ದುಷ್ಟರ ಸಂಹಾರಕ್ಕೆ ನಿಲ್ಲುವ ಪೃಥ್ವಿ… “ಕ್ಯಾಪಿಟಲ್ ಸಿಟಿ” (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಕ್ಯಾಪಿಟಲ್ ಸಿಟಿ
ನಿರ್ದೇಶಕ : ಅನಂತರಾಜು
ನಿರ್ಮಾಣ : ಇನಿಫಿನಿಟಿ ಕ್ರಿಯೇಷನ್ಸ್
ಸಂಗೀತ : ನಾಗ್
ಛಾಯಾಗ್ರಹಣ : ಪ್ರದೀಪ್
ತಾರಾಗಣ : ರಾಜೀವ್ ರೆಡ್ಡಿ , ಪ್ರೇರಣ , ಸುಮನ್, ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್. ಶ್ರೀಧರ್ ಹಾಗೂ ಮುಂತಾದವರು…
ಬೆಂಗಳೂರಿನಲ್ಲಿ ರೌಡಿಗಳ ಹಾವಳಿ , ದಂಧೆ ಕೋರರ ಸ್ಮಗಲಿಂಗ್ , ಮಾಫಿಯಾದ ಚಟುವಟಿಕೆಗಳಲ್ಲಿ ಅಂಡರ್ ವರ್ಲ್ಡ್ ಡಾನ್ಗಳ ಕೈವಾಡದ ಜೊತೆ ರಾಜಕೀಯ ಮತ್ತು ಕಳ್ಳ ಪೊಲೀಸ ಆಟ ನಡುವೆ ಜನಸಾಮಾನ್ಯರ ಬದುಕು ನಡೆಸುವುದೇ ಕಷ್ಟ. ದಿಕ್ಕು ದೆಸೆ ಇಲ್ಲದ ಮಕ್ಕಳನ್ನ ಸಾಕುವಂತಹ ನಿಷ್ಠಾವಂತ ವ್ಯಕ್ತಿ , ಕಷ್ಟಪಟ್ಟು ದುಡಿಯುವ ಜನಸಾಮಾನ್ಯರ ಮೇಲೆ ಮೀಟರ್ ಬಡ್ಡಿ ವ್ಯವಹಾರ ಮಾಡುವವರ ದರ್ಪಕ್ಕೆ ತಕ್ಕ ಶಾಸ್ತಿ ಮಾಡಲು ಬರುವವನೇ ಪೃಥ್ವಿ. ಇದೆಲ್ಲದರ ಹಿಂದೆ ಒಂದು ರೋಚಕ ಫ್ಲಾಶ್ ಬ್ಯಾಕ್ ಕೂಡ ಪ್ರಮುಖ ಕೇಂದ್ರ ಬಿಂದುವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕ್ಯಾಪಿಟಲ್ ಸಿಟಿ”.
ತನ್ನದೇ ಗ್ಯಾಂಗ್ ಕಟ್ಟಿಕೊಂಡು ಮೀಟರ್ ಬಡ್ಡಿ ವ್ಯಾಪಾರ ಮಾಡುವ ಧನ್ಪಾಲ್ (ರವಿ ಶಂಕರ್) ಅಂಡರ್ವರ್ಲ್ಡ್ ಡಾನ್ ಆಗಿ ಮೆರೆಯುವುದಕ್ಕೆ ತಮ್ಮ , ಬಂಟರ ಸಾಥ್ ಜೊತೆಗೆ ರಾಜಕೀಯ , ಪೊಲೀಸ್ ಅಧಿಕಾರಿಗಳ ಸಪೋರ್ಟ್ ಇರುತ್ತದೆ. ಇವರ ದೌರ್ಜನ್ಯಕ್ಕೆ ನಲುಗುವ ಜನರ ಬೆಂಬಲಕ್ಕೆ ಬರುವ ಪೃಥ್ವಿ (ರಾಜೀವ್ ರೆಡ್ಡಿ) ಧನ್ಪಾಲ್ ತಮ್ಮ ಸೇರಿದಂತೆ ಬಂಟರುಗಳನ್ನು ಬೇರೆ ಬೇರೆ ವೇಷ ಭೂಷಣಗಳನ್ನ ಬದಲಿಸಿಕೊಂಡು ಸದೆಬಡೆಯುತ್ತಾ ಬರುತ್ತಾನೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿ ಹಿರಿಯ ಪೊಲೀಸ್ ಅಧಿಕಾರಿ ಎಸಿಪಿ ದೇಶಪಾಂಡೆ (ಶರತ್ ಲೋಹಿತಾಶ್ವ) ಗೆ ಈ ಕೇಸ್ ನೀಡುವ ಕಮಿಷನರ್ , ಪ್ರಾಮಾಣಿಕ ಅಧಿಕಾರಿ ದೇಶಪಾಂಡೆಗೆ ರೌಡಿ ಧನ್ಪಾಲ್ ನನ್ನ ಮಟ್ಟ ಹಾಕುವುದೇ ಗುರಿ.
ಇದರ ನಡುವೆ ಬಿಸಿನೆಸ್ ಮ್ಯಾನ್ ಬಲವಂತ ರಾವ್ ಪುತ್ರಿ ಅನುರಾಧ (ಪ್ರೇರಣ) ಆಕಸ್ಮಿಕವಾಗಿ ಪೃಥ್ವಿಯನ್ನ ಪೋಲಿಸ್ ಅಧಿಕಾರಿಯಾಗಿ ನೋಡಿ ಇಷ್ಟ ಪಡುತ್ತಾಳೆ. ತಂದೆಯ ಮಮಕಾರ , ಪ್ರೀತಿಯಿಂದ ವಂಚಿತಳಾದ ಅನುರಾಧಾ ಬೇರೆ ಬೇರೆ ಸಂದರ್ಭದಲ್ಲಿ ಪೃಥ್ವಿಯನ್ನ ಭೇಟಿಯಾಗಿ ಮದುವೆಯಾಗಲು ಆಸೆ ಪಡುತ್ತಾಳೆ. ಆದರೆ ಪೃಥ್ವಿಗೆ ದುಷ್ಟರ ಸಂಹಾರವೇ ಗುರಿ , ಇನ್ನು ಧನ್ಪಾಲ್ ಗೆ ಬದ್ಧ ವೈರಿ ಜಯರಾಜ್ (ಸುಮನ್) ಮೇಲೆ ಅನುಮಾನ ಬಂದರು ಯಾರು ಎಂಬ ಪ್ರಶ್ನೆ ಕಾಡುತ್ತಾ ಇರುತ್ತದೆ.
ಅನಾಥಾಶ್ರಮದಲ್ಲಿ ಬೆಳೆದ ಪೃಥ್ವಿಗೆ ಅಲ್ಲಿನ ಜನರೇ ಜೀವ. ಈ ಒಡನಾಟದಲ್ಲಿ ಒಂದು ದೊಡ್ಡ ದುರಂತ ನಡೆಯುತ್ತದೆ. ಅದು ಪೃಥ್ವಿಯ ಮನಸ್ಸಿನಲ್ಲಿ ರೋಷ , ಕೋಪ ಹೆಚ್ಚಿಸುತ್ತದೆ. ಮುಂದೆ ನಡೆಯೋ ಒಂದಷ್ಟು ಘಟನೆಗಳು ಇದೆಲ್ಲದಕ್ಕೂ ಕೊಂಡಿಯಂತೆ ಬೆಸೆದುಕೊಂಡು ಕೊನೆಯ ಹಂತಕ್ಕೆ ತಲುಪುತ್ತದೆ. ಪೃಥ್ವಿಯ ಹಿನ್ನೆಲೆ , ನೋಡಿದ ದುರಂತ , ದುಷ್ಟರ ಸಂಹಾರ , ಪ್ರೀತಿಯ ಸೆಳೆತ , ಕ್ಲೈಮ್ಯಾಕ್ಸ್ ಉತ್ತರ ಏನು ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಆರ್. ಅನಂತರಾಜು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಹೊಸತನ ಇಲ್ಲದಿದ್ದರೂ ಚಿತ್ರಕಥೆ ಶೈಲಿ ಗಮನ ಸೆಳೆಯುವಂತಿದೆ. ರೌಡಿಗಳ ಅಟ್ಟಹಾಸ , ನೊಂದವರ ಪರದಾಟ , ಸಿಡಿದೆಳುವ ನಾಯಕ , ಪ್ರೀತಿಯ ತಳಮಳ ಹೀಗೆ ಕೆಲವು ಸನ್ನಿವೇಶಗಳು ಗಮನ ಸೆಳೆಯುವಂತಿದೆ. ಮಾಸ್ ಕಂಟೆಂಟ್ ನೊಂದಿಗೆ ಹಾಡುಗಳು , ಆಕ್ಷನ್ ಅಬ್ಬರಿಸಿದೆ. ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಾಣುತ್ತಿದೆ. ಹಾಡುಗಳು ಗಮನ ಸೆಳೆದಿದ್ದು , ಆಕ್ಷನ್ ಸನ್ನಿವೇಶಗಳು ಅಬ್ಬರಿಸಿದೆ. ಅದರಲ್ಲೂ ಕೇರಳ ಮೂಲದ ವಿಭಿನ್ನ ಶೈಲಿಯ ಫೈಟ್ ಆಕರ್ಷಿಸುತ್ತದೆ. ತಾಂತ್ರಿಕವಾಗಿ ತಂಡದ ಕೆಲಸ ಉತ್ತಮವಾಗಿದೆ. ಜಿಂದಗಿ ಮೂಲಕ ನಾಯಕನಾಗಿ ಎಂಟ್ರಿ ಪಡೆದ ರಾಜೀವ್ ರೆಡ್ಡಿ , ಈಗ ಕ್ಯಾಪಿಟಲ್ ಸಿಟಿಯಲ್ಲಿ ಅಬ್ಬರಿಸಲು ಪ್ರಯತ್ನ ಮಾಡಿದ್ದಾರೆ. ಆಕ್ಷನ್ ನಲ್ಲಿ ಮಿಂಚಿರುವ ರಾಜೀವ್ ನಟನೆಯಲ್ಲಿ ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ.
ಇನ್ನು ನಾಯಕಿ ಪ್ರೇರಣ ಬಹಳ ಜೋಶ್ ನಲ್ಲಿ ಅಭಿನಯಿಸಲು ಮುಂದಾದಂತೆ ಕಾಣುತ್ತಾರೆ. ಖಳನಾಯಕನಾಗಿ ರವಿಶಂಕರ್ ಎಂದಿನಂತೆ ಆರ್ಭಟಿಸಿದ್ದು , ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಕಲಾವಿದರಾದ ಸುಮನ್ , ಕೆ.ಎಸ್. ಶ್ರೀಧರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಲವ್ , ಆಕ್ಷನ್ , ರೌಡಿಸಂ, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಈ ಮಾಸ್ ಎಂಟರ್ಟೈನ್ಮೆಂಟ್ ಈ ಚಿತ್ರ ಒಮ್ಮೆ ನೋಡುವಂತಿದೆ.