*”ಬಲರಾಮನ ದಿನಗಳು” ಚಿತ್ರದ ಗುನುಗುವಂತಹ ‘ಶುರು ಶುರು’… ಹಾಡು ಬಿಡುಗಡೆ.*
ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ 80ರ ದಶಕದ ಕಥಾನಕ ತೆರೆಯ ಮೇಲೆ ಬರಲು ಸನ್ನದ್ಧವಾಗಿದೆ. “ಆ ದಿನಗಳು” ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ. ಎಂ ಚೈತನ್ಯ ನಿರ್ದೇಶನ ಮಾಡಿರುವ ಚಿತ್ರ “ಬಲರಾಮನ ದಿನಗಳು”. ಈ ಚಿತ್ರಕ್ಕೆ ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿದ್ದು , ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿರುವ 25 ನೇ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಮುದ್ದಾದ ಬೆಡಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷವಾಗಿ ಈ ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು , ಹಿರಿಯ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿ ಸಂಚಿತ್ ಹೆಗ್ಡೆ ಹಾಗೂ ಪುಣ್ಯ ಹಾಡಿರುವ ಚಿತ್ರದ ‘ಶುರು ಶುರು’ ಎಂಬ ಹಾಡು ಅದ್ದೂರಿಯಾಗಿ ಶರ್ಟನ್ ಹೋಟೆಲ್ ನಲ್ಲಿ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಪ್ರಚಾರದ ಕಾರ್ಯಕ್ಕೆ ಚಾಲನೆಯನ್ನು ನೀಡಿದೆ.

ಮೊದಲಿಗೆ ಚಿತ್ರದ ನಿರ್ದೇಶಕ ಕೆ.ಎಂ. ಚೈತನ್ಯ ಮಾತನಾಡಿ ಇಂದು ವಿಶೇಷವಾಗಿ ಸಂಗೀತ ನಿರ್ದೇಶಕರ ದಿನ, ಯಾಕೆಂದರೆ ನಮ್ಮ ಬಲರಾಮನ ದಿನಗಳು ಚಿತ್ರದ ಶುರು ಶುರು ಹಾಡನ್ನ ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರ ಶುರು ಆಗಿದೆ. ನಮ್ಮ ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಅವರು ಆ ದಿನಗಳು ಚಿತ್ರದ ಮಾದರಿಯಲ್ಲಿ ಸಿನಿಮಾ ಮಾಡಬೇಕು ಅದು ವಿನೋದ್ ಪ್ರಭಾಕರ್ ಗೆ ಎಂದು ಹೇಳಿದ್ದರು. ಅದರಂತೆ ಈ ಗ್ಯಾಂಗ್ ಸ್ಡರ್ ಸಿನಿಮಾ 80ರ ಕಾಲಘಟ್ಟದ ಕಥಾನಕವನ್ನು ಒಳಗೊಂಡಿದೆ. ನನ್ನ ಸಾರಥ್ಯದ ಆ ದಿನಗಳು ಚಿತ್ರದ ಪಾರ್ಟ್ – 2 ಅಲ್ಲ. ಈ ಬಲರಾಮನ ದಿನಗಳು ಚಿತ್ರ ಕಾಲ್ಪನಿಕ ಕಥೆ. ಆ ದಿನಗಳು ಚಿತ್ರ ಆದ ಮೇಲೆ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನನ್ನ ಜೊತೆ ಸಹಾಯಕ ನಿರ್ದೇಶನ ಮಾಡಲು ಕೇಳಿದ್ದರು. ನಾನು ಅವರ ನಿರ್ದೇಶನದ ತಮಿಳುನಾ ಜಿಗರ್ ಥಂಡಾ ಸಿನಿಮಾ ನೋಡಿದ್ದೆ. ಅದರಲ್ಲಿ ಸಂತೋಷ್ ನಾರಾಯಣನ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಬಹಳ ಅದ್ಭುತವಾಗಿ ಮೂಡಿಬಂದಿತ್ತು , ಈಗ ನನ್ನ ಈ ಬಲರಾಮನ ದಿನಗಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶನ ಮಾಡಬೇಕೆಂದು ನಿರ್ಧರಿಸಿ ನಾನು , ನಿರ್ಮಾಪಕರು ನೇರವಾಗಿ ಭೇಟಿ ಮಾಡಿ ಅವರನ್ನು ಒಪ್ಪಿಸಿದೆವು , ನಮ್ಮ ಈ ಚಿತ್ರದ ಮೂರು ಹಾಡಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

