“ಸೀಸ್ ಕಡ್ಡಿ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಿರ್ದೇಶಕ ಶ್ರೀನಿ
ಸ್ಯಾಂಡಲ್ವುಡ್ ಗೆ ಯುವ ಪ್ರತಿಭೆಗಳ ಬಳಗ ವಿಭಿನ್ನ ಪ್ರಯತ್ನದ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ನಿಟ್ಟಿನಲ್ಲಿ ಬರ್ತಿದ್ದಾರೆ. ಆ ಸಾಲಿನಲ್ಲಿ ಯುವ ನಿರ್ದೇಶಕ
ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಸೀಸ್ ಕಡ್ಡಿ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು , ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐವರು ಪ್ರತಿಭಾನ್ವಿತ ನಿರ್ದೇಶಕರಾದ ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಆಗಮಿಸಿ ಟ್ರೈಲರ್ ಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತಾಡಿದ ನಿರ್ದೇಶಕ ಶ್ರೀನಿ , ಮಕ್ಕಳ ಮುಗ್ಧತೆಯನ್ನು ತಾಜಾತನದಿಂದ ಸೆರೆ ಹಿಡಿದು ದೃಶ್ಯವಾಗಿಸೋದೇ ನಿರ್ದೇಶನದ ನಿಜವಾದ ಸವಾಲು. ಅದನ್ನು ಈ ಚಿತ್ರದಲ್ಲಿ ಸಮರ್ಥವಾಗಿ ಮಾಡಲಾಗಿದೆ. ಇಂತಹ ಚಿತ್ರ ಕಮರ್ಶಿಯಲ್ಲಾಗಿಯೇ ಗೆಲ್ಲಬೇಕು, ಪೆನ್ಸಿಲ್ ಆರ್ಟ್ ಡಿಸೈನ್ ನಲ್ಲಿ ಬಂದಿರುವ ಪೋಸ್ಟರ್ ಕಂಟೆಂಟ್ ತುಂಬಾ ಚೆನ್ನಾಗಿದೆ.
ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಇತ್ತೀಚೆಗಷ್ಟೇ ತೆರೆಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರೋ ಪಪ್ಪಿ ಚಿತ್ರದ ನಿರ್ದೇಶಕ ಆಯುಶ್ ಮಲ್ಲಿ ಮಾತನಾಡಿ, ತಮ್ಮ ಸಿನಿಮಾಕ್ಕೆ ನೀಡಿದಂಥಾದ್ದೇ ಪ್ರೋತ್ಸಾಹವನ್ನು ಸೀಸ್ ಕಡ್ಡಿ ಚಿತ್ರಕ್ಕೂ ಕೊಡುವಂತೆ ಅರಿಕೆ ಮಾಡಿಕೊಂಡರು. ಡೊಳ್ಳು ಚಿತ್ರದ ನಿರ್ದೇಶಕ ಸಾಗರ್ ಪುರಾಣಿ ಮಾತನಾಡುತ್ತಾ ಇದು ನಮ್ಮದೇ ತಂಡದ ಚಿತ್ರ ಅನ್ಸುತ್ತೆ. ಕ್ರಿಕೆಟ್ ಟೀಮ್ ನಿಂದ ಪರಿಚಯವಾಗಿದ್ದ ಗೆಳೆಯರಿಗಾಗಿ ನಾನು ಬಂದೆ ಚಿತ್ರ ಸಕ್ಸಸ್ ಆಗಲಿ ಎಂದರು. ಹಾಗೆಯೇ ನಿರ್ದೇಶಕ ಮಹೇಶ್ ಗೌಡ , ನಟ ಚೆಲುವರಾಜ್ ತಂಡಕ್ಕೆ ಶುಭವನ್ನು ಹಾರೈಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ರತನ್ ಗಂಗಾಧರ್ ಮಾತನಾಡುತ್ತಾ ನಾನು ಈ ಹಿಂದೆ ಅಂಶು ಅನ್ನೋ ಚಿತ್ರ ಮಾಡಿದ್ದೆ , ಇದು ನನ್ನ ಎರಡನೇ ಚಿತ್ರ. ನಾನು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದು , ಈ ಸಿನಿಮಾ ಕಥೆಗೆ ಸ್ಫೂರ್ತಿಯಾದ ವಿಚಾರವನ್ನು ತೆರೆದಿಟ್ಟಿದ್ದಾರೆ. ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್ ನ ನಾನಾ ಸೂಕ್ಷ್ಮಗಳ ವಿವರವಿತ್ತು.
ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವ ಅಚ್ಚರಿಯ ಸಾರವೇ ಸೀಸ್ ಕಡ್ಡಿಯ ಆತ್ಮವೆಂದರು. ಈ ಚಿತ್ರದಲ್ಲಿ ಬೇರೆ ಬೇರೆ ಬಗೆಯ ಕನ್ನಡ ಭಾಷಾ ಶೈಲಿಯೂ ಮಿಳಿತವಾಗಿದೆ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ಉತ್ತರ ಕರ್ನಾಟಕ , ತುಮಕೂರು ಭಾಗದ ಹಳ್ಳಿಗಾಡಿನ ಶೈಲಿಯ ಕನ್ನಡ ಹಾಗೂ ಮೈಸೂರು ಸೀಮೆಯ ಕನ್ನಡದ ಬಳಕೆ ಕೂಡಾ ಪ್ರೇಕ್ಷಕರಿಗೆ ಹೊಸಾ ಅನುಭೂತಿ ನೀಡಲಿದೆ ಎಂಬ ನಂಬಿಕೆ ನಿರ್ದೇಶಕರ ಮಾತುಗಳಲ್ಲಿ ಧ್ವನಿಸುತ್ತಿತ್ತು.
ಈ ಚಿತ್ರವನ್ನು ಸಿಂಕ್ ಸೌಂಡ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಚಿತ್ರ ಮೂಡಿ ಬಂದಿತ್ತು, ಜೂನ್ 6 ರಂದು ರಾಜ್ಯಾದ್ಯಂತ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.
ಗ್ರಹಣ ಪ್ರೊಡಕ್ಷನ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲ್ಯ ಸ್ನೇಹಿತರಾದ ಇವರೆಲ್ಲರೂ ಒಟ್ಟಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದರ ಹಿಂದೆ ಸಿನಿಮಾ ವ್ಯಾಮೋಹವಿದೆ. ಐದು ಕಥೆ, ಐದು ಕನ್ನಡದ ಉಪಭಾಷೆ ಮತ್ತು ಐದು ಪ್ರದೇಶಗಳ ಸಮಾಗಮದೊಂದಿಗೆ ಇಲ್ಲಿನ ಕಥೆ ಗರಿಬಿಚ್ಚಿಕೊಂಡಿದೆಯಂತೆ.
ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ. ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸವಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣವಿದೆ. ಒಟ್ಟಾರೆ ಒಂದು ಉತ್ಸಾಹಿ ಯುವಕರ ತಂಡ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರ ಜೂನ್ 6ರಂದು ತೆರೆ ಮೇಲೆ ಬರಲು ಸಕಲ ಸನ್ನದ್ಧವಾಗಿದೆ.