“ಬಿಳಿಚುಕ್ಕಿ ಹಳ್ಳಿಹಕ್ಕಿ” ತಂಡಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಸಾಥ್.
ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ, ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಭಿನ್ನ ಒಳನೋಟದ ಒಂದಷ್ಟು ಮಾತುಗಳನ್ನಾಡಿದ್ದಾರೆ. ತೊನ್ನೆಂಬ ಸಮಸ್ಯೆಯ ಭೂಮಿಕೆಯಲ್ಲಿರುವ, ಪಕ್ಕಾ ಮನೋರಂಜನಾತ್ಮಕ ಗುಣ ಹೊಂದಿರುವ ಈ ಸಿನಿಮಾ ಸಾರಥಿ ಮಹೇಶ್ ಗೌಡರನ್ನು ಮೆಚ್ಚಿಕೊಳ್ಳುತ್ತಲೇ, ಬಿಳಿಚುಕ್ಕಿ ಹಳ್ಳಿಹಕ್ಕಿಯನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಹೊಸಾ ಬಗೆಯ ಪ್ರಯತ್ನಗಳಾಗುತ್ತಿವೆ. ಕಾಂತಾರ ಸಿನಿಮಾ ಸೀಮಿತ ಬಜೆಟ್ಟಿನಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಅದರ ಅಧ್ಯಾಯ ಒಂದು ಕೂಡಾ ದೊಡ್ಡ ಗೆಲುವು ದಾಖಲಿಸಿದೆ. ಇತ್ತೀಚೆಗೆ ತೆರೆಕಂಡಿದ್ದ ಸು ಫ್ರಂ ಸೋ ಕೂಡಾ ಗೆಲುವು ಕಂಡಿದೆ. ಈ ಗೆಲುವಿನ ಸರಣಿಯ ಭಾಗವೆಂಬಂತೆ ಇದೀಗ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವೂ ಬಿಡುಗಡೆಯ ಹೊಸ್ತಿಲಲ್ಲಿದೆ. ಇಂಥಾ ಹೊಸತನದ ಸಿನಿಮಾವನ್ನು ಗೆಲ್ಲಿಸಿದರೆ ಮಹೇಶ್ ಗೌಡ ಅವರ ಕಡೆಯಿಂದ ಮತ್ತೊಂದಷ್ಟು ಒಳ್ಳೆ ಸಿನಿಮಾಗಳು ರೂಪುಗೊಳ್ಳುತ್ತವೆಂದು ಪ್ರತಾಪ್ ಸಿಂಹ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಿನಿಮಾದ ಕಥನವನ್ನು ಸೂಕ್ಷ್ಮವಾಗಿ ಅವಲೋಕಿಸಿದಂತಿರುವ ಪ್ರತಾಪ್ ಸಿಂಹ, ಯಾರನ್ನೇ ಆದರೂ ಅವರ ದೈಹಿಕ ನ್ಯೂನತೆಗಳು ಮತ್ತು ಕಾಯಿಲೆಗಳ ಮೂಲಕ ಮಾನಸಿಕವಾಗಿ ಕುಗ್ಗಿಸುವಂತೆ ಮಾಡೋದು ಸರಿಯಲ್ಲ. ತೊನ್ನು ಕೂಡಾ ಸಾಮಾನ್ಯವಾದೊಂದು ದೈಹಿಕ ಸಮಸ್ಯೆ. ಇಂಥ ಸಮಸ್ಯೆಗಳ ನಡುವೆಯೂ ಎದೆಗುಂದದೆ ಬದುಕಬೇಕೆಂಬ ಸಂದೇಶದೊಂದಿಗೆ, ಮನೋರಂಜನಾತ್ಮಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಮಹೇಶ್ ಗೌಡ ಅವರಿಗೆ ಇದರೊಂದಿಗೆ ಗೆಲುವು ಸಿಕ್ಕಲಿ. ಇಂಥಾ ಚೆಂದದ ಇನ್ನೊಂದಷ್ಟು ಪ್ರಯತ್ನಗಳನ್ನು ನಡೆಸಲು ತಾಯಿ ಚಾಮುಂಡೇಶ್ವರಿ ಅವರಿಗೆ ಶಕ್ತಿ ಕೊಡಲಿ ಎಂದು ಹಾರೈಸಿದ್ದಾರೆ.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಬಿಡುಗಡೆಗೊಂಡಿರುವ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ತೆರೆಗಾಣಲು ದಿನಗಣನೆ ಶುರುವಾಗಿದೆ.