Cini NewsSandalwood

ಝೈದ್ ಖಾನ್ ನಟನೆಯ “ಕಲ್ಟ್” ಚಿತ್ರದ ಟ್ರೇಲರ್ ಬಿಡುಗಡೆ

Spread the love

“ಬನಾರಸ್” ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿದ್ದ ನಟ ಝೈದ್ ಖಾನ್ ನಾಯಕರಾಗಿ ನಟಿಸಿರುವ , “ಉಪಾಧ್ಯಕ್ಷ” ಸೇರಿದಂತೆ ಯಶಸ್ವಿ ಚಿತ್ರಗಳ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಹಾಗೂ ರಚಿತರಾಮ್ ಮತ್ತು ಮಲೈಕಾ ನಾಯಕಿಯರಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ಕಲ್ಟ್” ಚಿತ್ರದ ಟ್ರೇಲರ್ ಅನ್ನು ಕೆ.ವಿ.ಎನ್ ಸಂಸ್ಥೆಯ ಕೆ.ವೆಂಕಟ್ ನಾರಾಯಣ್ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಟ್ರೇಲರ್ ಕುತೂಹಲ ಮೂಡಿಸಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜನವರಿ 23 ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಲೋಕಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ದೇಶಕ ಅನಿಲ್ ಕುಮಾರ್ ಅವರು ಹೇಳಿದ ಕಥೆ ಇಷ್ಟವಾಯಿತು. ಈಗಿನ ಯುವಜನತೆಗೆ ಹೇಳಿ ಮಾಡಿಸಿದ ಕಥೆ ಇದು. ರಚಿತರಾಮ್ ಅವರ ಜೊತೆಗೆ ನಟಿಸಿದ್ದು ಬಹಳ ಖುಷಿಯಾಗಿದೆ. ಮಲೈಕಾ ಅವರು ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರ ಅಭಿನಯ ಚೆನ್ನಾಗಿದೆ. ತಂತ್ರಜ್ಞರ ಕಾರ್ಯ ವೈಖರಿ ಕೂಡ ತುಂಬಾ ಚೆನ್ನಾಗಿದೆ. ಈಗಾಗಲೇ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಎಲ್ಲರ ಮನ ಗೆದ್ದಿದೆ. ಟ್ರೇಲರ್ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಜನವರಿ 23 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ನಾನು ಕರ್ನಾಟಕದಾದ್ಯಂತ ಸುಮಾರು ಹತ್ತೊಂಭತ್ತು ಸಾವಿರಕ್ಕೂ ಅಧಿಕ ಕಿಲೋಮೀಟರ್ ಸುತ್ತಿ, ಎಲ್ಲಾ ಊರುಗಳಿಗೂ ಹೋಗಿ “ಕಲ್ಟ್” ಸಿನಿಮಾ ಬಗ್ಗೆ ಪ್ರಚಾರ ಮಾಡಿ ಬಂದಿದ್ದೇನೆ. ಕನ್ನಡದ ಜನರು ತೋರಿದ ಪ್ರೀತಿಗೆ ಮನ ತುಂಬಿ ಬಂದಿದೆ ಎಂದರು ನಾಯಕ ಝೈದ್ ಖಾನ್.

“ಕಲ್ಟ್” ಅಪ್ಪಟ ಕನ್ನಡ ಚಿತ್ರ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಮಾಡಿರುವ ಚಿತ್ರ ಎಂದು‌ ಮಾತನಾಡಿದ ನಿರ್ದೇಶಕ ಅನಿಲ್ ಕುಮಾರ್, “ಕಲ್ಟ್” ಎಲ್ಲರ ಮನಸ್ಸಿಗೂ ಮೆಚ್ಚುಗೆಯಾಗುವ ಸಿನಿಮಾ. ಅದರಲ್ಲೂ ಈಗಿನ ಯುವಜನತೆ ಹಾಗೂ ಅವರ ಪೋಷಕರು ನೋಡಲೇ ಬೇಕಾದ‌ ಸಿನಿಮಾ ಕೂಡ. ನಮ್ಮ ಚಿತ್ರದಲ್ಲಿ ಮಾನವೀಯ ಮೌಲ್ಯಗಳಿದೆ. ಭಾವನೆಗಳಿದೆ. ಹೀಗೆ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿದೆ. ಝೈದ್ ಖಾನ್ ಅವರ ಪಾತ್ರವನ್ನು ಮೂರು ಶೇಡ್ ಗಳಲ್ಲಿ ಹಾಗೂ ರಚಿತರಾಮ್ ಅವರ ಪಾತ್ರವನ್ನು ಎರಡು ಶೇಡ್ ಗಳಲ್ಲಿ ನೋಡಬಹುದು. ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿಮ್ಮ ಮುಂದೆ ಬರಲಿದೆ ನೋಡಿ ಪ್ರೋತ್ಸಾಹಿಸಿ ಎಂದರು.

ನಿರ್ದೇಶಕರು ಹೇಳಿದ ಹಾಗೆ ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಟ್ರೇಲರ್ ನಲ್ಲಿ ಒಂದು ಶೇಡ್ ನ ಪರಿಚಯ ಮಾಡಿದ್ದಾರೆ. ಮತ್ತೊಂದನ್ನು ನೀವು ಸಿನಿಮಾದಲ್ಲೇ ನೋಡಬೇಕು. ರಂಗಾಯಣ ರಘು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಝೈದ್ ಖಾನ್ ಅವರ ಎರಡನೇ ಸಿನಿಮಾ ಅನಿಸುವುದೇ ಇಲ್ಲ. ಹತ್ತು ಸಿನಿಮಾ ಮಾಡಿರುವ ಕಲಾವಿದರ ಹಾಗೆ ಅಭಿನಯಿಸಿದ್ದಾರೆ. ಜನವರಿ 23 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ನಮ್ಮ ಚಿತ್ರ ನೋಡಿ ಎಂದರು ನಟಿ ರಚಿತರಾಮ್.

“ಉಪಾಧ್ಯಕ್ಷ” ಚಿತ್ರದ ನಂತರ ನಿರ್ದೇಶಕ ಅನಿಲ್ ಕುಮಾರ್ ಅವರು ಈ ಚಿತ್ರದ ಕಥೆ ಹೇಳಿದರು. ಕಥೆ ಬಹಳ ಇಷ್ಟವಾಯಿತು. ಝೈದ್ ಖಾನ್ ಅವರ ಜೊತೆಗೆ ಮೂರು ತಿಂಗಳಿನಿಂದ ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕದಾದ್ಯಂತ ಸಂಚಾರ ಮಾಡಿದ್ದೇನೆ. ಅವರಿಗಿರುವ ಕನ್ನಡ ಪ್ರೇಮ ಕಂಡು ನನ್ನ ಕನ್ನಡಾಭಿಮಾನ ದುಪ್ಪಟ್ಟು ಆಯಿತು. ಇನ್ನೂ, ರಚಿತರಾಮ್, ರಂಗಾಯಣ ರಘು ಅವರಂತಹ ಕಲಾವಿದರ ಜೊತೆಗೆ ಕೆಲಸ ಮಾಡಿದ್ದು ಬಹಳ ಸಂತೋಷವಾಗಿದೆ ಎಂದು ನಟಿ ಮಲೈಕಾ ತಿಳಿಸಿದರು.

ನಿರ್ದೇಶಕರ ಜೊತಗೆ ಹಿಂದೆ ಒಂದು ಸಿನಿಮಾ ಮಾಡಿದ್ದೆ. ಇದು ಎರಡನೇಯದು. ಇದರಲ್ಲಿ ಲೇಡಿ ಸೂಪರ್ ಸ್ಟಾರ್ ರಚಿತರಾಮ್ ಅವರ ತಂದೆ ಪಾತ್ರ ಮಾಡಿದ್ದೇನೆ ಎಂದು ನಟ ರಂಗಾಯಣ ರಘು ಹೇಳಿದರು. ನಿರ್ಮಾಪಕ ಲೋಕಿ, ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್, ಆನಂದ್, ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ಅಲೋಕ್, ಕಿಶನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!