ಇದೇ 15 ರಂದು “45” ಚಿತ್ರದ ಟ್ರೇಲರ್ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ನೇರ ಪ್ರಸಾರ ಇವೆಂಟ್ ನಲ್ಲಿ ಬಿಡುಗಡೆ
ಬೆಂಗಳೂರಿನಲ್ಲಿ ಅದ್ದೂರಿ ಇವೆಂಟ್. ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನ ನೇರ ಪ್ರಸಾರ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಲ್ಟಿಸ್ಟಾರರ್ “45” ಚಿತ್ರ ಡಿಸೆಂಬರ್ 25 ಕ್ರಿಸ್ಮಸ್ ದಿನದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಡಿಸೆಂಬರ್ 15 ರಂದು ಟ್ರೇಲರ್ ಅನಾವರಣವಾಗಲಿದೆ.
ಟ್ರೇಲರ್ ಬಿಡುಗಡೆ ಸಮಾರಂಭವನ್ನು ವಿಭಿನ್ನವಾಗಿ ಅಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಟ್ರೇಲರ್ ಇವೆಂಟ್ ಬಗ್ಗೆ ಮಾಹಿತಿ ನೀಡಿದರು. ಇವೆಂಟ್ ಮ್ಯಾನೇಜ್ಮೆಂಟ್ ನ ನವರಸನ್ ಅವರು ಉಪಸ್ಥಿತರಿದ್ದರು.
ನಮ್ಮ “45” ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಡಿಸೆಂಬರ್ 15 ರಂದು ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಕೆಂಪೇಗೌಡ ಮೈದಾನ(ಡೊಂಕಳ), ಶಂಕರ್ ನಾಗ್ ಸರ್ಕಲ್, ಶ್ರೀನಿವಾಸನಗರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಈವರೆಗೂ ಯಾರು ಮಾಡಿರದ ವಿಭಿನ್ನ ಪ್ರಯತ್ನವನ್ನು ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಡೆಯುವ ಇವೆಂಟ್ ಅನ್ನು ಕರ್ನಾಟಕದ ಏಳು ಪ್ರಮುಖ ಜಿಲ್ಲೆಗಳ ಚಿತ್ರಮಂದಿರದಲ್ಲಿ ಕ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುವುದು.
ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಈ ಏಳು ಊರುಗಳ ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ಆಯಾ ಜಿಲ್ಲೆಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ಪ್ರವೇಶವಿರುತ್ತದೆ. ಏಕಕಾಲಕ್ಕೆ ಏಳು ಊರುಗಳಲ್ಲೂ ಟ್ರೇಲರ್ ಅನಾವರಣವಾಗಲಿದೆ. ಟ್ರೇಲರ್ ವೀಕ್ಷಣೆಯ ನಂತರ ಅಭಿಮಾನಿಗಳನ್ನುದ್ದೇಶಿಸಿ ಚಿತ್ರದ ಮೂವರು ನಾಯಕರು ಮಾತನಾಡಲಿದ್ದಾರೆ. ಇಲ್ಲಿಯವರೆಗೂ ನಮಗೆ ತಿಳಿದ ಹಾಗೆ ಯಾರು ಈ ಪ್ರಯತ್ನ ಮಾಡಿಲ್ಲ. ಇದೇ ಮೊದಲು ಎನ್ನಬಹುದು.
ಇಷ್ಟೇ ಅಲ್ಲದೆ ಟ್ರೇಲರ್ ಬಿಡುಗಡೆ ದಿನ ಮತ್ತೊಂದು ವಿಶೇಷ ಕೂಡ ಇರಲಿದೆ. ಅದು ಏನೆಂದು ಎಲ್ಲರಿಗೂ ಆ ದಿನವೇ ತಿಳಿಯುತ್ತದೆ. ಡಿಸೆಂಬರ್ 15ರ ನಂತರ ಚಿತ್ರತಂಡ ಪ್ರಚಾರ ಕಾರ್ಯದ ನಿಮಿತ್ತವಾಗಿ ಬೇರೆ ರಾಜ್ಯಗಳಿಗೆ ಭೇಟಿ ನೀಡಲಿದೆ ಎಂದು ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದರು.
ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಚಿತ್ರವನ್ನು ನಿರ್ಮಿಸಿರುವ ಹೆಮ್ಮೆ ಇದೆ. ಅದನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯೂ ಇದೆ. ಡಿಸೆಂಬರ್ 15 ರ ಟ್ರೇಲರ್ ಬಿಡುಗಡೆ ಸಮಾರಂಭ ವಿಭಿನ್ನವಾಗಿ ನಡೆಯಲಿದೆ. ಚಿತ್ರದ ಆರಂಭದಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಹಾಗೆ ಮುಂದುವರೆಯಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ
ಮೊದಲಿನಿಂದಲೂ ಹಲವು ವಿಶೇಷಗಳಿಗೆ ಸಾಕ್ಷಿಯಾಗಿರುವ “45” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಸಹ ವಿಶೇಷ ಹಾಗೂ ವಿಭಿನ್ನವಾಗಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾರಂಭದ ನೇರಪ್ರಸಾರವನ್ನು ಕರ್ನಾಟಕದ ಪ್ರಮುಖ ಏಳು ಊರುಗಳ ಚಿತ್ರಮಂದಿರದಲ್ಲಿ ಕ್ಯೂಬ್ ಬಳಸಿ ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ ಆ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ. ಅವರು ಎಂಟು ಕಡೆ ಮಾಡಬಹುದು ಎಂದರು. ನಿರ್ಮಾಪಕರು ಎಂಟು ಕಡೆ ಬೇಡ. ಏಳು ಊರುಗಳಲ್ಲಿ ಮಾಡೋಣ. ಏಳು ನನ್ನ ಅದೃಷ್ಟದ ಸಂಖ್ಯೆ ಎಂದರು. ಇಡೀ ಭಾರತದಲ್ಲೇ ಇದು ಮೊದಲ ಪ್ರಯತ್ನ ಎನ್ನಬಹುದು ಎಂದು ಈಗಲ್ ಮೀಡಿಯಾ ಇವೆಂಟ್ ಮ್ಯಾನೇಜ್ಮೆಂಟ್ ನ ನವರಸನ್ ಹೇಳಿದರು.
