Cini NewsMovie ReviewSandalwood

ವಿಗ್ರಹದ ಸುತ್ತ ಚಕ್ರವ್ಯೂಹದ ಆಟ “ಘಾರ್ಗಾ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5

ಚಿತ್ರ : ಘಾರ್ಗಾ
ನಿರ್ದೇಶಕ : ಎಂ ಶಶಿಧರ್ ನಿರ್ಮಾಪಕ : ಅಶ್ವಿನಿ ರಾಮ್ ಪ್ರಸಾದ್
ಸಂಗೀತ : ಗುರುಕಿರಣ್, ಆರ್.ಪಿ.ಪಟ್ನಾಯಕ್
ಛಾಯಾಗ್ರಹಣ : ಗುರುಪ್ರಸಾದ್ ನರ್ನಾಡ್
ತಾರಾಗಣ : ಅರುಣ್ ರಾಮ್ ಪ್ರಸಾದ್ , ರೆಹಾನ ಶೇಕ್ , ಸಾಯಿಕುಮಾರ್, ಸಂಪತ್ ರಾಜ್, ರಾಹುಲ್ ದೇವ್, ಅರುಣ್ ಸಾಗರ್, ದೇವ್ ಗಿಲ್, ಮಿತ್ರ ಹಾಗೂ ಮುಂತಾದವರು…

ಅನಾದಿಕಾಲದಿಂದಲೂ ನಮ್ಮ ದೇಶ , ರಾಜ್ಯ ಸಮೃದ್ಧಿ ಸಿರಿ ಸಂಪತ್ತುಗಳನ್ನು ಒಳಗೊಂಡಿರುವಂತಹ ಪ್ರದೇಶ. ಇಂದಿಗೂ ಪಳೆಯುಳಿಕೆಯ ವಸ್ತುಗಳು , ವಜ್ರ , ವೈಢೂರ್ಯ, ನಿಧಿ , ವಿಗ್ರಹಗಳ ಸಂಶೋಧನೆಯ ಜೊತೆಗೆ ಉತ್ಕನನ ವಿಚಾರ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಇದರ ಸಂರಕ್ಷಣೆಗೆ ಸರ್ಪ, ನಿಗೂಢ ಶಕ್ತಿಗಳು ಕಾವಲಿದೆ ಎಂಬ ಮಾತು ಇದೆ.

ಇಂತಹ ನಿಧಿ , ವಿಗ್ರಹದ ಸುತ್ತ ಕಥೆಯನ್ನು ಬೆಸೆದುಕೊಂಡು ಅದನ್ನು ತಮ್ಮ ಕೈವಶ ಮಾಡಿಕೊಳ್ಳಲು ಮುಂದಾಗುವ ವ್ಯಕ್ತಿಗಳ , ತಂತ್ರ , ರಣತಂತ್ರ , ಆಧುನಿಕ ಯಂತ್ರೋಪಕರಣದ ಮೂಲಕ ಹೇಗೆ ಜಾಲ ಬೀಸುತ್ತಾರೆ ಎಂಬುದನ್ನ ಅಡ್ವೆಂಚರಸ್ ಡ್ರಾಮಾ, ಹಾರರ್ , ಕ್ರೈಮ್, ಥ್ರಿಲ್ಲರ್ ಮೂಲಕ , ಕುತೂಹಲಕಾರಿ ಅಂಶಗಳೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಘಾರ್ಗಾ”. ದಟ್ಟ ಕಾಡಿನ ನಡುವೆ ಇರುವ “ಘಾರ್ಗಾ” ಕುಗ್ರಾಮಕ್ಕೆ ಪುಸ್ತಕ ಸಂಶೋಧನೆ ವಿಚಾರಕ್ಕಾಗಿ ಬರುವ ವಿಕ್ರಂ ಅಡಿಗ (ಅರುಣ್ ರಾಮಪ್ರಸಾದ್) ವಾಹನ ಚಾಲಕನಾಗಿ ಪುಂಡಲಿಕ (ಅರುಣ್ ಸಾಗರ್) ಜೊತೆ ಇರುತ್ತಾನೆ.