ಇಂದು ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿ ಸಂಚಿತ್ ಹೆಗ್ಡೆ ಹಾಗೂ ಪುಣ್ಯ ಹಾಡಿರುವ ‘ಶುರು ಶುರು’ ಹಾಡು ಬಿಡುಗಡೆಯಾಗಿದೆ. ನಮ್ಮ ಚಿತ್ರಕ್ಕೆ ಎಚ್. ಸಿ. ವೇಣು ರವರ ಕ್ಯಾಮೆರಾ ಕೆಲಸ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲು ನಿರ್ಮಾಪಕರ ಬಹಳ ಸಹಕಾರವನ್ನು ನೀಡಿದ್ದಾರೆ. ಅದೇ ರೀತಿ ನಾಯಕ ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಪ್ರಿಯಾ ಆನಂದ್ ಸೇರಿದಂತೆ ಎಲ್ಲಾ ಕಲಾವಿದರು ಕೂಡ ಬಹಳ ಶ್ರಮವಹಿಸಿ ಪ್ರೀತಿಯಿಂದ ಕೆಲಸ ಮಾಡಿದ್ದಾರೆ. ಇನ್ನು ಟ್ರೈಲರ್ ಸೇರಿದಂತೆ ಬಹಳಷ್ಟು ಕಾರ್ಯಕ್ರಮಗಳು ಮಾಡುವ ಪ್ಲಾನ್ ಇದೆ. ಈಗ ಶುರು ಶುರು’ ಹಾಡಿನ ಮೂಲಕ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನ ನೀಡುತ್ತೇವೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ನಟ ವಿನೋದ್ ಪ್ರಭಾಕರ್ ಮಾತನಾಡಿ ಬಲರಾಮನ ದಿನಗಳು ಚಿತ್ರಕ್ಕೆ ಆಡಿಯೋ ಕಂಪನಿಯೊಂದು ಗರಿಷ್ಠ ಮೊತ್ತ ನೀಡಿದೆ. ನನ್ನ ಚಿತ್ರ ಜೀವನದ 25 ಚಿತ್ರಗಳಲ್ಲಿ ಆಡಿಯೋಗೆ ಗರಿಷ್ಢ ಮೊತ್ತ ನೀಡಿದ ಮೊದಲ ಚಿತ್ರ ಇದಾಗಿದೆ. ಇನ್ನು ನನ್ನ ಪಾತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಚೈತನ್ಯ ಕೆಲ ಸನ್ನಿವೇಶಗಳನ್ನು ಕಂಪೋಸ್ ಮಾಡಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ನಟಿ ಪ್ರಿಯಾ ಅವರ ಜೊತೆ ಚರ್ಚೆ ಮಾಡಿ ಸನ್ನಿವೇಶದಲ್ಲಿ ನಟಿಸಿದ್ದೇವೆ. ನಾನು ನನ್ನ ಚಿತ್ರದ ಬಗ್ಗೆ ಹೆಚ್ಚು ಹೇಳುವುದಿಲ್ಲ , ಸಿನಿಮಾನೇ ಮಾತನಾಡಬೇಕು , ಜನರೇ ನೋಡಿ ನಿರ್ಧರಿಸಲಿ , ಇದು ಖಂಡಿತ ಒಂದು ಉತ್ತಮ ಚಿತ್ರವಾಗಿ ಹೊರಬರುತ್ತದೆ ಎಂದರು. ನಟಿ ಪ್ರಿಯಾ ಆನಂದ್ ಮಾತನಾಡಿ, ಕನ್ನಡದಲ್ಲಿ ರಾಜ ಕುಮಾರ ಆದ ಬಳಿಕ ಇದು ಐದನೇ ಚಿತ್ರ. ಕನ್ನಡ ಕಲಿಯಲು ಪುನೀತ್ ರಾಜ್ ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾದ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಲರಾಮನ ದಿನಗಳು ಚಿತ್ರ ಚೆನ್ನಾಗಿ ಬಂದಿದೆ. ಹಾಡುಗಳು ಸೊಗಸಾಗಿ ಬಂದಿದೆ. ಅದೇ ರೀತಿ ನನ್ನ ಪಾತ್ರವೂ ಚೆನ್ನಾಗಿ ಬಂದಿದೆ ಎಂದು ಹೇಳಿಕೊಂಡರು.

ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮಾತನಾಡಿ ಸುಮಾರು ಒಂದು ಸಾವಿರ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರದ ಶುರು ಶುರು ಹಾಡು ನನ್ನ ಅಗ್ರಸ್ಥಾನದ 10 ಹಾಡುಗಳಲ್ಲಿ ಒಂದಾಗಿ ಇರಲಿದೆ. ಜಯಂತ್ ಕಾಯ್ಕಿಣಿ ಅವರು ಉತ್ತಮ ಸಾಹಿತ್ಯ ನೀಡಿದ್ದಾರೆ. ಗಾಯಕರು ಕೂಡ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ನಿರ್ಮಾಪಕರು ಕೂಡ ಹಾಡುಗಳು ಬಹಳ ಸೊಗಸಾಗಿ ಬರಬೇಕು ಎಂದಿದ್ದರು , ಅದರಂತೆ ಎಲ್ಲವೂ ಚೆನ್ನಾಗಿ ಬಂದಿದೆ. ನಿರ್ದೇಶಕರು , ಕಲಾವಿದರು ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ನಾನು ಚಿತ್ರ ನೋಡಿದ್ದೇನೆ. ಖಂಡಿತ ಇದು ಒಂದು ಉತ್ತಮ ಸಿನಿಮಾ ಆಗುತ್ತೆ ಎಂದರು.

ಹಾಗೆಯೇ ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ ಸಿನಿಮಾ ಮಾಡಿರುವುದು ಖುಷಿ ಇದೆ. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾ ಮಾಡುವ ಆಸೆ ಇದೆ. ಕುಟುಂಬದ ಜೊತೆ ಕುಳಿತು ನೋಡುವ ಸಿನಿಮಾ ಮಾಡಿದ್ದೇವೆ , ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಾನು ಹೆಚ್ಚು ಮಾತನಾಡುವುದಿಲ್ಲ , ಸಿನಿಮಾ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು. ಮತ್ತೊಬ್ಬ ನಿರ್ಮಾಪಕ ಶ್ರೇಯಸ್ ಮಾತನಾಡಿ ಸಿನಿಮಾ ಚೆನ್ನಾಗಿ ಬಂದಿದೆ. ನಮ್ಮ ಚಿತ್ರದ ಹಾಡಿನ ಹಕ್ಕು ಟಿ ಸೀರೀಸ್ ಖರೀದಿ ಮಾಡಿದ್ದು , ಮತ್ತೊಂದು ಸಿನಿಮಾ ಮಾಡುವಷ್ಡು ಹಣ ನೀಡಿದ್ದಾರೆ. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಹೇಳಿದರು.

ಜಯಂತ್ ಕಾಯ್ಕಿಣಿ ಮಾತನಾಡಿ ಕ್ರಾಸ್ ವರ್ಡ್ ಪದ ಬಳಸಲಾಗಿದೆ. ಚಿತ್ರಮಂದಿರಕ್ಕೆ ಹೋಗಿ ನೋಡುವ ಸಿನಿಮಾ. ಇಷ್ಟ ಪಟ್ಟು ಮಾಡಿದ ಸಿನಿಮಾ , ಯುವ ಪ್ರತಿಭೆಗಳ ತಂಡ ಚಿತ್ರದಲ್ಲಿದೆ ಎಂದರು. ವಿನಯ್ ಗೌಡ ಮಾತನಾಡಿ ಚಿತ್ರದಲ್ಲಿ ಕತ್ತಿ ಎನ್ನುವ ಪಾತ್ರ ಮಾಡಿದ್ದೇನೆ. ಶುರು ಶುರು ಹಾಡಿನ ಮೂಲಕ ಬಲರಾಮನ ದಿನಗಳು ಅಬ್ಬರ ಶುರುವಾಗಿದೆ ಎಂದರು. ಉಳಿದಂತೆ ಅವಿನಾಶ್ , ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಸೇರಿದಂತೆ ಹಿರಿ- ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ.