71ನೇ ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆದ ಚಿತ್ರ “ಕಂದೀಲು”
ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠ ಪ್ರಶಸ್ತಿಗಳಲ್ಲಿ ರಾಷ್ಟ್ರ ಪ್ರಶಸ್ತಿಗಳು ಕೂಡ ಪ್ರಮುಖವಾದದ್ದು, ಪ್ರತಿಯೊಬ್ಬ ಕಲಾವಿದ , ತಂತ್ರಜ್ಞಾನ ಕೂಡ ರಾಷ್ಟ್ರ ಪ್ರಶಸ್ತಿ ಪಡೆಯುವ ಆಸೆಯನ್ನು ಹೊತ್ತಿರುತ್ತಾನೆ. ಈ ಅತ್ಯುನ್ನತ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ 1954 ರಿಂದ ನೀಡುತ್ತಾ ಬಂದಿದೆ. ಈ ಬಾರಿ 71ನೇ ಅತ್ಯುತ್ತಮ 2023 ಕನ್ನಡ ಫೀಚರ್ ಫಿಲ್ಮ್ (ಪ್ರಾದೇಶಿಕ ವಿಭಾಗ) ಪ್ರಶಸ್ತಿಯನ್ನು ಕಂದೀಲು ಚಿತ್ರ ಪಡೆದುಕೊಂಡಿದ್ದರಿಂದ ನಿರ್ಮಾಪಕರು ಮತ್ತು ನಿರ್ದೇಶಕರು ಎಲ್ಲರಿಗೂ ಕೃತಜ್ಘತೆ ಹೇಳುವ ಸಲುವಾಗಿ ತಂಡದೊಂದಿಗೆ ಮಾಧ್ಯಮದ ಮುಂದೆ ಹಾಜರಿದ್ದು ತೆರೆಯ ಹಿಂದಿನ ಶ್ರಮವನ್ನು ನೆನಪು ಮಾಡಿಕೊಂಡರು. ಇದಕ್ಕೂ ಮುನ್ನ ಕಲಾವಿದರು, ತಂತ್ರಜ್ಘರಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.
ಈ ಚಿತ್ರದ ನಿರ್ದೇಶಕಿ ಯಶೋಧ ಕೊಟ್ಟುಕತ್ತಿರ ಮಾತನಾಡುತ್ತಾ ನಮ್ಮ ಚಿತ್ರಕ್ಕೆ ಪ್ರಶಸ್ತಿ ದೊರಕಿದೆ ಎಂದು ಕೇಳಿದಾಕ್ಷಣ ಬಹಳ ಸಂತೋಷವಾಯಿತು. ಈ ಸಿನಿಮಾ ಶುರುವಾದಾಗಿನಿಂದ ಎಲ್ಲರೂ ಶ್ರಮವಹಿಸಿ ಕೆಲಸ ನಿರ್ವಹಿಸಿದ್ದಾರೆ. ನಾನು ಎಲ್ಲರನ್ನು ನೆನೆಸಿಕೊಂಡು ಪ್ರಶಸ್ತಿ ಸ್ವೀಕರಿಸಿದೆ. ಯಾವ ರೀತಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ತೆಗೆದುಕೊಳ್ಳಬೇಕೆಂದು ಹಿಂದಿನ ದಿನ ಸುಮಾರು ನಾಲ್ಕು ತಾಸು ತಾಲೀಮು ನಡೆಸಿದರು. ಏಳೆಂಟು ವರ್ಷದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಎರಡು ಕೊಡವ, ಎರಡು ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದೇನೆ.
