ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಮೈಂಡ್ ಗೇಮ್ “ಬ್ರ್ಯಾಟ್” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಬ್ರ್ಯಾಟ್
ನಿರ್ದೇಶಕ : ಶಶಾಂಕ್
ನಿರ್ಮಾಪಕ : ಮಂಜುನಾಥ್ ಕಂದಕೂರ್
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಅಭಿಲಾಶ್
ತಾರಾಗಣ : ಡಾರ್ಲಿಂಗ್ ಕೃಷ್ಣ , ಮನಿಶಾ ಕಂದಕೂರ್, ಅಚ್ಯುತ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಹಾಗೂ ಮುಂತಾದವರು…
ಪ್ರಪಂಚದಾದ್ಯಂತ ಕ್ರಿಕೆಟ್ ಆಟ ತನ್ನದೇ ಒಂದು ಚಾಪನ್ನ ಮೂಡಿಸಿಕೊಂಡು ದೊಡ್ಡ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದೆ. ಕ್ರಿಕೆಟ್ ಆಟವನ್ನು ನೋಡಿ ಖುಷಿಪಡುವ ಬಳಗ ಒಂದೆಡೆಯಾದರೆ , ಮತ್ತೊಂದು ಗುಂಪು ಆಟಗಾರರ ಮೇಲೆ , ಗೆಲುವು ಸೋಲಿನ ಲೆಕ್ಕಾಚಾರದ ಬೆಟ್ಟಿಂಗ್ ದಂಧೆಯಲ್ಲಿ ಹಣ ಹಾಕಿ ಪರದಾಡುವ ಸ್ಥಿತಿಯಲ್ಲಿ ಇರುತ್ತದೆ.
ಇಂತದ್ದೇ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿ ಪರದಾಡುವಂತಹ ಯುವಕರ ಬದುಕಲ್ಲಿ ಎದುರಾಗುವ ಕುಟುಂಬಗಳ ಸಂಕಷ್ಟ , ಗೆಳೆಯರ ಪರದಾಟ , ಪ್ರೇಮಿಯ ಸಮಸ್ಯೆಯ ಸುತ್ತ ಬೆಸೆದುಕೊಂಡು ಒಂದು ಮೈಂಡ್ ಗೇಮ್ ಪ್ಲಾನ್ ಏನೆಲ್ಲಾ ಮಾಡುತ್ತದೆ ಎಂಬುದನ್ನು ಕುತಹಲದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬ್ರ್ಯಾಟ್”.
ಪ್ರಾಮಾಣಿಕ , ನಿಷ್ಠಾವಂತ ಪೊಲೀಸ್ ಮಹದೇವಯ್ಯ (ಅಚ್ಚುತ್ ಕುಮಾರ್) ಆತನ ಪತ್ನಿ ರೇಣುಕಾ (ಮಾನಸಿ ಸುಧೀರ್) ರವರ ಪ್ರೀತಿಯ ಮಗ ಕೃಷ್ಣ (ಡಾರ್ಲಿಂಗ್ ಕೃಷ್ಣ) ನಿಗೆ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ , ಹುಚ್ಚು. ಮನೆಯವರ ಒತ್ತಡದಿಂದ ಪಿಯುಸಿ ಪಾಸಾಗಿ ಫುಡ್ ಡೆಲಿವರಿ ಬಾಯ್ ಜೊತೆಗೆ ರಾಪಿಡೋ ಬೈಕ್ ಓಡಿಸುತ್ತಾ ತನ್ನ ಗೆಳೆಯರೊಟ್ಟಿಗೆ ಓಡಾಡಿಕೊಂಡು ಒಂದಷ್ಟು ಸಮಸ್ಯೆಯನ್ನ ಎದುರಿಸುವ ಕೃಷ್ಣ ಅಲಿಯಾಸ್ ಕ್ರಿಸ್ಟಿ ಕಾಸ್ ಇದ್ದರೆ ಕೈಲಾಸ ಎನ್ನುವಂತೆ ಹಣ ಮಾಡಲು ಕ್ರಿಕೆಟ್ ಬೆಟ್ಟಿಂಗ್ ಹಾದಿಯನ್ನ ಹಿಡಿಯುತ್ತಾನೆ.
ತನ್ನಲಿರುವ ಹಣವನ್ನ ಹಾಕುವುದರ ಜೊತೆಗೆ ಗೆಳೆಯರ ಕೂಡ ಕ್ರಿಸ್ಟಿಗೆ ಸಾತ್ ನೀಡಿ , ಹಣವನ್ನ ಒದಗಿಸುತ್ತಾರೆ. ಇದರ ನಡುವೆ ಸಾಲದ ಸುಳಿಯಲ್ಲಿ ಸಿಲುಕಿರುವ ಮನೀಷಾ (ಮನೀಷಾ) ಆಕಸ್ಮಿಕವಾಗಿ ಕೃಷ್ಣನ ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ತಾನೊಬ್ಬ ಸ್ಟಾಕ್ ಮಾರ್ಕೆಟ್ ನ ಫೈನಾನ್ಸಿಯಲ್ ಅಡ್ವೈಸರ್ ಎಂದು ಹೇಳುತ್ತಾ , ಆಕೆಯ ಸ್ನೇಹ , ಪ್ರೀತಿಯ ಗಳಿಸುತ್ತಾ ಹಣ ಹಾಕಿದರೆ ಒನ್ ಟು ಡಬಲ್ ಆಗುತ್ತೆ ಎಂದು ಹಣ ಪಡೆದು ಆಫ್ ಲೈನ್ ಕ್ರಿಕೆಟ್ ಬೆಟ್ಟಿಂಗೆ ಹಾಕುತ್ತಾನೆ.
ಬಾರ್ ಓನರ್ ರೌಡಿ ಮಣಿ (ಡ್ರ್ಯಾಗನ್ ಮಂಜು) ತನ್ನ ಗ್ಯಾಂಗ್ ಮೂಲಕ ಈ ಬೆಟ್ಟಿಂಗ್ ದಂದೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ (ರಮೇಶ್ ಇಂದಿರಾ) ಹಾಗೂ ಕೆಲವು ಅಧಿಕಾರಿಗಳಿಗೆ ಹಣ ನೀಡುತ್ತಾ ತನಿಷ್ಠದಂತೆ ಮೆರೆಯುತ್ತಿರುತ್ತಾನೆ. ಇನ್ನು ತನ್ನ ಪ್ಲಾನಂತೆ ಸಕ್ಸಸ್ ಕಾಣುವ ಕೃಷ್ಣ , ಒಂದು ದೊಡ್ಡ ಮೊತ್ತದ ಹಣಕ್ಕೆ ಸಾತ್ ಕೊಟ್ಟ ಗೆಳೆಯರ , ಪ್ರೇಯಸಿ ಹಾಗೂ ತನ್ನ ತಾಯಿಯ ಹಣ ಎಲ್ಲವೂ ಮೋಸದ ಜಾಲಕ್ಕೆ ಸಿಲ್ಕುತ್ತದೆ.
ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುವ ಪೊಲೀಸ್ ಪೇದೆ ಮಾದೇವಯ್ಯ ಈ ಕ್ರಿಕೆಟ್ ಕರಾಳ ಬೆಟ್ಟಿಂಗ್ ಜಾಲವನ್ನ ಬುಡ ಸಮೇತ ಕೀಳಬೇಕು ಎನ್ನುತ್ತಾ, ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿಸಿ ಯಾರಿಗೂ ತಿಳಿದಂತೆ ಪ್ರಾಮಾಣಿಕ ಹಿರಿಯ ಅಧಿಕಾರಿಗೆ ಪತ್ರವನ್ನು ಬರೆಯುತ್ತಾರೆ. ಇನ್ನೊಂದೆಡೆ ದುಡ್ಡು ಹಾಗೂ ಗೆಳೆಯನನ್ನು ಕಳೆದುಕೊಂಡ ಕೃಷ್ಣ ಹಣ ಪಡೆಯಲು ಹರಸಾಹಸ ಮಾಡಿದರು ಏನು ಪ್ರಯೋಜನ ಆಗುವುದಿಲ್ಲ , ಮೋಸಕ್ಕೆ ಮೋಸವೇ ಉತ್ತರ ಎನ್ನುವಂತೆ ಒಂದು ಪ್ಲಾನ್ ಮಾಡುವ ಕೃಷ್ಣ ಅಲಿಯಾಸ್ ಕ್ರಿಸ್ಟಿ ಹಣ ಮಾಡುವ ದಾರಿಯ ದೊಡ್ಡ ಜಾಲದ ಕಡೆ ಸಾಗುತ್ತಾನೆ. ಅದಕ್ಕೆ ಯಾರೆಲ್ಲಾ ಕೈಜೋಡಿಸುತ್ತಾರೆ… ಪ್ಲಾನ್ ವರ್ಕೌಟ್ ಆಗುತ್ತಾ.. ಇಲ್ವಾ.. ಕ್ಲೈಮಾಕ್ಸ್ ಉತ್ತರ ಏನು… ಇದೆಲ್ಲದಕ್ಕೂ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.
