ಸಸ್ಪೆನ್ಸ್ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯ ‘ಲಾರ್ಡ್ ಗಾಗ’ ಟೀಸರ್ ರಿಲೀಸ್.
ಸ್ಯಾಂಡಲ್ ವುಡ್ ನ ಮತ್ತೊಂದು ಚಿತ್ರ ಸದ್ದು ಮಾಡಲು ಸಿದ್ಧವಾಗುತ್ತಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಕೆಲವು ಸಿನಿಮಾಗಳು ಸ್ಟಾರ್ ನಟರು, ಬಿಗ್ ಬಜೆಟ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಟೈಟಲ್, ಕಂಟೆಂಟ್ ಮತ್ತು ಸಬ್ಜೆಕ್ಟ್ ಮೂಲಕವೇ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇತ್ತೀಚೆಗೆ ಹೀಗೆ ತನ್ನ ಟೈಟಲ್, ಕಂಟೆಂಟ್ ಮತ್ತು ಸಬ್ಜೆಕ್ಟ್ ಮೂಲಕವೇ ಗಮನ ಸೆಳೆಯುತ್ತಿರುವ ಚಿತ್ರ ‘ಲಾರ್ಡ್ ಗಾಗ’.
ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ‘ಲಾರ್ಡ್ ಗಾಗ’ ಚಿತ್ರತಂಡ, ಕೆಲ ತಿಂಗಳ ಹಿಂದಷ್ಟೇ ಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ತಮ್ಮ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ‘ಲಾರ್ಡ್ ಗಾಗ’ ಚಿತ್ರಕ್ಕೆ ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಝೀರೋ ಗ್ರ್ಯಾವಿಟಿ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಲಾರ್ಡ್ ಗಾಗ’ ಚಿತ್ರವನ್ನು ಉದ್ಯಮಿ ಮುಕಿ ರೆಘುನಾಥನ್ ನಿರ್ಮಿಸುತ್ತಿದ್ದಾರೆ.

ಇನ್ನು ಹೆಸರೇ ಹೇಳುವಂತೆ, ‘ಲಾರ್ಡ್ ಗಾಗ’ ಔಟ್ ಅಂಡ್ ಔಟ್ ಕಲ್ಟ್ ಸಿನಿಮಾ. ಮನುಷ್ಯನ ಮನಸ್ಸಿನಲ್ಲಿ ಮೂಡುವ ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ, ಆಯ್ಕೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಅದನ್ನು ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತೋರಿಸಿದ್ದೇವೆ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಸದ್ಯ ಬಿಡುಗಡೆಯಾಗಿರುವ ‘ಲಾರ್ಡ್ ಗಾಗ’ ಚಿತ್ರದ ಮೊದಲ ಟೀಸರ್ ಕಲ್ಟ್ ಶೈಲಿಯಲ್ಲಿ ಮೂಡಿಬಂದಿದ್ದು, ಹೊಸ ರೀತಿಯಲ್ಲಿ ನೋಡುಗರನ್ನು ಆಕರ್ಷಿಸುತ್ತದೆ.

‘ಲಾರ್ಡ್ ಗಾಗ’ ಚಿತ್ರದಲ್ಲಿ ಶೂನ್ಯ ನಾಯಕ ನಟನಾಗಿ ಅಭಿನಯಿಸಿದ್ದು, ಸ್ವರೂಪಿಣಿ ಮತ್ತು ದಿಶಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಮುಕಿ ರೆಘುನಾಥನ್ ಕೂಡ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ‘ಲಾರ್ಡ್ ಗಾಗ’ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಭೋಜಪುರಿ ಸೇರಿದಂತೆ ಏಕಕಾಲಕ್ಕೆ ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.
ಸದ್ಯ ಚಿತ್ರದ ಟೀಸರ್ ಮೂಲಕ ಕಥಾಹಂದರದ ಎಳೆಯನ್ನು ಅಷ್ಟೇ ಬಿಟ್ಟುಕೊಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.