Cini NewsMovie ReviewSandalwood

ಟ್ರ್ಯಾಪ್ಪಿಂಗ್ ಸುಳಿಯಲ್ಲಿ ಹೆಣ್ಣು ಮಕ್ಕಳ ಭವಿಷ್ಯ ” ಮಾರುತ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ಮಾರುತ
ನಿರ್ದೇಶಕ : ಎಸ್. ನಾರಾಯಣ್
ನಿರ್ಮಾಪಕರು : ಕೆ.ಮಂಜು , ರಮೇಶ್ ಯಾದವ್
ಸಂಗೀತ : ಜೆಸಿ ಗಿಫ್ಟ್
ಛಾಯಾಗ್ರಹಣ : ಪಿಕೆಎಚ್ ದಾಸ್
ತಾರಾಗಣ : ದುನಿಯಾ ವಿಜಯ್ , ಶ್ರೇಯಸ್ ಮಂಜು, ಬೃಂದಾ ಆಚಾರ್ಯ , ವಿಶೇಷ ಪಾತ್ರದಲ್ಲಿ ರವಿಚಂದ್ರನ್ , ನಿಶ್ವಿಕ ನಾಯ್ಡು , ಶರತ್ ಲೋಹಿತಾಶ್ವ , ತಾರಾ, ರಂಗಾಯಣ ರಘು, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ, ವಿನಯ್ ಬಿದ್ದಪ್ಪ , ರಣವ್ ಹಾಗೂ ಮುಂತಾದವರು…

 

ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಜೊತೆ ಹೆಚ್ಚು ಒಡನಾಟಕ್ಕಿಂತ ಮೊಬೈಲ್ ಒಡನಾಟವೇ ಹೆಚ್ಚಾಗಿದೆ. ಪ್ರೈವಸಿ ಬೇಕೆನ್ನುತ್ತ ಫೇಸ್ಬುಕ್ , ಇನ್ಸ್ಟಾ , ಎಕ್ಸ್ ಖಾತೆಗಳಲ್ಲಿ ಚಾಟಿಂಗ್ ಮಾಡುವುದನ್ನೇ ನಿತ್ಯ ಕೆಲಸ ಮಾಡಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅದೆಷ್ಟು ಹೆಣ್ಣು ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಾ ದಂಧೆಗೆ , ವಿದೇಶಗಳಿಗೆ ಮಾರಾಟ ಮಾಡುವ ದೊಡ್ಡ ಜಾಲವೇ ಸದ್ದು ಮಾಡುತ್ತಿದೆ.

ಇಂತದ್ದೇ ಒಂದು ಸೂಕ್ಷ್ಮ ವಿಚಾರದ ಜೊತೆಗೆ ವಿದ್ಯೆಗೆ ನೈವೇದ್ಯ ಮಾಡಿಕೊಂಡು ಸಿನಿಮಾ ಹುಚ್ಚು ಬೆಳೆಸಿಕೊಳ್ಳುವ ಹುಡುಗನ ಬದುಕಲ್ಲಿ ಪ್ರೀತಿಯ ಸೆಳೆತ ಏನೆಲ್ಲ ಮಾಡುತ್ತದೆ ಎಂಬುದನ್ನು ಕುತೂಹಲಕಾರಿಯಾಗಿ ಈ ವಾರ ಪ್ರೇಕ್ಷಕರ ಮುಂದೆ ತಂದಿರುವಂತಹ ಚಿತ್ರ “ಮಾರುತ”. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಟ್ರ್ಯಾಪ್ಪಿಂಗ್ ಮೂಲಕ ಹೆಣ್ಣು ಮಕ್ಕಳ ಕಿಡ್ನಾಪ್ ಪ್ರಕರಣ ನಿರಂತರವಾಗಿ ನಡೆಯುತ್ತಿರುತ್ತದೆ.

ಇದು ಇಲಾಖೆಗೆ ದೊಡ್ಡ ಸವಾಲಾಗಿದ್ದು ಕ್ರೈಂ ಬ್ರಾಂಚ್ ನ ಡಿವೈಎಸ್ಪಿ ಅನಿಶ್ ಪಾಟೀಲ್ (ದುನಿಯಾ ವಿಜಯ್) ಈ ಕೇಸನ್ನ ಪತ್ತೆ ಹಚ್ಚಲು ಮುಂದಾಗುತ್ತಾರೆ. ಇನ್ನು ಕಾಲೇಜಿನಲ್ಲಿ ಓದಿಕೊಳ್ಳುತ್ತಾ ಹಾಸ್ಟೆಲ್ ಲೈಫ್ ನಲ್ಲಿ ಸಾಗುವ ಈಶ್ವರ್ (ಶ್ರೇಯಸ್ ಮಂಜು) ತನ್ನ ಗೆಳೆಯರೊಟ್ಟಿಗೆ ಓಡಾಡಿಕೊಂಡು ಹುಡುಗಿಯರನ್ನು ಪಟಾಯಿಸುವುದೇ ಕೆಲಸವಾಗಿರುತ್ತದೆ. ಮಲೆನಾಡಿನ ಸುಂದರ ಪರಿಸರದ ಊರಿನ ನಡುವೆ
ದಿನಸಿ ಅಂಗಡಿ ವ್ಯಾಪಾರ ನಡೆಸುವ ಚಂದ್ರಪ್ಪ (ಶರತ್ ಲೋಹಿತಾಶ್ವ) ಹಾಗೂ ಆತನ ಪತ್ನಿ (ತಾರಾ ಅನುರಾಧ)ಗೆ ತಮ್ಮ ಮಗನೇ ಜೀವ. ಇನ್ನು ಊರಿಗೆ ಬರುವ ಈಶ್ವರನಿಗೆ ಗೆಳೆಯರ ಜೊತೆಗೆ ತನ್ನ ಸೋದರಮಾವ ಸಿಂಗಾರಪ್ಪ (ಸಾಧುಕೋಕಿಲ) ನ ತರ್ಲೆ , ತುಂಟಾಟ ನಿರಂತರ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಯಾಗಿರುವ ಈಶ್ವರ್ ಗೆ ಸಿನಿಮಾ ಮಾಡುವ ದಾರಿಗೆ ಮಾವ ಹಾಗೂ ಗೆಳೆಯರ ಸಾಥ್ ಕೂಡ ಇರುತ್ತದೆ. ಅಚಾನಕ್ಕಾಗಿ ತನ್ನ ಮನೆಯ ಎದುರು ಮುದ್ದಾದ ಹುಡುಗಿಯ ಕುಟುಂಬ ಬರುತ್ತದೆ. ಆಕೆಯ ಮೊದಲು ನೋಟಕ್ಕೆ ಮನಸೋತು ಪ್ರೀತಿಸಲು ಮುಂದಾಗುವ ಹುಡುಗಿಯ ಹೆಸರು ಅನನ್ಯ (ಬೃಂದಾ ಆಚಾರ್ಯ) ಎಂದು ತಿಳಿಯುತ್ತದೆ. ಮಗನ ವಿದ್ಯಾಭ್ಯಾಸ ಹಾಗೂ ಸಿನಿಮಾ ಹುಚ್ಚು ತಿಳಿಯುವ ತಂದೆ ತಾಯಿ ಮಗನನ್ನು ಬೈದು ತನ್ನೊಟ್ಟಿಗೆ ಅಂಗಡಿಯಲ್ಲಿ ಕೆಲಸ ಮಾಡುವಂತೆ ಹೇಳುತ್ತಾರೆ. ಇದರಿಂದ ಊರು ಬಿಡುವ ಈಶ್ವರ್ಗೆ ಟ್ರೈನ್ ನಲ್ಲಿ ಅನನ್ಯ ಸಿಗುತ್ತಾಳೆ. ಸೆಲ್ಫಿ ತೆಗೆದುಕೊಳ್ಳುವಾಗ ತನ್ನ ಟ್ಯಾಬ್ ಕಳವಾಗುತ್ತದೆ. ಮಾವನ ಎಡವಟ್ಟಿನಿಂದ ಇಬ್ಬರೂ ಓಡಿ ಹೋಗಿದ್ದಾರೆ ಎಂಬ ಸುದ್ದಿ ಹರಡುತ್ತದೆ. ತಾನು ಹಾಗೂ ಅನನ್ಯ ಓಡಿ ಹೋಗಿಲ್ಲ ಎಂದು ಹೇಳಿದರು ಊರಿನ ಮುಖ್ಯಸ್ಥ ಪಾಪಣ್ಣ (ರಂಗಾಯಣ ರಘು) ಸೇರಿದಂತೆ ಯಾರು ನಂಬುವ ಸ್ಥಿತಿ ಇರುವುದಿಲ್ಲ. ಪೊಲೀಸ್ ಕಂಪ್ಲೇಂಟ್ ಆಗಿದ್ದ ಕಾರಣ ಆಕೆಯನ್ನು ಹುಡುಕುತ್ತಾ ಈಶ್ವರ್ ಹಾಗೂ ಮಾವ ಹೋಗುತ್ತಾರೆ. ಇನ್ನೊಂದೆಡೆ ಪೊಲೀಸ ಅಧಿಕಾರಿ ಅನಿಶ್ ಪಾಟೀಲ್ ಗೆ ಈಶ್ವರ್ ಹಾಗೂ ಅನನ್ಯ ಸೆಲ್ಫಿ ಫೋಟೋ ಸಿಗುತ್ತದೆ. ಅನನ್ಯಗಳನ್ನು ಹುಡುಕುವ ಹಾದಿಯಲ್ಲಿ ಒಂದಷ್ಟು ಸತ್ಯಗಳು ಹೊರ ಬರುತ್ತಾ ಹೋಗುತ್ತದೆ. ಆಕೆಗೆ ವಿವೇಕ್ ಕುಲಕರ್ಣಿ ಎಂಬ ಫೇಸ್ಬುಕ್ ಬಾಯ್ ಫ್ರೆಂಡ್ ವಿಚಾರ ಬೇರೆಯದೇ ದಿಕ್ಕನ್ನ ತೋರುತ್ತದೆ. ಇನ್ನು ತನ್ನದೇ ತಂಡದ ಜೊತೆ ಹುಡುಗಿಯರನ್ನ ಟ್ರಾಫಿಂಗ್ ಮಾಡುವ ವಂಚಕ ಮ್ಯಾಥ್ಯೂ ಕರಾಳ ಜಾಡು ತೆರೆದುಕೊಳ್ಳುತ್ತದೆ… ಮುಂದೆ ನಡೆಯುವ ರೋಚಕ ತಿರುವುಗಳು ಹಲವು ದಾರಿಯಲ್ಲಿ ಸಾಗಿ ಕ್ಲೈಮಾಕ್ಸ್ ನಲ್ಲಿ ಎಚ್ಚರಿಕೆಯ ಸಂದೇಶ ನೀಡುತ್ತದೆ ಅದು ಏನು ಎಂಬುದನ್ನು ನೀವು ಚಿತ್ರಮಂದಿರದಲ್ಲಿ ನೋಡಬೇಕು.

