Cini NewsSandalwood

ವಿಜಯ್ ರಾಘವೇಂದ್ರ ನಟನೆಯ ‘ಮರೀಚಿ’ ಟ್ರೇಲರ್ ರಿಲೀಸ್, ಡಿ.8ಕ್ಕೆ ಚಿತ್ರ ಬಿಡುಗಡೆ

Spread the love

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ರಾಘವೇಂದ್ರ ಸದ್ಯ ‘ಮರೀಚಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಟೀಸರ್ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘಟದಲ್ಲಿ ಮರೀಚಿ ಟ್ರೇಲರ್ ಬಿಡುಗಡೆಯಾಗಿದ್ದು, ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ನಟ ವಿಜಯ್ ರಾಘವೇಂದ್ರ ಮಾತನಾಡಿ, ಮರೀಚಿ ಸಿನಿಮಾದ ಟೀಸರ್ ಹಾಗೂ ಹಾಡುಗಳು ಜನರನ್ನು ತಲುಪಿವೆ. ಟ್ರೇಲರ್ ನೋಡಿದ್ದು ಬಹಳ ಖುಷಿಯಾಯ್ತು. ಈ ಚಿತ್ರಕ್ಕಾಗಿ ತಾಂತ್ರಿಕ ಸಿದ್ಧತೆ ಮಾಡಿಕೊಂಡು ಚಿತ್ರೀಕರಿಸಲಾಗಿದೆ. ಸಿನಿಮಾವನ್ನು ತುಂಬ ಪ್ರೀತಿಸುವ ನಿರ್ಮಾಪಕರು, ನಿರ್ದೇಶಕರು ಈ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ಚಿತ್ರದ ಮೇಲೆ ಇರಲಿ. ಡಿಸೆಂಬರ್ 8ಕ್ಕೆ ಚಿತ್ರಮಂದಿರದಲ್ಲಿ ಬನ್ನಿ ಒಟ್ಟಿಗೆ ಸಿನಿಮಾ ನೋಡಬಹುದು ಎಂದರು.

ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಪೊಲೀಸ್ ಆಫೀಸರ್ ಲೈಫ್ ಸ್ಟೈಲ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕನ ಕನಸನ್ನು ನನಸ್ಸು ಮಾಡಲು ತಾಂತ್ರಿಕ ವರ್ಗ, ಕಲಾವಿದರ ತಂಡ ಎಲ್ಲವೂ ಬೆಂಬಲ ನೀಡಬೇಕು. ನಾನು ಈ ವಿಚಾರದಲ್ಲಿ ಅದೃಷ್ಟವಂತ. ನನ್ನ ಚಿತ್ರತಂಡ ಆರಂಭದಿಂದ ಇಲ್ಲಿವರೆಗೂ ಬೆಂಬಲವಾಗಿ ನಿಂತಿದ್ದಾರೆ. ಹೊಸ ನಿರ್ದೇಶಕನಿಗೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಮರೀಚಿ ಬಗ್ಗೆ ಹೇಳುವುದಾರೆ ಹುಟ್ಟುತ್ತಲೇ ಯಾರು ಕ್ರೈಮ್ ಮಾಡಬೇಕು ಅಂದುಕೊಂಡಿರೋಲ್ಲ. ಆದರೆ ಪರಿಸ್ಥಿತಿ ಮನುಷ್ಯನನ್ನು ಬದಲಾಯಿಸುತ್ತವೆ. ತಂತ್ರಜ್ಞಾನ ನೆಗೆಟಿವ್ ಮನಸ್ಸಿಗೆ ಸಿಕ್ಕಾಗ ಏನಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದರು.

ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ . ವಿಜಯ ರಾಘವೇಂದ್ರ, ಸೋನು ಗೌಡ ಜತೆಗೆ ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ಎಸ್. ಆರ್‌. ಕೆ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. . ಸಸ್ಪೆನ್ಸ್ ಥ್ರಿಲ್ಲರ್‌ ಅಂಶಗಳ ಮರೀಚಿ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದ್ದು, ಪೊಲೀಸ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಡಿಸೆಂಬರ್ 8ಕ್ಕೆ ರಾಜ್ಯಾದ್ಯಂತ ಸಿದ್ಧ್ರುವ್ ಚೊಚ್ಚಲ ಕನಸ್ಸು ಪ್ರೇಕ್ಷಕರ ಎದುರು ಹಾಜರಾಗಲಿದೆ.

Visited 1 times, 1 visit(s) today
error: Content is protected !!