ಹೆಣ್ಣು ಹಾಗೂ ಮಣ್ಣಿನ ಹಿಂದಿರುವ ಬೇಟೆ “ಕರಿಕಾಡ” ಚಿತ್ರವಿಮರ್ಶೆ – ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ಕರಿಕಾಡ
ನಿರ್ದೇಶಕ : ಕೆ. ವೆಂಕಟೇಶ್
ನಿರ್ಮಾಪಕಿ : ದೀಪ್ತಿ ದಾಮೋದರ
ಸಂಗೀತ : ಶಶಾಂಕ್ ಶೇಷಗಿರಿ, ಅತಿಶಯ್ ಜೈನ್
ಛಾಯಾಗ್ರಹಣ : ಜೀವನ್ ಗೌಡ
ತಾರಾಗಣ : ಕಾಡ ನಟರಾಜ್ , ನಿರೀಕ್ಷಾ ಶೆಟ್ಟಿ , ಯಶ್ ಶೆಟ್ಟಿ , ವಿಜಯ್ ಚಂಡೂರ್, ಬಾಲ ರಾಜ್ವಾಡಿ , ವಿಪಿನ್ ಪ್ರಕಾಶ್ , ಬೇಬಿ ರಿದ್ಧಿ , ರಶ್ಮಿ ಹಾಗೂ ಮುಂತಾದವರು…
ಈ ಭೂಮಿ ಮೇಲೆ ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕಿದೆ. ಅದರಲ್ಲೂ ಮಾನವ ಜನ್ಮಕ್ಕೆ ತನ್ನದೇ ಆದ ಬುದ್ಧಿ ಶಕ್ತಿಯನ್ನು ಕೊಟ್ಟು ಬದುಕಲು ದಾರಿ ಮಾಡಿ ಕೊಟ್ಟಿದ್ದರೂ ಹೆಣ್ಣು , ಹೊನ್ನು ಹಾಗೂ ಮಣ್ಣಿಗಾಗಿ ನಿರಂತರ ಯುದ್ಧಗಳು , ಹೊಡೆದಾಟ , ಬಡದಾಟ ನಡೆಯುತ್ತಲೇ ಇದೆ. ಅಂತದ್ದೇ ಒಂದು ದಟ್ಟ ಅರಣ್ಯ ಪ್ರದೇಶದ ಊರಿನಲ್ಲಿ ವಾಸಿಸುವವರ ಬದುಕಿನಲ್ಲಿ ಎದುರಾಗುವ ಗೆಳೆತನ, ಸ್ನೇಹ, ಪ್ರೀತಿ , ದ್ವೇಷ , ಪ್ರಾಣಿ ಬೇಟೆ, ಕುತಂತ್ರ , ಮುದ್ದು , ಗುಂಡಿನ ಸದ್ದಿನ ಸುತ್ತ ನಡೆಯುವ ರೋಮಾಂಚನಕಾರಿ ದೃಶ್ಯ ವೈಭವದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕರಿಕಾಡ”. ಕಳಸಾಪುರದ ಊರಿನಲ್ಲಿ ಕಾಡ( ಕಾಡ ನಟರಾಜ್) ಎಕ್ಕರೆಗಟ್ಟಲೆ ಜೋಳ ಕಾಯುವುದೇ ಕೆಲಸ.
ಕಾಡನ ಜೊತೆಗೆ ಗೌಡರ ಮಗ ಕಾಂತ (ವಿಪಿನ್ ಪ್ರಕಾಶ್) ತುಪಾಕಿ ಹಿಡಿದು ಬೇಟೆಗೆ ನಿಲ್ಲುತ್ತಾನೆ. ಇನ್ನು ಆತ್ಮೀಯ ಗೆಳೆಯ ಸೀನಾ (ವಿಜಯ್ ಚಂಡೂರ್) ಸೇರಿದಂತೆ ತನ್ನದೇ ಬಳಗದ ಜೊತೆಗೆ ಹಂದಿಯನ್ನು ಬೇಟೆಯಾಡಲು ಸದಾ ಮುಂದಾಗುತ್ತಾರೆ. ಕಾಡನ ಹೊರಟು ಮಾತು , ನೋಟದಲ್ಲಿ ಪ್ರೀತಿಯನ್ನ ಕಾಣುವ ಹುಡುಗಿ ಕನಕ (ನಿರೀಕ್ಷಾ ಶೆಟ್ಟಿ) ಪ್ರೀತಿಸಲು ನಿರ್ಧರಿಸುತ್ತಾಳೆ.
ಇನ್ನು ಸೋದರಮಾವ ಭೂಪತಿ (ಬಾಲ ರಾಜ್ವಾಡಿ) ತನ್ನ ಮಗ ಕಾಂತನಿಗೆ ಒಡಹುಟ್ಟ ತಂಗಿ ಮಗಳು ಕನಕಳನ್ನು ಮದುವೆ ಮಾಡಿಸುವ ಆಸೆ. ಇದರ ನಡುವೆ ಗೆಳೆಯ ಸೀನನ ತಂಗಿ ಕೂಡ ಕಾಡ ನನ್ನ ಪ್ರೀತಿಸುತ್ತಾಳೆ. ಈ ಪ್ರೀತಿಗಳ ಬಗ್ಗೆ ಗಮನ ಕೊಡದ ಕಾಡ ಬೇಟೆಯಾಡುವುದೇ ತನ್ನ ಕಾಯಕ ಮಾಡಿಕೊಂಡು ಗೆಳೆಯರೊಟ್ಟಿಗೆ ನೆಮ್ಮದಿಯಾಗಿರುತ್ತಾನೆ. ಆದರೆ ಅವನಿಗೆ ತಿಳಿಯದಂತೆ ಅವನ ಹಿಂದೆ ಸಂಚು ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಇದರ ನಡುವೆ ಆರಂಭ ಹಾಗೂ ಅಂತ್ಯದಲ್ಲಿ ಬರುವ ಒಂದು ಫ್ಲಾಶ್ ಬ್ಯಾಕ್ ಘಟನೆಗಳು ಯಾವ ಕಾರಣಕ್ಕೆ ಎಂಬ ಪ್ರಶ್ನೆ ಕಾಡುತ್ತಾ ಹೋಗುತ್ತದೆ. ಇದರ ಹೊರತಾಗಿ ಕಾಡ ನನ್ನು ಕೊಲ್ಲಲು ಕಾರಣವೇನು…
ಸಂಚು ರೂಪಿಸಿದ್ದು ಯಾರು..
ಕಾಡನ ಪ್ರೀತಿ ಯಾರ ಪಾಲು..
ಕ್ಲೈಮಾಕ್ಸ್ ನೀಡುವ ಉತ್ತರ..? ಇದಕ್ಕೆಲ್ಲ ನೀವು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇಡೀ ಚಿತ್ರವನ್ನು ನಟ ಕಾಡ ನಟರಾಜ್ ಅವರಿಸಿಕೊಂಡಿದ್ದು, ಖದರ್ ಲುಕ್ , ಭರ್ಜರಿ ಆಕ್ಷನ್ , ಬೊಂಬಾಟ್ ಡಾನ್ಸ್ ಮೂಲಕ ಗಮನ ಸೆಳೆಯುತ್ತಾರೆ. ಆದರೆ ನಟನೆಯಲ್ಲಿ ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಇನ್ನು ವಿಶೇಷವಾಗಿ ಈ ಚಿತ್ರದ ನಟ , ನಿರ್ಮಾಪಕಿ ಹಾಗೂ ಇವರ ಸುಪುತ್ರಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಹಳ್ಳಿ ಹುಡುಗಿಯ ಪಾತ್ರ ಮಾಡಿರುವ ನಟಿ ನಿರೀಕ್ಷಾ ಶೆಟ್ಟಿ ನಡೆ-ನುಡಿ ಸೌಮ್ಯತೆ ಬಗ್ಗೆ ಹೆಚ್ಚು ಗಮನ ವಹಿಸಬೇಕಿತ್ತು, ಕೆಲವು ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಯಶ್ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಅದ್ಬುತವಾಗಿ ನಟಿಸಿದ್ದಾರೆ. ಈ ಹಿಂದೆ ಮಾಡಿರದಂತಹ ಒಂದು ವಿಭಿನ್ನ ಪಾತ್ರದ ಪ್ರಮುಖ ಘಟ್ಟದಲ್ಲಿ ವಿಜಯ್ ಚಂಡೂರ್ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಾರೆ.

ಊರ ಗೌಡನಾಗಿ ಬಾಲ ರಾಜ್ವಾಡಿ, ವಿಪಿನ್ ಪ್ರಕಾಶ್ , ಬೇಬಿ ರಿದ್ಧಿ , ಹರ್ಷಿತ್ ಶಂಕರ್ , ಗೋವಿಂದೇಗೌಡ, ಚಂದ್ರಪ್ರಭ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಕಥೆಯಲ್ಲಿ ಹೇಳಿಕೊಳ್ಳುವಂತಹ ಹೊಸತನ ಏನು ಇಲ್ಲದಿದ್ದರೂ , ನಿರ್ದೇಶಕ ಮಾಡಿಕೊಂಡಿರುವ ಚಿತ್ರಕಥೆ ಎಲ್ಲಾ ರೀತಿಯ ಮನೋರಂಜನೆಯ ನೀಡುವ ಉದ್ದೇಶದಿಂದ ಚಿತ್ರ ಮಾಡಿದಂತಿದೆ. ಇನ್ನು ಈ ಚಿತ್ರದ ಪ್ಲಸ್ ಪಾಯಿಂಟ್ ಬಗ್ಗೆ ಹೇಳುವುದಾದರೆ ಛಾಯಾಗ್ರಾಹಕರ ಕೈಚಳಕ , ಸಂಗೀತ ಹಾಗೂ ಹಿನ್ನೆಲೆ ಸಂಗೀತ , ಸಂಕಲನ , ಸಾಹಸ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಒಮ್ಮೆ ನೋಡಬಹುದು.