“ಜಿ.ಎಸ್.ಟಿ.” ಚಿತ್ರದಲ್ಲಿ ಸಂಹಿತಾ ವಿನ್ಯಾ ಚಮೇಲಿ ಚಲ್ ಚಲ್.
ಚಂದನವನದಲ್ಲಿ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಸುಮಾರು 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾ. ಇದೀಗ ಅವರು ಸಂದೇಶ್ ಪ್ರೊಡಕ್ಷನ್ ನಿರ್ಮಾಣದ, ಸೃಜನ್ ಲೋಕೇಶ್ ನಿರ್ದೇಶನದ ಜಿ.ಎಸ್ .ಟಿ. ಚಿತ್ರದ ಚಮೇಲಿ ಚಲ್ ಚಲ್ ಡ್ಯಾನ್ಸ್ ನಂಬರ್ ಹಾಡಿನಲ್ಲಿ ಅದ್ಭುತವಾದ ಮಾದಕ ನೃತ್ಯ ಪ್ರದರ್ಶನ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ವಿಜಯ್ ಈಶ್ವರ್ ರಚನೆಯ ‘ಪೌಡ್ರ ಗೀಡ್ರ ಹಚ್ಕೊಂಡು…. ನಾನು ಕಾಶ್ಮೀರಿ ಕೇಸರಿ ತಿನ್ಕಂಡ್ ಬೆಳೆದವ್ಳು’ ಎಂಬ ಹಾಡಲ್ಲಿ ನಾಯಕ ಸೃಜನ್ ಲೋಕೇಶ್, ಚಂದನ್ ಶೆಟ್ಟಿ, ತಬಲಾ ನಾಣಿ ಅವರ ಜತೆ ಸಂಹಿತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡೇ ಜಿಎಸ್ ಟಿ ಚಿತ್ರದ ಹೈಲೈಟ್ ಆಗುತ್ತಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಹಾಡಲ್ಲಿ ಸಂಹಿತಾ ಅವರು ಅದ್ಭುತ ಪರ್ಫಾರ್ಮನ್ಸ್ ನೀಡಿದ್ದಾರೆ ಎಂದು ಹೊಗಳುತ್ತಿದ್ದಾರೆ.


ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಸಂಹಿತಾ ವಿನ್ಯಾ ಅವರ ಅಭಿಮಾನಿಗಳ ಬಳಗ ದೊಡ್ಡದು. ಅವರ ನಟನೆಯ ಎಲ್ಲಾ ಚಿತ್ರಗಳಿಗೂ ಅವರ ಅಭಿಮಾನಿಗಳೇ ಥೇಟರ್ ಮುಂದೆ ಕಟೌಟ್ ನಿಲ್ಲಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಸಧ್ಯ ಸಂಹಿತಾ ವಿನ್ಯಾ ಅಭಿನಯದ ಜಿಎಸ್ ಟಿ. ಈವಾರ ತೆರೆ ಕಾಣುತ್ತಿದ್ದು, ಮಿಕ್ಸಿಂಗ್ ಪ್ರೀತಿ, ‘ಮೆಜೆಸ್ಟಿಕ್ -2’, ಆಯುಧ, ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಮುಂತಾದ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಅಮೃತಘಳಿಗೆ, ಲಂಗೋಟಿ ಮ್ಯಾನ್ ಅಲ್ಲದೆ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ.


ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೆ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದಲ್ಲದೆ ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಅಭಿನಯದ ಸಿನಿಮಾ, ಅಲ್ಲದೆ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ಇದಲ್ಲದೆ ಮಿಕ್ಸಿಂಗ್ ಕಾದಲ್ ಎಂಬ ತಮಿಳು ಚಿತ್ರ ಬಿಡುಗಡೆಗೆ ರೆಡಿಯಿದೆ. ಇದರ ಜತೆಗೆ ಬಾಲಿವುಡ್ ನಿಂದಲೂ ಸಂಹಿತಾ ಗೆ ಸಾಕಷ್ಟು ಚಿತ್ರಗಳಿಗೆ ಆಫರ್ಸ್ ಬರುತ್ತಿವೆ. ಅಚ್ಚ ಕನ್ನಡದ ಪ್ರತಿಭೆಯಾದ ಸಂಹಿತಾ ವಿನ್ಯಾ, ಕನ್ನಡ ಮಾತ್ರವಲ್ಲದೆ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.