Cini NewsSandalwood

ಏಪ್ರಿಲ್ 17 ಕ್ಕೆ ಭಕ್ತಿಪ್ರಧಾನ “ಸಂಕೀರ್ತನ” ಚಿತ್ರ ತೆರೆಗೆ

Spread the love

ಕೆ. ಪದ್ಮಕಲಾ ಗುಂಡೂರಾವ್ ಹಾಗು ಸ್ನೇಹಿತರು ನಿರ್ಮಾಣ ಮಾಡಿರುವ, ಡಿ.ಎಸ್ ಮಂಜುನಾಥ್(ಕಲಾ ಗಂಗೋತ್ರಿ ಮಂಜು) ನಿರ್ದೇಶಿಸಿರುವ ಹಾಗೂ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ “ಸಂಕೀರ್ತನ” ಚಿತ್ರದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ಸಂತರ ಹಾಗೂ ಹರಿದಾಸರ ಬಗೆಗಿನ ಕಥಾಹಂದರವಿದೆ. ಭಕ್ತಿಪ್ರಧಾನ ಈ ಚಿತ್ರ ಏಪ್ರಿಲ್ 17 ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ನೀಡಿದರು.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ. ಜೆ.ಎಂ ಪ್ರಹ್ಲಾದ್ ಮಾತನಾಡಿ, ಹದಿನೈದು ವರ್ಷದ ಹಿಂದೆ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಗಾಗಿ ಬರೆದಿದ್ದೆ. ಆ ಧಾರಾವಾಹಿ ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಆಗ ನನಗೆ ಜನರಿಗೆ ದಾಸ ಸಾಹಿತ್ಯದ ಬಗ್ಗೆ ಒಲವಿದೆ ಎನ್ನುವುದು ತಿಳಿಯಿತು. ದಾಸ ಸಾಹಿತ್ಯದ ಬಗ್ಗೆ ನಟಿ ಪದ್ಮ ಕಲಾ ಅವರಿಗೆ ಒಲವಿತ್ತು. ನಾವೆಲ್ಲಾ ಸೇರಿ ವಾಹಿನಿಯೊಂದಕ್ಕೆ ಧಾರಾವಾಹಿ ಮಾಡಲು ಚರ್ಚೆ ಕೂಡ ನಡೆಸಿದ್ದೆವು. ಆದರೆ ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಸಿನಿಮಾ ಮಾಡಲು ನಿರ್ಧರಿಸಿದೆವು.

ಇದು ಹದಿನಾರನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದಲ್ಲಿದ್ದ ಸಂತರ ಹಾಗೂ ಹರಿದಾಸರನ್ನು ಕುರಿತಾದ ಚಿತ್ರ. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠದಾಸರು, ಪುರಂದರದಾಸರು, ಕನಕದಾಸರೆ ಮೊದಲಾದ ಜ್ಞಾನಿವರೇಣ್ಯರ ಕುರಿತು ತಿಳಿಸುವ ಪ್ರಯತ್ನವನ್ನು “ಸಂಕೀರ್ತನ” ಚಿತ್ರದಲ್ಲಿ ಮಾಡಿದ್ದೇವೆ. ನನಗೆ ಈ ಚಿತ್ರದ ಕಥೆ ಬರೆಯಲು ಬೋಲೂರು ಕೇಶವದಾಸರ “ಕರ್ನಾಟಕ ಭಕ್ತ ವಿಜಯ” ಪುಸ್ತಕ ಸಾಕಷ್ಟು ಸಹಕಾರಿಯಾಯಿತು. ನವರಾತ್ರಿಗೆ ಹಂಪಿಗೆ ಬರುವ ವ್ಯಾಪಾರಿಗಳಿಂದ ಈ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ಹದಿನೈದು ಹಾಡುಗಳಿದ್ದು, ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ ಎಂದು ಹೇಳಿದರು.