ಒಂದು ಗಂಭೀರ ವಿಚಾರವನ್ನು ಕಮರ್ಷಿಯಲ್ ಹಾದಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲದ ಸುಳಿಯಲ್ಲಿ ಸಿಲುಕಿದಾಗ ಎದುರಾಗುವ ಸಮಸ್ಯೆಗಳ ಜೊತೆ ಬದುಕು ಏನಾಗುತ್ತದೆ ಎಂಬ ಎಚ್ಚರಿಕೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕ ಶಶಾಂಕ್ ಆಲೋಚನೆ ಮೆಚ್ಚುವಂಥದ್ದು , ಇನ್ನು ಚಿತ್ರಕಥೆಯ ಹಾದಿಯಲ್ಲಿ ಈ ಬೆಟ್ಟಿಂಗ್ ದಂಧೆಗೆ ಒಂದು ಸೂಕ್ತ ಕಡಿವಾಣ ತೋರಿದ್ದರೆ ಚೆನ್ನಾಗಿರುತ್ತಿತ್ತು , ಅದರಲ್ಲೂ ಅಣ್ಣಾವ್ರು ಅಭಿನಯದ ಹಾಡು ಹಾಗೂ ಗಂಧದ ಗುಡಿಯ ಕ್ಲೈಮಾಕ್ಸ್ ಸನ್ನಿವೇಶ ಬಳಸಿಕೊಂಡಿರುವುದು ಚಿತ್ರಕ್ಕೆ ಪೂರಕವಾಗಿದ್ದು ಗಮನ ಸೆಳೆಯುವಂತಿದೆ. ಇಂತಹ ಸೂಕ್ಷ್ಮ ಚಿತ್ರ ಮಾಡಲು ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನ ಕೂಡ ಮೆಚ್ಚಲೇಬೇಕು.

ಸಂದರ್ಭಕ್ಕೆ ತಕ್ಕಂತೆ ಬಂದಿರುವ ಎರಡು ಹಾಡಿನಲ್ಲಿ ಒಂದು ಹಾಡು ಗುಣುಗುವಂತಿದೆ. ಛಾಯಾಗ್ರಾಹಕರ ಕೈಚಳಕವು ಅದ್ಭುತವಾಗಿ ಮೂಡಿಬಂದಿದೆ. ಸಂಭಾಷಣೆ , ಸಂಕಲನ , ಸಾಹಸ ಸೇರಿದಂತೆ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ. ಇನ್ನು ನಟ ಡಾರ್ಲಿಂಗ್ ಕೃಷ್ಣ ಒಬ್ಬ ಉತ್ತಮ ಕ್ರಿಕೆಟ್ ಆಟಗಾರ ಆಗಿದ್ದು , ತನ್ನ ಪಾತ್ರಕ್ಕೆ ಎಲ್ಲಿ ಸ್ವಿಚ್ ಆಫ್ ಹಾಗೂ ಸ್ವಿಚ್ ಆನ್ ಆಗಬೇಕೆಂದು ತಿಳಿದು ಜೀವ ತುಂಬಿ ಅಭಿನಯಿಸಿದ್ದಾರೆ. ಕ್ರಿಕೆಟ್ ದಂದೆಯ ಒಂದಷ್ಟು ಸೂಕ್ಷ್ಮತೆ ಬಗ್ಗೆ ಸ್ಪಷ್ಟವಾಗಿ ಹೇಳಿರುವುದು ವಿಶೇಷ. ಸೌಮ್ಯ ಸ್ವಭಾವದ ಮುದ್ದಾದ ಹುಡುಗಿ ಮನಿಷಾ ಕಂದಕೂರ್ ಕೂಡ ಮೊದಲ ಪ್ರಯತ್ನದಲ್ಲೇ ಉತ್ತಮವಾಗಿ ಅಭಿನಯ ನೀಡಿ ಎಲ್ಲರೂ ಗಮನಿಸುವಂತೆ ಕಾಣುತ್ತಾರೆ.
ಪೊಲೀಸ್ ಪೇದೆ ಪಾತ್ರದಲ್ಲಿ ಹಿರಿಯ ನಟ ಅಚ್ಚುತ್ ಕುಮಾರ್ ಜೀವಿಸಿದ್ದು , ಇನ್ಸ್ಪೆಕ್ಟರ್ ಪಾತ್ರದಲ್ಲಿ ರಮೇಶ್ ಇಂದಿರಾ ಮಿಂಚಿದ್ದಾರೆ. ಮತ್ತೊಬ್ಬ ಕಳ್ಳ ನಟ ಡ್ರ್ಯಾಗನ್ ಮಂಜು ತನ್ನ ಇಂಗ್ಲಿಷ್ ಡೈಲಾಗ್ ಮೂಲಕ ಎಲ್ಲರ ಮೆಚ್ಚುಗೆಯನ್ನ ಪಡೆದಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ಸೇರಿದಂತೆ ಚಿತ್ರದ ಎಲ್ಲಾ ಪಾತ್ರಗಳು ಓಟಕ್ಕೆ ಉತ್ತಮ ಸಾಥ್ ನೀಡಿದೆ. ಒಟ್ಟಾರೆ ಒಂದು ಸೂಕ್ಷ್ಮ ವಿಚಾರವನ್ನು ಮನೋರಂಜನೆಯ ಜೊತೆಗೆ ಕುತೂಹಲಕಾರಿಯಾಗಿ ಹಿಡಿದುಕೊಂಡು ಸಾಗಿರುವ ಈ ಚಿತ್ರವನ್ನು ಒಮ್ಮೆ ಕುಟುಂಬದ ಜೊತೆ ನೋಡುವಂತಿದೆ.
 
			 
							 
							