ಸೆಟ್ಟೇರಿತು ಬಾಲಯ್ಯ-112ನೇ ಸಿನಿಮಾ : ಕೊರಟಾಲ ಶಿವ ಆಕ್ಷನ್ ಕಟ್
ತೆಲುಗಿನ ಗಾಡ್ ಆಫ್ ಮಾಸ್ಸ್ ಖ್ಯಾತಿಯ ಬಾಲಯ್ಯ 112ನೇ ಸಿನಿಮಾ ಅಮರಾವತಿಯಲ್ಲಿ ನಿನ್ನೆ ಸೆಟ್ಟೇರಿದೆ. ಈ ಅದ್ಧೂರಿ ಮುಹೂರ್ತ ಸಮಾರಂಭಕ್ಕೆ ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್ ಹಾಗೂ ಕಂದುಲ ದುರ್ಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಳಿದಂತೆ ತೆಲುಗು ಚಿತ್ರರಂಗದ ಸುರೇಶ್ ಬಾಬು, ಗೋಪಿಚಂದ್ ಮಾಲಿನೇನಿ, ವೆಂಕಟ ಸತೀಶ್ ಕಿಲಾರು, ಮತ್ತು ಸಾಹು ಗರಪಾಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಂದುಲ ದುರ್ಗೇಶ್ ಕ್ಯಾಮೆರಾ ಚಾಲನೆ ನೀಡಿದರು. ನಾರಾ ಲೋಕೇಶ್ ಕ್ಲಾಪ್ ಮಾಡಿದರು. ಬಾಲಕೃಷ್ಣ ಅವರ ಪುತ್ರಿ ನಂದಮೂರಿ ತೇಜಸ್ವಿನಿ ಚಿತ್ರದ ಮೊದಲ ದೃಶ್ಯವನ್ನು ನಿರ್ದೇಶಿಸಿದರು.
ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್ , ಭರತ್ ಅನೆ ನೇನು ಸಿನಿಮಾಗಳ ಖ್ಯಾತಿಯ ಸೆನ್ಸೇಷನಲ್ ಡೈರೆಕ್ಟರ್ ಕೊರಟಾಲ ಶಿವ ಬಾಲಯ್ಯಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಂಬಿನೇಷನ್ ಒಂದಾಗಿರುವುದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ.
ಎಸ್ಎಲ್ವಿ ಸಿನಿಮಾಸ್ ಮತ್ತು ಯುವಸುಧಾ ಆರ್ಟ್ಸ್ನ ಬ್ಯಾನರ್ನಡಿಯಲ್ಲಿ ನಿರ್ಮಾಪಕರಾದ ಸುಧಾಕರ್ ಚೆರುಕುರಿ ಮತ್ತು ಸುಧಾಕರ್ ಮಿಕ್ಕಿಲಿನೇನಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ನಂದಮೂರಿ ಬಾಲಕೃಷ್ಣ, “ಲಕ್ಷಾಂತರ ಅಭಿಮಾನಿಗಳ ಪ್ರೀತಿ ಮತ್ತು ವಾತ್ಸಲ್ಯವನ್ನು ಗಳಿಸಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಚಿವರಾದ ನರ ಲೋಕೇಶ್ ಮತ್ತು ಕಂದುಲ ದುರ್ಗೇಶ್ ಅವರಿಗೆ ಮತ್ತು ಮೊದಲ ದೃಶ್ಯ ನಿರ್ದೇಶಿಸಿದ್ದಕ್ಕಾಗಿ ತೇಜಸ್ವಿನಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ತೇಜಸ್ವಿನಿ ಈ ಹಿಂದೆ ನನ್ನ “ಅನ್ಸ್ಟಾಪಬಲ್” ಕಾರ್ಯಕ್ರಮದ ಕ್ರಿಯೇಟಿವ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದು ನಿರ್ದೇಶಕ ಮತ್ತು ನಿರ್ಮಾಪಕರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ. ಹೀಗಾಗಿ ಇದನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಇತರ ಅನೇಕರ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ, ಆಂಧ್ರಪ್ರದೇಶದಲ್ಲಿ ಚಲನಚಿತ್ರೋದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ. ವಿಜಯವಾಡವು ಉದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ. ಅಖಂಡ ಚಿತ್ರಕ್ಕಾಗಿ, ನಾವು ರಾಜ್ಯದಾದ್ಯಂತ ಹಲವಾರು ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ.
ಚಲನಚಿತ್ರೋದ್ಯಮದ ಬೆಳವಣಿಗೆಯ ಜೊತೆಗೆ, ನಾವು ಮನೋರಂಜನಾ ಉದ್ಯಮ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಸಹ ಕಲ್ಪಿಸುತ್ತಿದ್ದೇವೆ. ಇದು NTR ಮತ್ತು ANR ನಂತಹ ದಂತಕಥೆಗಳು ಜನಿಸಿದ ಭೂಮಿ. ರಾಜ್ಯ ವಿಭಜನೆಯ ನಂತರ, ಉದ್ಯಮವು ಇಲ್ಲಿಯೂ ಬೆಳೆಯಬೇಕು ಎಂದು ನಾವು ಯಾವಾಗಲೂ ನಂಬಿದ್ದೇವೆ” ಎಂದರು.
ಸದ್ಯ ಬಾಲಯ್ಯ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಕಾಕಿನಾಡ ಬಂದರಿನಲ್ಲಿ ನಡೆಯುತ್ತಿದೆ. ಆ ಬಳಿಕ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಕೊರಟಾಲ ಶಿವ ಶೂಟಿಂಗ್ ನಲ್ಲಿ ಬಾಲಯ್ಯ ಭಾಗಿಯಾಗಲಿದ್ದಾರೆ.
