Cini NewsSandalwood

ಖಾನ್ಸರ್ ಕೋಟೆಯಲ್ಲಿ “ಸಲಾರ್” ರಕ್ತದೋಕುಳಿ (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ಸಲಾರ್
ನಿರ್ದೇಶಕ : ಪ್ರಶಾಂತ್ ನೀಲ್
ನಿರ್ಮಾಪಕ : ವಿಜಯ್ ಕಿರಗಂದೂರು
ಸಂಗೀತ : ರವಿ ಬಸ್ರೂರ್
ಛಾಯಾಗ್ರಹಕ : ಭುವನ್ ಗೌಡ
ತಾರಾಗಣ : ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ , ಶೃತಿ ಹಾಸನ್ , ಜಗಪತಿ ಬಾಬು, ದೇವರಾಜ್ , ಪ್ರಮೋದ್ , ಬಾಬ್ಬಿ ಸಿಂಹ, ಟಿನು ಆನಂದ್, ಈಸ್ವರಿ ರಾವ್, ಶ್ರಿಯಾ ರೆಡ್ಡಿ, ರವಿ ಭಟ್, ರಾಮಚಂದ್ರ ರಾಜು ಹಾಗೂ ಮುಂತಾದವರು…

 

ಸಾವಿರಾರು ವರ್ಷಗಳಿಂದಲೂ ಈ ಭೂಮಂಡಲವನ್ನು ಹಲವಾರು ರಾಜರು , ದೈತ್ಯ ವ್ಯಕ್ತಿಗಳು , ಕ್ರೂರ ದೊರೆಗಳು ಅಳುತ್ತಾನೆ ಬಂದಿದ್ದಾರೆ. ಅಂತದ್ದೇ ಕೆಲವು ವಂಶದ ಕುಡಿಗಳು ಅಂದಿನಿಂದ ಇಂದಿನವರೆಗೂ ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡು, ಯಾವ ಕಾನೂನಿಗೂ ಸಿಲುಕದೆ ಹೇಗೆಲ್ಲಾ ಆರ್ಭಟಿಸುತ್ತಾ ಮೆರೆದಿದ್ದಾರೆ ಎಂಬುದನ್ನು ಹೇಳುವುದರ ಜೊತೆಗೆ ತಾಯಿ ಮಗನ ಬಾಂಧವ್ಯ , ಗೆಳೆತನದ ಸ್ನೇಹ , ಪ್ರೀತಿ. ಕ್ರೂರ ವ್ಯಕ್ತಿಗಳ ಗುಂಪು , ಘರ್ಷಣೆ.

ಹೆಣ್ಣು ಮಕ್ಕಳ ಆಕ್ರಂದನ, ನೊಂದವರ ಕಷ್ಟ , ದೊರೆ ಪಟ್ಟಕ್ಕೆ ದ್ವೇಷ , ಗುದ್ದಾಟ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ರಕ್ತಪಾತದ ಹೊಳೆಯನ್ನೇ ಹರಿಸಿದಂತೆ ಆರ್ಭಟಿಸಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ ಸಲಾರ್. ಬಾಲ್ಯದ ಗೆಳೆಯರಾದ ದೇವ (ಪ್ರಭಾಸ್) ಹಾಗೂ ವರದರಾಜ (ಪೃಥ್ವಿರಾಜ್) ಜೀವದ ಗೆಳೆಯರು. ವರದನಿಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಮುಂದಾಗುವ ಗೆಳೆಯ ದೇವ. ತಾಯಿ ಮಗನ ಕಾಣದ ಸತ್ಯದ ಕರಾಳ ಬದುಕಿಗೆ ಮತ್ತೊಬ್ಬ ಮಗನಾಗಿ ನಿಲ್ಲುವವನೇ ವರದ.

ಇನ್ನು ಖಾನ್ಸರ್ ಪ್ರಾಂತ್ಯದ ಕರ್ತ ರಾಜ್ಮನಾರ್ ( ಜಗಪತಿ ಬಾಬು) ಅವರ ಪೂರ್ವಿಕರು ನಡೆಸಿಕೊಂಡು ಬಂದ ಕ್ರೌರ್ಯದ ಹಾದಿಯಲ್ಲೇ ಆರ್ಭಟಿಸುತ್ತಾ ತನ್ನ ಸಾಮ್ರಾಜ್ಯವನ್ನು ಹಲವು ಭಾಗಗಳಾಗಿ ಮಾಡಿ ಅದಕ್ಕೆ ಕೆಲವರನ್ನ ಅಧಿಪತಿಯಾಗಿ ನೇಮಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ದಿನ ಕಳೆದಂತೆ ಈ ಕರ್ತನ ಮೊದಲ ಮಕ್ಕಳು ಸೇರಿದಂತೆ ಹಲವಾರು ದೊರೆ ಪಟ್ಟಕ್ಕಾಗಿ ಸಂಚನ ರೂಪಿಸುತ್ತಿದ್ದರೆ , ಅಕ್ರಮ ಸಂಬಂಧದ ಪುತ್ರ ವರದ ರಾಜಮನ್ನಾರ್ ನನ್ನ ಸಾಮ್ರಾಜ್ಯಕ್ಕೆ ಅಧಿಪತಿ ಮಾಡುವ ಆಲೋಚನೆ ಕರ್ತ ಹೊಂದಿರುತ್ತಾನೆ.

