ಜೆ.ಕೆ.ಗ್ರ್ಯಾಂಡ್ ಅರೇನಾ ಆವರಣದಲ್ಲಿ ಡ್ರಾಮಾ ಸ್ಟೇಜ್ ಸೆಟ್ ನಲ್ಲಿ ‘ವೇಷಗಳು’ ಚಿತ್ರಕ್ಕೆ ಮುಹೂರ್ತ
ಪತ್ರಕರ್ತ ರವಿ ಬೆಳಗೆರೆ ಅವರ ವೇಷಗಳು ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ವೇಷಗಳು. ಈ ಚಿತ್ರದ ಮುಹೂರ್ತ ಸಮಾರಂಭ ಮೈಸೂರು ರಸ್ತೆಯ ಕೆಂಗೇರಿ ಸಮೀಪದ ಜೆ.ಕೆ.ಗ್ರ್ಯಾಂಡ್ ಅರೇನಾ ಆವರಣದಲ್ಲಿ ಹಾಕಲಾಗಿರುವ ಬೃಹತ್ ಡ್ರಾಮಾ ಸ್ಟೇಜ್ ಸೆಟ್ ನಲ್ಲಿ ನೆರವೇರಿತು. ಮುಹೂರ್ತ ದೃಶ್ಯಕ್ಕೆ ಡಿ.ವೈ.ಎಸ್.ಪಿ. ರಾಜೇಶ್ ಕ್ಲಾಪ್ ಮಾಡಿದರು. ಶಾಕುಂತಲಾ ದುಷ್ಯಂತ ಮಹಾರಾಜನ ನಾಟಕವೇ ಚಿತ್ರದ ಪ್ರಥಮ ದೃಶ್ಯ.
ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಟೀಚರ್ ಆದ ಸೌಜನ್ಯ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರ ಅಲ್ಲದೆ ಜೋಗತಿಯರ ಜೀವನ ಶೈಲಿಯ ಬಗ್ಗೆಯೂ ಹೇಳಲಾಗುತ್ತಿದ್ದು, ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಹೂರ್ತದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಟ, ನಿರ್ಮಾಪಕ ಶ್ರೀನಗರ ಕಿಟ್ಟಿ, ನಾಯಕ ಭರತ್ ಬೋಪಣ್ಣ, ನಾಯಕಿ ಅಂಕಿತಾ ಅಮರ್, ಹಿರಿಯನಟ ಶರತ್ ಲೋಹಿತಾಶ್ವ, ತಬಲಾನಾಣಿ, ಸಂಗೀತ ನಿರ್ದೇಶಕ ಕೌಶಿಕ್ ಹರ್ಷ, ಸಾಹಿತಿ ಕವಿರಾಜ್, ಛಾಯಾಗ್ರಾಹಕ ಮನೋಹರ ಜೋಷಿ ಚಿತ್ರದ ಕುರಿತಂತೆ ಮಾತನಾಡಿದರು.
ಮೊದಲಿಗೆ ನಿರ್ದೇಶಕ ಕಿಶನ್ ರಾವ್ ಮಾತನಾಡಿ ಆರಂಭದಲ್ಲಿ ಒಂದಷ್ಟು ನಾಟಕ ಮಾಡಿ, ಅಸಿಸ್ಟೆಂಟ್ ಡೈರೆಕ್ಟರ್ ಆಗೂ ದುಡಿದೆ. ವೇಷಗಳು ಕಥೆ ಓದಿದಾಗ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರತ್ತೆ ಅನಿಸಿತು. ಭಾವನಾ ಬೆಳಗೆರೆ ಅವರಿಗೆ ಕೇಳಿದಾಗ ಅವರೂ ಒಪ್ಪಿದರು. ಬಹುತೇಕ ರಂಗಸಜ್ಜಿಕೆಯೊಳಗೇ ನಡೆಯುವ, ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆಯಿದು. ಮಾಲೂರು ವಿಜಯ್ ಅವರು ಅದ್ಭುತವಾದ ಡ್ರಾಮಾ ಸೆಟ್ ಗಳನ್ನು ಹಾಕಿಕೊಟ್ಟಿದ್ದಾರೆ. ಡಿಓಪಿ ಆಗಿ ಮನೋಹರ ಜೋಷಿ ಸಿಕ್ಕಮೇಲೆ ಬೇರೆಯದೇ ಎನರ್ಜಿ ಬಂತು. ಕವಿರಾಜ್, ನಾಗೇಂದ್ರ ಪ್ರಸಾದ್, ಕಲ್ಯಾಣ್, ವಿ.ಮನೋಹರ್ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರದಲ್ಲಿ 40ರಿಂದ 50 ಭಾಗ ನಾಟಕದ ಎಪಿಸೋಡ್ ಬರುತ್ತದೆ. ಈ ಕಥೆ ಬಳ್ಳಾರಿಯಿಂದ ಶುರುವಾಗಿ ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು ಅಲ್ಲದೆ ಮಧ್ಯಪ್ರದೇಶದ
ಮಹೇಶ್ವರದವರೆಗೂ ಸಾಗುತ್ತದೆ ಎಂದರು.
