ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ “ವಸುದೇವ ಕುಟುಂಬ” ದರ್ಶನ
ವೀಕ್ಷಕರಿಗೆ ವಿಭಿನ್ನ ಕಥೆಗಳನ್ನು ನೀಡುತ್ತಿರುವ ಜನಪ್ರಿಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ ವಸುದೇವ ಕುಟುಂಬ ಎಂಬ ಹೊಸ ಧಾರಾವಾಹಿಯು ಬಿತ್ತರಗೊಳ್ಳಲು ಸಿದ್ದಗೊಂಡಿದೆ. ಕೋರಮಂಗಲ ಟಾಕೀಸ್ ಸಂಸ್ಥೆಯಡಿ *ಅನಿಲ್ ಕೋರಮಂಗಲ ನಿರ್ಮಾಣ ಮತ್ತು ನಿರ್ದೇಶ*ನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ’ಒಂದೇ ಬೇರು, ಕವಲು ನೂರು’ ಎಂಬ ಅರ್ಥಪೂರ್ಣ ಅಡಿಬರಹವಿದೆ.
ಸೀರಿಯಲ್ ಮುಖ್ಯ ಆಕರ್ಷಣೆ ಎಂದರೆ ಹಿರಿಯ ನಟ ಅವಿನಾಶ್ ಬರೋಬ್ಬರಿ ಮೂವತ್ತು ವರ್ಷಗಳ ನಂತರ ಕಿರುತೆರೆಗೆ ಅದರಲ್ಲೂ ಸ್ಟಾರ್ ಸುವರ್ಣಗೆ ಪಾದಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ. ಕುಟುಂಬದ ಯಜಮಾನ ವಸುದೇವ, ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಪತ್ನಿಯಾಗಿ ಹಿರಿಯ ನಟಿ ಅಂಜಲಿ. ಪುತ್ರಿಯರಾಗಿ ಭಾವನಾ ಪಾಟೀಲ್, ಚೈತ್ರಾತೋಟದ್, ಬೃಂದಾ ಕಶ್ಯಪ್, ಆರಾಧ್ಯ. ಇವರೊಂದಿಗೆ ಹಂಸ, ಭಗತ್, ಆರ್.ಜಿ.ಅನೂಪ ಸೇರಿದಂತೆ ಅನೇಕ ಅನುಭವಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಹಳ್ಳಿಯಲ್ಲಿ ವಸುದೇವನ ಹಿರಿಮಗಳ ಮದುವೆ ಸಿದ್ದತೆ ಸಂಭ್ರಮದಲ್ಲಿದ್ದಾಗ, ಆಕಸ್ಮಿಕವಾಗಿ ಸಂಭವಿಸುವಂತಹ ಒಂದು ದುರ್ಘಟನೆ ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಕಷ್ಟದ ಸಮಯದಲ್ಲಿ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ, ಅಕ್ಕ ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ಲುತ್ತಾಳೆ? ತನ್ನ ದುಖ:ವನ್ನು ಮರೆತು ಮನೆಯ ಬದುಕನ್ನು ಮರುಕಟ್ಟುವಲ್ಲಿ ಅವಳು ಯಶಸ್ವಿಯಾಗುತ್ತಾಳಾ? ಮನೆತನದ ಮಾನ ಗೌರವವನ್ನು ಯಾವ ರೀತಿ ಕಾಪಾಡುತ್ತಾಳೆ ಎಂಬುದು ಕಥೆಯ ಮುಖ್ಯ ಸಾರಾಂಶವಾಗಿದೆ. ಇದೇ ಸೆಪ್ಟೆಂಬರ್ 15, ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ* ವಾಹಿನಿಯಲ್ಲಿ ಪ್ರಸಾರವಾಗಲಿದೆ.