ಯುವ ಪ್ರತಿಭೆಗಳ “ಆಲ್ಫಾ #MEN LOVE VENGEANCE ಟೀಸರ್ ಬಿಡುಗಡೆ
ಮಾಲೂರಿನ ಹೇಮಂತ್ ಕುಮಾರ್ “ಆಲ್ಫಾ #MEN LOVE VENGEANCE* ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ” ಗೀತಾ” ಹಾಗೂ “ಗುರುದೇವ ಹೊಯ್ಸಳ” ಚಿತ್ರಗಳ ನಿರ್ದೇಶಕ ವಿಜಯ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಲಹರಿ ವೇಲು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೆ ಮಾಸ್ತಿ ಅವರ ಮೂಲಕ ನಾಯಕ ಹೇಮಂತ್ ಕುಮಾರ್ ಅವರ ಪರಿಚಯವಾಯಿತು. ಅವರಿಗಿರುವ ಸಿನಿಮಾ ಬಗ್ಗೆಗಿನ ಆಸಕ್ತಿ ಬಹಳ ಇಷ್ಟವಾಯಿತು. ಹೇಮಂತ್ ಕುಮಾರ್ ಅವರು ಒಂದೊಳ್ಳೆ ಕಥೆ ಇದ್ದರೆ ಸಿನಿಮಾ ಮಾಡೋಣ ಎಂದು ಹೇಳಿದರು.
ಲವ್ ಜಾನರ್ ನ ಚಿತ್ರ ಬೇಡ ಎಂದರು. ಆಗ ಈ “ಆಲ್ಫಾ #MEN LOVE VENGEANCE* ಚಿತ್ರದ ಕಥೆ ಹೇಳಿದೆ. ಅವರಿಗೆ ಇಷ್ಟವಾಯಿತು. ಮಾರ್ಚ್ ನಲ್ಲಿ ಚಿತ್ರ ಪ್ರಾರಂಭವಾಯಿತು. ಈಗ ಮುಕ್ತಾಯ ಹಂತದಲ್ಲಿದೆ. ಫೆಬ್ರವರಿ ವೇಳೆಗೆ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಆಕ್ಷನ್ ಥ್ರಿಲ್ಲರ್ ಚಿತ್ರ ಮಾತ್ರವಲ್ಲ. ಸೆಂಟಿಮೆಂಟ್ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ.
ಇದು ಮೂರು ಜನ ಅಪ್ಪಂದಿರ ಹಾಗೂ ಮೂರು ಜನ ಮಕ್ಕಳ ಸುತ್ತ ನಡೆಯುವ ಕಥೆ. ಅಪ್ಪನ ತಂಟೆಗೆ ಯಾರಾದರೂ ಬಂದರೆ, ಮಕ್ಕಳ “ಪ್ರತಿಕಾರ” ಹೇಗಿರುತ್ತದೆ ಎಂದು ತಿಳಿಸುವ ಕಥೆಯೂ ಹೌದು. ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್, ನಾಯಕನಾಗಲೂ ಬೇಕಾಗಿರುವ ಪೂರ್ವಸಿದ್ದತೆಗಳನ್ನು ಮಾಡಿಕೊಂಡು ಬಂದಿದ್ದರು. ಹಾಗಾಗಿ ಅವರಿಗೆ ಅಭಿನಯ ಅಷ್ಟು ಕಷ್ಟವಾಗಲಿಲ್ಲ.
ಕೇರಳ ಮೂಲದ ಗೋಪಿಕಾ ಸುರೇಶ್ ಹಾಗೂ ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಆಯನಾ ಈ ಚಿತ್ರದ ನಾಯಕಿಯರು. “ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ಕೂಡ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವಿನಾಶ್, ಅಚ್ಯುತಕುಮಾರ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ವಿನಯ್ ಬಿದ್ದಪ್ಪ, ಮಹಾಂತೇಶ್, ರಾಘು ಶಿವಮೊಗ್ಗ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಜೆ.ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಸುಮಧುರ ಹಾಡುಗಳು ಹಾಗೂ ಕಾರ್ತಿಕ್ ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ ಎಂದು ನಿರ್ದೇಶಕ ವಿಜಯ್ ತಿಳಿಸಿದರು.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ಹೇಮಂತ್ ಕುಮಾರ್, ಮಾಲೂರು ಶ್ರೀನಿವಾಸ್ ಅವರ ಮೂಲಕ ಮಾಸ್ತಿ ಅವರ ಪರಿಚಯವಾಯಿತು. ಮಾಸ್ತಿ ಅವರು ನಿರ್ದೇಶಕ ವಿಜಯ್ ಅವರನ್ನು ಪರಿಚಯಿಸಿದರು. ವಿಜಯ್ ಅವರು ಹೇಳಿದ ಕಥೆ ಇಷ್ಟವಾಯಿತು. ನಂತರ ಈ ಸಿನಿಮಾ ಆರಂಭವಾಯಿತು. ನನಗೆ ನಾಯಕನಾಗಬೇಕೆಂಬುದು ಬಹಳ ದಿನಗಳ ಕನಸು.
ಆದರೆ ಪೂರ್ವ ತಯಾರಿ ಇಲ್ಲದೆ ನಟಿಸುವುದು ಬೇಡ ಅಂದುಕೊಂಡು ನಾಯಕನಾಗಲೂ ಬೇಕಾದ ಎಲ್ಲಾ ತರಭೇತಿಗಳನ್ನು ಪಡೆದುಕೊಂಡು ಬಂದು ಈ ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಮೊದಲ ಚಿತ್ರಕ್ಕೆ ಅಷ್ಟೇ ಒಳ್ಳೆಯ ತಂಡ ಸಿಕ್ಕಿದೆ. ನನ್ನ ತಂದೆ ಆನಂದ್ ಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. ಆದರೆ, ನಾನೇ ಪ್ರೊಡಕ್ಷನ್ ನೋಡಿಕೊಂಡಿದ್ದೇನೆ. ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರು ಸಹಕಾರ ನೀಡಿದ್ದಾರೆ. ಎಲ್ಲರ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಫೆಬ್ರವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದರು.
ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ವಿಶೇಷ ಹಾಗೂ ವಿಭಿನ್ನ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ಕಾರ್ತಿಕ್ ಮಹೇಶ್ ತಿಳಿಸಿದರು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದಾಗಿ ನಾಯಕಿ ಆಯನಾ ಹೇಳಿದರು. ನನ್ನದು ನಾಯಕನ ಪ್ರೇಯಸಿಯ ಪಾತ್ರ ಎಂದರು ಮತ್ತೊಬ್ಬ ನಾಯಕಿ ಗೋಪಿಕ ಸುರೇಶ್. ಚಿತ್ರದಲ್ಲಿ ನಟಿಸಿರುವ ಬಾಲು ನಾಗೇಂದ್ರ, ರಾಘು ಶಿವಮೊಗ್ಗ, ಮಹಾಂತೇಶ್, ವಿನಯ್ ಬಿದ್ದಪ್ಪ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಬಗ್ಗೆ ಅನೂಪ್ ಸೀಳಿನ್, ಸಂಭಾಷಣೆ ಕುರಿತು ಮಾಸ್ತಿ ಮಾಹಿತಿ ನೀಡಿದರು. ಛಾಯಾಗ್ರಾಹಕ ಕಾರ್ತಿಕ್ , ಕಲಾ ನಿರ್ದೇಶಕ ಅಮರ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