ಇನ್ನು ಹಿರಿಯ ನಿರ್ದೇಶಕ ಎಸ್. ನಾರಾಯಣ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಜನರಲ್ಲಿ ಜಾಗೃತಿ ಮೂಡಿಸುವ ಅಂಶವನ್ನು ಒಳಗೊಂಡಿದೆ. ಸಂಬಂಧಗಳ ಮೌಲ್ಯ , ಬದುಕಿನ ಪಾಠದ ಜೊತೆಗೆ ಮೊಬೈಲ್ ದುರ್ಬಳಕೆಯ ಸೂಕ್ಷ್ಮತೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ವೇಗ ಮಾಡಬಹುದಿತ್ತು, ಕೆಲವು ಸಂದರ್ಭ ಹಾಗೂ ಹಾಸ್ಯ ಸನ್ನಿವೇಶಗಳು ಓಟಕ್ಕೆ ಅಡ್ಡಿ ಮಾಡಿದಂತಿದೆ. ಸಂದೇಶದ ಜೊತೆಗೆ ಜಾಗೃತಿ ಮೂಡಿಸುವ ಚಿತ್ರವನ್ನು ನಿರ್ಮಿಸಿರುವ ನಿರ್ವಾಪಕ ಕೆ ಮಂಜು ಹಾಗೂ ರಮೇಶ್ ಯಾದವ್ ರವರ ಆಲೋಚನೆ ಮೆಚ್ಚಲೇಬೇಕು.

ಚಿತ್ರದ ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕವು ಅದ್ಭುತವಾಗಿದೆ. ಇನ್ನು ಇಡೀ ಚಿತ್ರದ ಕೇಂದ್ರಬಿಂದುವಾಗಿ ದುನಿಯಾ ವಿಜಯ್ ಗಮನ ಸೆಳೆಯುತ್ತಾರೆ. ಒಬ್ಬ ಪೊಲೀಸ್ ಇನ್ವೆಸ್ಟಿಗೇಷನ್ ಅಧಿಕಾರಿಯಾಗಿ ಖಡಕ್ ಹಾಗೂ ಗತ್ತಿನ ಮೂಲಕ ಅಬ್ಬರಿಸುವುದರ ಮೂಲಕ ಜೊತೆಗೆ ಜಾಗೃತಿ ಮೂಡಿಸಿದ್ದಾರೆ. ಅದೇ ರೀತಿ ನಾಯಕ ನಟ ಶ್ರೇಯಸ್ ಮಂಜು ಕೂಡ ಬಹಳ ಸೊಗಸಾಗಿ ತನ್ನ ಪಾತ್ರಕ್ಕೆ ಜೀವ ತುಂಬಿದ್ದು , ಆಕ್ಷನ್ ಸನ್ನಿವೇಶವನ್ನು ಕೂಡ ಅದ್ಭುತವಾಗಿ ನಿರ್ವಹಿಸಿದ್ದಾರೆ.

ಬಹಳ ಮುದ್ದಾಗಿ ಕಾಣುವ ಬೃಂದಾ ಆಚಾರ್ಯ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ರವಿಚಂದ್ರನ್ ಅಭಿಮಾನಿಗೆ ತನ್ನತನ ಉಳಿಸಿಕೊಳ್ಳುವ ಮಾತನ್ನು ಸೊಗಸಾಗಿ ಹೇಳಿದ್ದಾರೆ. ಇನ್ನು ಸಾಧು ಕೋಕಿಲ ಹಾಸ್ಯ ಅತಿರೇಕದ ಜೊತೆ ಸಾಗಿ ಕೊಂಡು ಹೋಗಿದೆ. ಇನ್ನುಳಿದಂತೆ ಶರತ್ ಲೋಹಿತಾಶ್ವ , ತಾರಾ, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ, ವಿನಯ್ ಬಿದ್ದಪ್ಪ , ರಣವ್ ಪಾತ್ರಗಳು ಚಿತ್ರಕ್ಕೆ ಓಟಕ್ಕೆ ಸಾತ್ ನೀಡಿದ್ದಾರೆ. ಇನ್ನು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

error: Content is protected !!