ಖ್ಯಾತ ಇತಿಹಾಸ ತಜ್ಞ , ಪುಸ್ತಕ ಬರಹಗಾರ ಮಹಾಬಲ ಐತಾಳ್ ಸುಪುತ್ರ ಗಜಾನನ ಐತಾಳ್ (ಸಾಯಿ ಕುಮಾರ್) ನನ್ನ ಭೇಟಿ ಮಾಡುವ ಮಾರ್ಗ ಮಧ್ಯ ಅಗೋಚರ ಸದ್ದು , ಆತಂಕದ ನಡುವೆ ಕಿಡಿಗೇಡಿಗಳಿಂದ ಅಟ್ಯಾಕ್ ಕೂಡ ನಡೆಯುತ್ತದೆ. ಈ ವಿಚಾರ ತಿಳಿಯುವ ಐತಾಳ ವಿಕ್ರಂ ಗೆ ಧೈರ್ಯವನ್ನ ತಿಳಿಸಿ ತಮ್ಮ ಸಂಶೋಧನೆಗೆ ಸಹಕಾರ ನೀಡಲು ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ (ಸಂಪತ್ ರಾಜ್) ಈ ಎಲ್ಲಾ ಘಟನೆಗಳ ಹಾದಿಯನ್ನು ಬಿಡಿಬಿಡಿಯಾಗಿ ಹೇಳುತ್ತಾ ಹೋಗುತ್ತಾನೆ.

ಪುಸ್ತಕದ ವಿಚಾರದ ಜೊತೆ ವಿಗ್ರದ ಬಗ್ಗೆ ತಿಳಿದುಕೊಳ್ಳುವ ವಿಕ್ರಮ್ ಅಡಿಗ ಹಾದಿಯಲ್ಲಿ ಒಂದೊಂದೇ ಅವಗಡಗಳು , ಸಾವು, ನೋವು , ದುರಂತಗಳು , ನಡೆಯುತ್ತಾ ಹೋಗುತ್ತದೆ. ಮನೆಯಲ್ಲಿ ಇದ್ದವರಿಗೆ ಆತಂಕ ಹೆಚ್ಚಾದರೆ , ಇನ್ನು ಮೂಢನಂಬಿಕೆಯ ಬಗ್ಗೆ ಹೆಚ್ಚು ಗಮನವಿರುವ ಗಜಾನನ ಐತಾಳ್ ಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇದನ್ನೇ ಅಸ್ತ್ರವಾಗಿ ಎಂಬ ಬಳಸಿಕೊಳ್ಳುವ ಕೆಲವರು ದಿಕ್ಕು ತಪ್ಪಿಸುತ್ತಾ ಹೋಗುತ್ತಾರೆ.

ಇನ್ನು ನಿಗೂಢ ಸ್ಥಳವಿರುವ ಚಂದ್ರಗಿರಿ ಗುಡ್ಡ , ಅಲ್ಲಿರುವ ಪರಮ ಲಿಂಗ ವಿಗ್ರಹದ ವಿಚಾರ ತಿಳಿಯುತ್ತದೆ. ಸಾವಿರ ಮಿಲಿಯನ್ ಗೂ ಹೆಚ್ಚು ಬೆಳೆಬಾಳುವ ಈ ವಿಗ್ರಹಕ್ಕಾಗಿ ಅಂಡರ್ ವರ್ಲ್ಡ್ ಡಾನ್ ಗಳು ಸೇರಿದಂತೆ ಹಲವರ ಕಣ್ಣು. ಮುಂದೆ ಎದುರಾಗುವ ರೋಚಕ ತಿರುವುಗಳು ಬೇರೆ ದಿಕ್ಕನ್ನ ತೋರುತ್ತದೆ.ಪರಮ ಲಿಂಗ ಸಿಗುತ್ತಾ… ಇಲ್ಲವಾ… ಗಜಾನನ ಐತಾಳ್ ಕುಟುಂಬಕ್ಕೆ ಒಲಿದಿದ್ದು ಹೇಗೆ..
ಸಂಚಿನ ಗ್ಯಾಂಗಗಳು ಯಾರು.
ವಿಕ್ರಮ್ ಪ್ಲಾನ್ ಏನು..
ಕ್ಲೈಮಾಕ್ಸ್ ನೀಡುವ ಹೊಸ ರೂಪ ಯಾವುದು…
ಇದೆಲ್ಲದಕ್ಕೂ ನೀವು ಒಮ್ಮೆ ಚಿತ್ರ ನೋಡಬೇಕು.

ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಕುತೂಹಲಕಾರಿಯಾಗಿದೆ. ವಿಗ್ರಹ ಅಪರಿಸುವ ತಂತ್ರಕ್ಕೆ ಮಾಡಿರುವ ಸಂಚು ಗಮನ ಸೆಳೆದಿದೆ. ಇಂತಹ ಪ್ರಯತ್ನಗಳ ಚಿತ್ರಗಳು ಬಹಳಷ್ಟು ಬಂದಿದ್ದು , ಚಿತ್ರಕಥೆ ವಿಭಿನ್ನವಾಗಿದೆ. ಇಂತಹ ಕ್ರೈಂ , ಥ್ರಿಲ್ಲರ್, ಹಾರರ್ ಚಿತ್ರ ನಿರ್ಮಿಸಿರುವ ನಿರ್ಮಾಪಕ ತಮ್ಮ ಪುತ್ರನನ್ನ ಬೆಳ್ಳಿ ಪರದೆಗೆ ತಂದಿದ್ದಾರೆ.

ಇನ್ನು ಈ ಚಿತ್ರದ ಹೈಲೈಟ್ ಅಂದರೆ ಮ್ಯೂಸಿಕ್ ಹಾಗೂ ಹಿನ್ನೆಲೆ ಸಂಗೀತ ಇಡೀ ಚಿತ್ರದ ಓಟವನ್ನ ಗಮನಿಸುವಂತೆ ಮಾಡಿದೆ. ಛಾಯಾಗ್ರಾಹಕರ ಕೈಚಳಕವು ಅದ್ಭುತವಾಗಿದೆ. ಅದೇ ರೀತಿ ಸಾಹಸ, ಸಂಕಲನ ಸೇರಿದಂತೆ ತಾಂತ್ರಿಕವಾಗಿ ಗ್ರಾಫಿಕ್ಸ್ ಮೂಲಕ ಚಿತ್ರ ಇನ್ನಷ್ಟು ಮೇರುಗನ್ನ ತಂದಿದೆ.

ಇನ್ನು ನಾಯಕನಿಗೆ ಅಭಿನಯಿಸಿರುವ ಅರುಣ್ ರಾಮ್ ಪ್ರಸಾದ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮ ಪಟ್ಟಿದ್ದು , ಒಬ್ಬ ರೈಟರ್, ಸಂಶೋಧಕನಾಗಿ ಯಾವುದೇ ಬಿಲ್ಡಪ್ , ಹೀರೋಯಿಸಂ ಇಲ್ಲದೆ ಪಾತ್ರಕ್ಕೆ ಏನು ಬೇಕು ಅದನ್ನ ನಿಭಾಯಿಸಿ ಗಮನ ಸೆಳೆದಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಿಹಾನ ಶೇಕ್ ಹಾಡಿಗೆ ಹೆಚ್ಚು ಸೀಮಿತವಾದಂತಿದೆ. ಅದರಲ್ಲೂ ಗಜ ಚಿತ್ರದ ‌ಬಂಗಾರಿ ಯಾರೇ ನೀ ಬುಲ್ ಬುಲ್ ರೀಮಿಕ್ಸ್ ಹಾಡಿನಲ್ಲಿ ಮಿಂಚಿದ್ದಾರೆ.

ಹಿರಿಯ ನಟ ಸಾಯಿ ಕುಮಾರ್ ಗಜಾನನ ಐತಾಳಾಗಿ ಗಂಭೀರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ನಟ ಅರುಣ್ ಸಾಗರ್ ಕೂಡ ತಮ್ಮ ನಟನ ಸಾಮರ್ಥ್ಯವನ್ನು ಹೊರ ಹಾಕಿದ್ದಾರೆ. ಉಳಿದಂತೆ ಅಭಿನಯಿಸಿರುವ ಸಂಪತ್ ರಾಜ್ , ರಾಹುಲ್ ದೇವ್, ಮಿತ್ರ , ದೇವ್ ಗಿಲ್, ಸರ್ವಣ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಈ ಚಿತ್ರದ ಕಥೆ ಹೇಳುವಂತೆ ದ ಲ್ಯಾಂಡ್ ಆಫ್ ಶಾಡೋ ಎಂಬ ಅಡ್ವೆಂಚರಸ್ ಡ್ರಾಮಾ ಚಿತ್ರವಾಗಿದ್ದು, ಸಸ್ಪೆನ್ಸ್ , ಥ್ರಿಲ್ಲರ್ ಪ್ರೀಯರಿಗೆ ಇಷ್ಟವಾಗುವ ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!