ್ತಷ್ಟು ಉತ್ತಮ ಅವಕಾಶ ಸಿಗುವ ಸಾಧ್ಯತೆಯಿದೆ. ವಿಶೇಷ ಪಾತ್ರಗಳಲ್ಲಿ ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ , ಅರುಣ್ ಸಾಗರ್ , ಸುಧಾ ಬೆಳವಾಡಿ , ಪಿ.ಡಿ .ಸತೀಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಚಿತ್ರವಾಗಿದ್ದು , ಒಮ್ಮೆ ನೋಡುವಂತಿದೆ.