Cini NewsMovie ReviewSandalwood

ಕನ್ನಡ ಕಲಿಸಿ , ಉಳಿಸುವ ಸಂಕಲ್ಪದ ಹಾದಿ… “ಭಾರತಿ ಟೀಚರ್ 7ನೇ ತರಗತಿ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

 

ರೇಟಿಂಗ್ : 3.5/5

ಚಿತ್ರ : ಭಾರತಿ ಟೀಚರ್ 7ನೇ ತರಗತಿ
ನಿರ್ದೇಶಕ , ಸಂಗೀತ : ಎಂ.ಎಲ್.ಪ್ರಸನ್ನ
ನಿರ್ಮಾಪಕ : ರಾಘವೇಂದ್ರ ರೆಡ್ಡಿ
ಛಾಯಾಗ್ರಹಣ : ಎಂ.ಬಿ. ಹಳ್ಳಿಕಟ್ಟಿ
ತಾರಾಗಣ : ರೋಹಿತ್ ರಾಘವೇಂದ್ರ , ಕು. ಯಾಶಿಕ , ಸಿಹಿಕಹಿ ಚಂದ್ರು , ಗೋವಿಂದೇಗೌಡ, ಅಶ್ವಿನ್‌ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರಂಗಸ್ವಾಮಿ, ಸೌಜನ್ಯ ಸುನಿಲ್ , ವಿಶೇಷ ಪಾತ್ರದಲ್ಲಿ ಮಾನ್ಯ ಕಾರ್ಮಿಕ ಸಚಿವರು ಸಂತೋಷ್ ಲಾಡ್ ಮತ್ತು ಆದಿತ್ಯ ಹಾಗೂ ಮುಂತಾದವರು…

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಅಕ್ಷರಸಹ ಸತ್ಯ. ಅದೇ ರೀತಿ ಪ್ರತಿ ಒಂದು ಗ್ರಾಮದ ಜನರನ್ನ ಸಾಕ್ಷರಸ್ಥರನ್ನಾಗಿ ಮಾಡಿದರೆ ಎಲ್ಲವೂ ಅನುಕೂಲ , ಸುಭಿಕ್ಷವಾಗಿ , ದೇಶವು ಸಮೃದ್ಧಿಯತ್ತ ಸಾಗುತ್ತದೆ ಎಂದು ಹೇಳಬಹುದು. ಇಂಥದ್ದೇ ಒಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮದ ಹೆಣ್ಣು ಮಗಳು ಸರ್ಕಾರಿ ಶಾಲೆ , ಕನ್ನಡ ಕಲಿಸಿ , ಉಳಿಸುವ ದೃಢಸಂಕಲ್ಪದ ಹಾದಿಯಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳ ನಡುವೆ ಸಾಗುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಭಾರತಿ ಟೀಚರ್ 7ನೇ ತರಗತಿ”.

ಸುಂದರ ಪರಿಸರದ ಹುಲಿಗೇರಿಪುರದ ಗ್ರಾಮದಲ್ಲಿ ವಾಸಿಸುವ ಬಹುತೇಕರು ಅವಿದ್ಯಾವಂತರು , ಅದೇ ಊರಿನಲ್ಲಿ ತಂದೆ ಇಲ್ಲದೆ ತಾಯಿಯ ಮಡಿಲಲ್ಲಿ ಬೆಳೆಯುವ ವಿದ್ಯಾವಂತೆ ಭಾರತಿ (ಕು.ಯಾಶಿಕ) , ಈಕೆಗೆ ಸದಾ ಬೆನ್ನೆಲುಬಾಗಿ ಮಾರ್ಗದರ್ಶರಾಗಿ ವಿದ್ಯೆ ಕಲಿಸುವ ಮೇಷ್ಟ್ರು (ಸಿಹಿಕಹಿ ಚಂದ್ರು) ಪ್ರತಿ ಹಂತದಲ್ಲೂ ನೀತಿ ಪಾಠದ ಜೊತೆಗೆ ಸಿಟ್ಟು ಮನುಷ್ಯನ ಒಂದು ಆಯುಧ , ಅದನ್ನ ಒಳ್ಳೆಯದಕ್ಕೆ ಬಳಸಿಕೊಳ್ಳಬೇಕೆಂಬ ವಿಚಾರವನ್ನು ಹೇಳುತ್ತಾ ಭಾರತಿಗೆ ಉತ್ತಮ ಭವಿಷ್ಯದತ್ತ ಕರೆದೊಯ್ಯುತ್ತಾರೆ.

ಮತ್ತೊಂದೆಡೆ ವಿದ್ಯಾವಂತ ಯುವಕ ರಾಜಶೇಖರ್ (ರೋಹಿತ್ ರಾಘವೇಂದ್ರ) ಆಕಸ್ಮಿಕ ಸಮಸ್ಯೆಗೆ ಸಿಲುಕಿ ಬದುಕಿನ ದಿಕ್ಕು ಬದಲಿಸಿಕೊಂಡು , ತನ್ನದೇ ಗೆಳೆಯರ ಬಳಗದ ಜೊತೆಗೆ ಸೇನೆಯನ್ನ ಕಟ್ಟಿಕೊಂಡು ದುಷ್ಟರು , ಕೆಟ್ಟ ಅಧಿಕಾರಿಗಳು ವಿರುದ್ಧ ಸಮರ ಸಾರುತ್ತ ಸಾಗುತ್ತಾನೆ. ಇದರ ನಡುವೆ ಗುರುಗಳ ಆಸೆಯನ್ನ ಪೂರೈಸಲು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕನಸನ್ನ ಕಾಣಲು ಮುಂದಾಗುತ್ತಾಳೆ.

ಅದುವೇ ಗ್ರಾಮದ ಜನರೆಲ್ಲ ಅಕ್ಷರವಂತರಾಗಬೇಕು, ಕನ್ನಡ ಭಾಷೆ ಕಲಿತು ವಿದ್ಯಾವಂತರಾಗಬೇಕು ಎನ್ನುವುದು ಪುಟ್ಟ ಹುಡುಗಿಯ ಕನಸು. ಏಳನೇ ತರಗತಿ ಓದುತ್ತಿರುವಾಗಲೇ ವಯಸಿಗೆ ಮೀರಿದ ದೊಡ್ಡ ದೊಡ್ಡ ಆಲೋಚನೆಗಳು ಮಾಡಲು ಮುಂದಾಗುತ್ತಾಳೆ. ಈ ದಾರಿಯಲ್ಲಿ ಆಕೆ ಅನೇಕ ಅಡೆ , ತಡೆಗಳನ್ನು ಎದುರಿಸಬೇಕಾಗುತ್ತದೆ.

ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಗೆದ್ದು ಆ ಕಾರ್ಯಕ್ರಮಕ್ಕೆ ಬಂದಂತಹ ಜಿಲ್ಲಾಧಿಕಾರಿ (ಆದಿತ್ಯ)ಯ ಮುಂದೆ ತನ್ನೂರಿನ ಜನರನ್ನು ಅಕ್ಷರಸ್ಥರನ್ನಾಗಿಸುವ ಪ್ರಯತ್ನಕ್ಕೆ ತಮ್ಮ ಸಹಾಯ ಬೇಕೆಂದು ವಿನಂತಿಸುತ್ತಾಳೆ, ಆ ಪುಟ್ಟ ಹೃದಯದ ದೊಡ್ಡ ಕನಸಿಗೆ ಡಿಸಿ ಕೂಡ ಜತೆಯಾಗಿ ನಿಲ್ಲುತ್ತಾರೆ. ಇದರ ನಡುವೆ ಹೋರಾಟಗಾರ ರಾಜಶೇಖರ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ನಡುವೆ ಶೀತಲ ಸಮರ ನಡೆಯುತ್ತಿರುತ್ತದೆ.

ಒಂದಷ್ಟು ಘಟನೆಗಳು ಭಾರತಿ ಪಯಣಕ್ಕೆ ಅಡ್ಡಿಯಾಗುತ್ತಾ ಹೋಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ರಾಜಶೇಖರ್ ನ ನಡುವೆ ಕಾನೂನು ಸಮರಕ್ಕೆ ನಾಂದಿಯಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ. ಮುಂದೆ ಎದುರಾಗುವ ರೋಚಕ ಘಟನೆಗಳು ವಿಭಿನ್ನ ತಿರುವು ನೀಡಿ ಗಮನ ಸೆಳೆಯುವಂತಹ ಕ್ಲೈಮ್ಯಾಕ್ಸ್ ನೀಡುತ್ತದೆ. ಅದು ಏನು… ಎಂಬುದನ್ನು ನೀವು ತೆರೆಯ ಮೇಲೆ ನೋಡಬೇಕು.

ಇಡೀ ಚಿತ್ರವನ್ನು ಕುಮಾರಿ ಯಾಶಿಕ ಆವರಿಸಿಕೊಂಡಿದ್ದು , ಭಾರತಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಭಾಯಿಸಿದ್ದಾರೆ. ಉತ್ತಮ ಭವಿಷ್ಯವಿರುವ ಈ ಮಗು ತನ್ನ ಪಾತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾಳೆ. ಅದೇ ರೀತಿ ರೋಷವೇಶದ ಮೂಲಕ ಸಮಾಜಘಾತಕ ವ್ಯಕ್ತಿಗಳು , ವ್ಯವಸ್ಥೆಯ ವಿರುದ್ದ ಹೋರಾಡುವ ರಾಜಶೇಖರ್ ಪಾತ್ರವನ್ನ ಖಡಕ್ಕಾಗಿ ನಿವಾಸಿದ್ದಾರೆ ಯುವ ಪ್ರತಿಭೆ ರೋಹಿತ್ ರಾಘವೇಂದ್ರ. ಇನ್ನಷ್ಟು ಪರಿಪಕ್ವತೆ ಪಡೆದುಕೊಂಡರೆ ಉತ್ತಮ ಭವಿಷ್ಯವನ್ನು ಕಾಣಬಹುದು. ಊರಿನ ಶಿಕ್ಷಕನ ಪಾತ್ರಕ್ಕೆ ಹಿರಿಯ ನಟ ಸಿಹಿಕಹಿ ಚಂದ್ರು ನ್ಯಾಯವನ್ನು ಒದಗಿಸಿದ್ದಾರೆ.

ಇನ್ನು ಜಿಲ್ಲಾಧಿಕಾರಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಟ ಆದಿತ್ಯ ನಿಭಾಯಿಸಿದ್ದಾರೆ. ಇನ್ನು ಇನ್ಸ್ಪೆಕ್ಟರ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಅಶ್ವಿನ್ ಹಾಸನ್ ,ಇನ್ನು ಚಿತ್ರದ ಕ್ಲೈಮಾಕ್ಸ್ ನಲ್ಲಿ ಬರುವ ಸಿಎಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಚಿವ ಸಂತೋಷ್ ಲಾಡ್ ನಟನೆ ಅಚ್ಚರಿ ಮೂಡಿಸುತ್ತದೆ ಮತ್ತು ಅರ್ಥಪೂರ್ಣವಾಗಿದೆ.

ಇನ್ನು ಉಳಿದಂತೆ ಕೆಂಪನ ಪಾತ್ರವನ್ನು ನಿರ್ವಹಿಸಿರುವ ಗೋವಿಂದೇಗೌಡ , ಮಡದಿ ಪಾತ್ರ ಮಾಡಿರುವ ದಿವ್ಯ ಅಂಚನ್ , ಪುಟ್ಟ ಬಾಲಕಿಯ ತಾಯಿ ಪಾತ್ರ ಮಾಡಿರುವ ಸೌಜನ್ಯ ಸುನಿಲ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಇನ್ನು ನಿರ್ದೇಶಕ ಎಂ.ಎಲ್ .ಪ್ರಸನ್ನ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು , ಚಿತ್ರಕಥೆ ಇನ್ನಷ್ಟು ಸೂಕ್ಷ್ಮವಾಗಿಸಬೇಕಿತ್ತು ಅನಿಸುತ್ತದೆ. ಹಾಗೆಯೆ ಪಾತ್ರಗಳ ವೇಷ ಭೂಷಣ ನಡೆ-ನುಡಿಯ ಬಗ್ಗೆ ಕೊಂಚ ಗಮನಹರಿಸಬೇಕಿತ್ತು.

ಇದರ ನಡುವೆಯೂ ಜನರಲ್ಲಿ ಜಾಗೃತಿ ಮೂಡಿಸುವ ಅಂಶ ಗಮನ ಸೆಳೆಯುತ್ತದೆ. ಇನ್ನು ಚಿತ್ರದ ಹಾಡುಗಳು ಗುನುಗುವಂತಿವೆ, ಅದರಲ್ಲೂ ಕನ್ನಡ ನಾಡು, ನುಡಿಯ ಬಗ್ಗೆ ಇರುವ ಹಾಡು ಸೊಗಸಾಗಿ ಮೂಡಿಬಂದಿದೆ. ಇನ್ನು ಕ್ಯಾಮರಾ ಕೈಚಳಕ , ಸಂಕಲನದ ಕೆಲಸ ಗಮನ ಸೆಳೆಯುತ್ತದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ರಾಘವೇಂದ್ರ ರೆಡ್ಡಿ ಸಾಹಸವನ್ನು ಮೆಚ್ಚಬೇಕು , ಅದೇ ರೀತಿ ಇವರಿಗೆ ಜೊತೆಯಲ್ಲಿ ಸಾತ್ ನೀಡಿರುವ ವಿತರಕ ವೆಂಕಟ್‌ಗೌಡ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಿರುವ ಈ ಒಂದು ಚಿತ್ರ ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!