‘ದೇವಿ ಮಹಾತ್ಮೆ’ ಚಿತ್ರದ ‘ಎದೆ ಸುಡುತಿದೆ ಗಾಯ’  ಹಾಡಿನಲ್ಲಿ ಮಿಂಚಿದ ಗಾಯಕಿ ಅನನ್ಯಾ ಭಟ್.

Spread the love

ಕನ್ನಡ ಚಿತ್ರರಂಗದ ಖ್ಯಾತ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ ಚಿತ್ರದ ‘ಎದೆ ಸುಡುತಿದೆ ಗಾಯ’ ಎಂಬ ಭಾವಪೂರ್ಣ ವಿಡಿಯೋ ಸಾಂಗ್‌ ಇದೀಗ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತನ್ನ ಗಾಢವಾದ ಭಾವನೆಗಳು ಹಾಗೂ ವಿಶಿಷ್ಟ ಸಂಯೋಜನೆಯಿಂದ ಗಮನ ಸೆಳೆಯುತ್ತಿರುವ ಈ ಗೀತೆಯಲ್ಲಿ, ಖ್ಯಾತ ಗಾಯಕಿ ಅನನ್ಯಾ ಭಟ್ ಅವರೇ ಖುದ್ದಾಗಿ ಕಾಣಿಸಿಕೊಂಡು ಅಭಿನಯಿಸಿರುವುದು ಈ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಪಾರ ವೀಕ್ಷಕರನ್ನು ಸೆಳೆದಿರುವ ಈ ಹಾಡು, ಚಿತ್ರದ ಕಥಾಹಂದರದ ಮೇಲಿನ ಕುತೂಹಲ ಹಾಗೂ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.

ಲಿಖಿತ್ ಪ್ರಸಾದ್ ಶೆಟ್ಟಿ ಅವರ ಸಂಗೀತ ಸಂಯೋಜನೆ ಹಾಗೂ ಜೋಡಣೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ ಅರ್ಥಪೂರ್ಣ ಸಾಹಿತ್ಯ ರಚಿಸಿದ್ದು, ಅನನ್ಯಾ ಭಟ್ ಅವರ ಕಂಠಸಿರಿಯಲ್ಲಿ ಹಾಡು ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಸಾಹಿತ್ಯ, ಸಂಗೀತ ಹಾಗೂ ದೃಶ್ಯಗಳ ಸಮ್ಮಿಲನವು ಕೇಳುಗರ ಹೃದಯ ತಟ್ಟುವಂತಿದ್ದು, ಚಿತ್ರದ ಗಂಭೀರ ಕಥಾಹಂದರವನ್ನು ಬಿಂಬಿಸುವಂತಿದೆ.

ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ನಾಗರಾಜ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಸಂಭಾಷಣೆಯನ್ನು ಭಾಸ್ಕರ್ ಬಂಗೇರ,ನಾಗರಾಜ ಸೋಮಯಾಜಿ ರಚಿಸಿದ್ದು, ಬರಹಗಾರರ ತಂಡದಲ್ಲಿ ನಾಗರಾಜ ಸೋಮಯಾಜಿ ಜೊತೆಗೆ ಅರವಿಂದ್ ಕುಪ್ಳೀಕರ್, ವಾದಿರಾಜ್ ಶೆಟ್ಟಿ ಹಾಗೂ ಗುರು ಆರ್ಯ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ಎಸ್. ಕೆ. ರಾವ್ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ.

ಚಿತ್ರದಲ್ಲಿ ರಂಗಾಯಣ ರಘು ಜೊತೆಗೆ ಪ್ರತಿಮಾ ನಾಯಕ್, ಪ್ರಶಾಂತ್ ಹಿರೇಮಠ್, ಪಲ್ಲವಿ ಮಂಜುನಾಥ್,ಆದಿತ್ಯ ರಾಜ್, ರಘು ಪಾಂಡೇಶ್ವರ್, ಸುಂದರ್ ವೀಣಾ, ಅರವಿಂದ್ ಕುಪ್ಳೀಕರ್, ಬಸುಮಾ ಕೊಡಗು, ನಾಗೇಂದ್ರ ಶಾ, ಪಿ. ಡಿ. ಸತೀಶ್ ಚಂದ್ರ, ಆಶಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್, ಮಹಾದೇವ್ ಹಡಪದ ಸೇರಿದಂತೆ ರಂಗಭೂಮಿ ಹಾಗೂ ಸಿನಿಮಾ ಕಲಾವಿದರ ದಂಡೇ ಅಭಿನಯಿಸಿದೆ. ಹೊಸ ಬಗೆಯ ಕಥಾವಸ್ತು ಹಾಗೂ ತಾರಾಗಣದಿಂದ ನಿರೀಕ್ಷೆ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಈ ನೂತನ ಹಾಡು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾವು ಡಿಸೆಂಬರ್‌ 4ರಂದು ತೆರೆಗೆ ಬರಲಿದೆ.

Visited 1 times, 1 visit(s) today
error: Content is protected !!