ಶ್ರೀನಗರ ಕಿಟ್ಟಿ ಮಾತನಾಡುತ್ತ ಇದು ಸಣ್ಣ ಕಥೆ. ಕಿಶೋರ್ ಇದನ್ನು ಸಿನಿಮಾ ಮಾಡ್ತೀನಿ ಅಂದಾಗ ನನ್ನ ಹೆಂಡ್ತಿ ಒಪ್ಪಿದಳು. ರಂಗಭೂಮಿಯ ಒಳಹರಿವುಗಳು ಹೇಗಿರುತ್ತೆ. ಅಲೆಮಾರಿ ತಂಡಗಳು ಯಾವರೀತಿ ಇರುತ್ತವೆ, ಇದನ್ನೆಲ್ಲ ನಮ್ಮ ಚಿತ್ರದಲ್ಲಿ ಹೇಳುತ್ತಿದ್ದೇವೆ. ೨೦೦೦ದಲ್ಲಿ ಇದ್ದ ರಂಗಭೂಮಿ ಅದರ ನಡುವೆ ಒಂದು ಪ್ರೇಮಕಥೆಯೂ ಸಾಗುತ್ತದೆ. ಅಂಕಿತ ಒಳ್ಳೆ ಪರ್ ಫಾರ್ಮರ್. ನನ್ನ ಪಾತ್ರ ಬಸಪ್ಪ, ಬಸಮ್ಮ ಹೀಗೆ ಎರಡು ಶೇಡ್ ಗಳಲ್ಲಿ ಬರುತ್ತೆ, ಇದೊಂದು ಹೊಸ ಪ್ರಯತ್ನ ಎಂದು ವಿವರಿಸಿದರು.
ಶರತ್ ಲೋಹಿತಾಶ್ವ ಮಾತನಾಡುತ್ತ ನಾನಿಲ್ಲಿ ಸಿಂಹಣ್ಣ ಎಂಬ ಪವರ್ ಫುಲ್ ಪಾತ್ರ ಮಾಡುತ್ತಿದ್ದೇನೆ. ಅಲ್ಲದೆ ತುಂಬಾ ವರ್ಷದಿಂದ ಕಿಶನ್ ಹೋರಾಟ ನೋಡ್ತಾ ಬಂದಿದ್ದೇನೆ. ಇನ್ನು ಕಿಟ್ಟಿ ಜತೆ ತುಂಬಾ ಟ್ರಾವೆಲ್ ಮಾಡಿದ್ದೇನೆ ಎಂದರು. ತಬಲಾನಾಣಿ ಮಾತನಾಡಿ ಇವರೆಲ್ಲರ ಜತೆ ನಾನೂ ಒಂದು ಪಾತ್ರ ಮಾಡುತ್ತಿದ್ದೇನೆ ಎನ್ನುವುದೇ ಹೆಮ್ಮೆಯ ವಿಷಯ. ನಾಟಕ ತಂಡದಲ್ಲಿ ಹಾರ್ಮೋನಿಯಂ ಬಾರಿಸುವ ಪಾತ್ರ ನನ್ನದು ಎಂದರು.
ನಾಯಕಿ ಅಂಕಿತಾ ಅಮರ್ ಮಾತನಾಡಿ, ನಮ್ಮ ದೈನಂದಿನ ಜೀವದಲ್ಲಿ ಒಂದೊಂದು ವೇಷ ಹಾಕಿಕೊಂಡೇ ಓಡಾಡುತ್ತೇವೆ. ಒಳಗಿರುವ ಕಾಣದ ವೇಷಗಳನ್ನು ತೋರಿಸುವ ಪ್ರಯತ್ನ ಮಾಡ್ತಿದ್ದೇವೆ. ನನ್ನದು ಅಲಮೇಲು ಪಾತ್ರ, ಆಕೆಯ ಆಸೆ, ಕನಸುಗಳು ಏನು ಎಂದು ಬಿಂಬಿಸುತ್ತದೆ ಎಂದರು. ನಾಯಕ ಭರತ್ ಬೋಪಣ್ಣ ಮಾತನಾಡಿ ಚಿನ್ನಲ್ಲ ಎಂಬ ಮುಗ್ಧ ಹುಡುಗನ ಪಾತ್ರ ನನ್ನದು ಎಂದರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ಡ್ರಾಮಾ ಹಿನ್ನೆಲೆಯ ಕಥೆಯಾದ್ದರಿಂದ 12 ಹಾಡುಗಳು ಚಿತ್ರದಲ್ಲಿರುತ್ತವೆ ಎಂದರು. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಅಕ್ಷಯ್ ಪಿ.ರಾವ್ ಅವರ ಸಂಕಲನ, ಐಶ್ವರ್ಯ ಅವರ ವಸ್ತ್ರಾಲಂಕಾರ ಈ ಚಿತ್ರಕ್ಕಿದೆ.
