Cini NewsSandalwood

ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ “ಡಿಟೆಕ್ಟಿವ್‌ ಗಜವದನ” ಚಿತ್ರಕ್ಕೆ ಚಾಲನೆ

Spread the love

ಈ ಹಿಂದೆ ” ಮಂಡ್ಯದ ಹುಡುಗರು”, “ಗರ್ನಲ್” ಚಿತ್ರಗಳನ್ನು ನಿರ್ದೇಶಿಸಿದ್ದ ಜೆ‌.ಜೆ.ಶ್ರೀನಿವಾಸ್ ನಿರ್ದೇಶಿಸಿ ಹಾಗೂ ನಿರ್ಮಾಣವನ್ನು ಮಾಡುತ್ತಿರುವ “ಡಿಟೆಕ್ಟಿವ್‌ ಗಜವದನ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಇಟ್ಟಮಡುವಿನ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಸಕ್ರಿಯರಾಗಿರುವ ಬಸು ಕುಮಾರ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

ಇದು ನನ್ನ ನಿರ್ದೇಶನದ ಮೂರನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಜೆ‌.ಜೆ ಶ್ರೀನಿವಾಸ್, “ಡಿಟೆಕ್ಟಿವ್‌ ಗಜವದನ” ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಹೆಚ್ಚು ಚಿತ್ರೀಕರಣ ನಡೆಯಲಿದೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆಯಿದೆ ಎಂದರು.

ನಾನು “ಡಿಟೆಕ್ಟಿವ್‌ ಗಜವದನ” ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ‌. ನಾನು ಚಿತ್ರದಲ್ಲಿ “ಡಿಟೆಕ್ಟಿವ್‌” ಆಗಿರುವುದಿಲ್ಲ. ನನ್ನ ಕುಟುಂಬ ತೊಂದರೆಯಲ್ಲಿ ಸಿಲುಕಿದಾಗ “ಡಿಟೆಕ್ಟಿವ್‌” ಆಗುತ್ತೇನೆ. ಕಥೆಯೇ ಚಿತ್ರದ ನಿಜವಾದ ಹೀರೋ ಎನ್ನಬಹುದು. ಚಂದನ ರಾಘವೇಂದ್ರ, ಎಂ.ಎಸ್ ಉಮೇಶ್, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ವಿಕ್ರಮ್, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎ.ಟಿ.ಸಂಗೀತ ನಿರ್ದೇಶನ, ಶ್ಯಾಮ್ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನ‌ವಿರುವ ಈ ಚಿತ್ರಕ್ಕೆ ನಾನು ಸೇರಿದಂತೆ ಸಾಕಷ್ಟು ನಿರ್ಮಾಪಕರು ಕೈ ಜೋಡಿಸಿದ್ದಾರೆ. ಜಗದೀಶ್ ನಿಡವಳ್ಳಿ ಕಥೆ ಬರೆದಿದ್ದಾರೆ ಎಂದು ನಟ ಬಸು ಕುಮಾರ್ ತಿಳಿಸಿದರು.

ಶ್ರೀನಿವಾಸ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟಿ ಚಂದನ ರಾಘವೇಂದ್ರ. ಕಲಾವಿದರಾದ ಎಂ.ಎಸ್.ಉಮೇಶ್, ವಿಜಯ್ ಚೆಂಡೂರ್, ವಿಕ್ರಮ್ ಹಾಗೂ ಸಹ ನಿರ್ಮಾಪಕ ರಾಘವೇಂದ್ರ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕರಾದ ನಾಗೇಶ್ ಕುಮಾರ್ ಹಾಗೂ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು.

Visited 1 times, 1 visit(s) today
error: Content is protected !!