ಕಲ್ಬಟ್ಟಿ ದಂಧೆಯ ನಡುವೆ ಜಾತಿ , ಪ್ರೀತಿ , ದ್ವೇಷದ ಸಮರ “ಧರ್ಮಂ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಧರ್ಮಂ
ನಿರ್ದೇಶಕ : ನಾಗಮುಖ
ನಿರ್ಮಾಪಕ : ಎಸ್.ಕೆ. ರಾಮಕೃಷ್ಣ
ಸಂಗೀತ : ಸರ್ವಣ
ಛಾಯಾಗ್ರಹಣ : ನಾಗಶೆಟ್ಟಿ
ತಾರಾಗಣ : ಸಾಯಿ ಶಶಿಕುಮಾರ್, ವಿರಾಣಿಕ ಶೆಟ್ಟಿ , ಭೀಷ್ಮ ರಾಮಯ್ಯ, ಅಶೋಕ್ ಹೆಗಡೆ, ಡಾ.ಎಸ್. ಕೆ. ರಾಮಕೃಷ್ಣ ಹಾಗೂ ಮುಂತಾದವರು…
ದಶಕಗಳಿಂದಲೂ ಬಲಿಷ್ಠರು ಅಸಹಾಯಕರು ಮತ್ತು ದುರ್ಬಲರನ್ನ ತಮ್ಮ ಕೈ ಗೊಂಬೆಯಂತೆ ಆಡಿಸುತ್ತಾ ಅಧರ್ಮದ ಬದುಕನ್ನ ಸಾಗಿಸಿರುವ ಬಹಳಷ್ಟು ನಿದರ್ಶನ ಕೇಳಿದ್ದೇವೆ. ಅಂತದ್ದೇ ಮಲೆನಾಡು ಹಾಗೂ ಹಾವೇರಿ ಭಾಗದ ದಟ್ಟ ಅರಣ್ಯದ ಪ್ರಾಂತ್ಯದ ಬಡ ದಲಿತ ಜನರ ಬದುಕು ಬವಣೆ, ದುಷ್ಟರ ಕಳಬಟ್ಟಿ ಸಾರಾಯಿ ದಂದೆಯ ನಡುವೆ ಪೊಲೀಸ್, ರಾಜಕೀಯ , ಕ್ರೂರಿಗಳ ಸಂಘರ್ಷಗಳ ಸುತ್ತ ಮುದ್ದಾದ
ಪ್ರೀತಿಯ ಬೆಸುಗೆಯನ್ನ 80ರ ಕಾಲಘಟ್ಟದಲ್ಲಿ ನೈಜಕ್ಕೆ ಪೂರಕವಾಗಿ ವಿಭಿನ್ನ ಕಥಾನಕದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಧರ್ಮಂ”. ತನ್ನ ಕಳಬಟ್ಟಿ ಸಾರಾಯಿ ದಂಧೆಯ ಮೂಲಕ ಭದ್ರ ಕೋಟೆಯನ್ನ ಹಾಕಿಕೊಂಡಿರುವ ವ್ಯಕ್ತಿ ದೊರೆಸ್ವಾಮಿ (ಎಸ್ .ಕೆ. ರಾಮಕೃಷ್ಣ) ಇನ್ನು ಅವನ ತಮ್ಮ ಮಾರ (ಭೀಷ್ಮ ರಾಮಯ್ಯ) ಈ ದಂಧೆಯ ರೂವಾರಿ. ಜೀವನೋಪಾಯಕ್ಕಾಗಿ ಹೇಳಿದಂತೆ ಕೆಲಸ ಮಾಡುವ ಮಾದಯ್ಯ ಹಾಗೂ ಆತನ ಕುಲಬಾಂಧವರು.
ಇವರೊಟ್ಟಿಗೆ ಆತನ ತಂಗಿಯ ಮಗ ಕರಿಮುತ್ತು (ಸಾಯಿ ಶಶಿಕುಮಾರ್) ಕೂಡ ಈ ಸಾರಾಯಿ ಬೇಯಿಸುವ ಕಾಯಕದಲ್ಲಿ ಕೈಜೋಡಿಸುತ್ತಾನೆ. ಇನ್ನು ಮಾದಯ್ಯನ ಮಗಳು ನೀಲಾ (ವಿರಾನಿಕ ಶೆಟ್ಟಿ) ಳನ್ನ ಕರಿಮುತ್ತ ಗೆ ಮದುವೆ ಮಾಡಲು ನಿರ್ಧರಿಸುತ್ತಾನೆ. ಅದರಂತೆ ಜೋಡಿಗಳ ಒಪ್ಪಿಗೆಯು ಇರುತ್ತದೆ. ಇದರ ನಡುವೆ ಪೊಲೀಸ್ ಇನ್ಸ್ಪೆಕ್ಟರ್ ನಾಗಮಣಿಗೆ ಈ ದಂಧೆ ಕೋರರನ್ನ ಸಾಕ್ಷಿ ಸಮೇತ ಹಿಡಿಯಲು ಹರಸಾಹಸ ಮಾಡುತ್ತಿರುತ್ತಾರೆ.
ಲಕ್ಷಗಟ್ಟಲೆ ಹಣ ಮಾಡುವ ಈ ದಂಧೆಗೆ ರಾಜಕೀಯ ಮುಖಂಡ ಸರ್ದಾರ್ ಮಾಣಿಕ್ ಬಾಯ್ (ಅಶೋಕ್ ಹೆಗಡೆ) ಎಂಟ್ರಿ. ಮಾತುಕತೆ , ಸಂಚುಗಳ ಮೂಲಕ ದಂಧೆಯ ಸುಳಿಯಲ್ಲಿ ಪೊಲೀಸ್ ಕೈಗೆ ಕರಿಮುತ್ತು ಸಿಕ್ಕಿ , ಶಿಕ್ಷೆಯ ಮೂಲಕ ಹತ್ತು ವರ್ಷ ಜೈಲು ವಾಸಕ್ಕೆ ಗುರಿಯಾಗುತ್ತಾನೆ. ಒಂದೆಡೆ ಈ ಶಿಕ್ಷೆಗೆ ಕಾಣದ ವ್ಯಕ್ತಿಗಳ ಕೈವಾಡ ಒಂದೆಡೆಯಾದರೆ… ಮತ್ತೊಂದೆಡೆ ಆತನನ್ನ ಬೇಲ್ ಮೂಲಕ ಬಿಡಿಸಿ ಮತ್ತೊಂದು ರಣತಂತ್ರ ಮಾಡುವ ವ್ಯಕ್ತಿ…
ಇದರ ನಡುವೆ ಸಿಲುಕುವ ಕರಿಮುತ್ತು… ದುಷ್ಟರ ದಬ್ಬಾಳಕ್ಕೆ… ಅಮಾಯಕರ ಒದ್ದಾಟ… ಪ್ರೀತಿಯ ಪರದಾಟದ ನಡುವೆ ಯಾವುದು ಸರಿ , ತಪ್ಪು ,
ಜಾತಿ, ಧರ್ಮದ ನಡುವೆ ಕಲ್ಬಟ್ಟಿಯ ರಣತಂತ್ರದ ಹಿನ್ನೆಲೆಯಲ್ಲಿ ಏನೆಲ್ಲ ನಡೆಯುತ್ತೆ ಎಂಬುದನ್ನು ನೋಡುವುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.
ಇನ್ನು ನಿರ್ದೇಶಕ ನಾಗಮುಖ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತ್ತಿದೆ. ನ್ಯಾಯ , ನೀತಿ , ಧರ್ಮಕ್ಕೆ ಬೆಲೆ ಇಲ್ಲ ಎನ್ನುವುದರ ಜೊತೆಗೆ ಜಾತಿಯಲ್ಲಿ ಹಿಂದುಳಿಯುದಲ್ಲ , ಜೀವನದಲ್ಲಿ ಮುಂದೆ ಬರದಂತೆ ನೋಡಿಕೊಳ್ಳಬೇಕು
ಎಂಬ ವಿಚಾರದ ಜೊತೆಗೆ ಕಳ್ಳಬಟ್ಟಿ ಸಾರಾಯಿ ದಂಧೆಯ ಸುಳಿಯಲ್ಲಿ ನಡೆಯುವಂತಹ ದರ್ಪ , ದೌರ್ಜನ್ಯ ಹಿಂದುಳಿದವರ ನೋವು , ಸಂಕಟದ ನಡುವೆ ಪ್ರೀತಿಯ ತಳಮಳವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ಎಷ್ಟರಮಟ್ಟಿಗೆ ಸೂಕ್ತ ಎನಿಸುತ್ತದೆ.
ನಿಧಾನ ಗತಿಯ ಬಿಲ್ಡಪ್ ಜೊತೆಗೆ ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಆದರೂ ಒಂದು ಉತ್ತಮ ಪ್ರಯತ್ನವಾಗಿ ಮೂಡಿಬಂದಿದೆ. ಇಡೀ ಚಿತ್ರದ ಹೈಲೈಟ್ ಎಂದರೆ ಛಾಯಾಗ್ರಾಹಕರ ಕೈಚಳಕ ಹಾಗೂ ಸಂಗೀತ ಜೊತೆ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ.
ಇನ್ನು ಈ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು , ಹೊಸ ತಂಡಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಚಿತ್ರದ ಪ್ರಮುಖ ಖಳನಾಯಕನ ಪಾತ್ರದಲ್ಲಿ ಡಾ. ಎಸ್.ಕೆ. ರಾಮಕೃಷ್ಣ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಈ ಚಿತ್ರದ ನಾಯಕನಾಗಿ ಅಭಿನಯಿಸಿರುವಂತಹ ಸಾಯಿ ಶಶಿಕುಮಾರ್ ಪಾತ್ರಕ್ಕೆ ಸೂಕ್ತವಾದ ಪ್ರತಿಭೆಯಾಗಿ ಹೊರಹೊಮ್ಮಿದ್ದು , ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಅದೇ ರೀತಿ ನಾಯಕಿಯಾಗಿ ಅಭಿನಯಿಸಿರುವ ವಿರಾಣಿಕ ಶೆಟ್ಟಿಯು ಕೂಡ ಪಾತ್ರಕ್ಕೆ ಜೀವ ತುಂಬಿ , ತಮ್ಮ ನಟನಾ ಸಾಮರ್ಥ್ಯವನ್ನು ನೀಡಿದ್ದಾರೆ. ಖಡಕ್ ಲುಕ್ ನಲ್ಲಿ ಭೀಷ್ಮ ರಾಮಯ್ಯ , ಸೈಲೆಂಟ್ ವಿಲ್ಲನ್ ಆಗಿ ಅಶೋಕ್ ಹೆಗಡೆ ಸೇರಿದಂತೆ ಚಿತ್ರದ ಎಲ್ಲಾ ಪಾತ್ರಧಾರಿಗಳು ಕೂಡ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಒಂದು ಬೇರೆಯದೆ ಶೇಡಿನ ಚಿತ್ರ ನೋಡಬಯಸುವವರೆಗೆ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.