ಇದರ ಹಿಂದೆ ಹಲವು ಉಪಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಮತ್ತೊಂದು ಒಳಸಂಚಿನೊಳಗೆ ನಾಯಕಿ ಆದ್ಯ (ಶ್ರುತಿ ಹಾಸನ್) ಸಿಲುಕಿಕೊಳ್ಳುತ್ತಾಳೆ. ಯಾರು ಯಾರನ್ನು ಹುಡುಕುತ್ತಿದ್ದಾರೆ… ಯಾವ ಕಾರಣಕ್ಕಾಗಿ… ಖಾನ್ಸರ್ ಯಾರ ವಶ… ಸಲಾರ್ ಅಂದರೇನು…
ಎಲ್ಲಾ ಪ್ರಶ್ನೆಗೆ ಉತ್ತರಕ್ಕಾಗಿ ಚಿತ್ರ ನೋಡಲೇಬೇಕು.

ನಿರ್ಮಾಪಕ ವಿಜಯ್ ಕಿರಗಂದೂರು ಒಂದು ಅದ್ದೂರಿ ವೆಚ್ಚದ ಚಿತ್ರವನ್ನು ತೆರೆಯ ಮೇಲೆ ತಂದಿರುವುದು ಎದ್ದು ಕಾಣುತ್ತದೆ. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಎಂದಿನಂತೆ ತಮ್ಮ ಚಿತ್ರಕಥೆಯ ಶೈಲಿ ಹಿಡಿತವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಭೂಪಟದಲ್ಲಿ ಇಲ್ಲದಂತಹ ಪ್ರಾಂತ್ಯಕ್ಕೆ ಜೀವ ಕೊಟ್ಟು ಒಂದು ಸಾಮ್ರಾಜ್ಯದ ಅಟ್ಟಹಾಸದ ರಕ್ತದೊಕುಳಿಯನ್ನು ಹರಿಸಿದ್ದಾರೆ. ಕೆಲವೊಮ್ಮೆ ಉಗ್ರಂ ಹಾಗೂ ಕೆಜಿಎಫ್ ಚಿತ್ರ ನೆನಪಿಸುತ್ತದೆ. ದೊಡ್ಡಮ್ಮನಂತಹ ಸಿಡಿಮದ್ದುಗಳು ಹಾಗೂ ಆಯುಧಗಳ ಅಬ್ಬರಕ್ಕೆ ಸತ್ತವರ ಸಂಖ್ಯೆ ಲೆಕ್ಕಸಿಗದಷ್ಟಿದೆ. ಚಿತ್ರದ ಅವಧಿ ಹೆಚ್ಚನಿಸಿದ್ದು, ನೋಡುವುದಕ್ಕೆ ಕೊಂಚ ಬೋರ್ ಎನಿಸುತ್ತದೆ. ಇದರ ಜೊತೆಗೆ ಮುಂದುವರೆದ ಭಾಗಕ್ಕೂ ದಾರಿ ಮಾಡಿದ್ದಾರೆ.

ಆದರೆ ಛಾಯಾಗ್ರಹಕ ಭುವನ್ ಗೌಡ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ರವಿ ಬಸ್ರೂರು ಸಂಗೀತದ ಮೋಡಿಯ ಜೊತೆ ಹಿನ್ನೆಲೆ ಸಂಗೀತ ಅಬ್ಬರಿಸಿದೆ. ಉಳಿದಂತೆ ಸೆಟ್ ಹಾಗೂ ತಾಂತ್ರಿಕ ವರ್ಗದವರ ಕೆಲಸ ಅಚ್ಚುಕಟ್ಟಾಗಿ ಕಂಡುಬಂದಿದೆ.ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ನಟ ಪ್ರಭಾಸ್ ಮಿಂಚಿದ್ದಾರೆ. ಆಕ್ಷನ್ ಗೋ ಸೈ… ಸೆಂಟಿಮೆಂಟಿಗೂ ಜೈ… ಎನ್ನುವಂತೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಇನ್ನು ಮತ್ತೊಬ್ಬ ನಟ ಪೃಥ್ವಿ ರಾಜ್ ಸುಕುಮಾರನ್ ಕೂಡ ಮನೋಗ್ನವಾಗಿ ತಮ್ಮ ಗತ್ತನ್ನ ಮೆರೆದಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಶ್ರುತಿ ಹಾಸನ್ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಜಗಪತಿ ಬಾಬು , ಬಾಬ್ಬಿ ಸಿಂಹ, ಟೀನು ಆನಂದ್ , ಈಸ್ವರಿ ರಾವ್, ಶ್ರಿಯಾ ರೆಡ್ಡಿ ಸೇರಿದಂತೆ ಕನ್ನಡದ ಕಲಾವಿದರಾದ ಹಿರಿಯ ನಟ ದೇವರಾಜ್ , ಪ್ರಮೋದ್, ರಾಮಚಂದ್ರ ರಾಜು ,ರವಿ ಭಟ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಆಕ್ಷನ್ ಪ್ರಿಯರಿಗೆ ಈ ಸಲಾರ್ ಚಿತ್ರ ಬಹುಬೇಗ ಇಷ್ಟವಾಗಲಿದ್ದು , ಎಲ್ಲರೂ ಒಮ್ಮೆ ನೋಡುವಂತ ಚಿತ್ರವಾಗಿ ಹೊರಬಂದಿದೆ

error: Content is protected !!