ನಂತರ ಸುಮನ್ ನಗರ್‌ಕರ್ ನಟನೆಯ ’ರಂಗಪವ್ರೇಶ’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪರಿಚಯವಾದೆ. ಪತಿ ನನ್ನ ಸಲುವಾಗಿ ನಿರ್ಮಾಣ ಮಾಡಿದರು. ಪ್ರೇಮಾಕಾರಂತ್, ಕವಿತಾಲಂಕೇಶ್ ನಂತರ ನಾನು ಮೂರನೇ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕಿ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ. ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಮೊದಲಬಾರಿ ಒಂದೇ ಸಿನಿಮಾಕ್ಕೆ ಗಂಡ ಹೆಂಡತಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಈ ಚಿತ್ರದ ನಿರ್ಮಾಪಕ ರಾದ ಪ್ರಕಾಶ್ ಕಾರ್ಯಪ್ಪ ಮಾತನಾಡುತ್ತಾ ನಾನು ಸೇನೆಯಿಂದ ನಿವೃತ್ತ ಆದ ನಂತರ ಬಣ್ಣದಲೋಕದ ಕಡೆ ಆಸಕ್ತಿ ಬಂತು. ನನಗೆ ಕಲಾತ್ಮಕ ಚಿತ್ರಗಳು ಎಂದರೆ ಬಹಳ ಇಷ್ಟ , ಹಾಗೆಯೇ ಚಿತ್ರೋತ್ಸವಗಳಿಗೆ ಸಿನಿಮಾ ಮಾಡುವುದು ನನ್ನ ಅಭಿರುಚಿಯಾಗಿದೆ.
ಇದೇ ಹಾದಿಯಲ್ಲಿ ನಾಗೇಶ್. ಎನ್ ಅವರ ’ಅನಾಮಿಕ ಮತ್ತು ಇತೆರೆ ಕಥೆಗಳು’ ಸಂಕಲನದಿಂದ ಆಯ್ದ ‘ಹೆಣ’ ಎನ್ನುವ ಕಥೆ ಕಂದೀಲು ಚಿತ್ರ ಆಯಿತು. ಅವರು ಸಮಾಜದ ವ್ಯವಸ್ಥೆಯ ಬಗ್ಗೆ ಬರೆದಿದ್ದರು. ನಾವು ಒಂದಷ್ಟು ಬದಲಾವಣೆ ಮಾಡಿಕೊಂಡು ಈ ಚಿತ್ರವನ್ನು ಮಾಡಿದ್ದೆವು. ಉತ್ತಮ ಕಥೆಯನ್ನು ಒಳಗೊಂಡಿರುವ ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದು ನಮಗೆ ಸಂತೋಷವನ್ನು ತಂದಿದೆ ಎಂದರು.
ಈ ಚಿತ್ರಕ್ಕೆ ಛಾಯಾಗ್ರಕರಾಗಿ ಕಾರ್ಯನಿರ್ವಹಿಸಿರುವ ಪಿ.ವಿ.ಆರ್.ಸ್ವಾಮಿ ಮಾತನಾಡುತ್ತಾ ನಾನು ಕೆಲಸ ಮಾಡಿದ ಸಿನಿಮಾಕ್ಕೆ ಎರಡನೇ ಬಾರಿ ಪ್ರಶಸ್ತಿ ಸಿಕ್ಕಿರುವುದು ಖುಷಿಕೊಟ್ಟಿದೆ. ನಮ್ಮ ಊರಿನಲ್ಲಿ ಚಿತ್ರೀಕರಣವಾಗಿದ್ದು, ಸಿಂಕ್ ಸೌಂಡ್ನಲ್ಲಿ ದೃಶ್ಯಗಳನ್ನು ಸರಿಯಿಡಿಯಲಾಗಿದೆ. ಅದರಲ್ಲೂ ಜಾತ್ರೆ ಸನ್ನಿವೇಶ ಬಹಳ ಉತ್ತಮವಾಗಿ ಮೂಡಿಬಂದಿತ್ತು. ಇದಕ್ಕೆ ಅನ್ನದಾತರಿಗೆ ಥ್ಯಾಂಕ್ಸ್ ಹೇಳಬೇಕು. ಒಂದು ವರ್ಷ ಸ್ಕ್ರಿಪ್ಟ್‌ನಲ್ಲಿ ತೊಡಗಿಕೊಂಡಿದ್ದೇವು , ಅದೇ ರೀತಿ ಚಿತ್ರವು ಉತ್ತಮವಾಗಿ ಬಂದಿದ್ದು , ಪ್ರಶಸ್ತಿಯನ್ನು ಪಡೆದಿದೆ ಎಂದರು.
ಇನ್ನೂ ಈ ಚಿತ್ರಕ್ಕೆ ಕಥೆ , ಸಂಭಾಷಣೆ ಹಾಗೂ ಸಂಕಲನದ ಕೆಲಸವನ್ನು ಮಾಡಿರುವಂತಹ ನಾಗೇಶ್. ಎನ್ ಕಥೆಯ ಕುರಿತು ಸುದೀರ್ಘವಾಗಿ ಮಾತನಾಡುತ್ತಾ 2008ರಲ್ಲಿ ಕೇಂದ್ರ ಸಚಿವೆ ಸುಷ್ಮಸ್ವರಾಜ್ ಭಾರತ ಮೂಲದವರ ಹೆಣವನ್ನು ಬೇರೆ ದೇಶದಿಂದ ತರಿಸಿಕೊಡಲು ಸಹಾಯ ಮಾಡಿದ್ದರೂ, ಆದರೂ ಅದು ವಿಳಂಬವಾಯಿತು. ಅಂತಹ ಸಮಯದಲ್ಲಿ ಮನೆಯ ಪರಿಸ್ಥಿತಿ, ಧಾರ್ಮಿಕ ಹಾಗೂ ರಾಜಕೀಯ ಸ್ಥಿತಿಗಳು ಹೇಗೆ ಇರುತ್ತದೆ.
ಇವತ್ತಿಗೂ ಏಕಗವಾಕ್ಷಿ ಪದ್ದತಿ ಜಾರಿಯಾಗಿಲ್ಲ. ಇಂತಹ ಸೂಕ್ಷ ವಿಷಯಗಳನ್ನು ಇಟ್ಟುಕೊಂಡು ಕತೆ ಬರೆದಿದ್ದೆ. ಈ ಚಿತ್ರಕ್ಕಾಗಿ ನಾನು , ಛಾಯಾಗ್ರಾಹಕ , ನಿರ್ಮಾಪಕ ಹಾಗೂ ನಿರ್ದೇಶಕರು ಬಹಳಷ್ಟು ಚರ್ಚೆ ಮಾಡಿದ ನಂತರ ಚಿತ್ರವನ್ನ ಆರಂಭಿಸಿದ್ದು , ಅದರಂತೆ ಚಿತ್ರವೂ ಕೂಡ ಬಂದಿದ್ದು , ಒಂದು ಸೂಕ್ಷ್ಮ ವಿಚಾರವನ್ನು ಜನರ ಮುಂದೆ ತೆರೆದಿಟ್ಟಿದ್ದೇವೆ ಎಂದರು.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ’ಕಾಂತಾರ’ ಖ್ಯಾತಿಯ ಪ್ರಭಾಕರ.ಬ.ಕುಂದರ ಉಳಿದಂತೆ ವನಿತಾರಾಜೇಶ್, ಖುಷಿ ಕಾವೇರಮ್ಮ, ವೆಂಕಟೇಶ್ ಪ್ರಸಾದ್, ಗುರುತೇಜಸ್, ಚಂದ್ರಕಾಂತ್, ರಮೇಶ್, ಸಂಗೀತ ಸಂಯೋಜಕ ಶ್ರೀಸುರೇಶ್ ಮುಂತಾದವರು ಸುಂದರ ಸಮಯದಲ್ಲಿ ಹಾಜರಿದ್ದು ಸಂತೋಷವನ್ನು ಹಂಚಿಕೊಂಡರು.
ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಪಡೆದಂತಹ ಈ ಚಿತ್ರತಂಡ ಈಗ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಇಂತಹ ಚಿತ್ರತಂಡವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಗುರುತಿಸಿ , ಗೌರವಿಸುವ ಕೆಲಸವನ್ನ ಮಾಡುವುದು ಬಹಳ ಪ್ರಮುಖವಾದ ವಿಷಯವಾಗಿದೆ. ಇದರ ಬಗ್ಗೆ ಗಮನ ಕೊಡಲಿ ಎನ್ನುತ್ತಾ , ಈ ರಾಷ್ಟ್ರ ಪ್ರಶಸ್ತಿಯ ಪಡೆದ ಚಿತ್ರತಂಡದ ಶ್ರಮಕ್ಕೆ ಸಿಕ್ಕ ಗೌರವ ಇದಾಗಿದೆ.