Cini NewsTV Serial

ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ “ಶ್ರೀ ಗಂಧದ ಗುಡಿ”

ಕರ್ನಾಟಕದಲ್ಲಿ ಸೌಂದರ್ಯವಿದೆ, ಸೌಕರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔದಾರ್ಯವಿದೆ.
ಕರುನಾಡು ಎಲ್ಲರನ್ನ ಪ್ರೀತಿಯಿಂದ ಸ್ವೀಕಾರ ಮಾಡುತ್ತೆ. ಕರುನಾಡ ತಾಯಿ ಎಲ್ಲರನ್ನ ತನ್ನ ಮಕ್ಕಳಂತೆ ನೋಡ್ತಾಳೆ, ಕಾಪಾಡ್ತಾಳೆ. ಕರುಳ ಕುಡಿಗಳ ಸುಖಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳೋ ಮಿಡಿವ ತಾಯಿ ಅವಳು. ಅವಳು ಪ್ರೀತಿಯ ಕುಡಿ, ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ.
——
‘ಶ್ರೀ ಗಂಧದ ಗುಡಿ’ ನಮ್ಮ ಕನ್ನಡ ಮಣ್ಣಿನ ಸುಗಂಧ ಹೊಂದಿದ ಅಂದದ ಚೆಂದದ ಪದ. ಅಪ್ಪಟ ಕನ್ನಡತನವನ್ನ ಹೊರ ಹೊಮ್ಮಿಸೋ ಪದ. ಇಂತಹಅಪ್ಪಟ ಕನ್ನಡತನದಿಂದ ಮನೆ ಮಾತಾಗಿರೋದು ಕಲರ್ಸ್ ಕನ್ನಡ ಚಾನೆಲ್. ಮನ ಮುಟ್ಟೋ ಕತೆಗಳನ್ನ ಕನ್ನಡಿಗರ ಮನೆ ಮನಗಳಿಗೆ ಮುಟ್ಟಿಸ್ತೀರೋ ಕಲರ್ಸ್ ಕನ್ನಡ ಚಾನೆಲ್ ಇದೀಗ ‘ಶ್ರೀ ಗಂಧದ ಗುಡಿ, ಪ್ರೀತಿಯ ಕುಡಿ’ ಅನ್ನೋ ವಿನೂತನ ಧಾರಾವಾಹಿಯನ್ನ ಪ್ರೇಕ್ಷಕರಿಗೆ ತಲುಪಿಸ್ತಿದೆ. ‘ಶ್ರೀಗಂಧದ ಗುಡಿ’ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?” ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ.

ಅಪರೂಪದ ಕತೆ:
ನಟ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರೋ ಅಪ್ಪ ನಟರಾಜ ತನ್ನ ಮಕ್ಕಳಿಗೆ ಮುತ್ತುರಾಜ, ಸತ್ಯ ಹರಿಶ್ಚಂದ್ರ, ಕಂಠೀರವ, ಮಯೂರ ಎಂದು ಹೆಸರಿಟ್ಟಿದ್ದಾನೆ.
ಈ ನಾಲ್ಕು ಗಂಡು ಮಕ್ಕಳೋ ನಾಲ್ಕು ದಿಕ್ಕುಗಳು. ಒಬ್ಬೊಬ್ರದ್ದು ಒಂದೊಂದು ಹಾದಿ.
ತಂದೆ ನಟರಾಜ ಕುಡುಕ, ಗೊತ್ತು ಗುರಿಯಿಲ್ಲದ ಬೇಜವಾಬ್ದಾರಿಯ ಮನುಷ್ಯ. ಅವನು ಸಂಪಾದಿಸಿರೋದು ಕೆಟ್ಟ ಹೆಸರು ಮಾತ್ರ. ಅವನಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು. ಇಂಥ ಮನೆಗೆ ಯಾವ ಹೆಣ್ಣೂ ಬರೋಕೆ ಸಾಧ್ಯವಿಲ್ಲ, ಬಂದರೂ ಬದುಕೋಕೆ ಅಸಾಧ್ಯ ಅಂತ ಊರಿನ ಜನ ಮಾತಾಡ್ಕೋತಾರೆ.

ಈ ಮನೆಗೆ ಹುಡುಗಿಯೊಬ್ಬಳು ಬರ್ತಾಳೆ. ಅವಳು ಯಾಕೆ ಬರ್ತಾಳೆ?ಯಾವ ಕಾರಣಕ್ಕೆ? ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳೀತಾಳೆ? ಉಳಿದ ಮೇಲೆ ಯಾವ ಕಾರಣಕ್ಕಾಗಿ ಆ ಮನೆಯನ್ನ ಸರಿ ಮಾಡ್ತಾಳೆ? ಹೇಗೆ ಸರಿ ಮಾಡ್ತಾಳೆ?
ಅನ್ನೋ ಕತೆಯನ್ನ ಇದು ಹೇಳುತ್ತೆ.

ಒಂದು ಹೆಣ್ಣು ಮನೆಗೆ ಬಂದಾಗ ಅಲ್ಲಿ ಆ ಮನೆಗೆ ತಾಯಿ, ತಂಗಿ, ಅಕ್ಕ, ಅತ್ತಿಗೆ, ಸೊಸೆ, ಮಡದಿಯೊಬ್ಬಳು ಸಿಗ್ತಾಳೆ. ಅವಳು ಇಡೀ ಮನೆಯನ್ನ ಮಮತೆಯ ಮಡಿಲಿನಲ್ಲಿ ತೂಗಿಸಿಕೊಂಡು ಹೋಗ್ತಾಳೆ; ನಮ್ಮ ಕನ್ನಡ ತಾಯಿ ತನ್ನ ಮಕ್ಕಳನ್ನು ಸಲಹೋ ಹಾಗೆ.
‘ಶ್ರೀಗಂಧದ ಗುಡಿ’ ಗೆ ಬರುವ ‘ಪ್ರೀತಿಯ ಕುಡಿ’ -ಮಮತೆ, ಕರುಣೆಯ ಪ್ರತಿಬಿಂಬವಾಗಿ ಹೇಗೆಲ್ಲಾ ತನ್ನ ಮನೆಯ ಮಕ್ಕಳನ್ನು ಕಾಪಾಡ್ತಾಳೆ ಅನ್ನೋದನ್ನ ನೋಡಿ, ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8 ಕ್ಕೆ ಕಲರ್ಸ್ ಕನ್ನಡದಲ್ಲಿ.

‘ಕಥಾ ಕ್ರಿಯೇಷನ್ಸ್ ‘ ಬ್ಯಾನರ್ ನಲ್ಲಿ ಪರೀಕ್ಷಿತ್ ಎಂ ಎಸ್ – ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು-ಪ್ರಕಾಶ್ ಮುಚ್ಚಳಗುಡ್ಡ. ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.

error: Content is protected !!