*5ಭಾಷೆಗಳಲ್ಲಿ “ಜೀರೋ ಟು ಒನ್” ಚಿತ್ರದ ಮುಹೂರ್ತ ಸದ್ಯದಲ್ಲೇ ಶುರು.*
ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ನಿರ್ಮಾಣ ತೀರಾ ಕಮ್ಮಿ, ಈ ಹಿಂದೆ ಒಂದಷ್ಟು ಪ್ರಯತ್ನಗಳು ನಡೆದಿವೆ. ಮೂಲತಃ ಒಬ್ಬ ಕನ್ನಡಿಗನಾದ ನಾಗವೇಣಿ ಸಂತೋಷ ಅವರು ಇಂಥ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. “ಜೀರೋ ಟು ಒನ್” ಎಂಬ ಮೋಟಿವೇಶನ್ ಜಾನರ್ ಚಿತ್ರವನ್ನು ಇಂಗ್ಲೀಷ್, ಹಿಂದಿ, ಕನ್ನಡ ಸೇರಿದಂತೆ 5ಭಾಷೆಯಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ಎ.ಯು. ಮೂವೀಸ್ ಮೂಲಕ ನಾಗವೇಣಿ ಸಂತೋಷ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ನಾಗವೇಣಿ ಸಂತೋಷ ಅವರೇ ಚಿತ್ರದ ನಾಯಕನಾಗಿಯೂ ಸಹ ನಟಿಸುತ್ತಿದ್ದು, ನಾಯಕಿಯಾಗಿ ರಕ್ಷಿತಾ ಗೌಡ, ಮನೀಷಾ ಭಟ್ ಅಲ್ಲದೆ ಸುಮಾ, ನಕ್ಷತ್ರ, ರಿತ್ವಿಕಾ ಉಳಿದ ತಾರಾಗಣದಲ್ಲಿದ್ದಾರೆ. ವೆಂಕಟೇಶ ನಾಕಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಹೀಗೆ 5 ಭಾಷೆಗಳಲ್ಲಿ ಜೀರೋ ಟು ಒನ್ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಕಂ ನಿರ್ದೇಶಕ ನಾಗವೇಣಿ ಸಂತೋಷ, “ಇದು ನನ್ನ 13ವರ್ಷಗಳ ಕನಸು, ಒಬ್ಬ ಕನ್ನಡಿಗನಾಗಿ ಹಾಲಿವುಡ್ ಸಿನಿಮಾ ನಿರ್ದೇಶಿಸುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗ್ತಿದೆ. ಇದೊಂದು ಮೋಟಿವೇಶನಲ್ ಚಿತ್ರವಾಗಿದ್ದು, 5 ವಿಭಿನ್ನ ಭಾಷೆಗಳಲ್ಲಿ ಮಾಡುತ್ತಿದ್ದೇವೆ. ಅನುಭವಿ ನಿರ್ದೇಶಕರ, ತಂತ್ರಜ್ಞರ ಪ್ರೇರೇಪಣೆ ಪಡೆದು ಈ ಚಿತ್ರ ಮಾಡುತ್ತಿದ್ದೇವೆ. ಸಧ್ಯದಲ್ಲೇ ಚಿತ್ರದ ಮುಹೂರ್ತ ನಡೆಸಿ, ಶೂಟಿಂಗ್ ಪ್ರಾರಂಭಿಸುತ್ತಿದ್ದೇವೆ. ಬೆಂಗಳೂರು ಅಲ್ಲದೆ ವಿದೇಶಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಸದ್ಯದಲ್ಲೇ ಉಳಿದ ತಂತ್ರಜ್ಞರನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದರು.