Cini NewsMovie ReviewSandalwood

ಸುಳ್ಳಿನ ಎಡವಟ್ಟು… ಮದುವೆಗೆ ಕಗ್ಗಂಟು.. “ಯಾರಿಗೂ ಹೇಳ್ಬೇಡಿ” ಚಿತ್ರವಿಮರ್ಶೆ (ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಯಾರಿಗೂ ಹೇಳ್ಬೇಡಿ
ನಿರ್ದೇಶಕ : ಶಿವ ಗಣೇಶ್
ನಿರ್ಮಾಪಕ : ಹರೀಶ್ ಅಮ್ಮಿನೇನಿ , ಸುನಿಲ್
ಸಂಗೀತ : ಶಶಾಂಕ್ ಶೇಷಗಿರಿ , ಉದಿತ್ ಹರಿತಾಸ್
ಛಾಯಾಗ್ರಹಣ : ಡೇವಿಡ್
ತಾರಾಗಣ : ಚೇತನ್ ವಿಕ್ಕಿ , ಚೈತ್ರ ಆಚಾರ್, ಅಪ್ಪಣ್ಣ , ಅಶ್ವಿನಿ ಪೊಲೇಪಲ್ಲಿ , ಶರತ್ ಲೋಹಿತಾಶ್ವ , ಶಬರೀಶ್ , ವಲ್ಲಭ ಹಾಗೂ ಮುಂತಾದವರು…

ಜೀವನವೇ ಒಂದು ಪಾಠ ನಾವು ಹೇಗೆ ಇರ್ತಿವೋ , ಹಾಗೆ ನಮ್ಮ ಬದುಕು ಕೂಡ ಸಾಗುತ್ತೆ. ಇದ್ದದ್ದು ಇದ್ದಂಗೆ ಸತ್ಯ ಹೇಳುತ್ತಾ ಹೋದರೆ ಒಂದು ರೀತಿಯ ಬದುಕು , ಆದರೆ ಸುಳ್ಳು ಹೇಳಿ ಎಸ್ಕೇಪ್ ಆಗಲು ಒಂದರ ಹಿಂದೆ ಒಂದು ಸುಳ್ಳು ಹೇಳುತ್ತಾ ಹೋದಾಗ ಎದುರಾಗುವ ಎಡವಟ್ಟಿನ ಸರಮಾಲೆ ದೊಡ್ಡ ಕಗ್ಗಂಟೆ ಆಗುತ್ತದೆ. ಅಂತದೇ ಒಬ್ಬ ಯುವಕನ ಸುತ್ತ ಎದುರಾಗುವ ಸಮಸ್ಯೆಗಳ ಕಥಾನಕವನ್ನು ಹಾಸ್ಯ ಮಿಶ್ರಣದೊಂದಿಗೆ ಪ್ರೇಕ್ಷಕರ ಮುಂದೆ ತಂದಿರುವಂತಹ ಚಿತ್ರ “ಯಾರಿಗೂ ಹೇಳ್ಬೇಡಿ”.

ವಾಹಿನಿಯೊಂದರಲ್ಲಿ ನಿರೂಪಕನಾಗಿ ಕೆಲಸ ಮಾಡುವ ಯುವಕ ಸಂಜಯ್ (ಚೇತನ್ ವಿಕ್ಕಿ) , ಆತನ ಜೀವದ ಗೆಳೆಯ ಅಪ್ಪಣ್ಣನಿಗೆ ಕ್ರಿಕೆಟ್ ಒಡನಾಟ ಹೆಚ್ಚು , ಇನ್ನು ಇವರಿಬ್ಬರ ನಡುವೆ ತರ್ಲೆ , ತಮಾಷೆ , ಕೀಟಲೇ , ಸ್ಮೋಕಿಂಗ್ , ಡ್ರಿಂಕ್ಸ್ ಇದ್ದದ್ದೇ. ಇದರ ನಡುವೆ ಸಂಜಯ್ ಮುದ್ದಾದ ಡಾಕ್ಟರ್ ಸ್ಟೆಫಿ (ಚೈತ್ರಾ ಜೆ. ಆಚಾರ್) ನೋಡಿ ಇಷ್ಟಪಡುತ್ತಾನೆ. ಆದರೆ ಡಾಕ್ಟರ್ ಆದ ಸ್ಟೆಫಿ ತಾನು ಮದುವೆಯಾಗೋ ಹುಡುಗ ಯಾವುದೇ ದುಶ್ಚಟಗಳನ್ನು ಮೈಗೂಡಿಸಿಕೊಂಡಿರಬಾರದು, ಬೇರೆ ಹೆಣ್ಣಿನ ಸಹವಾಸ ಇಟ್ಟುಕೊಂಡಿರಬಾರದು ಎಂದು ಕನಸು ಕಟ್ಟಿಕೊಂಡಿರುತ್ತಾಳೆ. ಇದರ ತದ್ವಿರುದ್ಧ ದಿನಚರಿಯ ಬದುಕಿನಲ್ಲಿ ಸಂಜಯ್ ಜೀವನ. ಯಾವುದೇ ಹುಡುಗಿಯರ ಚಟ ಇಲ್ಲದಿದ್ರೂ ಒಂದು ಪ್ರಕರಣ ಆತನ ಜೀವನದಲ್ಲಿ ದೊಡ್ಡ ಆಟವನ್ನೇ ಆಡಿಸುತ್ತದೆ.

ಯಾಕೆಂದರೆ ಸಂಜಯ್ ಗೆ ಆಕ್ಟಿಂಗ್ ಮಾಡುವ ಹುಚ್ಚು ಹೆಚ್ಚು , ನಿರೂಪಣೆ ಮಾಡುತ್ತಲೇ ತನ್ನ ಕನಸನ್ನ ಕಂಡಿರುತ್ತಾನೆ. ಒಮ್ಮೆ ನಿರ್ದೇಶಕನೊಬ್ಬ ಆಕ್ಟ್ ಮಾಡಲು ಅವಕಾಶ ನೀಡುತ್ತೇನೆಂದು ಸಂಜಯ್ ಯನ್ನ ಕರೆಸಿ ಯುವತಿಯ ಜತೆಗಿರುವ ಹನಿಮೂನ್ ದೃಶ್ಯವನ್ನು ಚಿತ್ರೀಕರಿಸಿರುತ್ತಾನೆ. ಆದರೆ ಆ ಚಿತ್ರವು ಆರಂಭದಲ್ಲೇ ನಿಂತುಹೋಗುತ್ತದೆ. ಆದರೆ ವಿಧಿಯ ಆಟ ಎನ್ನುವಂತೆ ಚಿತ್ರೀಕರಿಸಿರುವ ಆ ದೃಶ್ಯ ಯಾರೋ ಒಬ್ಬ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿಬಿಡುತ್ತಾರೆ. ಇನ್ನು ಸಂಜಯ್ ತನ್ನ ಪ್ರೇಯಸಿ ಸ್ಟಫಿಗೆ ಮದುವೆಯಾದ ಮೇಲೆ ಎಲ್ಲ ಚಟಗಳನ್ನು ಬಿಟ್ಟುಬಿಡುತ್ತೇನೆಂದು ಮಾತು ಕೊಟ್ಟಿರುತ್ತಾನೆ.

ಇನ್ನು ಲೀಕ್ ಆಗಿರುವ ಈ ಹುಡುಗಿಯ ಜೊತೆ ಇರುವ ವಿಡಿಯೋ ಎಲ್ಲಿ ತನ್ನ ಮದುವೆಯನ್ನೇ ಮುರಿದುಹಾಕುತ್ತೋ ಅನ್ನೋ ಭಯದಿಂದ ಆ ವಿಡಿಯೋ ಡಿಲೀಟ್ ಮಾಡಿಸಲು ಹರಸಾಹಸ ಮಾಡುತ್ತಾನೆ. ಹಾಗೆ ಒಂದಕ್ಕೊಂದು ಸುಳ್ಳು ಮುಚ್ಚಿಡಲು ಹೋಗಿ ಬೇರೆಯದೇ ರೂಪ ಪಡೆದುಕೊಳ್ಳುತ್ತಾ ಹೋಗುತ್ತದೆ. ಮುಂದೇನು ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಒಂದು ಅಚ್ಚರಿಯ ಟ್ವಿಸ್ಟ್ ಬೆರೆಯದೆ ಕ್ಲೈಮ್ಯಾಕ್ಸ್ ಹೇಳುತ್ತದೆ. ಅದು ಏನು ಎಂಬುದನ್ನು ತಿಳಿಯಬೇಕಾದರೆ ಎಲ್ಲರೂ ಈ ಚಿತ್ರವನ್ನು ನೋಡಬೇಕು.

ಇದೊಂದು ಸಂಪೂರ್ಣ ಮನೋರಂಜನೆಯ ಹಾಸ್ಯ ಭರಿತ ಚಿತ್ರವಾಗಿದ್ದು , ಹೊಟ್ಟೆ ಹುಣ್ಣಾಗುವಂತೆ ನಗಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಒಂದು ಸುಳ್ಳನ್ನು ಮುಚ್ಚಿಡಲು ಹೋದಾಗ ಏನೇನೆಲ್ಲ ಆಗುತ್ತದೆ ಎಂಬ ವಿಚಾರವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತವನ್ನು ಸೇರಿಸಬಹುದಿತ್ತು , ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತಾ ಸಾಗುತ್ತದೆ. ಆದರೆ ಮನೋರಂಜನೆಯ ದೃಷ್ಟಿಯಿಂದ ಗಮನ ಸೆಳೆಯುವಂತಿದೆ.

ಸುನಿಲ್ ಕುಮಾರ್ ಹಾಗೂ ಹರೀಶ್ ಅಮ್ಮಿನೇನಿ ಒಂದು ಉತ್ತಮ ಹಾಸ್ಯ ಭರಿತ ಚಿತ್ರ ನಿರ್ಮಿಸಿದ್ದಾರೆ. ಶಶಾಂಕ್ ಶೇಷಗಿರಿ ಹಾಗೂ ಉದಿತ್ ಹರಿತಾಸ್ ಸಂಗೀತ ಗಮನ ಸೆಳೆಯುತ್ತದೆ. ಡೇವಿಡ್ ಆನಂದರಾಜ್ ಕ್ಯಾಮೆರಾ ಕೈಚಳಕ ಉತ್ತಮವಾಗಿದೆ. ಅದೇ ರೀತಿ ಇಡೀ ಚಿತ್ರವನ್ನೇ ಆವರಿಸಿಕೊಂಡು ನಾಯಕನಾಗಿ ಅಭಿನಯಿಸಿರುವ ಚೇತನ್ ವಿಕ್ಕಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ.

ಅದೇ ರೀತಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ನ ಪಾತ್ರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ನಟಿ ಚೈತ್ರಾ ಆಚಾರ್ ಡಾಕ್ಟರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಎಲ್ಲರ ಗಮನ ಸೆಳೆಯುತ್ತಾರೆ. ಅದೇ ರೀತಿ ಮತ್ತೊಬ್ಬ ನಟಿ ಅಶ್ವಿನಿ ಪೊಲೆಪಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಿರಿಯ ನಟ ಶರತ್ ಲೋಹಿತಾಶ್ವ ಸೇರಿದಂತೆ ಅಭಿನಯಿಸಿರುವ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ನಗುವಿನ ರಸದೌತಣ ನೀಡಿರುವ ಈ ಚಿತ್ರವು ಒಮ್ಮೆ ನೋಡುವಂತಿದೆ.

error: Content is protected !!