ನಿರ್ದೇಶಕ ಕಲಾಗಂಗೋತ್ರಿ ಮಂಜು ಮಾತನಾಡಿ, ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಸೆಟ್ ನಲ್ಲೇ ಆಗಿದೆ. ಆನೆಗುಂದಿ ಮುಂತಾದ ಕಡೆಗಳಲ್ಲೂ ಚಿತ್ರೀಕರಣವಾಗಿದೆ. ಹಿರಿಯ ಕಲಾವಿದರಾದ ಶ್ರೀಧರ್, ರಾಮಕೃಷ್ಣ, ರಮೇಶ್ ಭಟ್, ಅಜಯ್ ರಾಜ್, ಅಶೋಕ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಿದ್ಧಾರ್ಥ್ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನವಿರುವ ಈ ಚಿತ್ರವನ್ನು ಇದೇ ಹದಿನೇಳನೇ ತಾರೀಖು ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಚಿಕ್ಕಂದಿನಿಂದ ದಾಸರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಹದಿನೈದು ವರ್ಷದ ನಂತರ ಕನಸು ನನಸಾಗಿದೆ. ಜಗನ್ನಾಥದಾಸರು ಚಿತ್ರದಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದೆ. ಅದರಿಂದ ಮತ್ತಷ್ಟು ಉತ್ತೇಜನ ಬಂದು ಚಿತ್ರ ಮಾಡಿದ್ದೇವೆ. ಕಲಾಗಂಗೋತ್ರಿ ಮಂಜು, ಪ್ರಹ್ಲಾದ್ ಹಾಗು ವಿಜಯ್ ಭಾಸ್ಕರ್ ಸಹಕಾರದಿಂದ ಚಿತ್ರ ಪೂರ್ಣಗೊಂಡಿದೆ. ಜಗತ್ತಿನಾದ್ಯಂತ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಮೊದಲು ಕರ್ನಾಟಕದಲ್ಲಿ ಏಪ್ರಿಲ್ 17 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. 20 ಲಕ್ಷ ದಲ್ಲಿ ಚಿತ್ರ ಮಾಡೋಣ ಅಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಆಗಲಿಲ್ಲ. ಮಕ್ಕಳು, ಅಳಿಯಂದಿರು ಸೇರಿದಂತೆ ಕುಟುಂಬದ ಸಹಕಾರ ನೀಡಿದ್ದರಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದೇವೆ .ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಪ್ರಧಾನ ನಿರ್ಮಾಪಕಿ, ಕಲಾ ನಿರ್ದೇಶಕಿ ಹಾಗೂ ವಸ್ತ್ರ ವಿನ್ಯಾಸಕಿ ಪದ್ಮಕಲಾ ಗುಂಡೂರಾವ್ ಹೇಳಿದರು

ಸಹ ನಿರ್ಮಾಪಕ ಹಾಗೂ ನಿರ್ಮಾಣ ನಿರ್ವಾಹಕ ವಿಜಯ್ ಭಾಸ್ಕರ್ ಮಾತನಾಡಿ , ಸೋಮನಹಳ್ಳಿ 300 ವರ್ಷದ ಮನೆ, ಕನಕ‌ಗಿರಿ ಬಳಿಯ ಮುಸಲಾಪುರ, ಆನೆಗುಂದಿ ಮತ್ತು ಅದ್ದೂರಿ ಸೆಟ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 200 ಕ್ಕೂ ಅಧಿಕ‌ ಮಂದಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕರು ಮೊದಲ ಬಾರಿಗೆ ನಟಿಸಿದವರೇ ಹೆಚ್ಚು. ಪದ್ಮ ಕಲಾ ಅವರು ವಿಸ್ತವಿನ್ಯಾಸದಲ್ಲೂ ತೊಡಗಿಸಿಕೊಂಡಿದ್ದರು. ಏಪ್ರಿಲ್ 17 ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದರು‌.

 

Visited 1 times, 1 visit(s) today
error: Content is protected !!